ಏಕದಿನದಲ್ಲೂ ಇತಿಹಾಸ ಬರೆದ ಭಾರತ

ಮೆಲ್ಬೋರ್ನ್: ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಜೀವನಶ್ರೇಷ್ಠ ಬೌಲಿಂಗ್, ಮಾಜಿ ನಾಯಕ ಎಂಎಸ್ ಧೋನಿ ಅವರ ಮತ್ತೊಂದು ಮಾಸ್ಟರ್ ಕ್ಲಾಸ್ ಇನಿಂಗ್ಸ್ ಮತ್ತು ಕೇದಾರ್ ಜಾಧವ್ ಸಮಯೋಚಿತ ಅರ್ಧಶತಕದೊಂದಿಗೆ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಭರ್ಜರಿಯಾಗಿ ಜಯಿಸಿತು. ಇದರೊಂದಿಗೆ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ, ಕಾಂಗರೂ ನಾಡಿನಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆಲುವಿನ ನಂತರ ಏಕದಿನ ಸರಣಿಯನ್ನೂ 2-1ರಿಂದ ಗೆದ್ದು ಇತಿಹಾಸ ರಚಿಸಿತು. ಸುದೀರ್ಘ ಆಸೀಸ್ ಪ್ರವಾಸಕ್ಕೂ ಭಾರತ ಪರಿಪೂರ್ಣ ಗೆಲುವಿನ ವಿದಾಯ ಹೇಳಿತು.

ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಸೀಸ್ ತಂಡ, ಚಾಹಲ್(42ಕ್ಕೆ 6) ಮಾರಕ ದಾಳಿಗೆ 48.4 ಓವರ್​ಗಳಲ್ಲಿ 230 ರನ್​ಗೆ ಆಲೌಟಾಯಿತು. ಬ್ಯಾಟಿಂಗ್​ಗೆ ಸವಾಲಾದ ನಿಧಾನಗತಿಯ ಪಿಚ್​ನಲ್ಲಿ ಗುರಿ ಬೆನ್ನಟ್ಟಿದ ಭಾರತ ತಂಡ, ಧೋನಿ(87*ರನ್, 114 ಎಸೆತ, 6 ಬೌಂಡರಿ) ಸಿಡಿಸಿದ ಸತತ 3ನೇ ಅರ್ಧಶತಕ ಮತ್ತು ಜಾಧವ್(61*ರನ್, 57ಎಸೆತ, 7 ಬೌಂಡರಿ) ಬಾರಿಸಿದ ಅರ್ಧಶತಕದೊಂದಿಗೆ 49.2 ಓವರ್​ಗಳಲ್ಲಿ 3 ವಿಕೆಟ್​ಗೆ 234 ರನ್ ಪೇರಿಸಿ ಜಯಿಸಿತು. ಭಾರತ ಬ್ಯಾಟಿಂಗ್​ಗೆ ಇಳಿಯುವ ಮುನ್ನ ಸ್ವಲ್ಪ ಹೊತ್ತು ಮಳೆ ಬಂದಿದ್ದರಿಂದ ಔಟ್​ಫೀಲ್ಡ್ ವೇಗ ಕಳೆದುಕೊಂಡಿತ್ತು. ಧೋನಿ ಸ್ಥಿರ ಆಟದೊಂದಿಗೆ ಮುಂದಿನ ಏಕದಿನ ವಿಶ್ವಕಪ್​ಗೆ ಬಲು ದೊಡ್ಡ ತಲೆನೋವಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಚಿಂತೆಯೂ ಬಹುತೇಕ ದೂರವಾಗಿದೆ.

ಚೇಸಿಂಗ್​ಗೆ ಆರಂಭಿಕ ಹೊಡೆತ: ಆರಂಭಿಕ ರೋಹಿತ್ ಶರ್ಮ(9) ಬೇಗನೆ ವಿಕೆಟ್ ಒಪ್ಪಿಸಿದರೆ, ಶಿಖರ್ ಧವನ್ (23 ರನ್, 46 ಎಸೆತ) ಒಂದೂ ಬೌಂಡರಿಯಿಲ್ಲದೆ ಕೊಹ್ಲಿ ಜತೆ 2ನೇ ವಿಕೆಟ್​ಗೆ 54 ರನ್ ಸೇರಿಸಿ ಲಯಕ್ಕೆ ಮರಳುವ ಹಂತದಲ್ಲಿದ್ದರು. ಆದರೆ ದುರಾದೃಷ್ಟವಶಾತ್ ವೇಗಿ ಸ್ಟೋಯಿನಿಸ್​ಗೆ ರಿಟರ್ನ್ ಕ್ಯಾಚ್ ಕೊಟ್ಟರು. 59 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ವಿರಾಟ್ ಕೊಹ್ಲಿ (46 ರನ್, 62ಎಸೆತ, 3ಬೌಂಡರಿ) ಜತೆ ಧೋನಿ 30 ಓವರ್​ಗಳಲ್ಲಿ 113ಕ್ಕೇರಿಸಿದರು. ಆದರೆ ಸರಣಿಯಲ್ಲಿ ಸತತ 3ನೇ ಬಾರಿಯೂ ಕೊಹ್ಲಿ ವೇಗಿ ರಿಚರ್ಡ್ಸನ್​ಗೆ ವಿಕೆಟ್ ಒಪ್ಪಿಸಿದರು.

ಆಸೀಸ್​ನಲ್ಲಿ ಒಲಿದ 3ನೇ ಏಕದಿನ ಪ್ರಶಸ್ತಿ

1980ರಿಂದ ಆಸೀಸ್​ನಲ್ಲಿ ಏಕದಿನ ಪಂದ್ಯ ಆಡಲಾರಂಭಿ ಸಿದ ಭಾರತ ತಂಡ, 1985ರಲ್ಲಿ ಬೆನ್ಸನ್ ಆಂಡ್ ಹೆಡ್ಜಸ್ ವಿಶ್ವ ಚಾಂಪಿಯನ್​ಷಿಪ್ ಜಯಿಸಿ ಆಸೀಸ್ ನೆಲದಲ್ಲಿ ಚೊಚ್ಚಲ ಏಕದಿನ ಪ್ರಶಸ್ತಿ ಒಲಿಸಿಕೊಂಡಿತ್ತು. ಆಗಿನ ಟೆಸ್ಟ್ ಮಾನ್ಯತೆಯ ಎಲ್ಲ ತಂಡಗಳು ಈ ಟೂರ್ನಿಯಲ್ಲಿ ಆಡಿದ್ದವು. ನಂತರ 2008ರಲ್ಲಿ ಸಿಬಿ ತ್ರಿಕೋನ ಏಕದಿನ ಸರಣಿ ಗೆಲ್ಲುವ ಮೂಲಕ ಭಾರತ, ಆಸೀಸ್ ನೆಲದಲ್ಲಿ ಬೀಗಿತ್ತು. ಈಗ ದ್ವಿಪಕ್ಷೀಯ ಸರಣಿ ಜಯದೊಂದಿಗೆ ಭಾರತಕ್ಕೆ ಆಸೀಸ್ ನೆಲದಲ್ಲಿ 3ನೇ ಏಕದಿನ ಪ್ರಶಸ್ತಿ ಒಲಿದಿದೆ.

ಧೋನಿ-ಜಾಧವ್ ಕ್ಲಾಸಿಕ್ ಜತೆಯಾಟ

ಕಳೆದ ಅಡಿಲೇಡ್ ಇನಿಂಗ್ಸ್​ನ ಮುಂದುವರಿದ ಭಾಗವೆಂಬಂತೆ ಎಂಸಿಜಿ ಅಂಗಣದಲ್ಲೂ ಭಾರತ ತಂಡದ ಚೇಸಿಂಗ್​ಗೆ ಆಸರೆಯಾದ ಧೋನಿ, 2 ಜೀವದಾನ ಸಹಿತ ಒಟ್ಟಾರೆ 4 ಬಾರಿ ಔಟಾಗುವ ಅಪಾಯದಿಂದ ಪಾರಾಗಿ ಗೆಲುವು ತಂದರು. ಧೋನಿ ಅತ್ಯಧಿಕ ಎಸೆತಗಳನ್ನು ಎದುರಿಸಿದರೂ, ಅತ್ಯಂತ ಶಿಸ್ತು, ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಆಸೀಸ್​ಗೆ ಕಗ್ಗಂಟಾದರು. ಎಷ್ಟು ಶಕ್ತಿಯುತವಾಗಿ ಬಾರಿಸಿದರೂ ಚೆಂಡು ಬೌಂಡರಿ ದಾಟುವುದೇ ಕಷ್ಟವಾಗಿದ್ದ ಅಂಗಣದಲ್ಲಿ ಧೋನಿ ಮತ್ತು ಜಾಧವ್ ವಿಕೆಟ್ ಮಧ್ಯೆ ಮಿಂಚಿನ ಸಿಂಗಲ್-ಡಬಲ್ಸ್ ಮತ್ತು ಚಾಣಾಕ್ಷ ಬೌಂಡರಿ ಸಿಡಿಸಿ ನಿಧಾನವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಣಕ್ಕಿಳಿದ ಮೊದಲ ಎಸೆತದಲ್ಲೇ ಧೋನಿಯ ಕ್ಯಾಚ್ ಅನ್ನು ಬ್ಯಾಕ್​ವರ್ಡ್ ಪಾಯಿಂಟ್​ನಲ್ಲಿ ಮ್ಯಾಕ್ಸ್​ವೆಲ್ ಕೈಚೆಲ್ಲಿದರೆ, 48ನೇ ಓವರ್​ನಲ್ಲಿ ಮಿಡ್ ಆಫ್​ನಲ್ಲಿ ಫಿಂಚ್ ಡ್ರಾಪ್ ಮಾಡಿದರು. ಧೋನಿ 34 ರನ್ ಗಳಿಸಿದ ಬಳಿಕ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದಾಗ ಚೆಂಡು ಬ್ಯಾಟ್​ಗೆ ಕೂದಲೆಳೆಯಷ್ಟು ತಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಆದರೆ ಆಸ್ಟ್ರೇಲಿಯಾ ಗಂಭೀರ ಅಪೀಲು ಮಾಡಲಿಲ್ಲ. ಕೊಹ್ಲಿ ಔಟಾದಾಗ ಕೊನೇ 20 ಓವರ್​ಗಳಲ್ಲಿ 118 ರನ್ ಅಗತ್ಯವಿತ್ತು. ಆಗ ಜತೆಗೂಡಿದ ಧೋನಿ ಮತ್ತು ‘ಗೋಲ್ಡನ್ ಆಮ್ರ್’ ಖ್ಯಾತಿಯ ಜಾಧವ್ ಮುರಿಯದ 4ನೇ ವಿಕೆಟ್​ಗೆ 121 ರನ್ ಜತೆಯಾಟವಾಡಿ ತಂಡವನ್ನು ದಡ ಸೇರಿಸಿದರು. -ಏಜೆನ್ಸೀಸ್

ಆಸ್ಟ್ರೇಲಿಯಾಕ್ಕೆ ಚಾಹಲ್ ಬ್ರೇಕ್

ಕುಲದೀಪ್ ಯಾದವ್ ಬದಲಿಗೆ ಅಂತಿಮ 11ರ ಬಳಗದಲ್ಲಿ ಅಚ್ಚರಿಯ ರೀತಿಯಲ್ಲಿ ಅವಕಾಶ ಪಡೆದ ಚಾಹಲ್ ಆಸೀಸ್ ಬ್ಯಾಟಿಂಗ್ ಯೋಜನೆಗೆ ಆಘಾತ ನೀಡಿದರು. ಪ್ರಮುಖ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟಿದ ಚಾಹಲ್, ಆಸೀಸ್ ನೆಲದಲ್ಲಿ ಆಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಮ್ಯಾಜಿಕ್ ಮಾಡಿದರು. ಅಲೆಕ್ಸ್ ಕ್ಯಾರಿ(5) 3ನೇ ಓವರ್​ನಲ್ಲೇ ಭುವನೇಶ್ವರ್​ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಆರನ್ ಫಿಂಚ್ ಕೂಡ ಭುವಿಗೆ ಸತತ 3ನೇ ಬಾರಿ ವಿಕೆಟ್ ಒಪ್ಪಿಸಿದರು. ಫಿಂಚ್ ಎಲ್​ಬಿ/ಬೌಲ್ಡ್​ನಿಂದ ಪಾರಾಗಲು ಕ್ರೀಸ್​ನಿಂದ ಅಂತರ ಬಿಟ್ಟು ಬ್ಯಾಟಿಂಗ್ ಮಾಡಿದರೂ, ಭುವಿಯ ತಳಮಟ್ಟದ ಎಸೆತಕ್ಕೆ ಎಲ್​ಬಿಯಾದರು. ನಂತರ ಆಸೀಸ್ ಕಂಗೆಡಿಸುವ ಸರದಿ ಚಾಹಲ್​ರದ್ದಾಗಿತ್ತು. 3ನೇ ವಿಕೆಟ್​ಗೆ ಉಸ್ಮಾನ್ ಖವಾಜ(34) ಜತೆ 73 ರನ್ ಸೇರಿಸಿ ಚೇತರಿಕೆ ನೀಡುವ ಹಾದಿಯಲ್ಲಿದ್ದ ಶಾನ್ ಮಾರ್ಷ್​ರನ್ನು(39) ಧೋನಿ ಮಾಡಿದ ಸ್ಟಂಪಿಂಗ್​ನೊಂದಿಗೆ ಔಟ್ ವಿಕೆಟ್ ಖಾತೆ ತೆರೆದ ಚಾಹಲ್, ಕರಾರುವಾಕ್ ದಾಳಿ ಮುಂದುವರಿಸಿದರು. ಖವಾಜ, ಅರ್ಧಶತಕ ಬಾರಿಸಿದ ಪೀಟರ್ ಹ್ಯಾಂಡ್ಸ್​ಕೊಂಬ್(58), ಮಾರ್ಕಸ್ ಸ್ಟೊಯಿನಿಸ್(10) ಮತ್ತು ಬಾಲಂಗೋಚಿಗಳನ್ನು ಚಾಹಲ್ ಕಾಡಿದರು. ವೇಗಿ ಶಮಿ ಅಪಾಯಕಾರಿ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್ ವೆಲ್​ರನ್ನು 35ನೇ ಓವರ್​ನಲ್ಲಿ ಔಟ್ ಮಾಡಿದರು.

# ಯಜುವೇಂದ್ರ ಚಾಹಲ್ ಏಕದಿನ ಕ್ರಿಕೆಟ್​ನಲ್ಲಿ ಜೀವನಶ್ರೇಷ್ಠ ನಿರ್ವಹಣೆ ತೋರಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ 22 ರನ್​ಗೆ 5 ವಿಕೆಟ್ ಕಬಳಿಸಿದ್ದು ಹಿಂದಿನ ಶ್ರೇಷ್ಠ ಸಾಧನೆ.

ಆಸೀಸ್ ಪ್ರವಾಸದಲ್ಲಿ ಕ್ಲೀನ್​ಸ್ವೀಪ್!

ಟಿ20 ಸರಣಿಯಲ್ಲಿ ಗೆಲ್ಲಬಹುದಾಗಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ 1-1 ಸಮಬಲದೊಂದಿಗೆ ಪ್ರವಾಸ ಆರಂಭಿಸಿದ್ದ ಭಾರತ ತಂಡ, ಟೆಸ್ಟ್ ಸರಣಿಯಲ್ಲಿ 2-1ರಿಂದ ಗೆದ್ದು 71 ವರ್ಷಗಳ ಬರ ನೀಗಿಸಿಕೊಂಡಿತ್ತು. ಇದೀಗ ಏಕದಿನ ಸರಣಿಯಲ್ಲೂ ಗೆದ್ದು ಮೊದಲ ಬಾರಿ ಆಸೀಸ್ ಪ್ರವಾಸದಲ್ಲಿ ಕ್ಲೀನ್​ಸ್ವೀಪ್ ಸಾಧನೆ ದಾಖಲಿಸಿದೆ.

# ಆಸೀಸ್ ನೆಲದ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಿದ ವೇಗಿ ಅಜಿತ್ ಅಗರ್ಕರ್ ಸಾಧನೆಯನ್ನು ಚಾಹಲ್ ಸರಿಗಟ್ಟಿದರು. ಅಗರ್ಕರ್ 2004ರಲ್ಲಿ ಎಂಸಿಜಿಯಲ್ಲೇ 42ರನ್​ಗೆ 6 ವಿಕೆಟ್ ಕಬಳಿಸಿದ್ದರು. ಮಿಚೆಲ್ ಸ್ಟಾರ್ಕ್ 2015ರಲ್ಲಿ 43ಕ್ಕೆ 6 ವಿಕೆಟ್ ಪಡೆದಿದ್ದು ನಂತರದ ಶ್ರೇಷ್ಠ ನಿರ್ವಹಣೆಯಾಗಿದೆ.

ಯಾವುದೇ ಕ್ರಮಾಂಕಕ್ಕೂ ಧೋನಿ ಸಿದ್ಧ!

ಎಂಎಸ್ ಧೋನಿ ಭಾರತ ತಂಡದಲ್ಲಿ 6ನೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ‘ತಂಡಕ್ಕೆ ನಾನು ಯಾವ ಕ್ರಮಾಂಕದಲ್ಲಿ ಅಗತ್ಯ ಎಂಬುದು ಮುಖ್ಯವಾಗುತ್ತದೆ. 14 ವರ್ಷಗಳಿಂದ ಕ್ರಿಕೆಟ್ ಆಡಿದ ಬಳಿಕ 6ನೇ ಕ್ರಮಾಂಕದಲ್ಲಿ ಆಡುವುದಿಲ್ಲ ಎನ್ನಲಾರೆ. 4 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲೂ ಆಡಲು ಖುಷಿ ಇದೆ’ ಎಂದು ಧೋನಿ ಹೇಳಿದರು.

# ಚಾಹಲ್ ಏಕದಿನ ಕ್ರಿಕೆಟ್​ನಲ್ಲಿ ಭಾರತದ 6ನೇ ಅತ್ಯುತ್ತಮ ನಿರ್ವಹಣೆ ದಾಖಲಿಸಿದರು. ಕನ್ನಡಿಗ ಸ್ಟುವರ್ಟ್ ಬಿನ್ನಿ 2014ರಲ್ಲಿ ಬಾಂಗ್ಲಾದೇಶದಲ್ಲಿ 4ರನ್​ಗೆ 6 ವಿಕೆಟ್ ಕಬಳಿಸಿರುವುದು ಭಾರತೀಯರ ಸರ್ವಶ್ರೇಷ್ಠ ಬೌಲಿಂಗ್.

ಭಾರತೀಯ ಕ್ರಿಕೆಟ್​ನಲ್ಲಿ ಆಟದ ಮೇಲೆ ಧೋನಿ ಅವರಷ್ಟು ಬದ್ಧತೆ ಹೊಂದಿರುವ ಆಟಗಾರ ಬೇರೆ ಯಾರೂ ಇಲ್ಲ. ಅವರು ಹಲವು ಸಮಯದ ನಂತರ ಆಟಕ್ಕಿಳಿದರೂ, ಲಯಬದ್ಧವಾಗಿ ಆಡಿರುವುದು ಗಮನಾರ್ಹ.

| ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ