ಜಯದ ದಾರಿಗೆ ಮರಳಲು ಕಾದಾಟ

ಪಂದ್ಯಕ್ಕೆ ಧೋನಿ ಫಿಟ್ | ಕಿವೀಸ್ ತಂಡದಲ್ಲೂ ಬದಲಾವಣೆ ಸಾಧ್ಯತೆ

ವೆಲ್ಲಿಂಗ್ಟನ್: ಸ್ಟಾರ್ ಆಟಗಾರ ಹಾಗೂ ಕಾಯಂ ನಾಯಕ ವಿರಾಟ್ ಕೊಹ್ಲಿ ಮೇಲೆ ತಂಡದ ಅವಲಂಬನೆ ಅತಿಯಾಗಿದೆಯೇ? ಈ ಪ್ರಶ್ನೆಗೆ ಉತ್ತರ ಪಡೆಯುವ ಗುರಿಯೊಂದಿಗೆ ಭಾರತ ತಂಡ ಭಾನುವಾರ ನಡೆಯಲಿರುವ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಏಕದಿನ ಕ್ರಿಕೆಟ್​ನಲ್ಲಿ ತನ್ನ ಅತೀ ಕೆಟ್ಟ ನಿರ್ವಹಣೆಯನ್ನು ಕಳೆದ ಪಂದ್ಯದಲ್ಲಿ ತೋರಿದ್ದ ಭಾರತ ತಂಡ, ಆ ಸೋಲನ್ನು ಮರೆಯುವಂಥ ಗೆಲುವನ್ನು ಅಂತಿಮ ಪಂದ್ಯದಲ್ಲಿ ದಾಖಲಿಸುವ ವಿಶ್ವಾಸದಲ್ಲಿದೆ.

ವಿಶ್ವಕಪ್​ಗೆ ಆತಿಥ್ಯ ವಹಿಸಿರುವ ಇಂಗ್ಲೆಂಡ್​ನ ವಾತಾವರಣವನ್ನು ಹೋಲುವಂಥ ಪ್ರದೇಶದಲ್ಲಿ ಭಾರತ ಆಡಲಿರುವ ಕೊನೆಯ ಪಂದ್ಯ ಇದಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಇನ್ನೂ ಕೆಲ ಸ್ಥಾನಗಳನ್ನು ತುಂಬಲು ಬಾಕಿ ಇರುವ ಕಾರಣ, ಸ್ವಿಂಗ್ ಎಸೆತಗಳಲ್ಲಿ ಶುಭಮಾನ್ ಗಿಲ್, ದಿನೇಶ್ ಕಾರ್ತಿಕ್ ಹಾಗೂ ಅಂಬಟಿ ರಾಯುಡು ನಿರ್ವಹಣೆ ಹೇಗಿರಲಿದೆ ಎನ್ನುವ ಕುತೂಹಲವಿದೆ.

ಗುಪ್ಟಿಲ್​ಗೆ ಗಾಯ: ಮಾರ್ಟಿನ್ ಗುಪ್ಟಿಲ್ ಗಾಯ ಗೊಂಡಿರುವ ಕಾರಣ, ಕಳಪೆ ಫಾಮರ್್​ನಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಕಾಲಿನ್ ಮನ್ರೊ ತಂಡಕ್ಕೆ ಮತ್ತೆ ವಾಪಸಾಗಲಿದ್ದಾರೆ. ಡಗ್ ಬ್ರೇಸ್​ವೆಲ್​ಗೆ ಇನ್ನೊಂದು ಅವಕಾಶ ನೀಡುವ ನಿಟ್ಟಿನಲ್ಲಿ ನ್ಯೂಜಿಲೆಂಡ್ ತಂಡದಲ್ಲಿ ಒತ್ತಡವಿದ್ದು, ಜಿಮ್ಮಿ ನೀಶಾಮ್ ಅಥವಾ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಸ್ಥಾನ ಪಡೆಯಬಹುದು. ಸರಣಿಯಲ್ಲಿ ಒಂದೇ ಪಂದ್ಯ ಆಡಿರುವ ಮ್ಯಾಟ್ ಹೆನ್ರಿ ಹಾಗೂ ಟಾಡ್ ಆಶ್ಲೆ ಅಂತಿಮ ಏಕದಿನಕ್ಕೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. -ಪಿಟಿಐ/ಏಜೆನ್ಸೀಸ್

ಈ ಪಂದ್ಯದಲ್ಲಿ ಭಾರತ ಜಯಿಸಿದರೆ, ಏಕದಿನದಲ್ಲಿ ಕಿವೀಸ್ ವಿರುದ್ಧ ಭಾರತದ 55ನೇ ಗೆಲುವು ಎನಿಸಲಿದೆ. ಆ ಮೂಲಕ ಗರಿಷ್ಠ ಏಕದಿನ ಪಂದ್ಯಗಳನ್ನು ಜಯಿಸಿದ ಪಟ್ಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ನಿರ್ವಹಣೆ 3ನೇ ಸ್ಥಾನಕ್ಕೇರಲಿದೆ. ಲಂಕಾ ವಿರುದ್ಧ ಭಾರತ ಗರಿಷ್ಠ 90 ಪಂದ್ಯ ಗೆದ್ದಿದ್ದರೆ, ವಿಂಡೀಸ್ ವಿರುದ್ಧ 59 ಪಂದ್ಯಗಳನ್ನು ಗೆದ್ದಿದೆ.

ರೋಹಿತ್ ಶರ್ಮ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ವಿಫಲರಾದರೆ, 2016ರ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯ ಬಳಿಕ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಶತಕವಿಲ್ಲದೆ ಮುಗಿಸಲಿದ್ದಾರೆ.

ಪಿಚ್ ರಿಪೋರ್ಟ್

ವೆಸ್ಟ್​ಪ್ಯಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಮಳೆ ಅಡ್ಡಿ ಸಾಧ್ಯತೆ ಕಡಿಮೆ. ಕಳೆದ ಮೂರು ವರ್ಷದಿಂದ ಆಡಿದ ಪಂದ್ಯಗಳನ್ನು ಗಮನಿಸಿದರೆ, ಇಲ್ಲಿನ ಸರಾಸರಿ ಮೊತ್ತ 207 ರನ್. ಸ್ವಿಂಗ್ ಬೌಲಿಂಗ್​ಗೂ ಪಿಚ್ ನೆರವು ನೀಡುವ ನಿರೀಕ್ಷೆ ಇದೆ.

2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಡಿದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಕೊನೆಯ ಬಾರಿಗೆ 2 ಪಂದ್ಯ ಸೋತಿತ್ತು. ಆ ಬಳಿಕ ಆಡಿದ 5 ದ್ವಿಪಕ್ಷೀಯ (5 ಅಥವಾ ಅದಕ್ಕಿಂತ ಹೆಚ್ಚಿನ ಮುಖಾಮುಖಿ) ಸರಣಿಯಲ್ಲಿ ಒಮ್ಮೆಯೂ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋತಿಲ್ಲ.

ಎಂಎಸ್ ಧೋನಿ ಫಿಟ್

ಆಡುವ ಬಳಗದಲ್ಲಿ ಬದಲಾವಣೆ ಮಾಡಲು ಭಾರತ ತಂಡಕ್ಕೆ ಸಣ್ಣ ಕಾರಣ ಸಿಕ್ಕಿದೆ. ವಿಶ್ವಕಪ್​ಗೂ ಮುನ್ನ ತಂಡ ಇನ್ನು 6 ಪಂದ್ಯಗಳನ್ನು ಮಾತ್ರ ಆಡಲಿರುವ ಕಾರಣ, ಮೀಸಲು ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಬಯಸಿದೆ. ಕಳೆದ 2 ಪಂದ್ಯಗಳನ್ನು ಸ್ನಾಯು ಸೆಳೆತದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದ ಧೋನಿ, ದಿನೇಶ್ ಕಾರ್ತಿಕ್ ಬದಲು ಸ್ಥಾನ ಪಡೆಯಬಹುದು. 3 ರಿಂದ 5ನೇ ಕ್ರಮಾಂಕದಲ್ಲಿ ರಾಯುಡು, ಧೋನಿ ಹಾಗೂ ಕಾರ್ತಿಕ್​ಗೆ ಸ್ಥಾನ ನೀಡಲು ನಿಶ್ಚಯ ಮಾಡಿದಲ್ಲಿ ಮಾತ್ರವೇ ಕಾರ್ತಿಕ್ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ.