ಮೆಲ್ಬೋರ್ನ್​ನಲ್ಲಿ ಮನಸೆಳೆದ ಮಯಾಂಕ್

ಮೆಲ್ಬೋರ್ನ್: ಫ್ಲ್ಯಾಟ್ ಪಿಚ್​ನಲ್ಲಿ ಟಾಸ್ ಗೆದ್ದ ಅದೃಷ್ಟದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಾಷ್ಟ್ರೀಯ ತಂಡದ ಪರ ಆಡುವ ಬಹುದಿನದ ಕನಸನ್ನು ನನಸು ಮಾಡಿಕೊಂಡ ಕರ್ನಾಟಕದ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್, ಪದಾರ್ಪಣೆಯ ಇನಿಂಗ್ಸ್​ನಲ್ಲಿಯೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗಮನಸೆಳೆದರು. ಅದರೊಂದಿಗೆ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿಯ ತಾಳ್ಮೆಯ ಬ್ಯಾಟಿಂಗ್ ಭಾರತದ ಇನಿಂಗ್ಸ್​ಗೆ ಬಲ ತುಂಬಿದೆ.

ಐತಿಹಾಸಿಕ ಎಂಸಿಜಿಯಲ್ಲಿ ಬುಧವಾರ ಆರಂಭಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 3ನೇ ಪಂದ್ಯದ ಮೊದಲ ದಿನದಾಟದಲ್ಲಿ ಜಿಗುಟಿನ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, 89 ಓವರ್​ಗಳನ್ನು ಎದುರಿಸಿದರೂ, 2.42ರ ಸರಾಸರಿಯಲ್ಲಿ 2 ವಿಕೆಟ್​ಗೆ 215 ರನ್ ಕಲೆಹಾಕಿದೆ. ಆಸ್ಟ್ರೇಲಿಯಾದ ಬೌಲರ್​ಗಳು ಭಾರತದ ರನ್​ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರೂ, ವಿಕೆಟ್ ಉರುಳಿಸಲು ಮಾತ್ರ ತೀವ್ರ ಪ್ರಯಾಸಪಟ್ಟರು. ಚೇತೇಶ್ವರ ಪೂಜಾರ (68ರನ್, 200 ಎಸೆತ, 6 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (47ರನ್, 107 ಎಸೆತ, 6 ಬೌಂಡರಿ) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹನುಮ ವಿಹಾರಿ ಜತೆಗೂಡಿ ಪದಾರ್ಪಣೆ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ (76ರನ್, 161 ಎಸೆತ, 8 ಬೌಂಡರಿ, 1 ಸಿಕ್ಸರ್) ಆಸೀಸ್ ಬೌಲರ್​ಗಳನ್ನು ಎದುರಿಸಿ ಅರ್ಧಶತಕ ಸಿಡಿಸಿದರು. ಆಸ್ಟ್ರೇಲಿಯಾದಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ ಇನಿಂಗ್ಸ್ ನಲ್ಲಿಯೇ ಗರಿಷ್ಠ ರನ್ ಪೇರಿಸಿದ 71 ವರ್ಷಗಳ ಹಿಂದಿನ ದಾಖಲೆಯನ್ನು ಮಯಾಂಕ್ ಮುರಿದರು. 1947ರಲ್ಲಿ ದತ್ತ ಫಾಡ್ಕರ್ ಸಿಡ್ನಿ ಮೈದಾನದಲ್ಲಿ 51 ರನ್ ಬಾರಿಸಿದ್ದು ಹಿಂದಿನ ದಾಖಲೆಯಾಗಿತ್ತು. ಹಾಲಿ ಸರಣಿಯಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಎಂಬ ಹೆಗ್ಗಳಿಕೆಯೂ ಮಯಾಂಕ್ ಅವರದಾಯಿತು.ಇಡೀ ದಿನದಲ್ಲಿ ಉರುಳಿದ ಎರಡೂ ವಿಕೆಟ್​ಗಳನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ಶಾರ್ಟ್​ಬಾಲ್ ಎಸೆತಗಳ ಮೂಲಕ ಪಡೆದುಕೊಂಡರು. ಕೆಳ ಕ್ರಮಾಂಕದ ಬ್ಯಾಟಿಂಗ್​ನಿಂದ ಬಡ್ತಿ ಪಡೆದು ಆರಂಭಿಕನಾಗಿ ಆಡಿದ ಹನುಮ ವಿಹಾರಿ 66 ಎಸೆತಗಳಲ್ಲಿ 8 ರನ್ ಬಾರಿಸಿ ಔಟಾದರು.

ಟೆಸ್ಟ್​ನ ಮೊದಲ ಅವಧಿಯ ಆಟದ 113ನೇ ಎಸೆತದಲ್ಲಿ ಆಸೀಸ್ ಮೊದಲ ಯಶ ಕಂಡಿತು. ಆಸೀಸ್​ನ ಅಗ್ರ ಸ್ಪಿನ್ನರ್ ನಾಥನ್ ಲ್ಯಾನ್ ಎಸೆತದಲ್ಲಿ ಮನಮೋಹಕ ಸಿಕ್ಸರ್ ಹಾಗೂ ಮೈದಾನದ ಎಲ್ಲ ಕಡೆ ಬಾರಿಸಿದ ಬೌಂಡರಿಗಳೊಂದಿಗೆ 160 ಎಸೆತಗಳನ್ನು ವಿಶ್ವಾಸದಿಂದ ಎದುರಿಸಿದ್ದ ಮಯಾಂಕ್ ಅಗರ್ವಾಲ್, ದಿನದ 55ನೇ ಓವರ್​ನಲ್ಲಿ ಔಟಾದರು. ಹೆಚ್ಚಿನ ಪುಟಿತ ಕಂಡು ತಮ್ಮತ್ತ ಬರುತ್ತಿದ್ದ ಕಮ್ಮಿನ್ಸ್​ರ ಎಸೆತಗಳನ್ನು ಎದುರಿಸುವಲ್ಲಿ ತೊಂದರೆ ಕಾಣುತ್ತಿದ್ದ ಮಯಾಂಕ್, ತಂಡದ ಮೊತ್ತ 123ರನ್ ಆಗಿದ್ದಾಗ ವಿಕೆಟ್ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದರು.

ಮೆಲ್ಬೋರ್ನ್​ನ ಡ್ರಾಪ್ ಇನ್ ಪಿಚ್​ನಲ್ಲಿ ಸರಿಯಾದ ಲೆಂತ್ ಕಂಡುಕೊಳ್ಳಲು ಆಸೀಸ್​ನ ಬೌಲರ್​ಗಳು ಪರದಾಡಿದರೆ, ಭಾರತದ ನೂತನ ಆರಂಭಿಕ ಜೋಡಿ ಹೊಸ ಚೆಂಡನ್ನು ಉತ್ತಮವಾಗಿ ಎದುರಿಸಿತು. ಶಾಟ್​ಗಳ ಆಯ್ಕೆಯಲ್ಲಿ ಎಚ್ಚರಿಕೆಯಿಂದ ಇದ್ದ ಹನುಮ ವಿಹಾರಿ ತಾವು ಎದುರಿಸಿದ 25ನೇ ಎಸೆತದಲ್ಲಿ ಮೊದಲ ರನ್ ಬಾರಿಸಿದರು. ಇನ್ನೊಂದೆಡೆ ಮಯಾಂಕ್, ಆಕರ್ಷಕ ಡ್ರೖೆವ್​ಗಳ ಮೂಲಕ ಕೆಲ ಬೌಂಡರಿಗಳನ್ನು ಸಿಡಿಸಿ ಮೊದಲ ವಿಕೆಟ್​ಗೆ 40 ರನ್ ಜತೆಯಾಟವಾಡಿದರು. ಕಮ್ಮಿನ್ಸ್ ಎಸೆತದಲ್ಲಿ ಒಮ್ಮೆ ಹೆಲ್ಮೆಟ್​ಗೆ ಪೆಟ್ಟು ತಿಂದಿದ್ದ ಹನುಮ, ಆ ಬಳಿಕ ಮುಖದತ್ತ ಬಂದ ಚೆಂಡನ್ನು ತಪ್ಪಿಸಿಕೊಳ್ಳುವಲ್ಲಿ ಎಡವಿದರು. ಅವರ ಗ್ಲೌಸ್​ಗೆ ತಾಕಿದ ಚೆಂಡು ಗಾಳಿಯಲ್ಲಿ ಹಾರಿ ಸ್ಲಿಪ್​ನಲ್ಲಿದ್ದ ಆರನ್ ಫಿಂಚ್ ಕೈ ಸೇರಿತು. -ಪಿಟಿಐ/ಏಜೆನ್ಸೀಸ್

ಭಾರತದ ನೂತನ ಆರಂಭಿಕ ಜೋಡಿ 18.5 ಓವರ್​ಗಳ ಕಾಲ ಅಂದರೆ 113 ಎಸೆತಗಳ ಕಾಲ ಕ್ರೀಸ್​ನಲ್ಲಿತ್ತು. 2011ರ ಜುಲೈ ಬಳಿಕ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಹಾಗೂ ಹಾಗೂ ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಆರಂಭಿಕ ಜೋಡಿ ಎದುರಿಸಿದ ಗರಿಷ್ಠ ಎಸೆತಗಳು ಇದಾಗಿವೆ.

73 ಸಾವಿರ ಪ್ರೇಕ್ಷಕರು

ಬಾಕ್ಸಿಂಗ್ ಡೇ ಟೆಸ್ಟ್​ಗೆ ಎಂದಿಗೂ ಪ್ರೇಕ್ಷಕರ ಕೊರತೆ ಆಗಿದ್ದಿಲ್ಲ. ಭಾರತ-ಆಸೀಸ್​ನ ಪಂದ್ಯಕ್ಕೆ ಬುಧವಾರ ಒಟ್ಟು 73,516 ಪ್ರೇಕ್ಷಕರು ಹಾಜರಿದ್ದರು. ಇದು ಭಾರತ ತಂಡ ಭಾಗಿಯಾದ ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನದ ದಾಖಲೆಯ ಪ್ರೇಕ್ಷಕರು. ಇದಕ್ಕೂ ಮುನ್ನ 2011ರ ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನ 70, 068 ಪ್ರೇಕ್ಷಕರು ಹಾಜರಿದ್ದಿದ್ದು ದಾಖಲೆ ಎನಿಸಿತ್ತು. 2014ರಲ್ಲಿ 70 ಸಾವಿರ ಪ್ರೇಕ್ಷಕರು ಮೊದಲ ದಿನದ ಆಟ ನೋಡಿದ್ದರು.

ಹಾಲ್ ಆಫ್ ಫೇಮ್​ಗೆ ಪಾಂಟಿಂಗ್

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಬುಧವಾರ ಐಸಿಸಿ ಹಾಲ್ ಆಫ್ ಫೇಮ್ೆ ಅಧಿಕೃತವಾಗಿ ಸೇರ್ಪಡೆಗೊಳಿ ಸಲಾಯಿತು. ಈಗಾಗಲೆ ಈ ಗೌರವ ಪಡೆದಿರುವ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾಥ್ ಮೆಲ್ಬೋರ್ನ್ ಟೆಸ್ಟ್ ವೇಳೆ, ಹಾಲ್ ಆಫ್ ಫೇಮ್ ಸ್ಮರಣಾರ್ಥ ಕ್ಯಾಪ್​ಅನ್ನು ಪಾಂಟಿಂಗ್​ಗೆ ವಿತರಿಸಿದರು. ಪಾಂಟಿಂಗ್ ಪತ್ನಿ ಮತ್ತು ಮಕ್ಕಳು ಹಾಜರಿದ್ದರು.

ಟಾಸ್​ಗೆ ಬಂದ ಆರ್ಚಿ ಶೀಲರ್!

ಆಸ್ಟ್ರೇಲಿಯಾ ತಂಡದ ಸಹ-ನಾಯಕನಾಗಿರುವ 7 ವರ್ಷದ ಬೌಲರ್ ಆರ್ಚಿ ಶೀಲರ್, ಟಾಸ್ ವೇಳೆ ಹಾಜರಿದ್ದರು. ಆಸೀಸ್ ತಂಡದ ಬ್ಲೇಜರ್ ಧರಿಸಿ, ಟಿಮ್ ಪೇನ್ ಜತೆ ಟಾಸ್​ಗೆ ಬಂದ ಆರ್ಚಿ, ಟಾಸ್​ನ ಬಳಿಕ ಪ್ಲೇಯಿಂಗ್ ಇಲೆವೆನ್​ನ ಪಟ್ಟಿಯನ್ನು ವಿರಾಟ್ ಕೊಹ್ಲಿಗೆ ನೀಡಿದರು. ಅದಲ್ಲದೆ, ಇಡೀ ದಿನ ಆಸೀಸ್ ಆಟಗಾರರೊಂದಿಗೆ ಡ್ರೆಸಿಂಗ್ ರೂಮ್ ಭಾಗವಾಗಿ ಆರ್ಚಿ ಶೀಲರ್ ಇದ್ದರು. ಹೃದಯ ಸಮಸ್ಯೆಗೆ ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆರ್ಚಿ, ಕನಸಿನಂತೆ ಆಸೀಸ್ ತಂಡದಲ್ಲಿ ಗೌರವ ಸ್ಥಾನ ಕಲ್ಪಿಸಲಾಗಿದೆ.

ಪೂಜಾರಗೆ ಕೊಹ್ಲಿ ಸಾಥ್

ಮಯಾಂಕ್ ಅಗರ್ವಾಲ್​ಗೆ ಕ್ರೀಸ್​ನಲ್ಲಿ 2ನೇ ವಿಕೆಟ್​ಗೆ ಜತೆಯಾದ ಚೇತೇಶ್ವರ ಪೂಜಾರ, 83 ರನ್ ಸೇರಿಸಿದರು. ಯುವ ಆಟಗಾರನಿಗೆ ಕೆಲ ಸಲಹೆಗಳನ್ನು ನೀಡುತ್ತಲೇ ಪೂಜಾರ ಇನಿಂಗ್ಸ್ ವಿಸ್ತರಿಸಿದರು. ಲ್ಯಾನ್ ಎಸೆತದಲ್ಲಿ ಡ್ರೖೆವ್ ಮಾಡುವ ಮೂಲಕ 95ನೇ ಎಸೆತದಲ್ಲಿ ಮಯಾಂಕ್ ಅರ್ಧಶತಕ ಪೂರೈಸಿದರು. ಲ್ಯಾನ್​ರ ಎಸೆತಗಳನ್ನು ಮಯಾಂಕ್ ಉತ್ತಮವಾಗಿ ಎದುರಿಸುತ್ತಿದ್ದರೆ, ಇನ್ನೊಂದೆಡೆ ಪೂಜಾರ ಕೂಡ ತಡೆಗೋಡೆಯಂತೆ ನಿಂತು ಸಾಥ್ ನೀಡಿದರು. ಚಹಾ ವಿರಾಮಕ್ಕೂ ಮುನ್ನ 2ನೇ ವಿಕೆಟ್ ಕಳೆದುಕೊಂಡ ಭಾರತಕ್ಕೆ ಆ ಬಳಿಕ ಕೊಹ್ಲಿ ಆಧಾರವಾದರು. ಔಟ್​ಸೈಡ್ ಆಫ್​ಸ್ಟಂಪ್​ನತ್ತ ಕೊಹ್ಲಿಗೆ ಚೆಂಡನ್ನು ಎಸೆಯುವ ತಂತ್ರ ಆಸೀಸ್​ಗೆ ಫಲ ನೀಡಲಿಲ್ಲ. ಕೊಹ್ಲಿ ಸರಾಗವಾಗಿ ಬೌಂಡರಿ ಬಾರಿಸುವಲ್ಲಿ ಯಶಸ್ವಿಯಾದರೆ, ಪೂಜಾರ ಕೂಡ ರನ್ ಗತಿಯನ್ನು ಏರಿಸಲು ನೆರವಾದರು. ಹೊಸ ಚೆಂಡು ಸಿಕ್ಕ ಬಳಿಕ ಮಿಚೆಲ್ ಸ್ಟಾರ್ಕ್ ಭರ್ಜರಿ ದಾಳಿ ನಡೆಸಿದರು. ಕೊಹ್ಲಿ 47 ರನ್ ಬಾರಿಸಿದ್ದ ವೇಳೆ ಸ್ಟಾರ್ಕ್ ಎಸೆತದಲ್ಲಿ ಟಿಮ್ ಪೇನ್ ಕ್ಯಾಚ್ ಕೈಚೆಲ್ಲಿದರು. ಮುರಿಯದ 3ನೇ ವಿಕೆಟ್​ಗೆ ಈ ಜೋಡಿ 92 ರನ್ ಜತೆಯಾಟವಾಡಿದೆ. 1977-78ರಲ್ಲಿ ಸುನೀಲ್ ಗಾವಸ್ಕರ್ ಬಳಿಕ ಆಸೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ 3 ಹಾಗೂ ಅದಕ್ಕಿಂತ ಹೆಚ್ಚಿನ ಬಾರಿ ಇನಿಂಗ್ಸ್​ನಲ್ಲಿ 200ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ ಕೇವಲ 2ನೇ ಆಟಗಾರ ಎನ್ನುವ ಶ್ರೇಯಕ್ಕೆ ಪೂಜಾರ ಪಾತ್ರರಾಗಿದ್ದಾರೆ.

ಮಯಾಂಕ್​ಗೆ ವಿಶ್ಲೇಷಕ ಅವಮಾನ!

ಪಂದ್ಯದ ವೇಳೆ ಫಾಕ್ಸ್ ಸ್ಪೋರ್ಟ್ಸ್ ವಾಹಿನಿಯ ವಿಶ್ಲೇಷಕ ಹಾಗೂ ಮಾಜಿ ಆಟಗಾರ ಕೆರ್ರಿ ಒಕ್​ಫೀ, ಭಾರತದ ದೇಶೀಯ ತಂಡಗಳು ‘ಕ್ಯಾಂಟೀನ್ ಇಲೆವೆನ್’ ಎಂದು ಹೇಳುವ ಮೂಲಕ ದೇಶದ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗೆ ಅವಮಾನಿಸಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಮಯಾಂಕ್ ಆಟವನ್ನು ಮಾರ್ಕ್ ವಾ, ಶೇನ್ ವಾರ್ನ್ ಜತೆ ವಿಶ್ಲೇಷಣೆ ಮಾಡುತ್ತಿದ್ದ ಕೆರ್ರಿ, ದೇಶೀಯ ಕ್ರಿಕೆಟ್​ನಲ್ಲಿ ಮಯಾಂಕ್ ನಿರ್ವಹಣೆ ಹಾಗೂ ಅವರು ಬಾರಿಸಿದ ತ್ರಿಶತಕವನ್ನು ಅವಮಾನಿಸುವಂಥ ಮಾತುಗಳನ್ನು ಆಡಿದ್ದಾರೆ. ‘ರಣಜಿಯಲ್ಲಿ ಮಯಾಂಕ್ ತ್ರಿಶತಕ (ರೈಲ್ವೇಸ್ ವಿರುದ್ಧ) ಬಾರಿಸಿದ್ದಾರೆ. ಆದರೆ, ಇದು ರೈಲ್ವೇಸ್​ನ ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ಬಂದಿದ್ದು. ಅಲ್ಲಿನ ಬೌಲರ್​ಗಳು ಚೆಫ್ ಹಾಗೂ ವೇಟರ್​ಗಳು’ ಎಂದು ಅವರು ಹೇಳಿದ್ದಾರೆ. ಬಳಿಕ ಮಯಾಂಕ್ ದೇಶೀಯ ಕ್ರಿಕೆಟ್​ನಲ್ಲಿ 50ಕ್ಕೂ ಅಧಿಕ ಸರಾಸರಿ ಹೊಂದಿರುವ ಬಗ್ಗೆ ಮಾತನಾಡಿದ ಮಾರ್ಕ್ ವಾ, ‘ಭಾರತದಲ್ಲಿ ಅವರ 50ಕ್ಕೂ ಅಧಿಕ ಸರಾಸರಿ ಆಸೀಸ್​ನ 40ರ ಸರಾಸರಿಗೆ ಸಮ’ ಎನ್ನುವ ಮೂಲಕ ಭಾರತದ ದೇಶೀಯ ಕ್ರಿಕೆಟ್​ಅನ್ನು ಅವಮಾನಿಸಿದ್ದಾರೆ.

ಜೀವಮಾನವಿಡೀ ನೆನಪಿಟ್ಟುಕೊಳ್ಳುತ್ತೇನೆ

ಮೆಲ್ಬೋರ್ನ್: ಕಳೆದೊಂದು ವರ್ಷದಿಂದ ರಾಷ್ಟ್ರೀಯ ತಂಡದ ಪರ ಆಡುವ ಕನಸು ನಿಜವಾದ ಸಂಭ್ರಮ ಮಯಾಂಕ್ ಅಗರ್ವಾಲ್​ರ ಮುಖದಲ್ಲಿತ್ತು. ಮೊದಲ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಭ್ರಮದಿಂದಲೇ ಮಾತನಾಡಿದ ಕರ್ನಾಟಕದ ಆಟಗಾರ, ‘ಭಾವನೆಗಳನ್ನು ಹಿಡಿದಿಟ್ಟುಕೊಂಡು, ಆಟದತ್ತ ಗಮನ ನೀಡುವುದು ಸುಲಭವಾಗಿರಲಿಲ್ಲ’ ಎಂದು ಹೇಳಿದ್ದಾರೆ. ಭಾರತ ಟೆಸ್ಟ್ ತಂಡದ ಕ್ಯಾಪ್ ಪಡೆದಿದ್ದು ಅವಿಸ್ಮರಣೀಯ ಕ್ಷಣ. ಈ ವೇಳೆ ತಲೆಯಲ್ಲಿ ಸಾಕಷ್ಟು ಸಂಭ್ರಮದ ಅಂಶಗಳು ಓಡಾಡುತ್ತಿದ್ದವು. ಈ ಸಂಭ್ರಮವನ್ನು ನನ್ನ ಜೀವಮಾನವಿಡೀ ನೆನಪಿಸಿಕೊಳ್ಳುತ್ತೇನೆ. ಭಾರತ ತಂಡ ಎಂದಾಗ ನನಗೆ 295 ನಂಬರ್ (ಟೆಸ್ಟ್ ಕ್ಯಾಪ್ ನಂಬರ್) ನೆನಪಾಗುತ್ತದೆ ಎಂದು ಹೇಳಿದರು. ಆಟದತ್ತ ಗಮನ ನೀಡುವುದು ಬಹಳ ಮುಖ್ಯವಾಗಿತ್ತು. ನನ್ನ ಎಂದಿನ ಆಟಕ್ಕೆ ಬದ್ಧವಾಗಿ ಆಡಬೇಕು ಎನ್ನುವುದರತ್ತ ಮಾತ್ರವೇ ಲಕ್ಷ್ಯವಹಿಸಿದ್ದೆ. ಅಂತಾರಾಷ್ಟ್ರೀಯ ಜೀವನವನ್ನು ಅರ್ಧಶತಕದೊಂದಿಗೆ ಆರಂಭಿಸಿದ್ದಕ್ಕೆ ಖುಷಿ ಇದೆ ಎಂದು ತಿಳಿಸಿದ್ದಾರೆ. ಟೆಸ್ಟ್​ನ ಪದಾರ್ಪಣೆಯ ಇನಿಂಗ್ಸ್​ನಲ್ಲಿಯೇ ಅರ್ಧಶತಕ ಬಾರಿಸಿದ ಭಾರತದ 7ನೇ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್. ‘ಇನ್ನಷ್ಟು ಹೆಚ್ಚಿನ ರನ್ ಬಾರಿಸಬೇಕಿತ್ತು. 76 ರನ್ ಉತ್ತಮ ಮೊತ್ತ. ಆದರೆ, ಇಡೀ ದಿನ ಬ್ಯಾಟಿಂಗ್ ಮಾಡಿ ಅಜೇಯವಾಗಿರುವ ಬಯಕೆ ಇತ್ತು’ ಎಂದರು.

ಮಯಾಂಕ್-ಹನುಮ ದಾಖಲೆ: ಮಯಾಂಕ್-ಹನುಮ ವಿಹಾರಿ ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಬಾರಿ ಆರಂಭಿಕರಾಗಿ ಆಡಿದರು. ಭಾರತ ಪರ ಒಂದೇ ಪಂದ್ಯದಲ್ಲಿ ಇಬ್ಬರು ಹೊಸ ಆರಂಭಿಕರು ಕಣಕ್ಕಿಳಿದಿದ್ದು ಇದು ಕೇವಲ 3ನೇ ಬಾರಿಯಾಗಿದೆ.