More

  ಇದು ಚರಿತ್ರೆ ಸೃಷ್ಟಿಸೋ ಅವಕಾಶ!: ಬೆಂಗಳೂರಿನಲ್ಲಿ ಇಂದು ಭಾರತ-ಆಸೀಸ್ ಫೈನಲ್, ಕೊಹ್ಲಿ ಪಡೆಗೆ ಸರಣಿ ಜಯದ ಹಂಬಲ

  ಬೆಂಗಳೂರು: ಮುಂಬೈನಲ್ಲಿ ಕಂಡ ಮುಖಭಂಗಕ್ಕೆ ರಾಜ್​ಕೋಟ್​ನಲ್ಲಿ ತಿರುಗೇಟು ನೀಡಿರುವ ಭಾರತ ತಂಡಕ್ಕೆ ಉದ್ಯಾನನಗರಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಎದುರಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯಕ್ಕೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಿದ್ದು, ಆತಿಥೇಯ ಭಾರತ ತಂಡ ಸರಣಿ ಗೆಲುವಿನ ಹಂಬಲದಲ್ಲಿ ಕಣಕ್ಕಿಳಿಯಲಿದೆ. ಕಳೆದ 4 ತಿಂಗಳಿನಿಂದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಕಂಡಿರುವ ಗೆಲುವಿನ ನಾಗಾಲೋಟವನ್ನು ಹಾಲಿ ತವರು ಋತುವಿನ ಕೊನೇ ಪಂದ್ಯದಲ್ಲಿ ಆಸೀಸ್ ವಿರುದ್ಧವೂ ಮುಂದುವರಿಸುವ ನಿರೀಕ್ಷೆ ಇದೆ. ಮೊದಲ ಪಂದ್ಯದ ನೀರಸ ನಿರ್ವಹಣೆಯ ಬಳಿಕ ಗಲಿಬಿಲಿಗೊಳಗಾಗದೆ, ಎರಡನೇ ಪಂದ್ಯದಲ್ಲಿ ಭಾರತ ತಂಡ ಕಾಂಗರೂಗಳ ಮೇಲೆ ತಿರುಗಿಬಿದ್ದ ರೀತಿ ಅಮೋಘವಾಗಿತ್ತು. ಕನ್ನಡಿಗ ಕೆಎಲ್ ರಾಹುಲ್ ಗಾಯಾಳು ರಿಷಭ್ ಪಂತ್ ಗೈರಿನಲ್ಲಿ ವಿಕೆಟ್ ಕೀಪಿಂಗ್ ಕಾರ್ಯವನ್ನು ನಿರ್ವಹಿಸಿದ್ದು ಮಾತ್ರವಲ್ಲದೆ, ಸ್ಲಾಗ್ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಮಧ್ಯಮ ಕ್ರಮಾಂಕಕ್ಕೂ ಬಲ ತುಂಬಿದ್ದರು. ತವರು ಮೈದಾನದಲ್ಲಿ ಅವರಿಂದ ಮತ್ತೊಮ್ಮೆ ಅಂಥದ್ದೇ ಆಟ ನಿರೀಕ್ಷಿಸಲಾಗುತ್ತಿದೆ. ರಾಜ್​ಕೋಟ್​ನಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಮಿಂಚಿರುವುದರಿಂದ ವಿರಾಟ್ ಕೊಹ್ಲಿ ಪಡೆ ಹೆಚ್ಚಿನ ವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ.

  ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಡಿದ ರೀತಿ ನೋಡಿದಾಗ ಸಾಕಷ್ಟು ಬಲಿಷ್ಠವಾಗಿ ಕಂಡಿತ್ತು. ಆದರೆ 2ನೇ ಪಂದ್ಯದಲ್ಲಿ ಭಾರತವೂ ಕಡಿಮೆ ಎನಿಲ್ಲ ಎಂಬುದು ಸ್ಪಷ್ಟವಾಗಿದೆ. ಆಸೀಸ್ ವೇಗಿಗಳನ್ನೂ ಬೆಂಡೆತ್ತಬಹುದು ಮತ್ತು ಬ್ಯಾಟಿಂಗ್ ಕ್ರಮಾಂಕಕ್ಕೆ ಕಡಿವಾಣ ಹಾಕಬಹುದು ಎಂಬ ಧೈರ್ಯ ಮೂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ಇಬ್ಬನಿ ಸಮಸ್ಯೆಯಿಂದಾಗಿ ನಿರ್ಣಾಯಕವೆನಿಸುವ ಟಾಸ್ ಸೋತಾಗಲೂ ಗೆದ್ದಿರುವುದು ದೊಡ್ಡ ಪ್ಲಸ್ ಪಾಯಿಂಟ್. ಕಳೆದ ವರ್ಷ ವಿಶ್ವಕಪ್ ಪೂರ್ವಸಿದ್ಧತೆಯ ಭಾಗವಾಗಿ ಆಸೀಸ್ ವಿರುದ್ಧ ತವರಿನಲ್ಲಿ ಆಡಿದ ಏಕದಿನ ಸರಣಿಯಲ್ಲಿ ಭಾರತ ತಂಡ ಮೊದಲೆರಡು ಪಂದ್ಯ ಗೆದ್ದು 2-0 ಮುನ್ನಡೆ ಸಾಧಿಸಿದ ಹೊರತಾಗಿಯೂ, ಕೊನೇ 3 ಪಂದ್ಯ ಸೋತು 2-3ರಿಂದ ಸರಣಿ ಕೈಚೆಲ್ಲಿತ್ತು. ಅದಕ್ಕೆ ಸೇಡು ತೀರಿಸಿಕೊಳ್ಳಲು ಈ ಪಂದ್ಯ ಉತ್ತಮ ಅವಕಾಶವಾಗಿದೆ. ಯಾಕೆಂದರೆ ಇಲ್ಲೂ ಭಾರತ ಮೊದಲ ಪಂದ್ಯ ಸೋತು 0-1 ಹಿನ್ನಡೆ ಕಂಡಿತ್ತು. ಹೀಗಾಗಿ ಕೊನೇ 2 ಪಂದ್ಯ ಗೆದ್ದ ಸಾಧನೆಯೊಂದಿಗೆ ತೀರುಗೇಟು ನೀಡಿ ಬೀಗಬಹುದಾಗಿದೆ.

  ಸಮತೋಲನ ತಂದ ರಾಹುಲ್: ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಭಾರತ ತಂಡ ಸಮತೋಲನ ಕಂಡುಕೊಳ್ಳಲಾಗದೆ ಪರದಾಡುತ್ತಿತ್ತು. ಅಲ್ಲದೆ ಕೀಪರ್ ಧೋನಿ ಬದಿಗೆ ಸರಿದ ಬಳಿಕ ರಿಷಭ್ ಪಂತ್ ಬ್ಯಾಟಿಂಗ್​ನಲ್ಲಿ ಸ್ಥಿರತೆ ಇರದೆ, ಕೀಪರ್ ಸ್ಥಾನಕ್ಕೆ ಸೂಕ್ತ ನ್ಯಾಯವೂ ಸಿಗುತ್ತಿರಲಿಲ್ಲ. ಆದರೆ ಕೆಎಲ್ ರಾಹುಲ್ ರಾಜ್​ಕೋಟ್​ನಲ್ಲಿ ಇವರೆರಡೂ ಸಮಸ್ಯೆಗಳನ್ನು ಒಮ್ಮೆಲೇ ನೀಗಿಸಿದ್ದರು. ಸ್ಲಾಗ್ ಓವರ್​ನಲ್ಲಿ ತಂಡದ ರನ್​ಗತಿ ಏರಿಸಿದ್ದ ರಾಹುಲ್ ಆಟವನ್ನು ಕಂಡು ನಾಯಕ ಕೊಹ್ಲಿ ಪಂದ್ಯದ ಬಳಿಕ, ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಅವರಿಂದ ನಾನು ಇದುವರೆಗೆ ಕಂಡ ಶ್ರೇಷ್ಠ ಇನಿಂಗ್ಸ್ ಇದು’ ಎಂದು ಹೊಗಳಿದ್ದರು. ಇನ್ನು ಫಿಂಚ್​ರ ಸ್ಟಂಪಿಂಗ್ ಮತ್ತು 2 ಕ್ಯಾಚ್​ಗಳಿಂದ ರಾಹುಲ್ ಕೀಪಿಂಗ್​ನಲ್ಲೂ ಮಿಂಚಿದ್ದರು. ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡಿರುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ವರದಿ ಬಂದಿಲ್ಲ. ಒಂದು ವೇಳೆ ಅವರು ಫಿಟ್ ಆದರೂ ಬೆಂಗಳೂರಿನಲ್ಲಿ ರಾಹುಲ್ ಅವರೇ ಕೀಪರ್ ಆಗಿರಲಿದ್ದಾರೆ.

  ಧವನ್, ರೋಹಿತ್ ಫಿಟ್ನೆಸ್ ಇಂದು ಸ್ಪಷ್ಟ

  ರಾಜ್​ಕೋಟ್ ಏಕದಿನದಲ್ಲಿ ಕ್ರಮವಾಗಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವೇಳೆ ಗಾಯಗೊಂಡಿರುವ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ನಿರ್ಣಾಯಕ ಪಂದ್ಯಕ್ಕೆ ಫಿಟ್ ಆಗುವ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ‘ಇಬ್ಬರೂ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದಾರೆ ಮತ್ತು ಈ ಬಗ್ಗೆ ಹೆಚ್ಚಿನ ಗಮನವಿಡಲಾಗಿದೆ. ಅವರು ಆಡುವ ಬಗ್ಗೆ ಪಂದ್ಯಕ್ಕೆ ಮುನ್ನವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಬಿಸಿಸಿಐ ತಿಳಿಸಿದೆ. ಈ ಪಂದ್ಯ ‘ಫೈನಲ್’ ನಂತಿದ್ದರೂ, ಮುಂಬರುವ ಸವಾಲಿನ ನ್ಯೂಜಿಲೆಂಡ್ ಪ್ರವಾಸದ ದೃಷ್ಟಿಯಿಂದ ಇಬ್ಬರ ಗಾಯದ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ.

  7 ವರ್ಷಗಳಲ್ಲಿ ಎರಡೇ ಏಕದಿನ

  2011ರ ಏಕದಿನ ವಿಶ್ವಕಪ್​ನಲ್ಲಿ 5 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಸ್ಟೇಡಿಯಂ, ಬಳಿಕ 2013ರಿಂದ 7 ವರ್ಷಗಳಲ್ಲಿ ಕೇವಲ 2ನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಇಲ್ಲಿನ ಕೊನೇ 2 ಏಕದಿನ ಪಂದ್ಯಗಳು ಭಾರತ-ಆಸೀಸ್ ನಡುವೆಯೇ ನಡೆದಿವೆ. 2013ರ ನವೆಂಬರ್​ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಚೊಚ್ಚಲ ದ್ವಿಶತಕದ ನೆರವಿನಿಂದ ಭಾರತ ಗೆಲುವಿನ ದೀಪಾವಳಿ ಆಚರಿಸಿದ್ದರೆ, 2017ರ ಸೆಪ್ಟೆಂಬರ್​ನಲ್ಲಿ ಬೆಂಗಳೂರಿನಲ್ಲಿ ನಡೆದ ಕೊನೇ ಏಕದಿನ ಪಂದ್ಯದಲ್ಲಿ ಭಾರತ ತಂಡ, ಡೇವಿಡ್ ವಾರ್ನರ್ ಶತಕದಿಂದ ಎದುರಾದ 335 ರನ್ ಸವಾಲನ್ನು ಬೆನ್ನಟ್ಟುವ ಸನಿಹ ಬಂದು 21 ರನ್​ಗಳಿಂದ ಸೋತಿತ್ತು.

  ಬೆಂಗಳೂರಿನಲ್ಲಿ ಭಾರತ: ಪಂದ್ಯ: 20, ಜಯ: 13, ಸೋಲು: 5, ಟೈ: 1, ರದ್ದು: 1

  ಬೆಂಗಳೂರಿನಲ್ಲಿ ಆಸೀಸ್: ಪಂದ್ಯ: 9, ಜಯ: 4, ಸೋಲು: 4, ರದ್ದು: 1

  ಬೆಂಗಳೂರಿನಲ್ಲಿ ಭಾರತ-ಆಸೀಸ್: 7, ಭಾರತ: 4, ಆಸೀಸ್: 2, ರದ್ದು: 1

  ಆಸೀಸ್ ದೌರ್ಬಲ್ಯ ಬೆಳಕಿಗೆ

  ಪೂರ್ಣಬಲದೊಂದಿಗೆ ಭಾರತಕ್ಕೆ ಬಂದಿರುವ ಆಸೀಸ್ ತಂಡ ಮೊದಲ ಪಂದ್ಯದಲ್ಲಿ ಗೆದ್ದ ರೀತಿ ನೋಡಿದಾಗ ಈ ತಂಡಕ್ಕೆ, ಕೆಲ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿರುವ ಕೊಹ್ಲಿ ಪಡೆ ಸಾಟಿಯಾಗಬಹುದೇ ಎಂಬ ಅನುಮಾನ ಮೂಡಿತ್ತು. ಆದರೆ ಕಂಗರೂಗಳನ್ನೂ ಕಟ್ಟಿಹಾಕಲು ಸಾಧ್ಯ ಎಂಬುದು ರಾಜ್​ಕೋಟ್​ನಲ್ಲಿ ಸಾಬೀತಾಗಿದೆ. ಹೀಗಾಗಿ ಈ ದೌರ್ಬಲ್ಯಗಳನ್ನು ತಿದ್ದಿಕೊಂಡು ಕಣಕ್ಕಿಳಿಯಲು ಆಸೀಸ್ ಸಜ್ಜಾಗಿದೆ. ಮುಂಬೈನಲ್ಲಿ ಮಧ್ಯಮ ಕ್ರಮಾಂಕಕ್ಕೆ ಯಾವುದೇ ಪರೀಕ್ಷೆ ಎದುರಾಗಿರಲಿಲ್ಲ. ಎಲ್ಲ ಕೆಲಸವನ್ನು ಆರಂಭಿಕರೇ ಮುಗಿಸಿದ್ದರು. ಆದರೆ ರಾಜ್​ಕೋಟ್​ನಲ್ಲಿ ಆಸೀಸ್ ಮಧ್ಯಮ ಕ್ರಮಾಂಕ ಆತಿಥೇಯರ ದಾಳಿ ಎದುರು ಕುಸಿದಿತ್ತು. ಯುವ ಸೆನ್ಸೇಶನಲ್ ಬ್ಯಾಟ್ಸ್​ಮನ್ ಮಾರ್ನಸ್ ಲಬುಶೇನ್ ಟೆಸ್ಟ್ ಫಾಮರ್್​ಅನ್ನು ಏಕದಿನದಲ್ಲೂ ಮುಂದುವರಿಸುವ ಲಕ್ಷಣ ತೋರಿದ್ದರು. ಆದರೆ ಲಬುಶೇನ್ ಮತ್ತು ಮಾಜಿ ನಾಯಕ ಸ್ಟೀವನ್ ಸ್ಮಿತ್ ವಿಕೆಟ್​ಗಳನ್ನು ಸೂಕ್ತ ಸಮಯದಲ್ಲಿ ಕಬಳಿಸುವ ಮೂಲಕ ಭಾರತ ಮೇಲುಗೈ ಸಾಧಿಸಿತ್ತು. ಜಂಪಾ 2 ಪಂದ್ಯಗಳಲ್ಲೂ ಕೊಹ್ಲಿಗೆ ಕಡಿವಾಣ ಹಾಕಿರುವುದು ಗಮನಿಸಬೇಕಾದ ಅಂಶ.

  ರನ್​ಮಳೆ ನಿರೀಕ್ಷೆ

  ಚಿನ್ನಸ್ವಾಮಿ ಕ್ರೀಡಾಂಗಣ ಇತ್ತೀಚೆಗಿನ ವರ್ಷಗಳಲ್ಲಿ ಸಂಪೂರ್ಣ ಬ್ಯಾಟಿಂಗ್​ಸ್ನೇಹಿಯಾಗಿ ವರ್ತಿಸುತ್ತಿದ್ದು, ಈ ಪಂದ್ಯದಲ್ಲೂ ಆ ಸಂಪ್ರದಾಯ ಮುಂದುವರಿಯಬಹುದು. ಇಬ್ಬನಿ ಸಮಸ್ಯೆ ಕಾಡುವ ಭೀತಿ ಇರುವುದರಿಂದ ಸಹಜವಾಗಿಯೇ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವುದು ಸೂಕ್ತ. ಆದರೆ 330ಕ್ಕಿಂತ ಹೆಚ್ಚಿನ ಮೊತ್ತ ಪೇರಿಸಿದಾಗ ಚೇಸಿಂಗ್ ಸವಾಲೆನಿಸಲಿದೆ. ಇಲ್ಲಿ ಉಭಯ ತಂಡಗಳೇ ಆಡಿದ್ದ ಕೊನೇ 2 ಏಕದಿನಗಳಲ್ಲಿ ಒಟ್ಟು 709 ಮತ್ತು 647 ರನ್ ಸಿಡಿದಿತ್ತು.

  ಬ್ಯಾನರ್ಸ್ ಬ್ಯಾನ್

  ರಾಜಕೀಯ ವಿಚಾರಗಳ ಪ್ರತಿಭಟನೆಗೆ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗುವ ಭೀತಿಯಿಂದಾಗಿ ಪಂದ್ಯಕ್ಕೆ ಆಗಮಿಸುವ ಪ್ರೇಕ್ಷಕರು ಭಿತ್ತಿಪತ್ರ, ಬ್ಯಾನರ್ ಮತ್ತು ಮಾರ್ಕರ್ ಪೆನ್​ಗಳನ್ನು ತರದಂತೆ ಕೆಎಸ್​ಸಿಎ ನಿಷೇಧ ಹೇರಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಹೌಸ್​ಫುಲ್ ನಿರೀಕ್ಷಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts