ಆಸಿಸ್​ ವಿರುದ್ಧ ತವರು ನೆಲದಲ್ಲೇ ಟೀಂ ಇಂಡಿಯಾಗೆ ಭಾರಿ ಮುಖಭಂಗ: ಸರಣಿ ಸೋಲಿನ ಹಿಂದಿರುವ ಕಾರಣಗಳು ಹೀಗಿವೆ…

ನವದೆಹಲಿ: ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಬಹುತೇಕ ಸರಣಿಯನ್ನು ವಶಪಡಿಸಿಕೊಳ್ಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲವೂ ಬದಲಾಯ್ತು. ಟೀಂ ಇಂಡಿಯಾ ಮಾಡಿದ ಕೆಲವೊಂದು ತಪ್ಪುಗಳು ಸರಣಿ ಕೈ ಚೆಲ್ಲುವ ಹಾಗೆ ಮಾಡಿದೆ. ಹಾಗಾದರೆ ಕೊನೆಯ ಕದನದಲ್ಲಿ ವಿರಾಟ್ ಸೈನ್ಯ ಮಾಡಿದ ತಪ್ಪುಗಳೇನು ಎಂಬುದರ ವರದಿ ಇಲ್ಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬುಧವಾರ ನಡೆದ ಫೈನಲ್​ ಫೈಟ್​ನಲ್ಲಿ ಟೀಂ ಇಂಡಿಯಾ 32 ರನ್​​ಗಳಿಗೆ ಆಸೀಸ್ ಪಡೆಗೆ ತಲೆಬಾಗಿತು. ದೆಹಲಿಯ ಫಿರೋಜ್​ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಫಿಂಚ್​ ಪಡೆಯ ಮುಂದೆ ವಿರಾಟ್ ಸೈನಿಕರ ಆಟ ನಡೆಯಲೇ ಇಲ್ಲ.

ಉತ್ತಮ ಆರಂಭದ ಕೊರತೆ
ರೋಹಿತ್​ ಹಾಗೂ ಶಿಖರ್​ ಧವನ್​ ಈ ಸರಣಿಯಲ್ಲಿ ಉತ್ತಮ ಆರಂಭವನ್ನು ಒದಗಿಸಿ ಕೊಡುವಲ್ಲಿ ವಿಫಲರಾದರು. ಉಭಯ ಆಟಗಾರರು ಕಳಪೆ ಫಾರ್ಮ್​ನಲ್ಲಿರುವುದು ಸರಣಿ ಸೋಲಿಗೆ ಕಾರಣವಾಗಿದೆ. ಇದು ಹೀಗೆ ಮುಂದುವರಿದರೆ ವಿಶ್ವಕಪ್​ ಮೇಲೂ ಪರಿಣಾಮ ಬೀರಲಿದೆ.

ಪ್ಲಾಫ್​​ ಸ್ಟಾರ್​ಗಳಿಗೆ ಮತ್ತೆ ಮತ್ತೆ ಅವಕಾಶ
ಟೀಂ ಇಂಡಿಯಾ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ತಪ್ಪು ಮಾಡಿದೆ. ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ಮತ್ತೆ ಮತ್ತೆ ತಂಡದಲ್ಲಿ ಚಾನ್ಸ್ ನೀಡಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ. ಶಿಖರ್​ ಧವನ್​, ರಿಷಬ್​ ಪಂತ್​​ಗೆ ಸಾಕಷ್ಟು ಅವಕಾಶ ನೀಡಿದರೂ ಮಿಂಚಲಿಲ್ಲ. ದೆಹಲಿಯಲ್ಲಿ ನಡೆದ ಕದನದಲ್ಲೂ ಈ ಇಬ್ಬರು ಆಟಗಾರರು ಮತ್ತೆ ಪ್ಲಾಫ್​​ ಆದ್ರು. ಇದು ಸೋಲಿಗೆ ಪ್ರಮುಖ ಕಾರಣವಾಗಿದೆ.

ಕೋಟ್ಲಾ ಅಂಗಳದಲ್ಲೂ ಬ್ಯಾಟಿಂಗ್ ಫೇಲ್ಯೂರ್​
ಟೀಂ ಇಂಡಿಯಾದ ಬ್ಯಾಟಿಂಗ್​ ಸಂಪೂರ್ಣ ಕಳಪೆಯಾಗಿದೆ. ನಂಬಿಕಸ್ತ ಬ್ಯಾಟ್ಸ್​​ಮನ್​ಗಳು ತಂಡದ ಕೈ ಹಿಡಿಯುತ್ತಿಲ್ಲ. ಒಂದು ಪಂದ್ಯದಲ್ಲಿ ಮಿಂಚಿದರೆ ಮತ್ತೊಂದು ಪಂದ್ಯದಲ್ಲಿ ವಿಫಲವಾಗುತ್ತಿದ್ದಾರೆ. ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾಟದ ಕೊರತೆ ಎದ್ದು ಕಾಣ್ತು.. ಇದು ವಿರಾಟ್​ ಸೈನ್ಯದ ಸೋಲಿಗೆ ಕಾರಣವಾಗಿದೆ.

ಮುಳುವಾಯ್ತಾ ಅತಿಯಾದ ಆತ್ಮವಿಶ್ವಾಸ?
ಟೀಂ ಇಂಡಿಯಾಗೆ ಗೆಲ್ತೀವಿ ಎಂಬ ವಿಶ್ವಾಸವಿತ್ತು. ಆದರೆ, ತಂಡದ ಎಲ್ಲಾ ಆಟಗಾರರಲ್ಲಿ ಅತಿಯಾದ ಆತ್ಮವಿಶ್ವಾಸ ಇದ್ದಿದ್ದೇ ತಂಡದ ಸೋಲಿಗೆ ಕಾರಣವಾಗಿದೆ. ಎರಡು ಪಂದ್ಯದಲ್ಲಿ ಆಸೀಸ್ ಗೆದ್ದಿದೆ, ಸೀರಿಸ್ ಡಿಸೈಡರ್ ಮ್ಯಾಚ್​​​ನಲ್ಲಿ ನಾವೇ ಗೆಲ್ತೀವಿ ಎಂಬುದು ವಿರಾಟ್ ಸೈನಿಕರ ಲೆಕ್ಕಾಚಾರವಾಗಿತ್ತು. ಆದರೆ, ಭಾರತೀಯರ ಲೆಕ್ಕಾಚಾರವನ್ನು ಆಸೀಸ್ ಪಡೆ ಬುಡಮೇಲು ಮಾಡಿತು..

ಕಳಪೆ ಫೀಲ್ಡಿಂಗ್​​ಗೆ ಕಳೆದುಕೊಳ್ತು ಮ್ಯಾಚ್​
ಸೀರಿಸ್​​​ನ ಮೊದಲೆರಡು ಮ್ಯಾಚ್​​ನಲ್ಲಿ ಸೂಪರ್​ ಆಟವಾಡಿದ್ದ ಭಾರತ, ಕೊನೆಯ ಮೂರು ಪಂದ್ಯದಲ್ಲಿ ತನ್ನ ಕಳಪೆ ಆಟದಿಂದ ಸರಣಿ ಕಳೆದುಕೊಳ್ಳಬೇಕಾಯ್ತು. ಬೌಲರ್​​ಗಳು ಉತ್ತಮವಾಗಿ ಬೌಲಿಂಗ್​ ಮಾಡಿದರೂ ಕಳಪೆ ಫೀಲ್ಡಿಂಗ್​​​ನ ಮೂಲಕ ರನ್​ ಬಿಟ್ಟುಕೊಡಬೇಕಾಯ್ತು. ಮಿಸ್ ಫೀಲ್ಡಿಂಗ್​​​ಗಳು ತಂಡದ ಸೋಲಿಗೆ ಕಾರಣವಾಯ್ತು..

ತಂಡದಲ್ಲಿ ಎದ್ದು ಕಾಣ್ತಿದೆ ಸಂಘಟಿತ ಆಟದ ಕೊರತೆ
ವಿಶ್ವಕಪ್​ ಹೊಸ್ತಿಲಲ್ಲಿರೋ ಟೀಂ ಇಂಡಿಯಾ ತನ್ನ ಕೊನೆಯ ಪಂದ್ಯದಲ್ಲಿ ಸಂಘಟಿತ ಆಟ ಪ್ರದರ್ಶಿಸುವಲ್ಲಿ ವಿಫಲವಾಗಿದೆ. ವಿಶ್ವಕಪ್​​​​​ ಟೂರ್ನಿಗೂ ಮುನ್ನ ಈ ಸರಣಿ ಪ್ರಮುಖವಾಗಿತ್ತು. ಇಂತಹ ಸಮಯದಲ್ಲಿ ವಿರಾಟ್ ಸೈನಿಕರು ಸಂಘಟಿತ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ.

ವಿರಾಟ್​ ಮೇಲೆ ಅವಲಂಬನೆ
ಟೀಂ ಇಂಡಿಯಾ ಹೆಚ್ಚಾಗಿ ನಾಯಕ ವಿರಾಟ್​ ಕೊಹ್ಲಿ ಮೇಲೆಯೇ ಅವಲಂಬನೆಯಾಗಿದೆ. ಸರಣಿಯಲ್ಲಿ ವಿರಾಟ್​ ಕೊಹ್ಲಿ ಬಿಟ್ಟರೆ, ಉಳಿದ ಭರವಸೆಯ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾದರು.

ಕೊನೆಯ ಎರಡು ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ ಮಾಡದ ಧೋನಿ
ಧೋನಿ ವಿಕೆಟ್​ ಕೀಪಿಂಗ್​ ಮಾಡುವುದರ ಜತೆಗೆ ಬ್ಯಾಟ್ಸ್​ಮನ್​ ಹಾಗೂ ಬೌಲರ್​ಗಳನ್ನು ಚಲನವಲನಗಳನ್ನು ಚೆನ್ನಾಗಿ ಗಮನಿಸಿ, ಕೆಲವೊಂದು ಉತ್ತಮ ಸಲಹೆಗಳನ್ನು ನೀಡುತ್ತಾರೆ. ಅಲ್ಲದೆ, ಧೋನಿ ವಿಕೆಟ್​ ಹಿಂದೆ ನಿಂತರೆ ಏನಾದರೂ ಒಂದು ಜಾದೂ ಮಾಡೇ ಮಾಡ್ತಾರೆ. ಅದು ಕೊನೆಯ ಎರಡು ಪಂದ್ಯಗಳಲ್ಲಿ ಕಾಣಲಿಲ್ಲ. (ಏಜೆನ್ಸೀಸ್​)