ಹೊರಬಿದ್ದ ಮನೀಷ್, ಮರಳಿದ ಧೋನಿ, ಉಳಿದ ರಾಹುಲ್!

ನವದೆಹಲಿ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರಾಷ್ಟ್ರೀಯ ಆಯ್ಕೆ ಸಮಿತಿಯ ಕೆಲ ನಿರ್ಧಾರಗಳು ಅಚ್ಚರಿಗೆ ಕಾರಣವಾಗಿವೆ. ವೆಸ್ಟ್ ಇಂಡೀಸ್ ವಿರುದ್ಧ ತವರಿನ ಟಿ20 ಸರಣಿಯಿಂದ ಹೊರಬಿದ್ದಿದ್ದ ಅನುಭವಿ ವಿಕೆಟ್ಕೀಪರ್ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ಮರಳಿದ್ದರೆ, ಕನ್ನಡಿಗ ಮನೀಷ್ ಪಾಂಡೆ ಏಕದಿನ-ಟಿ20 ತಂಡಗಳಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ 6 ಅಂತಾರಾಷ್ಟ್ರೀಯ ಇನಿಂಗ್ಸ್ ಗಳಿಂದ ಕೇವಲ 75 ರನ್ ಬಾರಿಸಿರುವ ಕೆಎಲ್ ರಾಹುಲ್ ಈ ಎರಡೂ ತಂಡಗಳಲ್ಲಿ ಸ್ಥಾನ ಸಂಪಾದಿಸಲು ಯಶಸ್ವಿಯಾಗಿದ್ದಾರೆ. ಈಗಿನ ಏಕದಿನ ತಂಡವೇ 2019ರ ವಿಶ್ವಕಪ್​ನಲ್ಲೂ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದೆ.

ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಗಿದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಜ. 12ರಿಂದ 18ರವರೆಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಬಳಿಕ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಜ. 23ರಿಂದ 5 ಏಕದಿನ ಹಾಗೂ ಫೆ. 6ರಿಂದ 3 ಟಿ20 ಪಂದ್ಯಗಳ ಸರಣಿ ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಧೋನಿಗೆ ವಿಶ್ರಾಂತಿ ನೀಡಿದ್ದ ಆಯ್ಕೆ ಸಮಿತಿ, ವಿಶ್ವಕಪ್​ಗೆ ಮುನ್ನ ನಡೆಯಲಿರುವ ಪ್ರಮುಖ 8 ಏಕದಿನ ಪಂದ್ಯಗಳಿಗೆ ಧೋನಿಯನ್ನು ಆಯ್ಕೆ ಮಾಡಿದೆ. ಇದರಿಂದಾಗಿ ರಿಷಭ್ ಪಂತ್ ಏಕದಿನ ತಂಡದ ವಿಕೆಟ್ಕೀಪರ್ ಸ್ಥಾನವನ್ನು ಕಳೆದುಕೊಂಡಿದ್ದಾರೆ.

‘ಮುಂದಿನ ದಿನಗಳಲ್ಲಿ ಕೇವಲ 8 ಏಕದಿನ ಪಂದ್ಯವಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ತಂಡದೊಂದಿಗೆ ಹೆಚ್ಚಿನ ಸಮಯದ ಅವಕಾಶ ನೀಡುವುದು ಇದರ ಹಿಂದಿನ ಉದ್ದೇಶ. 3 ಟಿ20ಯೂ ಇರುವ ಕಾರಣ ಮುಂದಿನ ಒಂದು ತಿಂಗಳಲ್ಲಿ ಭಾರತ 11 ಅಂತಾರಾಷ್ಟ್ರೀಯ ಪಂದ್ಯ ಆಡಲಿದೆ’ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು, 37 ವರ್ಷದ ಧೋನಿಯನ್ನು ತಂಡಕ್ಕೆ ಆಯ್ಕೆ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಆಡಿದ ಏಕದಿನ ಸರಣಿಯ ತಂಡದಲ್ಲಿನ ಏಕೈಕ ಬದಲಾವಣೆ ಎಂದರೆ, 21 ವರ್ಷದ ರಿಷಭ್ ಪಂತ್ ಸ್ಥಾನ ಕಳೆದುಕೊಂಡಿರುವುದು. ಕೇದಾರ್ ಜಾಧವ್ ಏಕದಿನ ತಂಡದ ಕಾಯಂ ಸದಸ್ಯರಾಗಿದ್ದರೂ, ಇತ್ತೀಚಿನ ಟಿ20ಯಲ್ಲಿ ತಂಡದ ಭಾಗವಾಗಿರಲಿಲ್ಲ. ಆದರೆ, ಈಗ ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್​ನಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿದ್ದು, ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ತಂಡ ಸೇರಿದ್ದಾರೆ. ಜಾಧವ್ ಹಾಗೂ ಹಾರ್ದಿಕ್ ಟಿ20 ತಂಡಕ್ಕೆ ಮರಳಿದ್ದರಿಂದ ಶ್ರೇಯಸ್ ಅಯ್ಯರ್ ಹಾಗೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಕೃನಾಲ್ ಪಾಂಡ್ಯ ಸ್ಥಾನ ಉಳಿಸಿಕೊಂಡಿದ್ದರಿಂದ ಟಿ20 ತಂಡದಲ್ಲಿ ಸಹೋದರರಿಬ್ಬರೂ ಸ್ಥಾನ ಪಡೆದಂತಾಗಿದೆ.

ಏಕದಿನ ತಂಡ (ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ): ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂಎಸ್ ಧೋನಿ (ವಿ.ಕೀ), ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಬುಮ್ರಾ, ಖಲೀಲ್ ಅಹ್ಮದ್, ಮೊಹಮದ್ ಶಮಿ.

ಟಿ20 ತಂಡ (ನ್ಯೂಜಿಲೆಂಡ್ ವಿರುದ್ಧ): ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂಎಸ್ ಧೋನಿ (ವಿ.ಕೀ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್. -ಪಿಟಿಐ/ಏಜೆನ್ಸೀಸ್

ಉಮೇಶ್ ಔಟ್

ವೇಗದ ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ ಏಕದಿನ ಹಾಗೂ ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಏಕದಿನ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್, ಖಲೀಲ್ ಅಹ್ಮದ್ ಹಾಗೂ ಮೊಹಮದ್ ಶಮಿಯನ್ನು ಅಗ್ರ ಬೌಲರ್​ಗಳಾಗಿ ಪರಿಗಣಿಸಿದ್ದರೆ, ಟಿ20 ತಂಡಕ್ಕೆ ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಹಾಗೂ ಖಲೀಲ್​ರನ್ನು ಪರಿಗಣನೆ ಮಾಡಿದೆ.

ಪಂತ್ ಬದಲು ಕಾರ್ತಿಕ್

ಏಷ್ಯಾಕಪ್​ನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರವಾಗಿ ಆಡಿದ್ದ ದಿನೇಶ್ ಕಾರ್ತಿಕ್ ಈ ಬಾರಿ ರಿಷಭ್ ಪಂತ್ ಸ್ಥಾನವನ್ನು ತುಂಬಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ 5 ಪಂದ್ಯಗಳ ಪೈಕಿ 3ರಲ್ಲಿ ಸೆಷಲಿಸ್ಟ್ ಬ್ಯಾಟ್ಸ್​ಮನ್ ಆಗಿ ಆಡಿದ್ದ ಪಂತ್ 17 ಹಾಗೂ 24 ರನ್ ಬಾರಿಸಿದ್ದರು. ಪ್ರಸ್ತುತ ಟೆಸ್ಟ್ ತಂಡದ ಭಾಗವಾಗಿರುವ ಪಂತ್, ಸರಣಿ ಮುಗಿದ ಬೆನ್ನಲ್ಲಿಯೇ ತವರಿಗೆ ವಾಪಸಾಗಲಿದ್ದು, ಭಾರತ ಎ ತಂಡದ ಪರವಾಗಿ ಇಂಗ್ಲೆಂಡ್ ಎ ತಂಡದ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ಅವಕಾಶವಿಲ್ಲದೆ ಹೊರಬಿದ್ದ ಮನೀಷ್

ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಎರಡೂ ತಂಡದಿಂದ ಹೊರಬಿದ್ದಿದ್ದಾರೆ. ವಿಂಡೀಸ್ ವಿರುದ್ಧ ಐದೂ ಏಕದಿನ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಮನೀಷ್, ಆಸೀಸ್ ವಿರುದ್ಧ ಟಿ20 ಸರಣಿಯ ಒಂದು ಪಂದ್ಯದಲ್ಲೂ ಆಡಿರಲಿಲ್ಲ. ವಿಂಡೀಸ್ ವಿರುದ್ಧದ ಟಿ20ಯಲ್ಲಿ 2 ಬಾರಿ ಕಣಕ್ಕಿಳಿದಿದ್ದ ಮನೀಷ್ 19 ಹಾಗೂ ಅಜೇಯ 4 ರನ್ ಬಾರಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಭಾರತ ಎ ತಂಡದ ಪರವಾಗಿ ನ್ಯೂಜಿಲೆಂಡ್ ಎ ವಿರುದ್ಧ ಪ್ರವಾಸದ ಏಕದಿನ ಸರಣಿಯಲ್ಲಿ ಮನೀಷ್ 1 ಪಂದ್ಯದಲ್ಲಿ 111* ಹಾಗೂ ಇನ್ನೊಂದು ಪಂದ್ಯದಲ್ಲಿ 42 ರನ್ ಬಾರಿಸಿದ್ದರು. ನ್ಯೂಜಿಲೆಂಡ್ ನೆಲದಲ್ಲಿಯೇ ಉತ್ತಮ ನಿರ್ವಹಣೆ ತೋರಿದರೂ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವುದು ವಿಪರ್ಯಾಸ.