ಸೆಮಿಫೈನಲ್​ಗೇರಿದ ಭಾರತ

ಗಯಾನ: ಅನುಭವಿ ಆಟಗಾರ್ತಿ ಮಿಥಾಲಿ ರಾಜ್ (51 ರನ್, 56 ಎಸೆತ, 4 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ನಿರ್ವಹಣೆ ನೆರವಿನಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಭಾರತ ತಂಡ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ 52 ರನ್​ಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್, 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಭಾರತ, ಟೂರ್ನಿಯಲ್ಲಿ 8 ವರ್ಷಗಳ ಬಳಿಕ ಸೆಮಿಫೈನಲ್ ಹಂತಕ್ಕೇರಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 6 ವಿಕೆಟ್​ಗೆ 145 ರನ್ ಪೇರಿಸಿತು. ಪ್ರತಿಯಾಗಿ ಐರ್ಲೆಂಡ್, 8 ವಿಕೆಟ್​ಗೆ 93 ರನ್​ಗಳಿಸಲಷ್ಟೇ ಶಕ್ತವಾಯಿತು.

ಐರ್ಲೆಂಡ್​ಗೆ ಕಡಿವಾಣ: ಸ್ಪಧಾತ್ಮಕ ಮೊತ್ತ ಬೆನ್ನಟ್ಟಿದ ಐರ್ಲೆಂಡ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಹರ್ವನ್​ಪ್ರೀತ್ ಪಡೆಯ ಬಿಗಿ ಬೌಲಿಂಗ್ ದಾಳಿ ಎದುರು ಐರ್ಲೆಂಡ್ ಆಟಗಾರ್ತಿಯರು ರನ್ ಗಳಿಸಲು ಪರದಾಡಿದರು. ರಾಧಾ ಯಾದವ್ (25ಕ್ಕೆ 3) ಬಿಗಿ ದಾಳಿಯಿಂದಾಗಿ ಐರ್ಲೆಂಡ್ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಸಿಸಿಲಿಯಾ ಜೋಯ್್ಸ ಹಾಗೂ ಶಿಲ್ಲಿಂಗ್ಟನ್ ಹೊರತುಪಡಿಸಿ ಉಳಿದ ಆಟಗಾರ್ತಿಯರು ಎರಡಂಕಿ ಮೊತ್ತ ಮುಟ್ಟಲಿಲ್ಲ.

ಭಾರತ ತಂಡ ಟಿ20 ವಿಶ್ವಕಪ್​ನಲ್ಲಿ 3ನೇ ಬಾರಿ ಸೆಮಿಫೈನಲ್​ಗೇರಿದೆ. ಈ ಮುನ್ನ 2009 ಮತ್ತು 2010ರಲ್ಲಿ ಉಪಾಂತ್ಯಕ್ಕೇರಿದ್ದ ಭಾರತ, 8 ವರ್ಷಗಳ ನಂತರ ಈ ಸಾಧನೆ ಪುನರಾವರ್ತಿಸಿದೆ.

ಅರುಂಧತಿ ರೆಡ್ಡಿ ಬದಲಿಗೆ ಮಾನ್ಸಿ

ಭಾರತ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಅರುಂಧತಿ ರೆಡ್ಡಿ ಬದಲಿಗೆ ಮಾನ್ಸಿ ಜೋಶಿ ಕಣಕ್ಕಿಳಿದರು. ಪಂದ್ಯ ಆರಂಭಕ್ಕೂ ಮುನ್ನ ಬಿದ್ದ ಮಳೆಯಿಂದಾಗಿ 10 ನಿಮಿಷ ತಡವಾಗಿ ಟಾಸ್ ಹಾಕಲಾಯಿತು.

ಮಿಥಾಲಿ ಆಸರೆ

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂದನಾ (33) ಉತ್ತಮ ಆರಂಭ ನೀಡಿದರು. ಮಿಥಾಲಿ 3 ರನ್ ಗಳಿಸಿದ್ದ ವೇಳೆ ಪಡೆದ ಜೀವದಾನದ ಲಾಭ ಗಿಟ್ಟಿಸಿಕೊಂಡರು. ಮೊದಲ ವಿಕೆಟ್​ಗೆ ಈ ಜೋಡಿ 60 ಎಸೆತಗಳಲ್ಲಿ 67 ರನ್ ಪೇರಿಸಿ ಬೇರ್ಪಟ್ಟಿತು. ಬಳಿಕ 2ನೇ ವಿಕೆಟ್​ಗೆ ಮಿಥಾಲಿ ಜತೆಗೂಡಿ ಜೆಮೀಮಾ ರೋಡ್ರಿಗಸ್ (18) ಬಿರುಸಿನ 40 ರನ್ ಕಲೆಹಾಕಿದರು. ಒಂದು ಹಂತದಲ್ಲಿ 160ರ ಗಡಿ ದಾಟುವ ಅವಕಾಶ ಹೊಂದಿದ್ದ ಭಾರತ ಕೊನೆಯಲ್ಲಿ ದಿಢೀರ್ ಕುಸಿತ ಕಂಡಿತು.