ವಿಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ವಿಶಾಖಪಟ್ಟಣ: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದ್ದು, ಭಾರತ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಇಂದ ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ನೀಡಿದ್ದ 322 ರನ್​ ಗುರಿ ಬೆನ್ನತ್ತಿದ ವೆಸ್ಟ್​ ಇಂಡೀಸ್​ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 321 ರನ್​ ಕಲೆ ಹಾಕಿತು. ಗೆಲುವಿಗಾಗಿ ಉಭಯ ತಂಡಗಳು ಪೈಪೋಟಿ ನಡೆಸಿದರೂ, ಕೊನೆಯ ಬಾಲ್​ನಲ್ಲಿ ಪಂದ್ಯ ಟೈ ಆಗುವ ಮೂಲಕ ಭಾರತದ ಗೆಲುವಿನ ಆಸೆ ಕಮರಿತು. ವಿಂಡೀಸ್​ಗೆ ಕೊನೆಯ ಬಾಲ್​ನಲ್ಲಿ ಗೆಲುವಿಗೆ 5 ರನ್​ ಅಗತ್ಯವಿತ್ತು, ಆದರೆ ಹೋಪ್​ ಕೊನೆಯ ಎಸೆತವನ್ನು ಬೌಂಡರಿಗಟ್ಟುವ ಮೂಲಕ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ವಿಂಡೀಸ್​ ಪರ ಹೋಪ್​ ಅಜೇಯ 123 ರನ್​ ಗಳಿಸಿದರೆ, ಇವರಿಗೆ ಉತ್ತಮ ಸಾಥ್​ ನೀಡಿದ ಶಿಮ್ರಾನ್ ಹೆಟ್ಮರ್ 94 ರನ್​ ಗಳಿಸಿದರು. ಭಾರತದ ಪರ ಕುಲದೀಪ್​ ಯಾದವ್​ 67 ಕ್ಕೆ 3 ವಿಕೆಟ್​ ಪಡೆದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 321 ರನ್​ ಕಲೆ ಹಾಕಿತು. ಭಾರತದ ಪರ ಕೊಹ್ಲಿ ಭರ್ಜರಿ ಶತಕ ಸಿಡಿಸಿದರೆ, ರೋಹಿತ್​ ಶರ್ಮಾ 4, ಶಿಖರ್​ ಧವನ್​ 29 ರನ್​ ಗಳಿಸಿದರು. ಆರಂಭಿಕ ಆಟಗಾರರು ಔಟಾದ ನಂತರ ಜತೆಯಾದ ಕೊಹ್ಲಿ ಮತ್ತು ಅಂಬಟಿ ರಾಯಿಡು (73) ತಂಡಕ್ಕೆ ಆಸರೆಯಾದರು. ರಾಯಿಡು ಔಟಾದ ನಂತರ ಕ್ರೀಸ್​ ಇಳಿದ ಧೋನಿ (20), ರಿಷಭ್​ ಪಂತ್​ (17) ಮತ್ತು ರವೀಂದ್ರ ಜಡೇಜಾ (13) ರನ್​ ಗಳಿಸಿದರು.

ವೆಸ್ಟ್​ ಇಂಡೀಸ್​ ಪರ ಆಶ್ಲೆ ನರ್ಸ್​ 46 ಕ್ಕೆ 2 ಮತ್ತು ಒಬೆಡ್ ಮೆಕ್​ಕಾಯ್ 71 ಕ್ಕೆ 2 ವಿಕೆಟ್​ ಪಡೆದರು. (ಏಜೆನ್ಸೀಸ್​)