ಭಾರತಕ್ಕೆ ಸರಣಿ ಗೆಲುವಿನ ತವಕ

ಹೈದರಾಬಾದ್: ಕಳೆದ ಐದು ವರ್ಷಗಳಿಂದ ತವರಿನಲ್ಲಿ ಸತತವಾಗಿ ಸರಣಿ ಗೆದ್ದು ಪ್ರವಾಸಿ ತಂಡಗಳ ಪಾಲಿಗೆ ನಿರ್ದಯಿ ಎನಿಸಿಕೊಂಡಿರುವ ಭಾರತ ತಂಡ ಅದೇ ದಾಖಲೆ ಮುಂದುವರಿಸುವ ತವಕದಲ್ಲಿದೆ. ಮುಂಬರುವ ಮಹತ್ವದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಗೆ ಪೂರ್ವಸಿದ್ಧತೆ ನಡೆಸುತ್ತಿರುವ ವಿರಾಟ್ ಕೊಹ್ಲಿ ಟೀಮ್ ಶುಕ್ರವಾರದಿಂದ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡು ಸರಣಿ ವಶಪಡಿಸಿಕೊಳ್ಳುವ ಅವಕಾಶ ಭಾರತದ ಮುಂದಿದ್ದರೂ, 2-0 ಗೆಲುವಿನ ನಿರೀಕ್ಷೆ ಹೆಚ್ಚಾಗಿದೆ.

ಕಳೆದ 23 ವರ್ಷಗಳಿಂದ ಕೆರಿಬಿಯನ್ನರಿಗೆ ಭಾರತದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನೂ ಗೆಲ್ಲಲು ಬಿಡದಿರುವ ಭಾರತ ಅದೇ ದಾಖಲೆ ಕಾಯ್ದುಕೊಳ್ಳುವ ಯೋಜನೆಯಲ್ಲಿದೆ. ಇಬ್ಬರು ಪ್ರಮುಖ ಆಟಗಾರರಾದ ನಾಯಕ ಜೇಸನ್ ಹೋಲ್ಡರ್ ಮತ್ತು ವೇಗಿ ಕೇಮಾರ್ ರೂಚ್ ಪುನರಾಗಮನದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿರುವ ವಿಂಡೀಸ್, ಕೊಹ್ಲಿ ಪಡೆಗೆ ಕನಿಷ್ಠ ಪ್ರತಿರೋಧ ಒಡ್ಡಲು ಪ್ರಯತ್ನಿಸಲಿದೆ. ಆದರೆ, ವಿಶ್ವ ನಂ.1 ಟೆಸ್ಟ್ ಟೀಮ್ ಭಾರತದ ಪ್ರಾಬಲ್ಯತೆಯ ಸನಿಹ ಸುಳಿಯುವಷ್ಟು ಸಾಮರ್ಥ್ಯವಿರದ ರೀತಿಯಲ್ಲಿ ದುರ್ಬಲವಾಗಿ ಅನನುಭವಿ ವಿಂಡೀಸ್ ತಂಡ ಕಾಣಿಸುತ್ತಿದೆ.


ರಿಷಭ್ ಇನ್, ಕಾರ್ತಿಕ್ ಔಟ್

ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾಕಪ್ ಟೂರ್ನಿ ವೇಳೆ ವಿಶ್ರಾಂತಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. 14 ಆಟಗಾರರ ಏಕದಿನ ತಂಡದಲ್ಲಿ ಯುವ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ ಮೊದಲ ಬಾರಿ ಸ್ಥಾನ ಪಡೆದರೆ, ದಿನೇಶ್ ಕಾರ್ತಿಕ್ ಕೊಕ್ ಪಡೆದಿದ್ದಾರೆ. ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ಸ್ಥಾನ ಉಳಿಸಿಕೊಂಡಿದ್ದಾರೆ.

ಪಂತ್​ಗೆ ಸ್ಥಾನ, ಮರಳಿದ ಶಮಿ: ಮುಂದಿನ ವರ್ಷದ ಏಕದಿನ ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ತಂಡ ಆಯ್ಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಏಷ್ಯಾಕಪ್ ವೇಳೆ ಬ್ಯಾಟಿಂಗ್​ನಲ್ಲಿ ಗಮನ ಸೆಳೆಯಲು ವಿಫಲರಾಗಿದ್ದ ಮಾಜಿ ನಾಯಕ ಎಂಎಸ್ ಧೋನಿಗೆ ಬ್ಯಾಕ್​ಅಪ್ ವಿಕೆಟ್ ಕೀಪರ್ ಆಗಿ ರಿಷಭ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ವೇಗಿ ಮೊಹಮದ್ ಶಮಿ ಸುಮಾರು ಒಂದು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದ್ದಾರೆ. ಶಮಿ 2017ರ ಸೆಪ್ಟೆಂಬರ್​ನಲ್ಲಿ ಕೊನೇ ಏಕದಿನ ಪಂದ್ಯವನ್ನಾಡಿದ್ದರು.

ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್​ರನ್ನು ತಂಡಕ್ಕೆ ಅಲಭ್ಯರಾಗಿದ್ದರೆ, ವೇಗಿ ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ ವಿಶ್ರಾಂತಿ ಮುಂದುವರಿದಿದೆ. ಉದಯೋನ್ಮುಖ ಎಡಗೈ ವೇಗಿ ಖಲೀಲ್ ಅಹ್ಮದ್ ಸ್ಥಾನ ಕಾಯ್ದುಕೊಂಡಿದ್ದಾರೆ. ಮೊದಲೆರಡು ಏಕದಿನ ಅ. 21, 24ರಂದು ಕ್ರಮವಾಗಿ ಗುವಾಹಟಿ, ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಧೋನಿ (ವಿ.ಕೀ.), ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್, ಶಮಿ, ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್.

ರನ್ ನಿರೀಕ್ಷೆಯ ಪಿಚ್

ಮೊದಲ ಪಂದ್ಯದಂತೆ ಉಪ್ಪಳ ಪಿಚ್​ನಲ್ಲಿ ಸರಾಗ ರನ್ ನಿರೀಕ್ಷೆಯಿದೆ. ವಿಂಡೀಸ್​ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದರೆ ಭಾರತದ ಸ್ಪಿನ್ನರ್​ಗಳನ್ನು ಎಚ್ಚರಿಕೆಯಿಂದ ಎದುರಿಸಿದರಷ್ಟೇ ಪ್ರತಿರೋಧ ನೀಡಬಹುದು. ಇಲ್ಲಿ 2017ರಲ್ಲಿ ನಡೆದ ಕೊನೇ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದರು.

ಆರಂಭ: ಬೆಳಗ್ಗೆ 9.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

ಟೀಮ್ ನ್ಯೂಸ್

ಭಾರತ: ಮೊದಲ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ವೈಫಲ್ಯದ ಹೊರತಾಗಿಯೂ ಭಾರತ ಏಕಪಕ್ಷೀಯವಾಗಿ ಜಯಿಸಿತ್ತು. ಹೀಗಾಗಿ ಭಾರತ ಮತ್ತೆ ಅದೇ 12ರ ಬಳಗವನ್ನು ಹೈದರಾಬಾದ್ ಟೆಸ್ಟ್​ಗೆ ಮುನ್ನಾದಿನ ಪ್ರಕಟಿಸಿದೆ. ಕೊಹ್ಲಿ ನಾಯಕನಾಗಿ ಆಡಿದ 42 ಪಂದ್ಯಗಳಲ್ಲಿ ಈ ಪಂದ್ಯದ ಮೂಲಕ ಕೇವಲ 2ನೇ ಬಾರಿ ಬದಲಾವಣೆಯಿಲ್ಲದೆ ಆಡುವ ನಿರೀಕ್ಷೆಯಿದೆ. ಇದರಿಂದ, ಕನ್ನಡಿಗ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲೂ ಪದಾರ್ಪಣೆ ಮಾಡುವ ಅವಕಾಶ ಕೈತಪ್ಪಿದಂತಾಗಿದೆ.

ವಿಂಡೀಸ್: ಈ ಪಂದ್ಯಕ್ಕೆ ನಾಯಕ ಜೇಸನ್ ಹೋಲ್ಡರ್ ಮತ್ತು ವೇಗಿ ಕೇಮಾರ್ ರೂಚ್ ಪುನರಾಗಮನದ ನಿರೀಕ್ಷೆಯಲ್ಲಿದೆ. ಹೋಲ್ಡರ್ ಶೇ. 100 ಫಿಟ್ ಆಗದಿದ್ದರೂ, ಆಡುವರೆಂದು ಹೇಳಲಾಗುತ್ತಿದೆ. ರೂಚ್ ವೈಯಕ್ತಿಕ ಕಾರಣದಿಂದ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಸುನೀಲ್ ಆಂಬ್ರಿಸ್ ಕಳೆದ ಎರಡೂ ಇನಿಂಗ್ಸ್​ನಲ್ಲಿ ನೀರಸವಾಗಿ ಆಡಿದ್ದರಿಂದ ಸ್ಥಾನ ಉಳಿಸಿಕೊಳ್ಳುವುದು ಅನುಮಾನ. ದೇವೇಂದ್ರ ಬಿಶೂ ಬರೋಬ್ಬರಿ 54 ಓವರ್ ಎಸೆದು 4 ವಿಕೆಟ್ ಕಬಳಿಸಿದ್ದರೂ ಅದು ತಂಡದ ನೆರವಿಗೆ ಬರಲಿಲ್ಲ. ಹೀಗಾಗಿ ಅವರ ಬದಲಿಗೆ ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕನ್​ಗೆ ಅವಕಾಶ ಸಿಕ್ಕಿದರೆ ಅಚ್ಚರಿಯಿಲ್ಲ. ಶನನ್ ಗ್ಯಾಬ್ರಿಯೆಲ್ ಫಿಟ್ನೆಸ್​ನಲ್ಲೂ ಸ್ವಲ್ಪ ಏರುಪೇರು ಕಾಣಿಸಿಕೊಂಡಿದೆ.

5 ಭಾರತ 2013ರಿಂದ ತವರಿನಲ್ಲಿ ಎಲ್ಲ ಪ್ರವಾಸಿ ತಂಡಗಳ ಎದುರು ಟೆಸ್ಟ್ ಸರಣಿ ಜಯಿಸಿದೆ. ಕ್ರಮವಾಗಿ ಆಸ್ಟ್ರೇಲಿಯಾ (4-0), ವೆಸ್ಟ್ ಇಂಡೀಸ್(2-0), ದಕ್ಷಿಣ ಆಫ್ರಿಕಾ(3-0), ನ್ಯೂಜಿಲೆಂಡ್(3-0), ಇಂಗ್ಲೆಂಡ್(4-0), ಬಾಂಗ್ಲಾದೇಶ(1-0), ಆಸ್ಟ್ರೇಲಿಯಾ(2-1), ಶ್ರೀಲಂಕಾ(1-0), ಅಫ್ಘಾನಿಸ್ತಾನ (1-0) ವಿರುದ್ಧ ಈ ಗೆಲುವುಗಳು ಬಂದಿವೆ.

4 ಭಾರತ ತಂಡ ಉಪ್ಪಳ ಕ್ರೀಡಾಂಗಣದಲ್ಲಿ ಇದುವರೆಗೆ ಆಡಿರುವ 4 ಟೆಸ್ಟ್ ಪಂದ್ಯಗಳಲ್ಲಿ ಕೊನೇ 3ರಲ್ಲಿ ಗೆದ್ದರೆ, ಮೊದಲ ಪಂದ್ಯದಲ್ಲಿ ಡ್ರಾ ಫಲಿತಾಂಶ ಕಂಡಿತ್ತು.

Leave a Reply

Your email address will not be published. Required fields are marked *