More

    ಇರಾನ್ ಬೆಳವಣಿಗೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಕರೆ ಮಾಡಿದ ಪ್ರಧಾನಿ ಮೋದಿ: ಆದರೆ ಚರ್ಚಿಸಿದ್ದೇ ಬೇರೆ

    ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ತಿಳಿಸಿದ್ದಾರೆ. ಟ್ರಂಪ್​ ಜತೆಗೆ ದೂರವಾಣಿ ಕರೆ ಮೂಲಕ ಪ್ರಧಾನಿ ಮೋದಿ ಮಾತನಾಡಿರುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯ ಇಂದು ಬೆಳಗ್ಗೆ ತಿಳಿಸಿದೆ.

    ಇದೇ ವೇಳೆ ಪ್ರಧಾನಿ ಮೋದಿ ಟ್ರಂಪ್​ ಹಾಗೂ ಅವರ ಕುಟುಂಬ ಮತ್ತು ಯುನೈಟೆಡ್​ ಸ್ಟೇಟ್ಸ್​ ಜನರಿಗೆ ಒಳ್ಳೆಯ ಆರೋಗ್ಯ, ಏಳಿಗೆ ಮತ್ತು ಯಶಸ್ಸು ದೊರೆಯಲಿ ಎಂದು ಹೊಸ ವರ್ಷದ ಶುಭಕೋರಿದ್ದಾರೆ.

    ಭಾರತ ಮತ್ತು ಅಮೆರಿಕ ಸಂಬಂಧ ನಂಬಿಕೆ, ಪರಸ್ಪರ ಗೌರವ ಮತ್ತು ವಿವೇಚನೆ ಮೇಲೆ ನಿರ್ಮಾಣವಾಗಿದೆ. ನಮ್ಮ ಸಂಬಂಧ ಬಲದಿಂದ ಬಲಿಷ್ಠತೆಯೆಡೆಗೆ ವೃದ್ಧಿಯಾಗುತ್ತಾ ಸಾಗುತ್ತದೆ ಎಂದು ಪ್ರಧಾನಿ ಮೋದಿ, ಟ್ರಂಪ್​ ಜತೆ ಮಾತುಕತೆ ನಡೆಸಿದ್ದಾರೆ.

    ಉಭಯ ದೇಶಗಳ ಆಳವಾದ ಕಾರ್ಯತಂತ್ರದ ಸಹಭಾಗಿತ್ವದಿಂದಾಗಿ ಕಳೆದ ವರ್ಷದ ಮಹತ್ವದ ಪ್ರಗತಿ ಸಾಧಿಸಿರುವುದನ್ನು ಪ್ರಧಾನವಾಗಿ ಉಲ್ಲೇಖಿಸಿದ ಪ್ರಧಾನಿ, ಇದೇ ರೀತಿಯಾಗಿ ಮುಂದಿನ ವರ್ಷವೂ ಪರಸ್ಪರ ಆಸಕ್ತಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಹಕಾರ ವೃದ್ಧಿಗೆ ಟ್ರಂಪ್​ ಜತೆಗೆ ಕಾರ್ಯ ನಿರ್ವಹಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.

    ಇನ್ನು ಟ್ರಂಪ್​ ಕೂಡ ಭಾರತೀಯರಿಗೆ ಹೊಸ ವರ್ಷದ ಶುಭಕೋರಿದ್ದಾರೆ. ಈ ಹೊಸ ವರ್ಷ ಭಾರತೀಯರ ಪಾಲಿಗೆ ಏಳಿಗೆ ಮತ್ತು ಅಭಿವೃದ್ಧಿಯನ್ನು ಹೊತ್ತು ತರಲಿ ಎಂದಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಕಳೆದ ಕೆಲವು ವರ್ಷಗಳ ಸಾಧನೆ ತೃಪ್ತಿತಂದಿದೆ ಎಂದು ಟ್ರಂಪ್​ ತಿಳಿಸಿದ್ದು, ದ್ವಿಪಕ್ಷೀಯ ಸಹಕಾರ ಮತ್ತಷ್ಟು ಆಳವಾಗಿರಬೇಕೆಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಮತ್ತು ಟ್ರಂಪ್​ ಇರಾನ್​ ಬೆಳವಣಿಗೆ ಬಗ್ಗೆ ಒಂದು ಮಾತನ್ನೂ ಆಡದಿರುವುದು ಕುತೂಹಲ ಕೆರಳಿಸಿದೆ. ಇರಾನ್ ಸೇನಾ ನಾಯಕ ಕಾಸಿಂ ಸುಲೆಮಾನಿ ಹತ್ಯೆಯ ಬಳಿಕ ಇರಾನ್​ ಮತ್ತು ಅಮೆರಿಕ ನಡುವೆ ಕದನ ಕಾರ್ಮೋಡ ಕವಿದಿದ್ದು, ಭಾರತದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ಶಾಂತಿ ಕಾಪಾಡಲು ಭಾರತ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts