ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಎಂಬ ಚಿತ್ರದೊಂದಿಗೆ ಮತ್ತೆ ಬಂದಿದ್ದಾರೆ. ಎರಡು ದೇಶಗಳ ವಿಷಯದ ಜತೆಗೆ ಹಲವು ಆಯಾಮಗಳನ್ನು ಹೊಂದಿರುವ ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರಗಳ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದ್ದಾರೆ. ವಸಿಷ್ಠ ಸಿಂಹ-ಮಾನ್ವಿತಾ ಕಾಮತ್ ನಾಯಕ-ನಾಯಕಿ ಆಗಿ ಅಭಿನಯಿಸಿರುವ ಈ ಸಿನಿಮಾ ಮುಂದಿನ ಶುಕ್ರವಾರ (ಜ. 24) ಬಿಡುಗಡೆ ಆಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ‘ಮೇಷ್ಟ್ರು’ ಹಂಚಿಕೊಂಡಿರುವ ಅನಿಸಿಕೆಗಳ ಸಂಕ್ಷಿಪ್ತ ರೂಪ ಇಲ್ಲಿದೆ.
‘‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಎಂದಾಕ್ಷಣ ಎಲ್ಲರ ಮನಸಲ್ಲೂ ಒಮ್ಮೆ ಕ್ರಿಕೆಟ್ ಎಂದೆನಿಸಿಬಿಡುತ್ತದೆ. ಹಾಗಂತಲೇ ಈ ಚಿತ್ರಕ್ಕೆ ‘..ಆದರೆ ಕ್ರಿಕೆಟ್ ಅಲ್ಲ!’ ಎಂಬ ಟ್ಯಾಗ್ಲೈನ್ ಇರಿಸಿದ್ದೇವೆ..’ ಎನ್ನುತ್ತಲೇ ತಮ್ಮ ಹೊಸ ಸಿನಿಮಾದ ಈಗಿನ ಟೈಟಲ್, ಈ ಹಿಂದಿನ ಶೀರ್ಷಿಕೆ ಎಲ್ಲದರ ಕುರಿತು ಮುಕ್ತವಾಗಿ ಮಾತನಾಡಿದರು ಮೇಷ್ಟ್ರು. ಕನ್ನಡ ಚಿತ್ರರಂಗದ ಮಟ್ಟಿಗೆ ‘ಮೇಷ್ಟ್ರು ಎಂದೇ ಕರೆಯಲ್ಪಡುವ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಪುತ್ರಿ ಕನಸು ಬರೆದ ‘ಅಕ್ಷಾಂಶ-ರೇಖಾಂಶ’ ಕಾದಂಬರಿಯನ್ನೇ ಸಿನಿಮಾ ಆಗಿಸಿದ್ದಾರೆ. ‘ಮೊದಲಿಗೆ ಈ ಸಿನಿಮಾಗೆ ‘ಅಕ್ಷಾಂಶ-ರೇಖಾಂಶ’ ಎಂದೇ ಟೈಟಲ್ ಇಡಬೇಕು ಎಂದುಕೊಂಡಿದ್ದೆವು. ಆದರೆ ಅದು ತೀರಾ ಸಾಹಿತ್ಯಿಕ ಎನಿಸುತ್ತದೆ, ಜನರಿಗೆ ಉಚ್ಚರಿಸುವುದು ಸುಲಭವಾಗಲಿಕ್ಕಿಲ್ಲ ಎಂಬ ಕಾರಣಕ್ಕೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಟೈಟಲ್ ಫಿಕ್ಸ್ ಮಾಡಿದೆವು’ ಎಂದು ಶೀರ್ಷಿಕೆ ಹಿನ್ನೆಲೆಯನ್ನು ವಿವರಿಸಿದರು. ‘ಇದು ನನ್ನ ನಿರ್ದೇಶನದ ಹದಿನೈದನೇ ಸಿನಿಮಾ, ಅದ್ದೂರಿ ನಿರ್ವಣದ ಚಿತ್ರ ಕೂಡ. ಅರ್ಧ ಇಂಡಿಯಾದಲ್ಲಿ, ಇನ್ನರ್ಧ ಇಂಗ್ಲೆಂಡ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಭಾರತ ಮತ್ತು ಬ್ರಿಟನ್ ನಡುವಿನ ಅನೇಕ ವಿಷಯಗಳ ಚರ್ಚೆಯ ನಡುವೆ ಪ್ರೀತಿ-ಪ್ರೇಮ, ಅಪರಾಧ ಹಾಗೂ ದೇಶಭಕ್ತಿಯ ಅಂಶಗಳೂ ಇದರಲ್ಲಿವೆ.
ಹೀಗಾಗಿ ಇದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ’ ಎನ್ನುತ್ತ ಬದಲಾದ ಟೈಟಲ್ ಕೂಡ ಸಿನಿಮಾಗೆ ಸೂಕ್ತವಾಗಿಯೇ ಇದೆ ಎಂಬುದನ್ನು ಅವರು ಪ್ರತಿಪಾದಿಸಿದರು.
ಕಥೆ, ಕಾದಂಬರಿ, ಸಿನಿಮಾ: ನಾಗತಿಹಳ್ಳಿ ಅವರ ಪುತ್ರಿ ಕನಸು, ಸಿನಿಮಾಗೆಂದೇ ಕಥೆ ಬರೆದರಾ ಅಥವಾ ಅವರು ಬರೆದ ಕಥೆಯೇ ಸಿನಿಮಾ ಆಯಿತಾ? ಎಂಬ ಕುತೂಹಲ ಸಹಜ. ‘ಕನಸು ಇಂಗ್ಲೆಂಡ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅಲ್ಲಿರುವಾಗ ಕಾಡಿದ ಒಂದು ಅಂಶವನ್ನೇ ಆಧಾರವಾಗಿ ಇಟ್ಟುಕೊಂಡು ಕಥೆ ಬರೆದಳು. ಬಳಿಕ ಅದನ್ನು ವಿಸ್ತರಿಸುತ್ತ ಹೋದಂತೆ ಅದು ಕಾದಂಬರಿ ಆಯಿತು. ಹಾಗಂತ ಆರಂಭದಲ್ಲಿ ಅದನ್ನು ಸಿನಿಮಾ ಆಗಿಸಬೇಕು ಎಂಬ ಉದ್ದೇಶ ಅಥವಾ ಯೋಚನೆ ಇಬ್ಬರಿಗೂ ಇರಲಿಲ್ಲ. ಒಂದು ದಿನ ಅವಳ ಕಾದಂಬರಿ ಓದಿದ ನನಗೆ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಅನಿಸಿ, ಚಿತ್ರಕಥೆ ಮಾಡಿದೆ. ಅದೇ ಈಗ ಸಿನಿಮಾ ಆಗಿದೆ’ ಎನ್ನುತ್ತ ಕಥೆಯೊಂದು ಕಾದಂಬರಿ ಆಗಿ ಬಳಿಕ ಸಿನಿಮಾ ಆದ ಬಗೆಯನ್ನು ನಾಗತಿಹಳ್ಳಿ ವಿವರಿಸಿದರು.
ತಂದೆ-ತಾಯಿಯ ಹಾದಿಯಲ್ಲೇ ಮಕ್ಕಳು ಸಾಗುವುದು ಹೊಸದೇನಲ್ಲ. ಹಾಗಂತ ನಾಗತಿಹಳ್ಳಿಯವರ ಮಕ್ಕಳು ಅವರಂತೆ ಸಿನಿಮಾ ಕ್ಷೇತ್ರಕ್ಕೆ ಬರುವುದಿಲ್ಲವಂತೆ. ‘ಸಿನಿಮಾ ನಿರ್ದೇಶನ ಮಾಡುವ ಆಸಕ್ತಿ ನನ್ನ ಪುತ್ರಿಗಿಲ್ಲ. ಆಕೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಬರಹಗಾರ್ತಿ ಆಗಿಯೇ ಮುಂದುವರಿಯುತ್ತಾಳೆ. ಕೆನಡಾದ ವ್ಯಾಂಕೋವರ್ನಲ್ಲಿ ಆಕೆ ಬೋಧನಾ ವೃತ್ತಿಯಲ್ಲಿದ್ದಾಳೆ. ಇನ್ನೊಬ್ಬ ಪುತ್ರಿ ಸಿಹಿ ಕೂಡ ಅಷ್ಟೇ, ಅವಳಿಗೂ ಸಿನಿಮಾ ಆಸಕ್ತಿ ಇಲ್ಲ. ಆದರೆ ಇಬ್ಬರೂ ನನ್ನ ಸಿನಿಮಾ ಚಟುವಟಿಕೆಗೆ ಸಹಾಯ ಮಾಡುತ್ತಾರೆ. ಈ ಚಿತ್ರದ ಇಂಗ್ಲಿಷ್ ಸಬ್ಟೈಟಲ್ಗಳನ್ನು ಸಿಹಿಯೇ ಮಾಡಿದ್ದು’ ಎನ್ನುತ್ತ ಮಕ್ಕಳ ಬಗ್ಗೆ ಹೇಳಿದರು.
ನಾನು ಸಿನಿಮಾದ ವಿದ್ಯಾರ್ಥಿ: ನಾಗತಿಹಳ್ಳಿ ಚಂದ್ರಶೇಖರ ಅವರು ಪ್ರಶಸ್ತಿ ಪುರಸ್ಕೃತ ಹಲವಾರು ಸಿನಿಮಾಗಳನ್ನು ಮಾಡಿರುವ ಪ್ರತಿಭಾವಂತ, ಹಿರಿಯ ನಿರ್ದೇಶಕರು. ಉದಯೋನ್ಮುಖ ಮತ್ತು ಕಿರಿಯ ನಿರ್ದೇಶಕರಿಗೆ ಸಲಹೆ ನೀಡುವಷ್ಟು ಜ್ಞಾನ ಅವರಲ್ಲಿದೆ. ‘ಒಂದು ಸಿನಿಮಾ ಮಾಡುವಾಗ ವರ್ತಮಾನಕ್ಕೆ ಅನ್ವಯಿಸಿಕೊಂಡು ಅದನ್ನು ನೋಡಬೇಕು. ಪ್ರಸ್ತುತ ಸಮಾಜಕ್ಕೆ ಅದು ಹೇಗೆ ಅನ್ವಯಿಸುತ್ತದೆ, ಅಂಥ ವಿಚಾರ ಕಥೆಯಲ್ಲಿ ಏನಿದೆ? ಅದರಲ್ಲಿ ಯಾವುದಕ್ಕೆ ಮತ್ತು ಯಾಕೆ ಒತ್ತು ಕೊಡುತ್ತಿದ್ದೇನೆ ಹಾಗೂ ಅದನ್ನು ಎಷ್ಟು ಕಲಾತ್ಮಕವಾಗಿ ಹೇಳುತ್ತಿದ್ದೇನೆ ಎಂಬ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿಕೊಂಡು ಕಣಕ್ಕಿಳಿಯಬೇಕು’ ಎಂಬುದು ನಾಗತಿಹಳ್ಳಿ ಅವರ ಸಲಹೆ. ‘ನನ್ನನ್ನು ಹಲವರು ಮೇಷ್ಟ್ರು ಎನ್ನುತ್ತಾರೆ. ಆದರೆ ನಾನು ಸದಾ ಸಿನಿಮಾ ವಿದ್ಯಾರ್ಥಿ. ಸ್ಕ್ರಿಪ್ಟ್ ಮುಂದೆ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆಯೇ ಇರಬೇಕು. ವಿದ್ಯಾರ್ಥಿತನ ಇದ್ದಾಗ ಮಾತ್ರ ಅಲ್ಲಿ ಕಲಿಕೆ, ವಿನಯ, ಅಧ್ಯಯನ ಎಲ್ಲವೂ ಇರುತ್ತದೆ. ಅದರ ಜತೆಗೆ ಸಂಶೋಧನೆ ಮತ್ತು ಸಂವೇದನೆ ಕೂಡ ಇರಬೇಕು. ಬರೀ ಸಂಶೋಧನೆ ಇದ್ದಾಗ ಅದು ಸಾಕ್ಷ್ಯಚಿತ್ರ ಎನಿಸುತ್ತದೆ, ಜತೆಗೆ ಸಂವೇದನೆ ಇದ್ದಾಗ ಮಾತ್ರ ಸಿನಿಮಾ ಎನಿಸಿಕೊಳ್ಳುತ್ತದೆ’ ಎನ್ನುವ ನಾಗತಿಹಳ್ಳಿಯವರು, ‘ಇದು ನಾನು ಇತರರಿಗೆ ಕೊಡುವ ಸಲಹೆ ಅಲ್ಲ. ನನಗೆ ನಾನೇ ಹೇಳಿಕೊಳ್ಳುವಂಥದ್ದು. ಮೊದಲ ಸಿನಿಮಾ ಮಾಡುವಾಗಿನದ್ದೇ ಭಯ-ಭಕ್ತಿ ಪ್ರತಿ ಸಿನಿಮಾ ಮಾಡುವಾಗಲೂ ಇರುತ್ತದೆ’ ಎನ್ನುತ್ತಾರೆ.
ಖಳನಾಗಿಯೇ ಯಾಕಿರಬೇಕು?
ನಾಗತಿಹಳ್ಳಿಯವರು ಈ ಚಿತ್ರದ ಮೂಲಕ ನಟ ವಸಿಷ್ಠ ಸಿಂಹ ಅವರನ್ನು ನಾಯಕನಾಗಿ ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದಾರೆ. ಈ ಆಯ್ಕೆ ಹಿಂದೆಯೂ ಒಂದಷ್ಟು ಹಿನ್ನೆಲೆ ಇದೆ. ‘ಎನ್ಆರ್ಐ ಹುಡುಗ ಎಂದರೆ ಹೀಗೇ ಇರಬೇಕು ಎಂಬ ಒಂದು ಮಿಥ್ಯಾ ಕಲ್ಪನೆ ಇದೆ. ಅದನ್ನು ಮುರಿಯಲೆಂದೇ ವಸಿಷ್ಠ ಸಿಂಹರನ್ನು ಆರಿಸಿಕೊಂಡೆ. ಈ ಪ್ರಯತ್ನ ರಿಸ್ಕ್ ಹಾಗೂ ಸವಾಲಿನದ್ದೂ ಆಗಿದೆ. ಎಲ್ಲಕ್ಕಿಂತ ಹೆಚ್ಚು ವಸಿಷ್ಠ ಒಳ್ಳೆಯ ನಟ. ಖಳನಾಗಿಯೂ ಸೂಕ್ಷ್ಮ ಅಭಿನಯ ತೋರುವ ಕಲಾವಿದ. ಮೊದಲು ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಬಳಿಕ ಸ್ವಲ್ಪ ಅಭಿನಯಿಸಿದವರನ್ನು ಆರಿಸುವ ಅನಿಸಿತು. ಅಂತಿಮವಾಗಿ ವಸಿಷ್ಠ ಆಯ್ಕೆ ನಡೆಯಿತು. ಅಷ್ಟಕ್ಕೂ ಒಬ್ಬ ಮಚ್ಚು-ಲಾಂಗು ಹಿಡಿದುಕೊಂಡು ಖಳನಾಗಿಯೇ ಯಾಕಿರಬೇಕು?’ ಎಂಬ ಪ್ರಶ್ನೆ ನಾಗತಿಯವರದು.
ಪ್ರಶಸ್ತಿ ಕೂಡ ಜನಮನ್ನಣೆಯೇ…
ನಾಗತಿಹಳ್ಳಿ ಚಂದ್ರಶೇಖರ ಅವರು ಇದುವರೆಗೆ ಮಾಡಿರುವ ಸಿನಿಮಾಗಳಿಂದ ಅವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. 3 ರಾಷ್ಟ್ರ ಹಾಗೂ 14 ರಾಜ್ಯ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ‘ಈ ಚಿತ್ರದಿಂದಲೂ ಪ್ರಶಸ್ತಿಯ ನಿರೀಕ್ಷೆ ಇದೆಯೇ?’ ಎಂದು ಕೇಳಿದ್ದಕ್ಕೆ ಅವರ ಉತ್ತರ ಹೀಗಿತ್ತು. ‘ಆ ಥರ ನಿರೀಕ್ಷೆ ಯಾಕಿರಬಾರದು? ಪ್ರತಿ ಸೃಜನಶೀಲ ವ್ಯಕ್ತಿಗೂ ತನ್ನ ಕಲೆ ತುಂಬ ಜನರಿಗೆ ತಲುಪಲಿ, ಜನಮನ್ನಣೆಗೆ ಪಾತ್ರವಾಗಲಿ ಎಂಬ ಆಸೆ ಇರುತ್ತದೆ. ಅದಿಲ್ಲ ಎಂದರೆ ಅಂಥವರು ಸುಳ್ಳು ಹೇಳುತ್ತಿದ್ದಾರೆಂದೇ ಅರ್ಥ. ಅಂಥ ಆಸೆ ಇಲ್ಲದಿರಲು ನಾನು ಸಂತನಲ್ಲ. ಅಷ್ಟಕ್ಕೂ ಪ್ರಶಸ್ತಿ ಕೂಡ ಜನಮನ್ನಣೆಯೇ..’ ಎನ್ನುವ ಅವರು ಪ್ರಶಸ್ತಿ ಪಡೆಯುವ ರೋಮಾಂಚನಕ್ಕಿಂತ ಅಂಥ ಸಿನಿಮಾ ಮಾಡುವಾಗಿನ ಪ್ರಕ್ರಿಯೆ ಕೊಡುವ ರೋಮಾಂಚನವೇ ದೊಡ್ಡದು ಎನ್ನುತ್ತಾರೆ.
| ಆರ್.ಕೆ.ಬೆಂಗಳೂರು