ಆರು ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆ

ವಾಷಿಂಗ್ಟನ್: ಆರು ಹೊಸ ಅಣು ವಿದ್ಯುತ್ ಸ್ಥಾವರ ಗಳನ್ನು ನಿರ್ವಿುಸಲು ಭಾರತ ಮತ್ತು ಅಮೆರಿಕ ಪರಸ್ಪರ ಸಮ್ಮತಿ ವ್ಯಕ್ತಪಡಿಸಿವೆ. ಭದ್ರತೆ ಮತ್ತು ನಾಗರಿಕ ಪರ ಮಾಣು ಸಹಕಾರ ಒಪ್ಪಂದದ ಭಾಗವಾಗಿ ಈ ಯೋಜನೆಗೆ ಒಮ್ಮತ ಮೂಡಿ ದ್ದು, 9 ಸುತ್ತುಗಳ ಮಾತುಕತೆ ಬಳಿಕ ಈ ತೀರ್ವನಕ್ಕೆ ಬರಲಾಗಿದೆ.

ಅಮೆರಿಕದ ಶಸ್ತ್ರ ನಿಯಂತ್ರಣ ಮತ್ತು ಅಂತಾ ರಾಷ್ಟ್ರೀಯ ಭದ್ರತೆ ವಿಭಾಗದ ಅಧೀನ ಕಾರ್ಯದರ್ಶಿ ಆಂಡ್ರಿಯಾ ಥಾಮನ್ಸ್ ಹಾಗೂ ಭಾರತದ ವಿದೇ ಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ನಡೆಸಿದ ಮಾತುಕತೆಯಲ್ಲಿ ಈ ಒಮ್ಮತಕ್ಕೆ ಬರಲಾಗಿದ್ದು, ಬುಧ ವಾರ ಎರಡೂ ರಾಷ್ಟ್ರಗಳು ಜಂಟಿ ಪ್ರಕಟಣೆ ನೀಡಿವೆ.

‘ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ವೃದ್ಧಿಗೆ ಉಭಯ ರಾಷ್ಟ್ರಗಳು ಬದ್ಧವಾಗಿದ್ದು, ಭಾರತದಲ್ಲಿ ಅಮೆರಿಕದ ಆರು ಅಣು ಸ್ಥಾವರಗಳು ಸ್ಥಾಪನೆಯಾಗಲಿವೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್​ಎಸ್​ಜಿ)ದಲ್ಲಿ ಭಾರತ ಸದಸ್ಯತ್ವ ಪಡೆಯಲು ಬೆಂಬಲ ನೀಡುವುದಾಗಿ ಅಮೆರಿಕ ಪುನರುಚ್ಚರಿಸಿದೆ. ಆದರೆ, ಭಾರತ ಎನ್​ಎಸ್​ಜಿ ಸದಸ್ಯತ್ವ ಪಡೆಯಲು ಚೀನಾ ಅಡ್ಡಗಾಲು ಹಾಕಿದೆ.

ನೀತಿ ಸಡಿಲ: ಟ್ರಂಪ್ ಆಡಳಿತ ಭಾರತದೊಂದಿಗೆ ವಾಣಿಜ್ಯಾತ್ಮಕ ಅಸಹಕಾರ ತೋರುತ್ತಿದೆಯಾದರೂ ಪರಮಾಣು ಇಂಧನವನ್ನು ಭಾರಿ ಪ್ರಮಾಣದಲ್ಲಿ ಭಾರತಕ್ಕೆ ಮಾರಾಟ ಮಾಡಲು ಮುಂದಾಗಿದೆ. ಅಮೆರಿಕದ ಪಿಟ್ಸ್​ಬರ್ಗ್ ಮೂಲದ ವೆಸ್ಟಿಂಗ್ ಹೌಸ್ ಸಂಸ್ಥೆ ಅಣುವಿದ್ಯುತ್ ಸ್ಥಾವರ ನಿರ್ಮಾಣ ಸಂಬಂಧ ಭಾರತದೊಂದಿಗೆ ಚರ್ಚೆ ನಡೆಸುತ್ತಿದೆ.

ಸಾಮರ್ಥ್ಯ ಹೆಚ್ಚಳಕ್ಕೆ ಯತ್ನ: ಭಾರತ 2024ರ ವೇಳೆಗೆ ಪರಮಾಣು ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿ ಹಾಕಿಕೊಂಡಿದೆ. ಈ ಸಂಬಂಧ ಆಸ್ಟ್ರೇಲಿಯಾ ಮತ್ತು ಅಮೆರಿಕದೊಂದಿಗೆ ಸತತವಾಗಿ ಚರ್ಚೆ ನಡೆಸುತ್ತಿದೆ. 2018ರ ಅಕ್ಟೋಬರ್​ನಲ್ಲಿ ಭಾರತ ಮತ್ತು ರಷ್ಯಾ ಕೂಡ ಪರಸ್ಪರ ಒಪ್ಪಂದ ಮಾಡಿಕೊಂಡು, ಭಾರತದಲ್ಲಿ 6 ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಸಹಿ ಹಾಕಿದ್ದವು.

ನಾಗರಿಕ ಪರಮಾಣು ಒಪ್ಪಂದ

2006 ಜುಲೈ 18ರಂದು ಭಾರತ ಮತ್ತು ಅಮೆರಿಕ ನಡುವೆ ಪರಮಾಣು ಒಪ್ಪಂದ ಏರ್ಪಟ್ಟಿತು. ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಜಾರ್ಜ್ ಬುಷ್ ಇದಕ್ಕೆ ಸಹಿ ಹಾಕಿದ್ದರು. ಅಲ್ಲದೆ, ಭಾರತ ಈಗಾಗಲೇ ಫ್ರಾನ್ಸ್, ರಷ್ಯಾ, ಕೆನಡಾ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಜಪಾನ್, ವಿಯೆಟ್ನಾಂ, ಬಾಂಗ್ಲಾದೇಶ, ಕಜಕಿಸ್ತಾನ ಮತ್ತು ದಕ್ಷಿಣ ಕೊರಿಯಾದೊಂದಿಗೆ ನಾಗರಿಕ ಪರಮಾಣು ಒಪ್ಪಂದವನ್ನು ಮಾಡಿಕೊಂಡಿದೆ.

Leave a Reply

Your email address will not be published. Required fields are marked *