ಭಾರತ-ಆಸ್ಟ್ರೇಲಿಯಾ 2 ನೇ ಟೆಸ್ಟ್​: ಭಾರತದ ಗೆಲುವಿಗೆ 287 ರನ್​ ಗುರಿ ನೀಡಿದ ಆಸಿಸ್​

ಪರ್ತ್: ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ನಡುವಿನ ಎರಡನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಾಟದ ಎರಡನೇ ಇನ್ನಿಂಗ್ಸ್​ನಲ್ಲಿ ಸರ್ವಪತನಕಂಡ ಆಸಿಸ್​ ಪಡೆ ಟೀಂ ಇಂಡಿಯಾ ಗೆಲುವಿಗೆ 287 ರನ್​ ಗುರಿ ನೀಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ ಪಡೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 326 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ್ದ ಟೀಂ ಇಂಡಿಯಾ 283 ರನ್​ಗೆ ಸರ್ವಪತನ ಕಂಡಿತ್ತು. 43 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆಸಿಸ್​ ಪಡೆ ನಾಲ್ಕನೇ ದಿನದ ಭೋಜನ ವಿರಾಮ ನಂತರ ತನ್ನೆಲ್ಲ ವಿಕೆಟ್​ ಕಳೆದುಕೊಂಡು 243 ರನ್​ ಕಲೆಹಾಕಿತು. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ 287 ರನ್​ ಗುರಿ ನೀಡಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ಆಸಿಸ್​​ ಪರ ಮಾರ್ಕಸ್​ ಹ್ಯಾರಿಸ್​(20), ಆ್ಯರನ್​ ಫಿಂಚ್​(25), ಟೀಮ್​ ಪೈನೆ(37), ಟ್ರಾವಿಸ್​ ಹೆಡ್​(19), ಜೋಶ್​ ಹೆಜಾಲ್​ವುಡ್​​(17*) ಹಾಗೂ ಉಸ್ಮನ್​ ಖವಾಜ(72) ರನ್​ ಕಾಣಿಕೆ ನೀಡಿದರು. ಭೋಜನ ವಿರಾಮಕ್ಕಿಂತ ಮೊದಲು ಪೈನ್ ಮತ್ತು ಖವಾಜಾ ಭಾರತಕ್ಕೆ ಕಾಡಿದರು. ಆದರೆ, ಭೋಜನ ವಿರಾಮದ ನಂತರ ಮಹಮ್ಮದ್ ಶಮಿ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಪಡೆದು ವಿಕೆಟ್ ಪತನಕ್ಕೆ ಮುನ್ನುಡಿ ಬರೆದರು.

ಮಹಮ್ಮದ್​ ಶಮಿ ಆರು ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು. ಬೂಮ್ರಾ 3 ವಿಕೆಟ್ ಪಡೆದು ಮಿಂಚಿದರು. ಸದ್ಯದ ಮಾಹಿತಿ ಪ್ರಕಾರ ಗುರಿಯನ್ನು ಬೆನ್ನತ್ತಿರುವ ಭಾರತ 2 ವಿಕೆಟ್​ ನಷ್ಟಕ್ಕೆ 22 ರನ್​ ಗಳಿಸಿದೆ. ನಾಯಕ ವಿರಾಟ್​​ ಕೊಹ್ಲಿ ಹಾಗೂ ಮುರಳಿ ವಿಜಯ ಕ್ರೀಸ್​ನಲ್ಲಿದ್ದಾರೆ. (ಏಜೆನ್ಸೀಸ್​)

ಕಿಂಗ್ ಕೊಹ್ಲಿ ದಾಖಲೆ ಶತಕ