ಸರಣಿ ಸಮಬಲಕ್ಕೆ ಭಾರತ ರಣತಂತ್ರ

ಬೆಂಗಳೂರು: ಇಡೀ ದೇಶ ಭಾರತೀಯ ವಾಯುಸೇನೆ ಎಲ್​ಒಸಿಯಲ್ಲಿ ನಡೆಸಿದ ಏರ್​ಸ್ಟ್ರೈಕ್​ನ ಸಂಭ್ರಮದಲ್ಲಿ ಇರುವಾಗಲೇ, ಟೀಮ್ ಇಂಡಿಯಾ ತನ್ನ ದೊಡ್ಡ ಹೋರಾಟಕ್ಕೆ ಅಣಿಯಾಗಿದೆ. 2008ರ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿಯನ್ನು ಸೋಲದಿರುವ ಭಾರತ ತಂಡ ಈ ದಾಖಲೆಯನ್ನು ಉಳಿಸಿಕೊಳ್ಳುವ ದೊಡ್ಡ ಗುರಿಯೊಂದಿಗೆ ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಆಡಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದೇ ಮೊದಲ ಬಾರಿಗೆ ಉದ್ಯಾನನಗರಿಯ ಕ್ರಿಕೆಟ್ ಆಕರ್ಷಣೆ ಎನಿಸಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿ20 ಪಂದ್ಯ ಆಡುತ್ತಿವೆ. ವೈಜಾಗ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲುವಿನ ತುದಿಯಲ್ಲಿ ಸೋಲಿನ ಪ್ರಪಾತಕ್ಕೆ ಇಳಿದ ನಿರಾಸೆಯಲ್ಲಿರುವ ಭಾರತ ತಂಡ, ಬೆಂಗಳೂರು ಟಿ20ಯಲ್ಲಿ ಈ ತಪು್ಪಗಳು ಆಗಬಾರದು ಎನ್ನುವ ಎಚ್ಚರ ವಹಿಸಿದೆ. ಹಾಗೇನಾದರೂ ಆದಲ್ಲಿ ತವರಿನಲ್ಲಿ ಸತತ 6 ಸರಣಿಗಳ ಬಳಿಕ ಮೊದಲ ಬಾರಿಗೆ ಭಾರತ ಟಿ20 ಮಾದರಿಯಲ್ಲಿ ಸರಣಿ ಸೋಲು ಎದುರಿಸಿದಂತಾಗಲಿದೆ. 2015-16ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿಗೆ ಭಾರತ ತವರಿನಲ್ಲಿ ಟಿ20 ಸರಣಿ ಸೋಲು ಕಂಡಿತ್ತು. ಬೌಲಿಂಗ್​ನಲ್ಲಿ ದುಬಾರಿಯಾದ ಉಮೇಶ್ ಯಾದವ್ ಹಾಗೂ ಬ್ಯಾಟಿಂಗ್​ವಲ್ಲಿ ವೈಫಲ್ಯ ಕಂಡ ರಿಷಭ್ ಪಂತ್ 2ನೇ ಟಿ20ಯಲ್ಲಿ ಸ್ಥಾನದ ಅನುಮಾನದಲ್ಲಿದ್ದಾರೆ. ಧವನ್ ವಿಶ್ರಾಂತಿಯಿಂದ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಆದರೆ, ಆವರ್ತನ ಪದ್ಧತಿಯೊಂದಿಗೆ ಹೊಸ ಆಟಗಾರರಿಗೆ ಅವಕಾಶ ನೀಡುವ ಬಗ್ಗೆ ತಂಡ ಯೋಚಿಸಿದಲ್ಲಿ ಧವನ್ ತಂಡಕ್ಕೆ ಮರಳಿ ರೋಹಿತ್ ಶರ್ಮ ವಿಶ್ರಾಂತಿ ಪಡೆಯಬಹುದು. ಆಸೀಸ್ ತಂಡ ಕೂಡ ವೈಜಾಗ್ ಟಿ20ಯಲ್ಲಿ ಹಲವು ಪ್ರಯೋಗ ಮಾಡಿತ್ತು. ಸ್ಟೋಯಿನಸ್​ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿದ ಪ್ರಯೋಗ ದಯನೀಯವಾಗಿ ವೈಫಲ್ಯ ಕಂಡರೆ, ಸೀಮಿತ ಓವರ್​ಗಳ ಕ್ರಿಕೆಟ್​ನ ಅಗ್ರ ವಿಕೆಟ್ಕೀಪರ್ ಅಲೆಕ್ಸ್ ಕ್ಯಾರಿ ಬದಲಾಗಿ ಪೀಟರ್ ಹ್ಯಾಂಡ್ಸ್​ಕೊಂಬ್​ಗೆ ಈ ಜವಾಬ್ದಾರಿ ನೀಡಿತ್ತು. ಕೇನ್ ರಿಚರ್ಡ್​ಸನ್, ನಾಥನ್ ಲ್ಯಾನ್, ಉಸ್ಮಾನ್ ಖವಾಜ ತಂಡದ ಮೀಸಲು ಆಯ್ಕೆಯಾಗಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದೇ ಮೊದಲ ಬಾರಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಆದರೆ, 2016ರ ಟಿ20 ವಿಶ್ವಕಪ್​ನಲ್ಲಿ ಚಿನ್ನಸ್ವಾಮಿಯಲ್ಲಿ ಪಂದ್ಯವಾಡಿದ ವಿಶ್ವಾಸ ಆಸೀಸ್ ತಂಡದಲ್ಲಿದೆ. ಅಂದು ಬಾಂಗ್ಲಾದೇಶ ವಿರುದ್ಧ ಆಸೀಸ್ 3 ವಿಕೆಟ್ ಜಯ ದಾಖಲಿಸಿತ್ತು.

ಬ್ಯಾಟ್ಸ್​ಮನ್​ಗಳ ಅಬ್ಬರದ ನಿರೀಕ್ಷೆ

ಮೊದಲ ಟಿ20 ಅಲ್ಪ ಮೊತ್ತದ ಮುಖಾಮುಖಿಯಾಗಿದ್ದ ಕಾರಣ, 2ನೇ ಪಂದ್ಯ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ಸಾಕ್ಷಿಯಾಗಲಿದೆ ಎಂದು ಕೆಎಸ್​ಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನಸ್ವಾಮಿಯಲ್ಲಿ ಮೊದಲಿನಂತೆ ರನ್ ಮಳೆ ಬರುತ್ತಿಲ್ಲವಾದರೂ, ಮೊದಲು ಬ್ಯಾಟಿಂಗ್ ಮಾಡುವ ತಂಡ 180ಕ್ಕೂ ಅಧಿಕ ಮೊತ್ತ ಪೇರಿಸುವ ನಿರೀಕ್ಷೆ ಇಡಬಹುದು ಎಂದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಬಳಕೆ ಮಾಡಿದ ಪಿಚ್​ಅನ್ನು ಬಳಸಲಾಗುತ್ತಿದೆ. ಎರಡು ತಿಂಗಳಿನಿಂದ ಇಲ್ಲಿ ಯಾವುದೇ ಪಂದ್ಯ ನಡೆದಿಲ್ಲ. ಅಲ್ಲದೆ, ಇಬ್ಬನಿಯ ಸಮಸ್ಯೆಯೂ ಇರದ ಕಾರಣ ರನ್ ಮಳೆ ಇರಬಹುದು ಎನ್ನುವ ನಿರೀಕ್ಷೆ ಇದೆ.

ಭಾರತ ತಂಡಕ್ಕೆ ದಾಖಲೆ ಉಳಿಸಿಕೊಳ್ಳುವ ಗುರಿ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈವರೆಗೂ ಏಳು ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. 2007-08ರ ಆಸೀಸ್ ಪ್ರವಾಸದಲ್ಲಿ ನಡೆದ ಏಕೈಕ ಟಿ20 ಪಂದ್ಯದ ಸರಣಿಯಲ್ಲಿ ಭಾರತ ಸೋಲು ಕಂಡ ಬಳಿಕ, ಆಡಿದ ಐದೂ ಸರಣಿಗಳಲ್ಲಿ ಭಾರತ ಅಜೇಯವಾಗಿ ಉಳಿದಿದೆ. 2007-08ರಲ್ಲಿ ಆಸೀಸ್ ತಂಡ ಭಾರತ ಪ್ರವಾಸ ಮಾಡಿದ್ದಾಗ ಏಕೈಕ ಪಂದ್ಯದ ಸರಣಿಯನ್ನು ಭಾರತ ಜಯಿಸಿದ್ದರೆ, 2011-12ರಲ್ಲಿ 1-1 ಡ್ರಾ, 2013-14ರಲ್ಲಿ ಭಾರತಕ್ಕೆ 1-0 ಗೆಲುವು, 2015-16ರಲ್ಲಿ ಭಾರತಕ್ಕೆ 3-0 ಗೆಲುವು, 2017-18ರಲ್ಲಿ 1-1 ಡ್ರಾ ಹಾಗೂ 2018-19ರಲ್ಲಿ 1-1 ಡ್ರಾ ಫಲಿತಾಂಶ ದಾಖಲಾಗಿತ್ತು.

ದಾಖಲೆಯ ಸನಿಹ ಬುಮ್ರಾ

ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಹೊಸ ಭಾರತೀಯ ದಾಖಲೆಯ ಸನಿಹದಲ್ಲಿದ್ದಾರೆ. 2ನೇ ಟಿ20ಯಲ್ಲಿ ಬುಮ್ರಾ 2 ವಿಕೆಟ್ ಉರುಳಿಸಿದರೆ, ಟಿ20ಯಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಭಾರತದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ 52 ವಿಕೆಟ್ ಸಾಧನೆ ಮಾಡಿರುವ ಆಫ್ ಸ್ಪಿನ್ನರ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದರೆ, 51 ವಿಕೆಟ್ ಉರುಳಿಸಿರುವ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ.

ಬಲಿಷ್ಠ ತಂಡ ಸೂಚನೆ

2015ರ ಕೊನೆಯಲ್ಲಿ ಭಾರತ ತಂಡ ಸತತ ಮೂರು ಟಿ20 ಪಂದ್ಯಗಳನ್ನು ಸೋತಿತ್ತು. ಆದರೆ, ವಿಶ್ವಕಪ್ ಮುನ್ನಲೆಯಲ್ಲಿ ಇಟ್ಟುಕೊಂಡು ಮತ್ತೊಮ್ಮೆ ಸತತ ಮೂರು ಟಿ20 ಸೋಲು ಎದುರಿಸಲು ಭಾರತ ಸಿದ್ಧವಿಲ್ಲ. ಆ ಕಾರಣಕ್ಕಾಗಿ 2ನೇ ಟಿ20 ಪಂದ್ಯದಲ್ಲಿ ಬಲಿಷ್ಠ ತಂಡ ಕಣಕ್ಕಿಳಿಯುವ ಸಾಧ್ಯತೆ ಅಧಿಕ. ತವರಿನಲ್ಲಿ ಭಾರತ ತಂಡದ ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ಜ್ಞಾನವಿದೆ ಎಂದು ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

ಆಡುವ ಪ್ರತಿ ಪಂದ್ಯವನ್ನೂ ಗೆಲ್ಲಬೇಕು ಎನ್ನುವುದು ಆಟಗಾರರ ಮುಖ್ಯ ಗುರಿ ಎನ್ನುವುದು ನಮಗೂ ತಿಳಿದಿದೆ. ಆದರೆ, ಕ್ರೀಡೆ ಎನ್ನುವುದು ಅನಿರೀಕ್ಷಿತಗಳನ್ನು ನೀಡುತ್ತಲೇ ಇರುತ್ತದೆ ಎನ್ನವುದನ್ನು ನೆನಪಿಟ್ಟುಕೊಳ್ಳಬೇಕು. ಟೀಮ್ ಇಂಡಿಯಾ ಕೂಡ ಆಡುವ ಪ್ರತಿ ಪಂದ್ಯವನ್ನೂ ಗೆಲ್ಲುವ ದೃಷ್ಟಿ ಯಲ್ಲಿಯೇ ಇರುತ್ತದೆ. ವೈಜಾಗ್​ನಲ್ಲಿ ಜಯದ ಸನಿಹ ಬಂದು ಸೋಲು ಕಂಡಿದ್ದೆವು. ಬೆಂಗಳೂರಿನಲ್ಲಿ ಉತ್ತಮ ನಿರ್ವಹಣೆ ತೋರುತ್ತೇವೆ.

| ಕೃನಾಲ್ ಪಾಂಡ್ಯ ಟೀಮ್ ಇಂಡಿಯಾ ಆಲ್ರೌಂಡರ್

ವಿಶ್ವಕಪ್​ಗೆ ಸಿದ್ಧತೆ ದೃಷ್ಟಿ ಎನ್ನುವ ರೀತಿಯಲ್ಲಿ ಪಂದ್ಯ ಆಡುತ್ತಿಲ್ಲ. ಅಲ್ಲಿನ ವಾತಾವರಣಕ್ಕೂ ಇಲ್ಲಿನ ವಾತಾವರಣಕ್ಕೂ ಭಿನ್ನತೆ ಇದೆ. ವಿಶ್ವಕಪ್​ಗೂ ಮುನ್ನ ಇನ್ನೂ ಹಲವು ಪಂದ್ಯಗಳನ್ನು ನಾವು ಆಡಬೇಕಿದೆ. ಇಲ್ಲಿನ ವಿಕೆಟ್​ಗಳು ಸ್ಪಿನ್ನರ್ ಸ್ನೇಹಿಯಾಗಿ ಇರುತ್ತವೆ.

| ಪ್ಯಾಟ್ ಕಮ್ಮಿನ್ಸ್ ಆಸೀಸ್ ತಂಡದ ವೇಗಿ