ಕೊಹ್ಲಿ, ಧೋನಿ ಚೇಸಿಂಗ್​ಗೆ ಬೆಚ್ಚಿದ ಆಸೀಸ್

ಅಡಿಲೇಡ್: ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿಯ ಸೊಗಸಾದ ಶತಕ ಮತ್ತು ಫಿನಿಶರ್ ಮಹೇಂದ್ರ ಸಿಂಗ್ ಧೋನಿಯ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಜಯಿಸಿದೆ. ಇದರಿಂದ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿರುವ ಭಾರತ, ಆಸ್ಟ್ರೇಲಿಯಾ ಪ್ರವಾಸವನ್ನು ಮತ್ತೊಂದು ಪ್ರಶಸ್ತಿ ಗೆಲುವಿನೊಂದಿಗೆ ಮುಗಿಸುವ ಅವಕಾಶವನ್ನು ಜೀವಂತ ಉಳಿಸಿಕೊಂಡಿದೆ.

ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳುಗಳಿರುವ ನಡುವೆ ಲಯ ಕಾಣಬೇಕಾದ ಒತ್ತಡದಲ್ಲಿದ್ದ ಧೋನಿ (55*ರನ್, 54 ಎಸೆತ, 2 ಸಿಕ್ಸರ್) ತಾಳ್ಮೆ-ಆಕ್ರಮಣ ಮಿಶ್ರಿತ ಆಟವಾಡಿ, ಕಳೆದ ಪಂದ್ಯದ ಆಮೆಗತಿ ಆಟವನ್ನು ಟೀಕಿಸಿದ್ದವರಿಗೆ ದಿಟ್ಟ ತಿರುಗೇಟು ನೀಡಿದರು. ಜತೆಗೆ ಭುವನೇಶ್ವರ್ ಕುಮಾರ್(45ಕ್ಕೆ 4) ಎಂದಿನ ಕರಾರುವಾಕ್ ದಾಳಿ ಮತ್ತು ಕೊಹ್ಲಿ (104 ರನ್, 112 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರ 39ನೇ ಏಕದಿನ ಶತಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಸತತ 2ನೇ ಪಂದ್ಯದಲ್ಲೂ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ಗೆ ಇಳಿಯಿತು. ವೇಗಿಗಳಾದ ಭುವಿ ಹಾಗೂ ಮೊಹಮದ್ ಶಮಿ(58ಕ್ಕೆ 3) ಜೋಡಿಯ ಸಂಘಟಿತ ದಾಳಿಯ ನಡುವೆಯೂ ಶಾನ್ ಮಾರ್ಷ್ (131 ರನ್, 123 ಎಸೆತ, 11 ಬೌಂಡರಿ, 3 ಸಿಕ್ಸರ್) ಸಿಡಿಸಿದ ಅಮೋಘ ಶತಕದ ನೆರವಿನಿಂದ ಆಸೀಸ್ 9 ವಿಕೆಟ್​ಗೆ 298 ರನ್ ಪೇರಿಸಿತು. ನಿಧಾಗತಿಯ ಪಿಚ್​ನಲ್ಲಿ ಅಗ್ರ ಕ್ರಮಾಂಕದಿಂದಲೇ ಎಚ್ಚರಿಕೆಯ ಆಟವಾಡಿದ ಭಾರತ 49.2 ಓವರ್​ಗಳಲ್ಲಿ 4 ವಿಕೆಟ್​ಗೆ 299 ರನ್ ಪೇರಿಸಿ ಜಯಿಸಿತು. ಕೊಹ್ಲಿ ಔಟಾದಾಗ 38 ಎಸೆತಗಳಲ್ಲಿ 57 ರನ್ ಗಳಿಸಬೇಕಾದ ಸವಾಲು ಭಾರತದ ಮುಂದಿತ್ತು. ಆಗ ಜತೆಗೂಡಿದ ಧೋನಿ ಹಾಗೂ ದಿನೇಶ್ ಕಾರ್ತಿಕ್(25*ರನ್, 14 ಎಸೆತ, 2 ಬೌಂಡರಿ) ಇನ್ನೂ 4 ಎಸೆತ ಬಾಕಿ ಇರುವಂತೆಯೇ ಯಶಸ್ವಿ ಚೇಸಿಂಗ್ ಮಾಡಿದರು.

ಕೊಹ್ಲಿ, ಧೋನಿ ಗೆಲುವಿನ ಇನಿಂಗ್ಸ್

ಸ್ಪೋಟಕ ಬ್ಯಾಟಿಂಗ್​ಗೆ ಸವಾಲೆನಿಸಿದ್ದ ಪಿಚ್​ನಲ್ಲಿ ಭಾರತದ ಚೇಸಿಂಗ್​ಗೆ ಕೊಹ್ಲಿ ಮತ್ತು ಧೋನಿ ತಾಳ್ಮೆಯ ಆಟದಿಂದ ನೆರವಾದರು. ಆರಂಭಿಕ ಶಿಖರ್ ಧವನ್(32) ಈ ಪಂದ್ಯದಲ್ಲೂ ದೊಡ್ಡ ಇನಿಂಗ್ಸ್ ಆಡಲು ವಿಫಲಗೊಂಡರೂ, ರೋಹಿತ್ ಶರ್ಮ(43 ರನ್, 52 ಎಸೆತ, 2 ಬೌಂಡರಿ, 2 ಸಿಕ್ಸರ್) ಜತೆ ಮೊದಲ ವಿಕೆಟ್​ಗೆ 47 ರನ್​ಗಳ ಬುನಾದಿ ಹಾಕಿಕೊಟ್ಟು ಔಟಾದರು. ನಂತರ ಕಣಕ್ಕಿಳಿದ ನಾಯಕ ಕೊಹ್ಲಿಯೊಂದಿಗೆ ಆಟ ಮುಂದುವರಿಸಿದ ರೋಹಿತ್ ತಂಡದ ಮೊತ್ತವನ್ನು 17.4 ಓವರ್​ನಲ್ಲಿ 101ಕ್ಕೇರಿಸಿದರು. ಆದರೆ ಅನಾವಶ್ಯಕ ದೊಡ್ಡ ಹೊಡೆತಕ್ಕೆ ಯತ್ನಿಸಿದ ರೋಹಿತ್ ಡೀಪ್ ಮಿಡ್ ವಿಕೆಟ್​ನಲ್ಲಿ ಹ್ಯಾಂಡ್ಸ್​ಕೊಂಬ್ ಹಿಡಿದ ಕ್ಯಾಚ್​ಗೆ ನಿರ್ಗಮಿಸಿದರು. ನಂತರ 31ನೇ ಓವರ್ ತನಕ ಅಂಬಟಿ ರಾಯುಡು(24) ಪ್ರಯಾಸದ ಆಟವಾಡಿ ಕೊಹ್ಲಿ ಜತೆ ಮೊತ್ತವನ್ನು 160ಕ್ಕೇರಿಸಿ ಔಟಾದರು. ಕೊನೇ 116 ಎಸೆತಗಳಲ್ಲಿ 139 ರನ್ ಗಳಿಸಬೇಕಾದ ಕಠಿಣ ಸವಾಲಿದ್ದ ವೇಳೆ ಕ್ರೀಸಿಗಿಳಿದ ಧೋನಿ ಕಳೆದ ಪಂದ್ಯದಂತೆ ಹೆಚ್ಚು ಎಸೆತಗಳನ್ನು ವ್ಯರ್ಥಗೊಳಿಸದೆ ಎಸೆತಕ್ಕೊಂದರಂತೆ ರನ್ ಬಾರಿಸಿದರು. ಧೋನಿ ಸುಲಭವಾಗಿ ಸ್ಟ್ರೈಕ್ ರೊಟೇಟ್ ಮಾಡಿದರೆ, ಕೊಹ್ಲಿ ಬೌಂಡರಿ-ಸಿಕ್ಸರ್ ಮೂಲಕ ಒತ್ತಡವನ್ನು ಕಡಿಮೆಗೊಳಿಸಿದರು. ಕೊಹ್ಲಿ ಶತಕ ಬಾರಿಸಿ ಔಟಾದ ನಂತರ ದಿನೇಶ್ ಕಾರ್ತಿಕ್ ಜತೆ ಚೇಸಿಂಗ್ ಟಾಸ್ಕ್ ಮುಂದುವರಿಸಿದ ಧೋನಿ ಸಹನೆಯಿಂದ ತಂಡವನ್ನು ಗುರಿ ತಲುಪಿಸಿದರು. ಕೊನೇ ಓವರ್​ನಲ್ಲಿ ಗೆಲುವಿಗೆ 7 ರನ್ ಅಗತ್ಯವಿದ್ದಾಗ, ವೇಗಿ ಬೆಹ್ರೆನ್​ಡಾರ್ಫ್​ರ ಮೊದಲ ಎಸೆತದಲ್ಲಿ ಧೋನಿ ಲಾಂಗ್​ಆನ್​ನತ್ತ ಸಿಕ್ಸರ್ ಸಿಡಿಸಿದರೆ, ನಂತರದ ಎಸೆತದಲ್ಲಿ ಸಿಂಗಲ್ ರನ್ ಕಸಿದು ಗೆಲುವು ತಂದರು.

# ವಿರಾಟ್ ಕೊಹ್ಲಿ 39ನೇ ಏಕದಿನ ಶತಕವನ್ನು ಕೇವಲ 210 ಇನಿಂಗ್ಸ್ ಗಳಲ್ಲಿ ಪೂರೈಸಿದರು. ದಿಗ್ಗಜ ಸಚಿನ್ ತೆಂಡುಲ್ಕರ್ ಇಷ್ಟಕ್ಕೆ 350 ಇನಿಂಗ್ಸ್ ತೆಗೆದುಕೊಂಡಿದ್ದರು.

# ಕೊಹ್ಲಿ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 64ನೇ ಶತಕ ಸಿಡಿಸುವ ಮೂಲಕ ಲಂಕಾ ದಿಗ್ಗಜ ಕುಮಾರ ಸಂಗಕ್ಕರ (63 ಶತಕ) ಅವರನ್ನು ಹಿಂದಿಕ್ಕಿದರು. ಸಚಿನ್ ತೆಂಡುಲ್ಕರ್ (100 ಶತಕ), ರಿಕಿ ಪಾಂಟಿಂಗ್(71) ಮೊದಲೆರಡು ಸ್ಥಾನದಲ್ಲಿದ್ದಾರೆ.

# ಇದು ಅಡಿಲೇಡ್​ನಲ್ಲಿ 2ನೇ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್ ಆಗಿದೆ. 1999ರಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್ ನೀಡಿದ 302 ರನ್ ಸವಾಲನ್ನು ಬೆನ್ನಟ್ಟಿರುವುದು ಗರಿಷ್ಠ ಚೇಸಿಂಗ್.

ಶಾನ್ ಮಾರ್ಷ್ ಸೆಂಚುರಿ

ಆಸೀಸ್ ಈ ಬಾರಿಯೂ ಆರಂಭಿಕ ವೈಫಲ್ಯ ಕಂಡರೂ, ಶಾನ್ ಮಾರ್ಷ್ ಶತಕ ಸಿಡಿಸಿ ತಂಡವನ್ನು 300ರ ಸನಿಹ ಕೊಂಡೊಯ್ದರು. ಹಿಂದಿನ ಪಂದ್ಯಕ್ಕಿಂತ ಹೆಚ್ಚು ಕರಾರುವಾಕ್ ದಾಳಿ ನಡೆಸಿದ ಭುವಿ ತಂಡದ ಮೊತ್ತ 20 ಆಗಿದ್ದಾಗ ಆರನ್ ಫಿಂಚ್​ರನ್ನು ಒಂದಂಕಿ ಮೊತ್ತಕ್ಕೆ ಬೌಲ್ಡ್ ಮಾಡಿದರು. ಬೆನ್ನಲ್ಲೇ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಅಲೆಕ್ಸ್ ಕ್ಯಾರಿ(18) ವೇಗಿ ಶಮಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಮಾರ್ಷ್ ಜತೆ ಉಸ್ಮಾನ್ ಖವಾಜ(21) ಅರ್ಧಶತಕದ ಜತೆಯಾಟವಾಡಿ ಚೇತರಿಕೆ ನೀಡುವ ಹಾದಿಯಲ್ಲಿದ್ದರು. ಆದರೆ ಪಾಯಿಂಟ್​ನಿಂದ ಜಡೇಜಾ ಎಸೆದ ಬುಲೆಟ್ ವೇಗದ ಥ್ರೋಗೆ ಖವಾಜ ರನೌಟ್ ಆಗುತ್ತಿದ್ದಂತೆ ಭಾರತಕ್ಕೆ ದೊಡ್ಡ ಬ್ರೇಕ್ ಸಿಕ್ಕಿತು. ನಂತರ ಜಡೇಜಾ ಬಿಗು ದಾಳಿ ಮುಂದುವರಿಸಿದರೂ, ಮೊಹಮದ್ ಸಿರಾಜ್ ಹಾಗೂ ಕುಲದೀಪ್ ಯಾದವ್ ಸ್ವಲ್ಪ ರನ್ ಬಿಟ್ಟುಕೊಟ್ಟಿದ್ದರಿಂದ ಹಿನ್ನಡೆಯಾಯಿತು. ಸ್ಟೋಯಿನಿಸ್(29) ಬೇಗನೆ ಔಟಾದರೂ, ಗ್ಲೆನ್ ಮ್ಯಾಕ್ಸ್​ವೆಲ್(48 ರನ್, 37 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಷ್ ಪ್ರಹಾರ ಮುಂದುವರಿಸಿದರಲ್ಲದೆ, ಸ್ಲಾಗ್ ಓವರ್​ಗಳಲ್ಲೂ ಸಿಡಿಯುವ ಮೂಲಕ ತಂಡದ ಮೊತ್ತವನ್ನು 300ರ ಸನಿಹ ತಂದರು. ಆಸೀಸ್ ಕೊನೇ 10 ಓವರ್​ಗಳಲ್ಲಿ ಕೊನೇ 5 ವಿಕೆಟ್ ಕಳೆದುಕೊಂಡರೂ, 93 ರನ್ ಬಾಚಿತು.