ಐತಿಹಾಸಿಕ ವಿಜಯಕ್ಕೆ ಎರಡು ವಿಕೆಟ್ ಬಾಕಿ

ಮೆಲ್ಬೋರ್ನ್: ಮೊಟ್ಟಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲುವ ಐತಿಹಾಸಿಕ ಸಾಧನೆಯಿಂದ ಭಾರತ ತಂಡ ಎರಡು ವಿಕೆಟ್ ದೂರದಲ್ಲಿ ನಿಂತಿದೆ. ಸತತ ನಾಲ್ಕನೇ ದಿನ ಭಾರತದ ಆಟಕ್ಕೆ ಅಡ್ಡಿಯಾಗಿ ನಿಂತ ಪ್ಯಾಟ್ ಕಮ್ಮಿನ್ಸ್ ಅರ್ಧಶತಕ ಬಾರಿಸುವ ಮೂಲಕ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಮುನ್ನಡೆ ಪಡೆಯುವ ಕ್ಷಣವನ್ನು ಭಾನುವಾರಕ್ಕೆ ವಿಸ್ತರಿಸಿದ್ದಾರೆ. ಐದನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಶೇ.80ರಷ್ಟಿದ್ದು, ಅದರ ನಡುವೆಯೂ ಗೆಲುವಿನ ದೊಡ್ಡ ವಿಶ್ವಾಸದಲ್ಲಿ ಭಾರತ ತಂಡವಿದೆ.

ಮೆಲ್ಬೋರ್ನ್​ನಲ್ಲಿ ಭಾರತ ಈವರೆಗೂ ಎರಡು ಟೆಸ್ಟ್ ಗೆದ್ದಿದ್ದರೂ, ಅದು ಬಾಕ್ಸಿಂಗ್ ಡೇ ಪಂದ್ಯವಾಗಿರಲಿಲ್ಲ. 1981ರಲ್ಲಿ ಕೊನೆಯ ಬಾರಿಗೆ ಸುನೀಲ್ ಗಾವಸ್ಕರ್ ನೇತೃತ್ವದಲ್ಲಿ ತಂಡ ಜಯ ಸಾಧಿಸಿತ್ತು.

5 ವಿಕೆಟ್​ಗೆ 54 ರನ್​ಗಳಿಂದ 4ನೇ ದಿನವಾದ ಶನಿವಾರದ ಆಟ ಮುಂದುವರಿಸಿದ ಭಾರತ ತಂಡ, 2ನೇ ಇನಿಂಗ್ಸ್​ನಲ್ಲಿ 8 ವಿಕೆಟ್​ಗೆ 106 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 399 ರನ್​ಗಳ ಸವಾಲು ಪಡೆದ ಆಸ್ಟ್ರೇಲಿಯಾ, 4ನೇ ದಿನದಾಟದ ಅಂತ್ಯಕ್ಕೆ 85 ಓವರ್​ಗಳಲ್ಲಿ 8 ವಿಕೆಟ್​ಗೆ 258 ರನ್ ಬಾರಿಸಿದ್ದು, ಇನ್ನೂ 141 ರನ್​ಗಳನ್ನು ಬಾರಿಸಬೇಕಿದೆ. ಭಾರತಕ್ಕೆ 2 ಇನಿಂಗ್ಸ್ ನಲ್ಲೂ ಬೌಲಿಂಗ್​ನಿಂದ ಕಾಡಿದ್ದ ಪ್ಯಾಟ್ ಕಮ್ಮಿನ್ಸ್ 103 ಎಸೆತಗಳಲ್ಲಿ 61 ರನ್ ಬಾರಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ಅವರೊಂದಿಗೆ ನಾಥನ್ ಲ್ಯಾನ್ ಕ್ರೀಸ್​ನಲ್ಲಿ ಇದ್ದಾರೆ. ಬೃಹತ್ ಮೊತ್ತದ ಗುರಿಯನ್ನು ನೀಡಿದ ಭಾರತ ತಂಡ, ರವೀಂದ್ರ ಜಡೇಜಾ (82ಕ್ಕೆ 3), ಜಸ್​ಪ್ರೀತ್ ಬುಮ್ರಾ (53ಕ್ಕೆ 2), ಮೊಹಮದ್ ಶಮಿ (71ಕ್ಕೆ 2) ಹಾಗೂ ಇಶಾಂತ್ ಶರ್ಮ (37ಕ್ಕೆ 1) ಸಂಘಟಿತ ಪ್ರಯತ್ನದಿಂದ 8 ವಿಕೆಟ್ ಉರುಳಿಸಲು ಯಶಸ್ವಿಯಾಯಿತು. ದಿನದಾಟವನ್ನು ಕೆಲ ಓವರ್​ಗಳವರೆಗೆ ವಿಸ್ತರಿಸಲಾಯಿತಾದರೂ, ಕೊನೇ ಎರಡು ವಿಕೆಟ್​ಗಳನ್ನು ಪಡೆಯಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಇದಕ್ಕೂ ಮುನ್ನ ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆ ತೋರಿದ ಪ್ಯಾಟ್ ಕಮ್ಮಿನ್ಸ್ 27 ರನ್​ಗೆ 6 ವಿಕೆಟ್ ಉರುಳಿಸಿದರು. ಆ ಬಳಿಕ ಬ್ಯಾಟಿಂಗ್​ನಲ್ಲೂ ಮಿಂಚಿದ ಕಮ್ಮಿನ್ಸ್, ಆಸೀಸ್​ನ ಅಗ್ರ ಕ್ರಮಾಂಕದ ವೈಫಲ್ಯದ ಬಳಿಕ ಜೀವನಶ್ರೇಷ್ಠ ಮೊತ್ತವನ್ನೂ ಬಾರಿಸಿದರು.

ಕೆಟ್ಟ ಆರಂಭ ಪಡೆದ ಆಸೀಸ್: ಸೋಲು ತಪ್ಪಿಸಿಕೊಳ್ಳುವ ಆಸೀಸ್​ನ ಹೋರಾಟ ಕೆಟ್ಟ ಆರಂಭ ಪಡೆಯಿತು. ಬುಮ್ರಾ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ಆರನ್ ಫಿಂಚ್ (3) 2ನೇ ಸ್ಲಿಪ್​ನಲ್ಲಿದ್ದ ಕೊಹ್ಲಿಗೆ ಕ್ಯಾಚ್ ನೀಡಿ ಹೊರನಡೆದರು. ಫಿಂಚ್​ರ ಜತೆಗಾರ ಮಾರ್ಕಸ್ ಹ್ಯಾರಿಸ್ (13) ವೇಗದ ಬೌಲರ್​ಗಳ ಅಪಾಯವನ್ನು ಉತ್ತಮವಾಗಿ ಎದುರಿಸಿದರೂ, ರವೀಂದ್ರ ಜಡೇಜಾ ಎಸೆತದಲ್ಲಿ ಶಾರ್ಟ್ ಲೆಗ್​ನಲ್ಲಿ ಕನ್ನಡಿಗ ಮಯಾಂಕ್​ಗೆ ಕ್ಯಾಚ್ ನೀಡಿ ಔಟಾದರು. ಜಡೇಜಾರ ಎಸೆತಗಳನ್ನು ಸುಲಭವಾಗಿ ಎದುರಿಸಿ ರಿವರ್ಸ್ ಸ್ವೀಪ್​ಗಳನ್ನು ಮಾಡುತ್ತಿದ್ದ ಉಸ್ಮಾನ್ ಖವಾಜ (33 ರನ್, 59 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಶಾನ್ ಮಾರ್ಷ್ (44ರನ್, 72 ಎಸೆತ, 4 ಬೌಂಡರಿ, 1 ಸಿಕ್ಸರ್) 3ನೇ ವಿಕೆಟ್​ಗೆ 30 ರನ್ ಜತೆಯಾಟವಾಡಿದರು. ಈ ವೇಳೆ ಶಮಿ ಎಸೆತದಲ್ಲಿ ಖವಾಜ, ಎಲ್​ಬಿಯಾಗಿ ಹೊರನಡೆದರು. ಆದರೆ, ಶಾನ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ (34ರನ್, 92 ಎಸೆತ, 2 ಬೌಂಡರಿ) ಕೆಲಹೊತ್ತು ಪ್ರತಿರೋಧ ನೀಡಿದರು. ಮಾರ್ಷ್ ಬುಮ್ರಾ ಎಸೆತದಲ್ಲಿ ಎಲ್​ಬಿಯಾಗುವ ಮುನ್ನ ಹೆಡ್ ಜತೆ 51 ರನ್ ಸೇರಿಸಿದರು. ಕೆಳಮಟ್ಟದಲ್ಲಿ ಬಂದ ಬುಮ್ರಾ ಎಸೆತ ಶಾನ್ ಮಾರ್ಷ್​ರ ಪ್ಯಾಡ್​ಗೆ ಬಡಿಯಿತು. ಅಂಪೈರ್ ತೀರ್ಪನ್ನು ಆಸೀಸ್ ಡಿಆರ್​ಎಸ್ ಮೂಲಕ ಪ್ರಶ್ನಿಸಿತಾದರೂ ಫಲ ಸಿಗಲಿಲ್ಲ. ಬಳಿಕ ಬಂದ ಶಾನ್​ರ ಸಹೋದರ ಮಿಚೆಲ್ ಮಾರ್ಷ್, ಜಡೇಜಾ ಎಸೆತದಲ್ಲಿ ಸಿಕ್ಸರ್ ಸಿಡಿಸಿದರೂ, ಚಹಾ ವಿರಾಮಕ್ಕೂ ಕೆಲವೇ ನಿಮಿಷ ಮುನ್ನ ಜಡೇಜಾ ಎಸೆತದಲ್ಲಿ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿ ಔಟಾದರು. -ಪಿಟಿಐ/ಏಜೆನ್ಸೀಸ್

ತಾತ್ಕಾಲಿಕ ನಾಯಕ ಎಂದು ಪೇನ್​ಗೆ ಪಂತ್ ತಿರುಗೇಟು!

ಆಸ್ಟ್ರೇಲಿಯಾದಲ್ಲಿ ಆಟದಲ್ಲಿ ಮಾತ್ರವಲ್ಲದೆ ಮಾತಿನ ಯುದ್ಧದಲ್ಲೂ ಭಾರತದ ಆಟಗಾರರು ಆತಿಥೇಯರ ವಿರುದ್ಧ ಗೆಲುವು ಸಾಧಿಸುತ್ತಿದ್ದಾರೆ. ಆಸೀಸ್ ನಾಯಕ ಟಿಮ್ ಪೇನ್​ಗೆ ರೋಹಿತ್ ಶರ್ಮ ತಿರುಗೇಟು ನೀಡಿದ ಬಳಿಕ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಕೂಡ ಇದೇ ರೀತಿ ಪೇನ್ ಬೆವರಿಳಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. 3ನೇ ದಿನದಾಟದಲ್ಲಿ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕೀಪರ್ ಪೇನ್, ‘ಏಕದಿನ ಸರಣಿಗೆ ಧೋನಿ ಬರುತ್ತಿದ್ದಾರೆ. ಹೀಗಾಗಿ ಟೆಸ್ಟ್ ಸರಣಿ ನಂತರ ಆಸ್ಟ್ರೇಲಿಯಾದಲ್ಲಿ ಹೋಬರ್ಟ್ ಪರ ಬಿಗ್​ಬಾಷ್ ಆಡು. ನಾನು ಪತ್ನಿ ಜತೆ ಸಿನಿಮಾಗೆ ಹೋದಾಗ ನನ್ನ ಮಕ್ಕಳನ್ನೂ ನೋಡಿಕೊಂಡಿರಬಹುದು‘ ಎಂದು ಜೋಕ್ ಮಾಡಿದ್ದರು. ನಾಲ್ಕನೇ ದಿನದಾಟದಲ್ಲಿ ಪೇನ್ ಬ್ಯಾಟಿಂಗ್​ಗೆ ಬಂದಾಗ ಪಂತ್, ‘ತಾತ್ಕಾಲಿಕ ನಾಯಕ’ ಎಂದು ತಿರುಗೇಟು ನೀಡಿದರು. ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್​ಗೆ ನಿಂತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್​ರನ್ನು ಉದ್ದೇಶಿಸಿ ಪಂತ್, ‘ನಾವಿಂದು ವಿಶೇಷ ಅತಿಥಿಯನ್ನು ಪಡೆದಿದ್ದೇವೆ. ಮಯಾಂಕ್, ನೀನು ಎಂದಾದರು ತಾತ್ಕಾಲಿಕ ನಾಯಕನ ಬಗ್ಗೆ ಕೇಳಿದ್ದೀಯಾ?’ ಎಂದರು. ಬಳಿಕ ಪೇನ್​ಗೆ ಬೌಲಿಂಗ್ ಮಾಡುತ್ತಿದ್ದ ಜಡೇಜಾರತ್ತ ತಿರುಗಿ, ‘ಇವನನ್ನು ಔಟ್ ಮಾಡಲು ಯಾವುದೇ ವಿಶೇಷ ಬೌಲಿಂಗ್ ಬೇಕಾಗಿಲ್ಲ. ಇವನಿಗೆ ಮಾತನಾಡುವುದಷ್ಟೇ ಗೊತ್ತಿದೆ. ಮಾತು, ಮಾತು ಅಷ್ಟು ಮಾತ್ರ’ ಎಂದರು. ಆಗ ಮಧ್ಯಪ್ರವೇಶ ಮಾಡಿದ ಅಂಪೈರ್ ಇಯಾನ್ ಗೌಲ್ಡ್, ಪಂತ್​ಗೆ ಎಚ್ಚರಿಕೆ ನೀಡಿದರು. ಆದರೆ, ಈ ಮುನ್ನ ರೋಹಿತ್, ಪಂತ್​ರನ್ನು ಕೆಣಕಿದ್ದಾಗ ಪೇನ್ ವಿರುದ್ಧ ಅಂಪೈರ್ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂಬುದು ಗಮನಾರ್ಹ.

ಪಟ್ಟು ಬಿಡದ ಪ್ಯಾಟ್ ಕಮ್ಮಿನ್ಸ್

ನಾಯಕ ಟಿಮ್ ಪೇನ್ ಜತೆಯಾಗಿ ಕೊನೆಯ ಅವಧಿಯಲ್ಲಿ ಭಾರತದ ಬೌಲರ್​ಗಳನ್ನು ಕಾಡಿದ ಪ್ಯಾಟ್ ಕಮ್ಮಿನ್ಸ್ (61*ರನ್, 103 ಎಸೆತ, 5 ಬೌಂಡರಿ, 1 ಸಿಕ್ಸರ್) ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಟ್ರಾವಿಡ್ ಹೆಡ್ ಹಾಗೂ ಪೇನ್ 6ನೇ ವಿಕೆಟ್​ಗೆ 22 ರನ್ ಸೇರಿಸಿದ್ದ ವೇಳೆ ಇಶಾಂತ್ ಎಸೆತದಲ್ಲಿ ಹೆಡ್ ಬೌಲ್ಡ್ ಆಗಿ ನಿರ್ಗಮಿಸಿದರು. ಪೇನ್ ಜತೆ 7ನೇ ವಿಕೆಟ್​ಗೆ 19 ರನ್ ಹಾಗೂ ಮಿಚೆಲ್ ಸ್ಟಾರ್ಕ್ ಜತೆ 8ನೇ ವಿಕೆಟ್​ಗೆ 39 ರನ್ ಜತೆಯಾಟವಾಡಿದ ಕಮ್ಮಿನ್ಸ್ ನಾಲ್ಕನೇ ದಿನವೇ ಭಾರತ ಗೆಲುವು ಪಡೆಯುವ ಅವಕಾಶವನ್ನು ಮುಂದೂಡಿದರು. ಪೇನ್ ಹಾಗೂ ಸ್ಟಾರ್ಕ್ ವಿಕೆಟ್ ಕಬಳಿಸಲು ಭಾರತ ಯಶಸ್ವಿಯಾದರೂ, ಕಮ್ಮಿನ್ಸ್​ಗೆ ಜತೆಯಾದ ನಾಥನ್ ಲ್ಯಾನ್ ದಿನದ ಕೊನೆಯ 14.5 ಓವರ್​ಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಪಂದ್ಯವನ್ನು 5ನೇ ದಿನಕ್ಕೆ ವಿಸ್ತರಿಸಿದರು.

ಗಮನಸೆಳೆದ ಕನ್ನಡಿಗ ಮಯಾಂಕ್ ಬ್ಯಾಟಿಂಗ್

ದಿನದ ಆರಂಭದಲ್ಲಿ 2ನೇ ಇನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಪ್ಯಾಟ್ ಕಮ್ಮಿನ್ಸ್ ಕಾಡಿದರು. ಮಯಾಂಕ್ ಅಗರ್ವಾಲ್ (42ರನ್, 102 ಎಸೆತ, 4 ಬೌಂಡರಿ, 2 ಸಿಕ್ಸರ್) ಮೊದಲ ಇನಿಂಗ್ಸ್​ನ ಮುಂದುವರಿದ ಆಟವನ್ನು ಆಡಿದರೆ, ರಿಷಭ್ ಪಂತ್ (33ರನ್, 43 ಎಸೆತ, 3 ಬೌಂಡರಿ, 1 ಸಿಕ್ಸರ್) ಉತ್ತಮ ಸಾಥ್ ನೀಡಿದರು. ಮೊದಲ ಇನಿಂಗ್ಸ್​ನಲ್ಲಿ 76 ರನ್ ಬಾರಿಸಿದ್ದ ಮಯಾಂಕ್, ನಾಥನ್ ಲ್ಯಾನ್​ರ ಒಂದೇ ಓವರ್​ನಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಗಮನಸೆಳೆದರು. ಪದಾರ್ಪಣೆ ಪಂದ್ಯದಲ್ಲಿಯೇ 2ನೇ ಅರ್ಧಶತಕ ಬಾರಿಸುವ ಸಾಧನೆಯಿಂದ 8 ರನ್ ದೂರವಿದ್ದ ವೇಳೆ, ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಬೌಲ್ಡ್ ಆದರು. ಅದರೊಂದಿಗೆ ಕಮ್ಮಿನ್ಸ್ 5 ವಿಕೆಟ್ ಪೂರ್ತಿ ಮಾಡಿದರು. ಆ ಬಳಿಕ ರವೀಂದ್ರ ಜಡೇಜಾರ ವಿಕೆಟ್​ಅನ್ನು ಕಮ್ಮಿನ್ಸ್ ಉರುಳಿಸಿದರು. ಇನ್ನೊಂದೆಡೆ ಹ್ಯಾಸಲ್​ವುಡ್ ಎಸೆತದಲ್ಲಿ ರಿಷಭ್ ಪಂತ್ ಸಿಕ್ಸರ್ ಸಿಡಿಸಿದರು. ಬಳಿಕ ಅವರಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ಭಾರತ ಡಿಕ್ಲೇರ್ ಪ್ರಕಟಿಸಿತು.