ಬಾಕ್ಸಿಂಗ್ ಡೇಗೆ ಅಶ್ವಿನ್ ಡೌಟ್, ಜಡೇಜಾ ಫಿಟ್

ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಸ್ಪೆಷಲಿಸ್ಟ್ ಸ್ಪಿನ್ ಬೌಲರ್ ಇಲ್ಲದೆ ಹಿನ್ನಡೆ ಕಂಡಿದ್ದ ಭಾರತ ತಂಡಕ್ಕೆ ಮೆಲ್ಬೋರ್ನ್​ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್​ಗೂ ಪ್ರಮುಖ ಸ್ಪಿನ್ನರ್ ಆರ್. ಅಶ್ವಿನ್ ಅಲಭ್ಯರಾಗುವ ಭೀತಿ ಎದುರಾಗಿದೆ. ಅಶ್ವಿನ್ ಪಂದ್ಯದ ವೇಳೆ ಫಿಟ್ ಆಗುವುದು ಅನುಮಾನ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಅಡಿಲೇಡ್ ಟೆಸ್ಟ್​ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್.ಅಶ್ವಿನ್, ಹೊಟ್ಟೆ ನೋವಿನಿಂದಾಗಿ 2ನೇ ಟೆಸ್ಟ್​ನಲ್ಲಿ ಕಣಕ್ಕಿಳಿದಿರಲಿಲ್ಲ. ಭುಜದ ಗಾಯದಿಂದ ಮೊದಲ 2 ಟೆಸ್ಟ್ ಪಂದ್ಯಗಳಿಂದ ಹೊರಗಿದ್ದ ರವೀಂದ್ರ ಜಡೇಜಾ ಕೂಡ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ ಎಂದು ಭಾನುವಾರದ ಸುದ್ದಿಗೋಷ್ಠಿಯ ವೇಳೆ ರವಿಶಾಸ್ತ್ರಿ ತಿಳಿಸಿದರು. ಆದರೆ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿಸಿಸಿಐ, ಜಡೇಜಾ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಿದ್ದಾರೆ ಎಂದು ತಿಳಿಸಿದೆ. ‘ಆಸ್ಟ್ರೇಲಿಯಾಕ್ಕೆ ಬರುವ 4 ದಿನಗಳ ಮುನ್ನ ಜಡೇಜಾ, ಭುಜದಲ್ಲಿನ ಸಣ್ಣ ಗಾಯಕ್ಕಾಗಿ ನೋವು ನಿವಾರಕ ಇಂಜೆಕ್ಷನ್ ಪಡೆದುಕೊಂಡಿದ್ದರು. ಇದರಿಂದ ಗುಣಮುಖರಾಗುತ್ತೇನೆ ಎನ್ನುವ ಭರವಸೆ ಅವರಲ್ಲಿತ್ತು’ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಆದರೆ, ಅವರು ಎಣಿಸಿದ ಹಾಗೆ ಗಾಯ ಗುಣಮುಖವಾಗಿಲ್ಲ. ಇದೇ ಕಾರಣಕ್ಕಾಗಿ ಭಾರತ 2ನೇ ಟೆಸ್ಟ್​ನಲ್ಲಿ ನಾಲ್ವರು ವೇಗಿಗಳೊಂದಿಗೆ ಆಡಿತು ಎಂದು ತಿಳಿಸಿದರು. ಆದರೆ ತಂಡದಲ್ಲಿರುವ 3ನೇ ಸ್ಪಿನ್ನರ್ ಕುಲದೀಪ್ ಯಾದವ್ ಬಗ್ಗೆ ಅವರು ಮಾತನಾಡಲಿಲ್ಲ. ‘ಪರ್ತ್ ಪಂದ್ಯದ ವೇಳೆ ಜಡೇಜಾ ಶೇ.60ರಿಂದ 70ರಷ್ಟು ಮಾತ್ರವೇ ಫಿಟ್ ಆಗಿದ್ದರು’ ಎಂದು ರವಿಶಾಸ್ತ್ರಿ ಹೇಳಿದರು. –ಪಿಟಿಐ/ಏಜೆನ್ಸೀಸ್

ಜಡೇಜಾ ಫಿಟ್ನೆಸ್ ಗೊಂದಲ

ಪರ್ತ್ ಟೆಸ್ಟ್​ನಲ್ಲಿ ಕಣಕ್ಕಿಳಿಯದೆ ಅಚ್ಚರಿಗೆ ಕಾರಣರಾಗಿದ್ದ ರವೀಂದ್ರ ಜಡೇಜಾ ಆಸೀಸ್ ಪ್ರವಾಸಕ್ಕೂ ಮುನ್ನವೇ ಗಾಯಾಳುವಾಗಿದ್ದರು ಎಂದು ರವಿಶಾಸ್ತ್ರಿ ಹೇಳಿರುವುದು ಸಾಕಷ್ಟು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಜಡೇಜಾ ರಣಜಿ ಪಂದ್ಯದ ವೇಳೆ ಗಾಯಾಳುವಾಗಿದ್ದರೆ ಅವರನ್ನು ಎನ್​ಸಿಎಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಏಕೆ ಒಳಪಡಿಸಲಿಲ್ಲ? ಪರ್ತ್ ಟೆಸ್ಟ್ ವೇಳೆ ಪ್ರಕಟಿಸಿದ 13 ಆಟಗಾರರ ತಂಡದಲ್ಲಿ ಅನ್​ಫಿಟ್ ಆಗಿದ್ದ ಜಡೇಜಾ ಸ್ಥಾನ ಪಡೆದಿದ್ದು ಹೇಗೆ? 2ನೇ ಟೆಸ್ಟ್​ನ ಮೊದಲ ಇನಿಂಗ್ಸ್ ನಲ್ಲಿ 20 ಓವರ್ ಹಾಗೂ 2ನೇ ಇನಿಂಗ್ಸ್​ನಲ್ಲಿ 8ಕ್ಕೂ ಅಧಿಕ ಓವರ್​ಗಳ ಕಾಲ ಅನ್​ಫಿಟ್ ಆಗಿದ್ದ ಜಡೇಜಾ ಫೀಲ್ಡಿಂಗ್ ಮಾಡಿದ್ದು ಹೇಗೆ? ಭುಜದ ಗಾಯಕ್ಕೆ ಇಂಜೆಕ್ಷನ್ ಪಡೆದುಕೊಂಡಿದ್ದರೂ, ಬೌಂಡರಿ ಲೈನ್​ನಿಂದ ಅವರು ನಿಖರವಾಗಿ ಥ್ರೋಗಳನ್ನು ಎಸೆಯಲು ಸಾಧ್ಯವಾಗಿದ್ದು ಹೇಗೆ? ಎನ್ನುವ ಪ್ರಶ್ನೆ ಉದ್ಭವಿಸಿವೆ.

ಮಯಾಂಕ್ ಉತ್ತಮ ಆಟಗಾರ

ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ರ ಆರಂಭಿಕ ಜೋಡಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ರವಿಶಾಸ್ತ್ರಿ, ಇದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದರು. ತಂಡದ ಅಗ್ರ ಕ್ರಮಾಂಕದ ಆಟಗಾರರಿಗೆ ಟೆಸ್ಟ್ ಪಂದ್ಯದ ವೇಳೆ ದೊಡ್ಡ ಜವಾಬ್ದಾರಿ ಇರುತ್ತದೆ. ಅಲ್ಲದೆ, ಅವರು ಅನುಭವಿ ಆಟಗಾರರು. ಹಲವು ವರ್ಷಗಳಿಂದ ರಾಷ್ಟ್ರೀಯ ತಂಡದ ಜತೆ ವಿದೇಶದ ಸರಣಿಗಳಲ್ಲಿ ಆಡಿದ್ದಾರೆ ಎಂದರು. ಮಯಾಂಕ್ ಅಗರ್ವಾಲ್ ಉತ್ತಮ ಯುವ ಆಟಗಾರ. ಭಾರತ ಎ ತಂಡದ ಪರವಾಗಿಯೂ ಉತ್ತಮವಾಗಿ ಆಡಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಅವರ ನಿರ್ವಹಣೆಯೂ ಅತ್ಯುತ್ತಮವಾಗಿದೆ. ಆರಂಭಿಕ ಸ್ಥಾನದ ಬಗ್ಗೆ ಇನ್ನಷ್ಟೇ ನಿರ್ಧಾರ ಮಾಡಬೇಕಿದೆ ಎಂದು ಹೇಳಿದ್ದಾರೆ.

ಆಸೀಸ್ ತಂಡಕ್ಕೆ 7 ವರ್ಷದ ಆರ್ಚಿ ಸೇರ್ಪಡೆ!

ಮೆಲ್ಬೋರ್ನ್: ಪ್ರತಿಷ್ಠಿತ ಬಾಕ್ಸಿಂಗ್ ಡೇ ಟೆಸ್ಟ್​ಗೆ ಆಸ್ಟ್ರೇಲಿಯಾ ತಂಡದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದ್ದು, 7 ವರ್ಷದ ಲೆಗ್​ಸ್ಪಿನ್ನರ್ ಆರ್ಚಿ ಶೀಲರ್​ರನ್ನು ತಂಡಕ್ಕೆ ಸೇರಿಸಲಾಗಿದೆ! ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಅಧಿಕೃತ ಪಟ್ಟಿಯಲ್ಲಿ ಆರ್ಚಿ ಶೀಲರ್ ಹೆಸರನ್ನು ಸೇರಿಸಲಾಗಿದ್ದು, ಬಾಕ್ಸಿಂಗ್ ಡೇ ಪಂದ್ಯದ ವೇಳೆ ಅವರು ತಂಡದ ಸಹ-ನಾಯಕರಾಗಿ ಇರಲಿದ್ದಾರೆ!

ಈ ಸುದ್ದಿ ಕೇಳಿ ಅಚ್ಚರಿಯಾಗುವುದಂತೂ ಸತ್ಯ. ಆದರೆ, ಮೇಕ್ ಎ ವಿಶ್ ಫೌಂಡೇಷನ್​ನ ಮನವಿಯ ಮೇರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರ ತೆಗೆದುಕೊಂಡಿದೆ. ತೀರಾ ಅಪರೂಪದ ಹೃದಯ ಸಮಸ್ಯೆ ಹೊಂದಿದ್ದ ಆರ್ಚಿ ಶೀಲರ್ ತನ್ನ ಬಾಲ್ಯದಲ್ಲಿಯೇ ಮೂರು ಬಾರಿ ಓಪನ್ ಹಾರ್ಟ್ ಸರ್ಜರಿ ಹಾಗೂ 9 ಬಾರಿ ಇತರ ಸರ್ಜರಿಗಳಿಗೆ ಒಳಗಾಗಿದ್ದಾನೆ.

‘ಆತನಿಗೆ ಮುಂದೆ ಏನಾಗಬೇಕು ಎನ್ನುವ ಆಸೆ ಇದೆ ಎಂದು ತಂದೆ ಕೇಳಿದ್ದರಂತೆ. ಅದಕ್ಕೆ ಆತ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಬೇಕು ಎಂದಿದ್ದ. ಅದರಂತೆ ಆತನ ಆಸೆಯನ್ನು ಈಡೇರಿಸಲು ನಿರ್ಧಾರ ಮಾಡಿದ್ದೇವೆ’ ಎಂದು ಆಸೀಸ್ ನಾಯಕ ಟಿಮ್ ಪೇನ್ ಮೊದಲ ಟೆಸ್ಟ್​ಗೂ ಮುನ್ನ ಹೇಳಿದ್ದರು. ಆಸೀಸ್ ತಂಡ ಯುಎಇ ಪ್ರವಾಸದಲ್ಲಿದ್ದ ವೇಳೆ, ಆರ್ಚಿ ಶೀಲರ್​ಗೆ ದೂರವಾಣಿ ಕರೆ ಮಾಡಿದ್ದ ಕೋಚ್ ಜಸ್ಟೀನ್ ಲ್ಯಾಂಗರ್, ಬಾಕ್ಸಿಂಗ್ ಡೇ ಟೆಸ್ಟ್​ಗೆ ಆಯ್ಕೆಯಾಗಿರುವುದಾಗಿ ತಿಳಿಸಿದ್ದರು. ಶನಿವಾರ ತನ್ನ 7ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಆರ್ಚಿ ಆಸೀಸ್ ತಂಡದ ನಾಯಕನಾಗಿ ಬಾಕ್ಸಿಂಗ್ ಡೇಯಲ್ಲಿ ಕಣಕ್ಕಿಳಿಯುತ್ತಿರುವುದಾಗಿ ಟಿಮ್ ಪೇನ್ ತಿಳಿಸಿದ್ದಾರೆ.

ಭಾನುವಾರ ಯಾರಾ› ಪಾರ್ಕ್​ನಲ್ಲಿ ನಡೆದ ಇಂಡಿನ್ ಸಮ್ಮರ್ ಫೆಸ್ಟಿವಲ್​ನಲ್ಲಿ ಭಾಗವಹಿಸಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆಯೂ ಆರ್ಚಿ ಶೀಲರ್ ಇದ್ದರು. ಅಲ್ಲದೆ, ತಂಡದ ಅಭ್ಯಾಸ ಅವಧಿಯಲ್ಲಿ ಪಾಲ್ಗೊಂಡಿರುವ ಲೆಗ್​ಸ್ಪಿನ್ನರ್​ಗೆ ಆಸೀಸ್​ನ ಅಧಿಕೃತ ಬ್ಯಾಗಿ ಗ್ರೀನ್ ಕ್ಯಾಪ್ ಹಾಗೂ ಜೆರ್ಸಿಯನ್ನೂ ನೀಡಲಾಗಿದೆ. ಪಂದ್ಯದ ವೇಳೆ ಆರ್ಚಿ ತಂಡದ ಡ್ರೆಸಿಂಗ್ ರೂಮ್ ಭಾಗವಾಗಿಯೂ ಇರಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.