ವಿಡಿಯೋ |ಮೈದಾನದಲ್ಲಿ ರಿಷಭ್​ ಪಂತ್​ ಅದ್ಭುತ ಸಾಹಸ ಕಂಡು ಕ್ರೀಡಾಭಿಮಾನಿಗಳು ಫಿದಾ!

ಸಿಡ್ನಿ: ಭಾರತದ ಯುವ ಆಟಗಾರ ಎಡಗೈ ದಾಂಡಿಗ ರಿಷಭ್​ ಪಂತ್​ ಅವರು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ತಮ್ಮ ಬ್ಯಾಟಿಂಗ್​ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಅಲ್ಲದೆ ಫಿಟ್​ನೆಸ್​ನಲ್ಲೂ ನಾನೇನೂ ಕಮ್ಮಿ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಶುಕ್ರವಾರ ಆಸಿಸ್​ನ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್​ ಪಂದ್ಯದ ಎರಡನೇ ದಿನದಾಟದಲ್ಲಿ ರಿಷಭ್​ ಪಂತ್​ ಸಾಹಸ ಪ್ರದರ್ಶಿಸಿ ಕ್ರೀಡಾಭಿಮಾನಿಗಳಿಗೆ ಅಚ್ಚರಿಯನ್ನು ಉಂಟುಮಾಡಿದ್ದಾರೆ. ಡ್ರಿಕ್ಸ್​ ವಿರಾಮದ ವೇಳೆ ನೆಲದ ಮೇಲೆ ಮಲಗಿ ತಮ್ಮ ಎರಡು ಕೈಗಳ ಸಹಾಯದಿಂದ ಜಿಗಿದು ನಿಲ್ಲುವ ಮೂಲಕ ತಮ್ಮ ಫಿಟ್​ನೆಸ್​ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.

ತಮ್ಮ ಸಾಹಸ ಮಾತ್ರವಲ್ಲದೇ ಬ್ಯಾಟಿಂಗ್​ನಲ್ಲೂ ಪ್ರತಿಭೆಯನ್ನು ಅನಾವರಣ ಮಾಡಿರುವ ಪಂತ್​ ನಾಲ್ಕನೇ ಟೆಸ್ಟ್​​ ಪಂದ್ಯ ಮೊದಲ ಇನ್ನಿಂಗ್ಸ್​ನಲ್ಲಿ 189 ಎಸೆತಗಳಲ್ಲಿ ಅಜೇಯ 159 ರನ್​ ಬಾರಿಸುವ ಮೂಲಕ ಎದುರಾಳಿ ಆಸಿಸ್​​ ಪಡೆಗೆ ನಾನೂ ಬ್ಯಾಟಿಂಗ್​ನಲ್ಲೂ ಸ್ಟ್ರಾಂಗ್​ ಎಂಬ ಖಡಕ್​ ಸಂದೇಶ ರವಾನಿಸಿದ್ದಾರೆ. ಈ ಶತಕ ಪಂತ್​ ವೃತ್ತಿಜೀವನದ ಹೊಸ ಮೈಲಿಗಲ್ಲಾಗಲಿದೆ.

ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ಸದ್ಯ 2-1 ರಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 7 ವಿಕೆಟ್​ ನಷ್ಟಕ್ಕೆ 622 ರನ್​ ಗಳಿಸಿ ಡಿಕ್ಲೇರ್​ ಘೋಷಿಸಿದೆ. ತಂಡದ ಪರ ಮಯಾಂಕ್​ ಅಗರ್​ವಾಲ್​(77), ಚೇತೇಶ್ವರ ಪೂಜಾರ(193) ಹನುಮ ವಿಹಾರಿ(42) ರವೀಂದ್ರ ಜಡೇಜಾ(81) ಹಾಗೂ ರಿಷಬ್​ ಪಂತ್​(159*) ರನ್​ ಕಾಣಿಕೆ ನೀಡಿದರು. ಯವುದೇ ವಿಕೆಟ್​ ನಷ್ಟವಿಲ್ಲದೆ ಮೊದಲ ಇನ್ನಿಂಗ್ಸ್​ನಲ್ಲಿ 24 ರನ್​ ಗಳಿಸಿರುವ ಆಸಿಸ್​ ಮೂರನೇ ದಿನದಾಟವನ್ನು ಕಾಯ್ದುಕೊಂಡಿದೆ. (ಏಜೆನ್ಸೀಸ್​)