ಅವಿಶ್ವಾಸ ಎದುರಿಸುವುದಕ್ಕೂ ಮುನ್ನ ಪ್ರಧಾನಿ ಮಾಡಿದ ಟ್ವೀಟ್​ ಏನು?

ದೆಹಲಿ: ಸಂಸದೀಯ ವ್ಯವಸ್ಥೆಯಲ್ಲಿ ಹದಿನೈದು ವರ್ಷಗಳಿಂದೀಚೆಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿರುದ್ಧ ಇಂದು ಅವಿಶ್ವಾಸ ಗೊತ್ತುವಳಿ ಮಂಡನೆಯಾಗುತ್ತಿದ್ದು, ಈ ಕುರಿತು ನರೇಂದ್ರ ಮೋದಿ ಅವರು ಟ್ವೀಟ್​ ಮಾಡಿ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.

“ಭಾರತೀಯ ಸಂಸದೀಯ ವ್ಯವಸ್ಥೆಯಲ್ಲೇ ಇದು ಅತ್ಯಂತ ಪ್ರಮುಖ ದಿನ. ನನ್ನ ಸಂಸತ್​ ಸಹೋದ್ಯೋಗಿ ಮಿತ್ರರಾದ ಲೋಕಸಭೆ ಸದಸ್ಯರು ರಚನಾತ್ಮಕ, ಸಮಗ್ರ ಮತ್ತು ಅಡೆ ತಡೆ ಇಲ್ಲದ ಚರ್ಚೆಗೆ ಅವಕಾಶ ಮಾಡಿಕೊಡುತ್ತಾರೆಂದು ನಾನು ನಂಬಿದ್ದೇನೆ. ಈ ವಿಚಾರದಲ್ಲಿ ನಾವು ಜನರಿಗೆ ಬದ್ಧರಾಗಿಬೇಕು. ಈ ಸನ್ನಿವೇಶವನ್ನು ಇಡೀ ದೇಶ ಅತ್ಯಂತ ಹತ್ತಿರದಿಂದ ನೋಡುತ್ತಿದೆ.” ಎಂದು ಟ್ವಿಟ್​ ಮಾಡಿದ್ದಾರೆ.

ಇಂದು 11 ಗಂಟೆಗೆ ಸಂಸತ್​ನಲ್ಲಿ ಅವಿಶ್ವಾಸ ನಿಲುವಳಿಯ ಮೇಲೆ ಚರ್ಚೆ ಆರಂಭವಾಗಲಿದೆ. ನಿಲುವಳಿಯ ಬಗ್ಗೆ ಎಲ್ಲ ಪಕ್ಷಗಳು ತಮ್ಮ ಸದಸ್ಯರಿಗೆ ಈಗಾಗಲೇ ವಿಪ್​ ಜಾರಿ ಮಾಡಿವೆ. ಆಡಳಿತರೂಢ ಬಿಜೆಪಿ ಕೂಡ ಈಗಾಗಲೇ ತನ್ನ ಮಿತ್ರ ಪಕ್ಷಗಳನ್ನು ಸಂಪರ್ಕಿಸಿ ಅವಿಶ್ವಾಸ ನಿಲುವಳಿಯ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದೆ. ಮುನಿಸು ಶಮನ ಮಾಡುವ ಕಾರ್ಯಕ್ಕೂ ಕೈ ಹಾಕಿದೆ.