ಚೆನ್ನೈ: ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್ ಪ್ರೀತ್ ಪಡೆ ಏಕದಿನ ಸರಣಿ ಬಳಿಕ ಟೆಸ್ಟ್ ಪಂದ್ಯದಲ್ಲೂ ಜಯದ ಓಟ ಕಾಯ್ದುಕೊಂಡಿದೆ.
ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದ 4ನೇ ಹಾಗೂ ಅಂತಿಮ ದಿನ ದಕ್ಷಿಣ ಆಫ್ರಿಕಾ 2 ವಿಕೆಟ್ 235 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿತು. ನಾಯಕಿ ಲೌರಾ ವೋಲ್ವಾರ್ಡ್ (122 ರನ್, 314 ಎಸೆತ, 16 ಬೌಂಡರಿ) ಶತಕ ಹಾಗೂ ನಡೀನ್ ಡಿಕ್ಲರ್ಕ್ (61 ರನ್, 185 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಪ್ರತಿರೋಧದ ಹೋರಾಟದ ನಡುವೆಯೂ ಚಹಾ ವಿರಾಮದ ಬಳಿಕ ಅಂತಿಮವಾಗಿ 154.4 ಓವರ್‌ಗಳಲ್ಲಿ 373 ರನ್‌ಗಳಿಗೆ ಆಲೌಟ್ ಆಯಿತು. ಇನಿಂಗ್ಸ್ ಸೋಲಿನಿಂದ ಪಾರಾದ ಆಫ್ರಿಕಾ 36 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಸರದಿ ಆರಂಭಿಸಿದ ಭಾರತ, ಶೆಾಲಿ ವರ್ಮ (24*) ಹಾಗೂ ಕನ್ನಡತಿ ಶುಭಾ ಸತೀಶ್ (13*) ಅಜೇಯ ಜತೆಯಾಟದ ನೆರವಿನಿಂದ 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.
ಭಾರತ: 6 ವಿಕೆಟ್‌ಗೆ 603 ಡಿಕ್ಲೇರ್ ಹಾಗೂ 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 ( ವರ್ಮ 24*, ಶುಭಾ ಸತೀಶ್ 13*). ದಕ್ಷಿಣ ಆಫ್ರಿಕಾ: 266 ಹಾಗೂ 154.4 ಓವರ್‌ಗಳಲ್ಲಿ 373 (ವೋಲ್ವಾರ್ಡ್ 122, ಮಾರಿಜಾನ್ನೆ 31, ಡಿಕ್ಲರ್ಕ್ 61, ಸಿನಾಲೊ15, ರಾಜೇಶ್ವರಿ 95ಕ್ಕೆ2 , ದೀಪ್ತಿ 95ಕ್ಕೆ 2, ಸ್ನೇಹಾ ರಾಣಾ 111ಕ್ಕೆ 2).
ಪಂದ್ಯಶ್ರೇಷ್ಠ: ಸ್ನೇಹಾ ರಾಣಾ.
2. ಸ್ನೇಹಾ ರಾಣಾ (188ಕ್ಕೆ 10) ಟೆಸ್ಟ್ ಕ್ರಿಕೆಟ್‌ನ ಪಂದ್ಯವೊಂದರಲ್ಲಿ 10 ವಿಕೆಟ್ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪಿನ್ನರ್ ಹಾಗೂ ಒಟ್ಟಾರೆ 2ನೇ ಬೌಲರ್ ಎನಿಸಿದರು. ಜೂಲನ್ ಗೋಸ್ವಾಮಿ (78ಕ್ಕೆ 10) ಹಿಂದಿನ ಸಾಧಕಿ.
3. ಲೌರಾ ವೋಲ್ವಾರ್ಡ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಶತಕಗಳಿಸಿದ 3ನೇ ಹಾಗೂ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟುಗಾರ್ತಿ ಎನಿಸಿದರು. ಇಂಗ್ಲೆಂಡ್‌ನ ಹೀದರ್ ನೈಟ್, ಟಮ್ಮಿ ಬ್ಯೂಮಾಂಟ್ ಮೊದಲಿಬ್ಬರು.
1. ಲೌರಾ ವೋಲ್ವಾರ್ಡ್ ಒಂದೇ ವರ್ಷದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಮಹಿಳಾ ಬ್ಯಾಟರ್.
3. ಭಾರತ ಮಹಿಳಾ ತಂಡಕ್ಕೆ ಸತತ ಮೂರನೇ ಟೆಸ್ಟ್ ಗೆಲುವು ಇದಾಗಿದೆ. 2022ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿಯೂ ಜಯ ಕಂಡಿತ್ತು.
ಒಟ್ಟು 1,279 ರನ್‌ಪ್ರವಾಹ!
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಒಟ್ಟು 1, 279 ರನ್‌ಪ್ರವಾಹ ಹರಿಯಿತು. ಇದು ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ 2ನೇ ಗರಿಷ್ಠ ರನ್ ಎನಿಸಿದೆ. 2023ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಒಟ್ಟು 1,371 ರನ್ ದಾಖಲಾಗಿದ್ದು ಮೊದಲ ಗರಿಷ್ಠ ಮೊತ್ತವಾಗಿದೆ.