ರೋಹಿತ್ ದಾಖಲೆ ಶತಕಕ್ಕೆ ಒಲಿದ ಟಿ20 ಸರಣಿ

ಬ್ರಿಸ್ಟಾಲ್: ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆಯಲ್ಲಿರುವ ಭಾರತ ತಂಡ, ಇಂಗ್ಲೆಂಡ್ ನೆಲದ ಸುದೀರ್ಘ ಪ್ರವಾಸವನ್ನು ಟಿ20 ಸರಣಿ ಗೆಲುವಿನೊಂದಿಗೆ ಆರಂಭಿಸಿದೆ. ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ‘ಹಿಟ್​ವ್ಯಾನ್’ ಖ್ಯಾತಿಯ ಆರಂಭಿಕ ರೋಹಿತ್ ಶರ್ಮ (100*ರನ್, 56 ಎಸೆತ, 11 ಬೌಂಡರಿ, 5 ಸಿಕ್ಸರ್) ಚುಟುಕು ಕ್ರಿಕೆಟ್​ನಲ್ಲಿ ಸಿಡಿಸಿದ ದಾಖಲೆಯ 3ನೇ ಶತಕ ಹಾಗೂ ಹಾರ್ದಿಕ್ ಪಾಂಡ್ಯ (33*ರನ್, 38ಕ್ಕೆ 4 ವಿಕೆಟ್) ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 7 ವಿಕೆಟ್​ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಇದರಿಂದ ವಿರಾಟ್ ಕೊಹ್ಲಿ ಟೀಮ್ 2-1ರಿಂದ ಜಯಿಸಿತಲ್ಲದೆ, ಚುಟುಕು ಕ್ರಿಕೆಟ್​ನಲ್ಲಿ ಸತತ ಸರಣಿ ಗೆಲುವಿನ ಸಂಖ್ಯೆಯನ್ನು 6ಕ್ಕೇರಿಸಿದೆ. ಐಸಿಸಿ ಟಿ20 ರ್ಯಾಂಕಿಂಗ್​ನಲ್ಲೂ ಭಾರತ 2ನೇ ಸ್ಥಾನ ಭದ್ರಪಡಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್, ಜೇಸನ್ ರಾಯ್ (67 ರನ್, 31 ಎಸೆತ, 4 ಬೌಂಡರಿ, 7 ಸಿಕ್ಸರ್) ಬಿರುಸಿನ ಅರ್ಧಶತಕದ ನೆರವಿನಿಂದ 200ರ ಗಡಿ ದಾಟುವತ್ತ ಸಾಗಿದ್ದರೂ ನಂತರ ಹಾರ್ದಿಕ್ ಪಾಂಡ್ಯ ಶಿಸ್ತಿನ ದಾಳಿಗೆ ಎಡವಿ 9 ವಿಕೆಟ್​ಗೆ 198 ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಘಾತ ಕಂಡರೂ ರೋಹಿತ್ ಮತ್ತು ನಾಯಕ ಕೊಹ್ಲಿ ್ಲ43 ರನ್, 29ಎಸೆತ, 2ಬೌಂಡರಿ, 2ಸಿಕ್ಸರ್) ಜೋಡಿಯ ಚೇತರಿಕೆಯಿಂದ 18.4 ಓವರ್​ಗಳಲ್ಲಿ 3 ವಿಕೆಟ್​ಗೆ 201 ರನ್ ಪೇರಿಸಿ ಜಯ ಸಾಧಿಸಿತು.

ಜೇಸನ್ ರಾಯ್ ಬಿರುಸಿನ ಅರ್ಧಶತಕ: ಮೊದಲೆರಡೂ ಪಂದ್ಯಗಳಲ್ಲಿ ಸ್ಪೋಟಕ ಆರಂಭ ಕಾಣುವಲ್ಲಿ ವಿಫಲಗೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಜೇಸನ್ ರಾಯ್ ಹಾಗೂ ಜಾಸ್ ಬಟ್ಲರ್(34) ಉತ್ತಮ ಬುನಾದಿ ಹಾಕಿಕೊಟ್ಟರು. ಪಂದ್ಯದ ಮೊದಲ ಓವರ್ ಎಸೆದ ಚಹರ್ ಎಸೆತದಲ್ಲಿ 3 ಬೌಂಡರಿ ಬಾರಿಸಿದ ಬಟ್ಲರ್ ಸ್ಪೋಟಕ ಇನಿಂಗ್ಸ್​ನ ಸೂಚನೆ ನೀಡಿದರು. ಓವರ್​ಗೆ 11ರ ಸರಾಸರಿಯಂತೆ ರನ್ ಕಸಿದ ರಾಯ್-ಬಟ್ಲರ್ ಜೋಡಿ 6ನೇ ಓವರ್ ಮಾಡಿದ ಹಾರ್ದಿಕ್ ಪಾಂಡ್ಯಗೆ 22ರನ್ ಚಚ್ಚಿತು. ಕೇವಲ 43 ಎಸೆತಗಳಲ್ಲಿ ಮೊದಲ ವಿಕೆಟ್​ಗೆ 94ರನ್ ಸೇರಿಸಿದ ಈ ಜೋಡಿಯನ್ನು ಬೇರ್ಪಡಿಸಿದ್ದು ಸಿದ್ಧಾರ್ಥ್ ಕೌಲ್. ಬಟ್ಲರ್ ವೇಗಿ ಕೌಲ್ ದಾಳಿಗೆ ಬೌಲ್ಡಾದ ನಂತರ ಇಂಗ್ಲೆಂಡ್ ರನ್ ಗತಿ ಅಲ್ಪಮಟ್ಟಿಗೆ ಕುಸಿತ ಕಂಡಿತು. ಜೇಸನ್ ರಾಯ್ರನ್ನು ದೀಪಕ್ ಚಹರ್ ಬೆನ್ನಟ್ಟಿದರು.

ಹಾರ್ದಿಕ್ ಬಿಗಿ ಬೌಲಿಂಗ್

ಮೊದಲ ಓವರ್​ನಲ್ಲಿ ದುಬಾರಿಯಾಗಿದ್ದ ಹಾರ್ದಿಕ್ ಪಾಂಡ್ಯ ನಂತರ ಅತ್ಯುತ್ತಮ ದಾಳಿ ನಡೆಸಿ ಇಂಗ್ಲೆಂಡ್​ನ ಮಧ್ಯಮ ಕ್ರಮಾಂಕಕ್ಕೆ ಕಡಿವಾಣ ಹೇರಿದರು. 13.1 ಓವರ್​ಗಳಲ್ಲಿ 2 ವಿಕೆಟ್​ಗೆ 132 ರನ್ ಪೇರಿಸಿ 230ಕ್ಕೂ ಅಧಿಕ ಮೊತ್ತದತ್ತ ಸಾಗಿದ್ದ ಇಂಗ್ಲೆಂಡ್ ತಂಡನ್ನು 200ರೊಳಗೆ ನಿಯಂತ್ರಿಸಲು ಪಾಂಡ್ಯ ನೆರವಾದರು.

ರೋಹಿತ್ ಅಂತಾರಾಷ್ಟ್ರೀಯ ಟಿ20ಯಲ್ಲಿ 2 ಸಾವಿರ ರನ್ ಪೂರೈಸಿದ 5ನೇ ಮತ್ತು ಭಾರತದ 2ನೇ ಬ್ಯಾಟ್ಸ್​ಮನ್. ನ್ಯೂಜಿಲೆಂಡ್​ನ ಮಾರ್ಟಿನ್ ಗುಪ್ಟಿಲ್, ಬ್ರೆಂಡನ್ ಮೆಕ್ಕಲಂ, ಪಾಕಿಸ್ತಾನದ ಶೋಯೆಬ್ ಮಲಿಕ್, ಭಾರತದ ಕೊಹ್ಲಿ ಹಿಂದಿನ ಸಾಧಕರು.

ರೋಹಿತ್-ಕೊಹ್ಲಿ ಯಶಸ್ವಿ ಚೇಸಿಂಗ್

ಸತತ 3ನೇ ಬಾರಿಯೂ ಭಾರತಕ್ಕೆ ಮೊದಲ ವಿಕೆಟ್​ಗೆ ಉತ್ತಮ ಆರಂಭ ಸಿಗಲಿಲ್ಲ. ಶಿಖರ್ ಧವನ್ (5) ಡೇವಿಡ್ ವಿಲ್ಲಿ ಎಸೆದ 3ನೇ ಓವರ್​ನಲ್ಲಿ ಶಾರ್ಟ್ ಫೈನ್​ಲೆಗ್​ನತ್ತ ಫ್ಲಿಕ್ ಮಾಡಲೆತ್ನಿಸಿ ಜೇಕ್ ಬಾಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಕೆಎಲ್ ರಾಹುಲ್ 1 ಬೌಂಡರಿ, 2 ಸಿಕ್ಸರ್ ಸಹಿತ 19 ರನ್ ಬಾರಿಸಿ ಔಟಾದರು. ಭಾರತ 2 ವಿಕೆಟ್ ಕಳೆದುಕೊಂಡರೂ, ಇನ್ನೊಂದೆಡೆ ರೋಹಿತ್ ಅಬ್ಬರಿಸುತ್ತಿದ್ದರಿಂದ 5.2 ಓವರ್​ಗಳಲ್ಲೆ 62ರನ್ ಪೇರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಸಣ್ಣ ಬೌಂಡರಿಯ ಮೈದಾನದಲ್ಲಿ ರೋಹಿತ್ ಹಾಗೂ ಕೊಹ್ಲಿ ಸಿಕ್ಸರ್ ಬಾರಿಸಲು ಹೆಚ್ಚು ಶ್ರಮಪಡಲಿಲ್ಲ. ಇಂಗ್ಲೆಂಡ್ ಬೌಲರ್​ಗಳನ್ನು ಲೀಲಾಜಾಲವಾಗಿ ದಂಡಿಸಿದ ಈ ಜೋಡಿ 3ನೇ ವಿಕೆಟ್​ಗೆ 89ರನ್ ಸೇರಿಸಿತು. ಆದರೆ ಕೊಹ್ಲಿ ವೇಗಿ ಜೋರ್ಡನ್​ಗೆ ರಿಟರ್ನ್ ಕ್ಯಾಚ್ ನೀಡಿದರೆ, ಅಂತಿಮವಾಗಿ ರೋಹಿತ್-ಪಾಂಡ್ಯ ಮುರಿಯದ 4ನೇ ವಿಕೆಟ್​ಗೆ 50 ರನ್ ಸೇರಿಸಿ ತಂಡವನ್ನು ದಡ ಸೇರಿಸಿದರು.

ಧೋನಿ 5 ಕ್ಯಾಚ್ ವಿಶ್ವದಾಖಲೆ!

ಮೊನ್ನೆಯಷ್ಟೆ 500 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ಧೋನಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಭಾನುವಾರ 2 ವಿಶ್ವದಾಖಲೆ ರಚಿಸಿದರು. ಧೋನಿ ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಆಗಿ ಅತ್ಯಧಿಕ 5 ಕ್ಯಾಚ್ ಪಡೆದ ಮೊದಲ ಸಾಧಕ ಎನಿಸಿಕೊಂಡರು. ಅಲ್ಲದೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟು 50 ಹಾಗೂ ಒಟ್ಟಾರೆ ಟಿ20ಯಲ್ಲಿ 150 ಕ್ಯಾಚ್ ಪಡೆದ ಮೊದಲಿಗರೆನಿಸಿದರು.