ಭಾರತಕ್ಕೆ ಸರಣಿ ಜಯದ ತವಕ

ಮೌಂಟ್​ವೌಂಗನುಯಿ: ಆಸೀಸ್ ಪ್ರವಾಸವನ್ನು ಐತಿಹಾಸಿಕ ನಿರ್ವಹಣೆ ತೋರಿದ ತಂಡದಿಂದ ಪ್ರಮುಖ ವೇಗಿ ಜಸ್​ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿದ್ದರೂ, ಅದೇ ಚೈತನ್ಯ ಉಳಿಸಿಕೊಂಡಿರುವ ಭಾರತ ತಂಡ ನ್ಯೂಜಿಲೆಂಡ್ ನೆಲದಲ್ಲಿ 10 ವರ್ಷಗಳ ನಂತರ ಮತ್ತು ಒಟ್ಟಾರೆ 2ನೇ ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿಗೆ ಸಜ್ಜಾಗಿದೆ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ವಿರಾಟ್ ಕೊಹ್ಲಿ ಪಡೆ, ಸೋಮವಾರ 3ನೇ ಪಂದ್ಯವನ್ನಾಡಲಿದೆ. ಮುಂದಿನ ಏಕದಿನ ವಿಶ್ವಕಪ್​ಗೆ ಮುನ್ನ 8 ಪಂದ್ಯಗಳನ್ನಷ್ಟೇ ಆಡಲಿರುವುದರಿಂದ ತಂಡದ ಆಲ್ರೌಂಡ್ ವಿಭಾಗವನ್ನು ಸದೃಢಪಡಿಸಲು, ಅಮಾನತು ಹಿಂತೆಗೆತದಿಂದ ವಾಪಸಾಗಿರುವ ಹಾರ್ದಿಕ್ ಪಾಂಡ್ಯರನ್ನು ಕಣಕ್ಕಿಳಿ ಸುವ ನಿರೀಕ್ಷೆಯಿದೆ. ಸರಣಿ ಸೋಲನ್ನು ತಪ್ಪಿಸಿ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದ ಒತ್ತಡದಲ್ಲಿರುವ ಕಿವೀಸ್​ಗೂ ವಿಶ್ವಕಪ್​ಗೆ ಮುನ್ನ ಕೇವಲ 6 ಪಂದ್ಯಗಳಷ್ಟೇ ಬಾಕಿ ಇರುವುದರಿಂದ ಹೆಚ್ಚಿನ ಬದಲಾವಣೆಯಿಲ್ಲದೆ ಕಣಕ್ಕಿಳಿಯಲಿದೆ. -ಏಜೆನ್ಸೀಸ್

ಮತ್ತೆ ರನ್​ವುಳೆ ನಿರೀಕ್ಷೆ

2ನೇ ಪಂದ್ಯದಲ್ಲಿ ಧಾರಾಳವಾಗಿ ರನ್ ಹರಿದ ಪಿಚ್​ನಲ್ಲೇ ಈ ಪಂದ್ಯ ನಡೆಯಲಿರುವುದರಿಂದ ಭಾರತ ಇನ್ನೂ ಹೆಚ್ಚು ರನ್ ದಾಖಲಿಸುವತ್ತ ಗಮನ ಕೇಂದ್ರಿಕರಿಸಬಹುದು. ಕೊನೇ 2 ಪಂದ್ಯಗಳಿಂದ ಕೊಹ್ಲಿ ವಿಶ್ರಾಂತಿ ಪಡೆಯಲಿರುವುದರಿಂದ ಈ ಪಂದ್ಯವನ್ನೇ ಗೆದ್ದು ಸರಣಿ ಗೆಲುವನ್ನೂ ಖಚಿತಪಡಿಸಿ ನಿಶ್ಚಿಂತೆಯಿಂದ ಇರಬಹುದು. ಕೇನ್ ವಿಲಿಯಮ್ಸನ್ ಬಳಗಕ್ಕೆ ಕುಲ್-ಚಾ(ಕುಲದೀಪ್-ಚಾಹಲ್) ಜೋಡಿಯ ಮಾರಕ ಸ್ಪಿನ್ ಕಗ್ಗಂಟಾಗಿದೆ.

ಕಿವೀಸ್ ಪೊಲೀಸರಿಂದ ಎಚ್ಚರಿಕೆ!

‘ಕಳೆದ ಒಂದು ವಾರದಿಂದ ನ್ಯೂಜಿಲೆಂಡ್​ನಲ್ಲಿ ಪ್ರವಾಸಿ ತಂಡವೊಂದು ದಾಳಿ ಮಾಡುತ್ತಿರುವ ಬಗ್ಗೆ ಪೊಲೀಸರು ಎಚ್ಚರಿಕೆ ರವಾನಿಸುತ್ತಿದ್ದಾರೆ. ಅಮಾಯಕರಂತೆ ಕಾಣುವ ನ್ಯೂಜಿಲೆಂಡ್ ಗುಂಪಿನ ಮೇಲೆ ಕಳೆದ ವಾರ 2 ಕಡೆ ಈ ತಂಡ ದಾಳಿ ಮಾಡಿದೆ. ಹೀಗಾಗಿ ಕೈಯಲ್ಲಿ ಬ್ಯಾಟ್ ಮತ್ತು ಚೆಂಡು ಇದ್ದ ತಂಡವನ್ನೇನಾದರೂ ಕಂಡರೆ ಎಚ್ಚರಿಕೆಯಿಂದ ಇರಿ’ ಎಂದು ಕಿವೀಸ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಸಂದೇಶ ಹಾಕಿದ್ದು, ವಿರಾಟ್ ಕೊಹ್ಲಿ ಬಳಗದ ಸತತ 2 ಗೆಲುವಿನ ನಿರ್ವಹಣೆಯನ್ನು ವಿಶಿಷ್ಟವಾಗಿ ಪ್ರಶಂಸಿಸಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಟೀಮ್ ನ್ಯೂಸ್

ಭಾರತ: ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್​ಗೆ ಬಲ ತುಂಬಲು ಅಗತ್ಯವಿರುವ ಹಾರ್ದಿಕ್ ಪಾಂಡ್ಯರನ್ನು ಆಡಿಸಿದರೆ ಅಚ್ಚರಿಯಿಲ್ಲ. ಪಾಂಡ್ಯ ಸುಮಾರು ನಾಲ್ಕೂವರೆ ತಿಂಗಳ ನಂತರ ಏಕದಿನ ಪಂದ್ಯ ಆಡಲಿರುವುದರಿಂದ ವಿಶ್ವಕಪ್​ಗೆ ಮುಂಚಿತವಾಗಿ ಲಯಕ್ಕೆ ಮರಳಲು ಅನುಕೂಲವಾಗುತ್ತದೆ. ಆಗ ತಮಿಳುನಾಡು ಆಲ್ರೌಂಡರ್ ವಿಜಯ್ ಶಂಕರ್ ಅನಿವಾರ್ಯವಾಗಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಪಾಂಡ್ಯ ಕಳೆದ ಸೆ. 19ರಂದು ಏಷ್ಯಾಕಪ್​ನಲ್ಲಿ ಕೊನೇ ಏಕದಿನ ಪಂದ್ಯವಾಡಿದ್ದಾರೆ.

ನ್ಯೂಜಿಲೆಂಡ್: ಗೆಲುವಿನ ಅನಿವಾರ್ಯತೆಯಲ್ಲಿರುವ ಕಿವೀಸ್ ಅಂತಿಮ 11ರ ಬಳಗದಲ್ಲಿ ಕೆಲ ಬದಲಾವಣೆಯ ನಿರೀಕ್ಷೆ ಇದೆ. ವೇಗಿ ಟಿಮ್ ಸೌಥಿಯನ್ನು ವಾಪಸ್ ಕರೆಸಿ, ಮಧ್ಯಮ ಕ್ರಮಾಂಕದ ಹೆನ್ರಿ ನಿಕೋಲ್ಸ್​ರನ್ನು ಕೈಬಿಡಬಹುದು. ಲಯ ಕಳೆದುಕೊಂಡಿರುವ ಪ್ರಮುಖರಾದ ರಾಸ್ ಟೇಲರ್, ಟಾಮ್ ಲಾಥಮ್ನ್ನು ಕೈಬಿಟ್ಟರೂ ಬೇರೆ ಆಯ್ಕೆಗಳಿಲ್ಲ.