VIDEO| ಗೇಮ್​ ಫಿನಿಶರ್​ ಧೋನಿ ರನೌಟ್​ ವಿಚಾರದಲ್ಲಿ ಅಂಪೈರ್​, ನ್ಯೂಜಿಲೆಂಡ್​ ತಂಡದ ವಿರುದ್ಧ ಅಭಿಮಾನಿಗಳ ಆಕ್ರೋಶ!

ನವದೆಹಲಿ: ವಿಶ್ವದಲ್ಲೇ ಉತ್ತಮ ಗೇಮ್​ ಫಿನಿಶರ್​ ಎಂಬ ಹೆಸರು ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ ನ್ಯೂಜಿಲೆಂಡ್​ ವಿರುದ್ಧ ವಿಶ್ವಕಪ್​​ ಸೆಮಿಫೈನಲ್​ ಪಂದ್ಯದಲ್ಲಿಯೂ ಅದನ್ನು ಸಾಬೀತು ಮಾಡುತ್ತಾರೆ ಎಂದು ಅಭಿಮಾನಿಗಳು ಆಸೆಯನ್ನು ಹೊಂದಿದ್ದರು. ಇನ್ನೇನು ಪಂದ್ಯ ಇಂಡಿಯಾ ಕಡೆ ತಿರುಗಬೇಕೆನ್ನುವಷ್ಟರಲ್ಲಿ ಮಾರ್ಟಿನ್​ ಗುಪ್ಟಿಲ್​ ಮಾಡಿದ ಒಂದೇ ಒಂದು ರನೌಟ್​ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಆದರೆ, ಅದೇ ರನೌಟ್​ ಅಂಪೈರ್​ ಮೇಲಿನ ಅಭಿಮಾನಿಗಳ ಸಿಟ್ಟಿಗೂ ಕಾರಣವಾಗಿದೆ.

ಹೌದು, ಧೋನಿ ರನೌಟ್​​ ಆದಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್​​ ತಂಡದ ಕ್ಷೇತ್ರ ರಕ್ಷಣೆ ವಿಚಾರದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳು ಅಂಪೈರ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಟಿವಿ ಸ್ಕ್ರೀನ್​ ಚಿತ್ರ ಹಾಗೂ ಧೋನಿ ರನೌಟ್​ ಆದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿರುವ ಅಭಿಮಾನಿಗಳು, ಧೋನಿ ಔಟಾಗುವಾಗ 38 ಸರ್ಕಲ್​ನಿಂದ ನ್ಯೂಜಿಲೆಂಡ್​ನ 6 ಆಟಗಾರರು ಹೊರಗಿದ್ದರು. ಕೇವಲ ಐದು ಆಟಗಾರರಿಗೆ ಮಾತ್ರ ಅವಕಾಶವಿದೆ. ಇದು ಅಂಪೈರ್​ ಕಣ್ಣಿಗೆ ಕಾಣಲಿಲ್ಲವೇ? ನೋಬಾಲ್​ ಎಂದು ಪರಿಗಣಿಸಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್​ ತಂಡ ವಂಚನೆ ಮಾಡಿ ಗೆಲುವು ಸಾಧಿಸಿದೆ. ಹೀಗಾಗಿ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡ ಗೆಲ್ಲಬೇಕು ಎಂದು ಸಾಕಷ್ಟು ಅಭಿಮಾನಿಗಳು ಆಂಗ್ಲ ಪಡೆಗೆ ಈಗಿನಿಂದಲೇ ಬೆಂಬಲ ಸೂಚಿಸಿದ್ದಾರೆ.

49ನೇ ಓವರ್​ನಲ್ಲಿ 10 ಬಾಲ್​ಗೆ 25 ರನ್​ ಬೇಕಿದ್ದಾಗ ನ್ಯೂಜಿಲೆಂಡ್​ ತಂಡದ ಲುಕಿ ಫರ್ಗ್ಯೂಸನ್​ ಬೌಲಿಂಗ್​ನಲ್ಲಿ ಎರಡು ರನ್​ ಕದಿಯಲು ಹೋಗಿ ಧೋನಿ, ಮಾರ್ಟಿನ್​ ಗುಪ್ಟಿಲ್​ ರನೌಟ್​ಗೆ ಬಲಿಯಾಗಿದ್ದರು. ಗುಪ್ಟಿಲ್​ ಎಸೆದ ಚೆಂಡು ವಿಕೆಟ್​ ಕೀಪರ್​ ನೆರವಿಲ್ಲದೇ ನೇರವಾಗಿ ವಿಕೆಟ್​ಗೆ ಬಡಿದಿತ್ತು. ಇದು ಇಂಡಿಯಾ ಆಸೆಗೆ ಬಿದ್ದ ಹೊಡೆತವಾಗಿತ್ತು.

ಮೀಸಲು ದಿನವಾದ ಬುಧವಾರ ಇನಿಂಗ್ಸ್​ನ ಕೊನೇ 23 ಎಸೆತಗಳನ್ನು ಎದುರಿಸಿದ ನ್ಯೂಜಿಲೆಂಡ್, 8 ವಿಕೆಟ್​ಗೆ 239 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಆಲ್ರೌಂಡರ್ ರವೀಂದ್ರ ಜಡೇಜಾರ (77 ರನ್ 59 ಎಸೆತ, 4 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್​ ಹಾಗೂ ಅನುಭವಿ ಎಂಎಸ್ ಧೋನಿ (50 ರನ್, 72 ಎಸೆತ, 1 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಹೊರತಾಗಿಯೂ 49.3 ಓವರ್​ಗಳಲ್ಲಿ 221 ರನ್​ಗೆ ಆಲೌಟ್ ಆಗಿ ವಿಶ್ವಕಪ್​ನಿಂದ ನಿರ್ಗಮಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *