ರೋಹಿತ್ ಶತಕ, ಭಾರತ ಶುಭಾರಂಭ: ಬುಮ್ರಾ, ಚಾಹಲ್ ಬೌಲಿಂಗ್​ಗೆ ಹರಿಣಗಳು ತತ್ತರ

ಸೌಥಾಂಪ್ಟನ್: ವಿಶ್ವಕಪ್ ಉತ್ಸವಕ್ಕೆ ಆರು ದಿನಗಳ ಬಳಿಕ ಆಗಮಿಸಿದರೂ, ಶಿಸ್ತಿನ ನಿರ್ವಹಣೆಯ ಮೂಲಕ ಗಮನಸೆಳೆದ ಭಾರತ ತಂಡ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದೆ. ಏಕದಿನ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮ (122*ರನ್, 144 ಎಸೆತ, 13 ಬೌಂಡರಿ, 2 ಸಿಕ್ಸರ್) ಬಾರಿಸಿದ 23ನೇ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಬಾರಿಸಿದ 2ನೇ ಶತಕದ ನೆರವಿನಿಂದ ಭಾರತ ತಂಡ ಇನ್ನೂ 15 ಎಸೆತಗಳು ಇರುವಂತೆ ಜಯದ ಗುರಿ ಮುಟ್ಟಿತು.

ಕಳೆದ ಎರಡು ಪಂದ್ಯಗಳಲ್ಲಿ ರನ್ ಚೇಸಿಂಗ್ ಮಾಡುವಲ್ಲಿ ಎಡವಿದ್ದ ದಕ್ಷಿಣ ಆಫ್ರಿಕಾ, ಬುಧವಾರ ರೋಸ್​ಬೌಲ್​ನಲ್ಲಿ ನಡೆದ ಮಹತ್ವದ ಮುಖಾಮುಖಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಭಾರತದ ವೇಗ ಹಾಗೂ ಸ್ಪಿನ್ ಬೌಲಿಂಗ್ ಅಸ್ತ್ರಗಳಿಗೆ ಆಫ್ರಿಕಾದ ಬ್ಯಾಟಿಂಗ್ ಆಹಾರವಾಗಿದ್ದರಿಂದ 9 ವಿಕೆಟ್​ಗೆ 227 ರನ್ ಪೇರಿಸಲಷ್ಟೇ ಶಕ್ತವಾಯಿತು. ಅದರಲ್ಲೂ ಕೊನೇ ಹಂತದಲ್ಲಿ ಕ್ರಿಸ್ ಮಾರಿಸ್ (42ರನ್, 34 ಎಸೆತ, 1 ಬೌಂಡರಿ, 2 ಸಿಕ್ಸರ್) ಅಬ್ಬರಿಸದೇ ಹೋಗಿದ್ದಲ್ಲಿ ಈ ಮೊತ್ತ ದಾಖಲಿಸುವುದೂ ದಕ್ಷಿಣ ಆಫ್ರಿಕಾಗೆ ಕಷ್ಟವಾಗಿತ್ತು. ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಯಜುವೇಂದ್ರ ಚಾಹಲ್ (51ಕ್ಕೆ 4), ಕುಲದೀಪ್ ಯಾದವ್ (46ಕ್ಕೆ 1) ಹಾಗೂ ವೇಗಿ ಜಸ್​ಪ್ರೀತ್ ಬುಮ್ರಾ (35ಕ್ಕೆ 2) ಕಟ್ಟಿಹಾಕಿದರು. ಮೊತ್ತ ಬೆನ್ನಟ್ಟಿದ ಭಾರತ 47.3 ಓವರ್​ಗಳಲ್ಲಿ 4 ವಿಕೆಟ್​ಗೆ 230 ರನ್ ಪೇರಿಸಿ ಸತತ 3ನೇ ಆವೃತ್ತಿಯ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಗೆಲುವು ಕಂಡಿತು.

ರೋಹಿತ್ ಸೂಪರ್ ಸೆಂಚುರಿ: ಕಳೆದ ಎರಡು ಆವೃತ್ತಿಗಳ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ನಿಂದ ಶತಕ ದಾಖಲಾದಂತೆ ಈ ಬಾರಿಯೂ ಮೂರಂಕಿಯ ಮೊತ್ತ ದಾಖಲಾಯಿತು. ಶಿಖರ್ ಧವನ್ (8) ಹಾಗೂ ವಿರಾಟ್ ಕೊಹ್ಲಿ (18) ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡಿದ್ದ ಭಾರತಕ್ಕೆ, ರೋಹಿತ್ ಶರ್ಮ ಹಾಗೂ ಕೆಎಲ್ ರಾಹುಲ್ (26) ಜೋಡಿ 3ನೇ ವಿಕೆಟ್​ಗೆ 84 ರನ್ ಜತೆಯಾಟವಾಡಿ ಆಧಾರವಾಯಿತು. ಆರಂಭದಲ್ಲಿ ರಬಾಡ ಎಸೆತಗಳನ್ನು ಎದುರಿಸಲು ಪರದಾಡಿ ಕೆಲ ಜೀವದಾನಗಳನ್ನೂ ಪಡೆದಿದ್ದ ರೋಹಿತ್, ಕೊಹ್ಲಿ ತಂಡದ ಮೊತ್ತ 54 ರನ್ ಆಗಿದ್ದಾಗ ಔಟಾದ ಬಳಿಕ ಜವಾಬ್ದಾರಿಯುತ ಆಟವಾಡಿದರು. ಸ್ಟ್ರೈಕ್ ರೊಟೇಟ್ ಮಾಡುವಲ್ಲಿ ಹೆಚ್ಚಿನ ಗಮನ ನೀಡಿದ ರೋಹಿತ್ ಮೇಲಿನ ಭಾರವನ್ನು ಎಂಎಸ್ ಧೋನಿ (34) ಕಡಿಮೆ ಮಾಡಿದರು. ಧೋನಿ ಜತೆಯಾದ ಬಳಿಕ ಯಾವುದೇ ಭೀತಿಯಿಲ್ಲದೆ ಆಡಿದ ರೋಹಿತ್, 128 ಎಸೆತಗಳಲ್ಲಿ ಶತಕ ಪೂರೈಸಿದರು. 4ನೇ ವಿಕೆಟ್​ಗೆ ಈ ಜೋಡಿ 74 ರನ್ ಜತೆಯಾಟವಾಡಿ ಗೆಲುವನ್ನು ಸುಲಭ ಮಾಡಿತು. ಜಯಕ್ಕೆ 15 ರನ್ ಬೇಕಿದ್ದಾಗ ಧೋನಿ ಔಟಾದರೂ, ಹಾರ್ದಿಕ್ ಪಾಂಡ್ಯ (15*) ಜತೆಗೂಡಿ ರೋಹಿತ್ ಗೆಲುವಿನ ದಡ ಮುಟ್ಟಿಸಿದರು.

ಭಾರತದ ಪರ ಗರಿಷ್ಠ ಶತಕ ದಾಖಲಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ರೋಹಿತ್ ಶರ್ಮ, ಸೌರವ್ ಗಂಗೂಲಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದರು. 49 ಶತಕ ಬಾರಿಸಿರುವ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದರೆ, 41 ಶತಕ ಬಾರಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ 23 ಶತಕ ಸಿಡಿಸಿದ್ದರೆ, ಗಂಗೂಲಿ 22 ಶತಕದೊಂದಿಗೆ 4ನೇ ಸ್ಥಾನಕ್ಕಿಳಿದರು.

ಕುಲ್-ಚಾ ಸ್ಪಿನ್​ಗೆ ದಕ್ಷಿಣ ಆಫ್ರಿಕಾ ಕಂಗಾಲು

ಕುಲ್-ಚಾ ಜೋಡಿ ಸ್ಪಿನ್ ದಾಳಿಗಿಳಿದ ಬಳಿಕ ದಕ್ಷಿಣ ಆಫ್ರಿಕಾ ಇನ್ನಷ್ಟು ಹಿನ್ನಡೆ ಕಂಡಿತು. ಕಳಪೆ ಫಾಮ್ರ್ ಬೆನ್ನಿಗೆ ಕಟ್ಟಿಕೊಂಡು ವಿಶ್ವಕಪ್​ಗೆ ಬಂದಿದ್ದ ಕುಲದೀಪ್ ಆರಂಭದ ಕೆಲ ಓವರ್​ಗಳಲ್ಲಿ ತಡಬಡಾಯಿಸಿದರೂ, ಜೆಪಿ ಡುಮಿನಿಯ (3) ಪ್ರಮುಖ ವಿಕೆಟ್ ಉರುಳಿಸುವ ಮೂಲಕ ನೆರವಾದರು. ಮಧ್ಯಮ ಓವರ್​ಗಳಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ನೀಡಿದ್ದ ಯಜುವೇಂದ್ರ ಚಾಹಲ್. ಸುಲಭವಾಗಿ ಸ್ವೀಪ್ ಶಾಟ್​ಗಳನ್ನು ಬಾರಿಸುತ್ತಿದ್ದ ರಸ್ಸಿ ವಾನ್ ಡರ್ ಡುಸೆನ್ (22ರನ್, 37 ಎಸೆತ, 1 ಬೌಂಡರಿ) ಹಾಗೂ ಫಾಫ್ ಡು ಪ್ಲೆಸಿಸ್ (38ರನ್, 54 ಎಸೆತ, 4 ಬೌಂಡರಿ) 3ನೇ ವಿಕೆಟ್​ಗೆ 54 ರನ್ ಜತೆಯಾಟವಾಡಿದ್ದರು. ಇಬ್ಬರೂ ಆಟಗಾರರನ್ನು ಒಂದೇ ಓವರ್​ನಲ್ಲಿ ಚಾಹಲ್ ಬೌಲ್ಡ್ ಮಾಡಿ ಆಫ್ರಿಕಾಗೆ ಆಘಾತ ನೀಡಿದರು. ಡುಮಿನಿ ಔಟಾದಾಗ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 89 ರನ್ ಬಾರಿಸಿತ್ತು.

ಮಾರಿಸ್ ಪ್ರತಿರೋಧ

ಇನಿಂಗ್ಸ್​ನ ಮೇಲೆ ಹಿಡಿತ ಹೊಂದಿದ್ದ ಭಾರತ ಆ ಬಳಿಕ ನಿಧಾನವಾಗಿ ನಿರಾಳ ಆಟವಾಡಿತು. ಡೇವಿಡ್ ಮಿಲ್ಲರ್ (31) ಹಾಗೂ ಆಂಡಿಲ್ ಪೆಹ್ಲುಕ್​ವಾಯೊ (34) ಜೋಡಿ 46 ರನ್ ಜತೆಯಾಟವಾಡಿ ಅಪಾಯಕಾರಿಯಾಗುವ ಸೂಚನೆ ನೀಡಿದಾಗ ಕೊಹ್ಲಿ ಮತ್ತೆ ಚಾಹಲ್​ರನ್ನು ಕಣಕ್ಕಿಳಿಸಿದರು. ಚಾಹಲ್ ಎಸೆತದಲ್ಲಿ ಪೆಹ್ಲುಕ್​ವಾಯೋ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು. ಆ ಬಳಿಕ ಕ್ರೀಸ್​ಗಿಳಿದ ಕ್ರಿಸ್ ಮಾರಿಸ್ ಚಾಹಲ್​ಗೆ ಒಂದೆರಡು ಸಿಕ್ಸರ್ ಬಾರಿಸಿದ್ದರಿಂದ 10 ಓವರ್​ಗಳ ಕೋಟಾದಲ್ಲಿ 51 ರನ್ ನೀಡಿದರು. 8ನೇ ವಿಕೆಟ್​ಗೆ ಮಾರಿಸ್ ಹಾಗೂ ರಬಾಡ (31*) 66 ರನ್ ಜತೆಯಾಟವಾಡಿ ಮೊತ್ತ 225ರ ಗಡಿ ದಾಟಿಸಿದರು.

ಪೆಹ್ಲುಕ್​ವಾಯೊ ರನ್ನು ಸ್ಟಂಪ್ ಔಟ್ ಮಾಡುವ ಮೂಲಕ, ಧೋನಿ ಮತ್ತೊಂದು ದಾಖಲೆ ಬರೆದರು. 139ನೇ ಸ್ಟಂಪಿಂಗ್​ನೊಂದಿಗೆ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಗರಿಷ್ಠ ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಪಾಕಿಸ್ತಾನದ ಮೊಯಿನ್ ಖಾನ್​ರೊಂದಿಗೆ ಹಂಚಿಕೊಂಡರು.

ಜಸ್​ಪ್ರೀತ್ ಬುಮ್ರಾ ಆರಂಭಿಕ ಆಘಾತ

ಭಾರತದ ಮಿಂಚಿನ ಆರಂಭಕ್ಕೆ ಕಾರಣರಾದವರು ವೇಗಿ ಬುಮ್ರಾ. ಬೆಳಗಿನ ಅವಧಿಯಲ್ಲಿ ಪಿಚ್​ನ ಮೇಲಿದ್ದ ತೇವಾಂಶದ ಲಾಭ ಪಡೆದುಕೊಂಡ ವೇಗಿ, ಹಾಶಿಂ ಆಮ್ಲ ಹಾಗೂ ಕ್ವಿಂಟನ್ ಡಿ ಕಾಕ್​ಗೆ ಬಹುವಾಗಿ ಕಾಡಿದರು. 5ನೇ ಓವರ್ ವೇಳೆಗಾಗಲೇ ಇವರಿಬ್ಬರನ್ನೂ ಪೆವಿಲಿಯನ್​ಗೆ ಅಟ್ಟಿದ್ದ ಬುಮ್ರಾ, ಮೊದಲ ಸ್ಪೆಲ್​ನ 5 ಓವರ್​ಗಳಲ್ಲಿ ಕೇವಲ 13 ರನ್​ನೀಡಿದ್ದರು. ಆಮ್ಲ 2ನೇ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ಔಟಾದರೆ, ಡ್ರೖೆವ್ ಮಾಡುವ ಯತ್ನದಲ್ಲಿ ಎಡವಿದ ಡಿಕಾಕ್ 3ನೇ ಸ್ಲಿಪ್​ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದರು. ಏಕದಿನ ಮಾದರಿಯಲ್ಲಿ 3ನೇ ಸ್ಲಿಪ್​ಅನ್ನು ವಿರಳವಾಗಿ ಆಯ್ಕೆ ಮಾಡಲಾಗುತ್ತದೆಯಾದರೂ, ಡಿಕಾಕ್​ರ ಹಿನ್ನಡೆಯನ್ನು ಅರಿತಿದ್ದ ಕೊಹ್ಲಿ ಅದರಂತೆ ಫೀಲ್ಡ್ ಸಿದ್ಧಪಡಿಸಿದ್ದರು. 10 ಓವರ್​ಗಳ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 34 ರನ್ ಬಾರಿಸಿತ್ತು. ಹಾಲಿ ಟೂರ್ನಿಯಲ್ಲಿ ಪವರ್ ಪ್ಲೇ ಅಂತ್ಯಕ್ಕೆ ತಂಡವೊಂದರ ಕಡಿಮೆ ಮೊತ್ತ ಇದಾಗಿದೆ.

ತಾಹಿರ್​ಗಿಂತ ಪಂದ್ಯದ ಅಂಪೈರ್ ಕಿರಿಯ!

ಸೌಥಾಂಪ್ಟನ್: ಹಾಲಿ ವಿಶ್ವಕಪ್​ನಲ್ಲಿ ಆಡುತ್ತಿರುವ ಹಿರಿಯ ಆಟಗಾರ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್. ಆದರೆ, ವಯಸ್ಸಿನ ವಿಚಾರದಲ್ಲಿಯೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯ ಗಮನಸೆಳೆದಿದೆ. ಪಂದ್ಯಕ್ಕೆ ಅಂಪೈರ್ ಆಗಿದ್ದ ಮಿಚೆಲ್ ಗಫ್, ತಾಹಿರ್​ಗಿಂತ ಕಿರಿಯ ವಯಸ್ಸಿನವರಾಗಿದ್ದರು. ವಿಶ್ವಕಪ್ ಇತಿಹಾಸದಲ್ಲಿ ಆಟಗಾರನಿಗಿಂತ ಅಂಪೈರ್ ಕಿರಿಯನಾಗಿರುವ ಸಂಗತಿ ಬಹಳ ವಿರಳ. ಇಂಗ್ಲೆಂಡ್​ನ ಮಾಜಿ ಆಟಗಾರ ಮಿಚೆಲ್ ಗಫ್ 39 ವರ್ಷದವರಾಗಿದ್ದರೆ, ತಾಹಿರ್ 40 ವರ್ಷದ ಆಟಗಾರನಾಗಿದ್ದಾರೆ.

ಧೋನಿ ಗ್ಲೌಸ್​ನಲ್ಲಿ ಪ್ಯಾರಾ ಫೋರ್ಸ್ ಲಾಂಛನ

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯ ವಿಕೆಟ್ ಕೀಪಿಂಗ್ ಗ್ಲೌಸ್ ಪಂದ್ಯದ ವೇಳೆ ಗಮನಸೆಳೆಯಿತು. ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಫೋರ್ಸ್​ನ ಲೆಫ್ಟಿನೆಂಟ್ ಕರ್ನಲ್ ಸ್ಥಾನದಲ್ಲಿರುವ ಧೋನಿ, ಪ್ಯಾರಾ ಪೋರ್ಸ್​ನ ರೆಜಿಮೆಂಟಲ್ ಡ್ಯಾಗರ್​ನ ಚಿತ್ರವಿದ್ದ ಗ್ಲೌಸ್​ಅನ್ನು ಧರಿಸಿದ್ದರು. ಇದನ್ನೂ ಬಲಿದಾನ್ ಲಾಂಛನ ಎಂದೂ ಕರೆಯಲಾಗುತ್ತದೆ.

50 ಗೆಲುವಿನ ಸಾಧನೆ ಮಾಡಿದ ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನಾಯಕನಾಗಿ 50 ಪಂದ್ಯಗಳ ಗೆಲುವಿನ ಸಾಧನೆ ಮಾಡಿದರು. ಅತೀ ಕಡಿಮೆ ಪಂದ್ಯಗಳಲ್ಲಿ ನಾಯಕನಾಗಿ 50 ಗೆಲುವಿನ ಸಾಧನೆ ಮಾಡಿದ ವಿಶ್ವದ 3ನೇ ನಾಯಕ ಕೊಹ್ಲಿ. ಕೊಹ್ಲಿ 69ನೇ ಪಂದ್ಯದಲ್ಲಿ 50ನೇ ಗೆಲುವು ದಾಖಲಿಸಿದರೆ, ಕ್ಲೈವ್ ಲಾಯ್್ಡ ಹಾಗೂ ರಿಕಿ ಪಾಂಟಿಂಗ್ 63 ಪಂದ್ಯಗಳಲ್ಲಿ 50 ಗೆಲುವು ದಾಖಲಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. 68 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ 2ನೇ ಸ್ಥಾನದಲ್ಲಿದ್ದಾರೆ.

ವಿಶ್ವಕಪ್​ನ ಮೊದಲ ಪಂದ್ಯಕ್ಕಾಗಿ ಬಹಳ ದಿನ ಕಾದೆವು. ಬಲಿಷ್ಠ ತಂಡದ ವಿರುದ್ಧದ ಗೆಲುವು ಬಹಳ ವಿಶ್ವಾಸ ನೀಡುತ್ತದೆ. ರೋಹಿತ್ ಆಡಿದ ರೀತಿ ಅದ್ಭುತವಾಗಿತ್ತು. ಹಾಗೇನಾದರೂ ನಾವು ಟಾಸ್ ಗೆದ್ದಿದ್ದರೆ ಬೌಲಿಂಗ್ ಆಯ್ಕೆ ಮಾಡುತ್ತಿದ್ದೆವು. ಬುಮ್ರಾ, ಚಾಹಲ್ ಬೌಲಿಂಗ್ ಜಯದ ಪ್ಲಸ್ ಪಾಯಿಂಟ್.

| ವಿರಾಟ್ ಕೊಹ್ಲಿ ಭಾರತದ ನಾಯಕ

ಭಾರತದ ಬೌಲಿಂಗ್ ಅತ್ಯುತ್ತಮವಾಗಿತ್ತು. ಶ್ರೇಷ್ಠ ವೇಗಿ ಹಾಗೂ ಸ್ಪಿನ್ನರ್​ಗಳನ್ನು ತಂಡ ಹೊಂದಿದೆ. ರೋಹಿತ್​ಗೆ ಇಂದು ಶತಕ ಬಾರಿಸುವ ಅದೃಷ್ಟವಿತ್ತು. ಜೀವದಾನದ ಲಾಭ ಪಡೆದುಕೊಂಡ ಅವರು ಪಂದ್ಯವನ್ನೂ ಗೆಲ್ಲಿಸಿದರು. ನಮ್ಮ ವೇಗದ ಬೌಲಿಂಗ್ ವಿಭಾಗ ದುರ್ಬಲವಾಗಿದೆ.

| ಫಾಫ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ನಾಯಕ

Leave a Reply

Your email address will not be published. Required fields are marked *