ಸ್ಮಿತ್​, ವಾರ್ನರ್​ಗೆ ಮತ್ತೊಂದು ಅವಕಾಶ ನೀಡಿ: ಆಸಿಸ್​ ನಾಯಕನಿಂದ ಸಾರ್ವಜನಿಕರಲ್ಲಿ ಮನವಿ

ಮೆಲ್ಬೋರ್ನ್​: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್​ ಸ್ಮಿತ್​ ಹಾಗೂ ಉಪನಾಯಕ ಡೇವಿಡ್​ ವಾರ್ನರ್​ ಅವರಿಗೆ ಮತ್ತೊಂದು ಅವಕಾಶ ನೀಡುವಂತೆ ಹಾಲಿ ನಾಯಕ ಟೀಮ್​ ಪೈನೆ ಸಾರ್ವಜನಿಕರ ಬಳಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ನಡೆದ ಚೆಂಡು ವಿರೂಪ ಪ್ರಕರಣ ಭಾರಿ ವಿವಾದವನ್ನು ಹುಟ್ಟುಹಾಕಿತ್ತು. ಇದು ನಾಯಕ ಹಾಗೂ ಉಪನಾಯಕರ ತಲೆದಂಡಕ್ಕೂ ಕಾರಣವಾಗಿತ್ತು.

ಪ್ರಮುಖ ಆಟಗಾರರಿಬ್ಬರ ಅನುಪಸ್ಥಿತಿಯಲ್ಲಿ ಕಂಗಾಲಾಗಿರುವ ಆಸಿಸ್​ ಪಡೆ ಗೆಲುವಿಗಾಗಿ ಪ್ರತಿ ಬಾರಿ ಹೋರಾಟ ನಡೆಸುವಂತಾಗಿದೆ. ಹೀಗಾಗಿ ಅವರಿಬ್ಬರು ತಂಡವನ್ನು ಸೇರಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಈ ವರ್ಷದ ಮಾರ್ಚ್​ ಅಂತ್ಯದ ವೇಳೆಗೆ ಸ್ಮಿತ್​ ಮತ್ತು ವಾರ್ನರ್​ ಮರಳಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಆದರೆ, ಚೆಂಡು ವಿರೂಪ ಪ್ರಕರಣದ ನಂತರ ಆಸ್ಟ್ರೇಲಿಯಾದ ಕ್ರೀಡಾಭಿಮಾನಿಗಳು ತಮ್ಮ ಆಟಗಾರರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ವಿಶ್ವ ಮಟ್ಟದಲ್ಲಿ ದೇಶ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದರು. ಹೀಗಾಗಿ ನಾಯಕ ಟೀಮ್​ ಪೈನೆ ಇನ್ನೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪೈನೆ ಆಸ್ಟ್ರೇಲಿಯಾದ ಜನರು ಅವರನ್ನು ಮುಕ್ತವಾಗಿ ಸ್ವಾಗತಿಸಿ, ಮತ್ತೊಂದು ಅವಕಾಶ ನೀಡುತ್ತಾರೆ. ಇತರೆ ಆಟಗಾರರಂತೆಯೇ ಅವರನ್ನು ನೋಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ಪ್ರವಾಸಿ ಭಾರತ ವಿರುದ್ಧ ಕೊನೆಯ ಟೆಸ್ಟ್​ ಪಂದ್ಯದ ವೇಳೆ ಹೇಳಿದ್ದರು. (ಏಜೆನ್ಸೀಸ್​)