ಆರ್ಥಿಕ ಅಭಿವೃದ್ಧಿಯತ್ತ ಭಾರತ

‘ಟ್ರಾನ್ಸ್ ಾರ್ಮಿಂಗ್ ಇಂಡಿಯಾ’ ಸಮಾವೇಶ ಉದ್ಘಾಟಿಸಿ ಡಿ.ವಿ.ಸದಾನಂದ ಗೌಡ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಭಾರತ ಆರ್ಥಿಕವಾಗಿ ಮುಂದುವರಿದ ದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ವಿಶ್ವದಲ್ಲಿ ಭಾರತದ ಜಿಡಿಪಿ ಪ್ರಗತಿ ಶೇ.7.2ರಷ್ಟಿದ್ದು, ವಿಶ್ವಬ್ಯಾಂಕ್‌ನ ರೇಟಿಂಗ್‌ನಲ್ಲೂ ಭಾರತಕ್ಕೆ 50ರೊಳಗೆ ಸ್ಥಾನವಿದ್ದು, ದೇಶ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಕೊಡಿಯಾಲ್‌ಬೈಲ್ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಭಾನುವಾರ ಸಿಟಿಜನ್ ಕೌನ್ಸಿಲ್- ಮಂಗಳೂರು ಚಾಪ್ಟರ್ ಮತ್ತು ಪಂಚಾಯಿತಿ ತಂಡದ ಸಹಯೋಗದಲ್ಲಿ ‘ಟ್ರಾನ್ಸ್ ಾರ್ಮಿಂಗ್ ಇಂಡಿಯಾ’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಕ್ಕೆ ಜನಾದೇಶ ಸಿಕ್ಕಿದ ಬಳಿಕ ರಿಪೋರ್ಟ್ ಕಾರ್ಡ್ ಜನರ ಮುಂದಿಡಬೇಕು. ಅದರ ಆಧಾರದಲ್ಲಿ ಮತದಾರ ಮುಂದೆ ಮತ ಹಾಕಬೇಕು. 70 ವರ್ಷಗಳಿಂದ ಇಂತಹ ರಿಪೋರ್ಟ್ ಕಾರ್ಡ್‌ನ್ನು ಯಾರೂ ಮುಂದಿಟ್ಟಿರಲಿಲ್ಲ. ಆದರೆ ಮೋದಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ತಮ್ಮ ಕಾರ್ಯತತ್ಪರತೆ ತೋರಿಸಿಕೊಟ್ಟಿದ್ದಾರೆ. ಬಜೆಟ್ ಮೊದಲು ತಮ್ಮ ಸಚಿವ ಸಂಪುಟದ ಸದಸ್ಯರನ್ನು ಕರೆದು ಜನರ ಬೇಡಿಕೆ ಈಡೇರಿದೆಯಾ ಮತ್ತು ಜನರ ಹೊಸ ಬೇಡಿಕೆ ಯಾವುವು ಎನ್ನುವುದನ್ನು ಚರ್ಚಿಸುತ್ತಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ವಿಲಾಸ್ ನಾಯಕ್, ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ಅಧ್ಯಕ್ಷ ಚಿದಾನಂದ ಕೆದಿಲಾಯ ಉಪಸ್ಥಿತರಿದ್ದರು. ಕಿರಣ್ ಕಾರ‌್ಯಕ್ರಮ ನಿರೂಪಿಸಿದರು. ಶರತ್ ವಂದಿಸಿದರು.

ಯಶಸ್ವಿ ಯೋಜನೆಗಳು: ನೋಟು ಅಮಾನ್ಯ ಮೂಲಕ ನಕ್ಸಲ್, ಭಯೋತ್ಪಾದನೆಗೆ ಕಡಿವಾಣ ಹಾಕುವ ಕಾರ‌್ಯ ನಡೆದಿದೆ. ಜಿಎಸ್‌ಟಿಯಿಂದ ಒಂದು ದೇಶ ಒಂದು ತೆರಿಗೆ ವ್ಯವಸ್ಥೆ ಜಾರಿಯಾಗಿ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಹಿಂದೆ ದೇಶದ ವ್ಯಕ್ತಿಯೊಬ್ಬನು ತಮ್ಮ ವಾರ್ಷಿಕ ಆದಾಯದ ಶೇ.16ರಷ್ಟನ್ನು ಆರೋಗ್ಯದ ಖರ್ಚಿಗೆ ಮೀಸಲಿಡಬೇಕಿತ್ತು. ಇದರಿಂದ ಬಡತನ ರೇಖೆಗೆ ಜಾರುವವರ ಸಂಖ್ಯೆ ಶೇ.3ರಿಂದ 4ರಷ್ಟು ಇತ್ತು. ಆದರೆ ಆಯುಷ್ಮಾನ್ ಭಾರತ 50 ಕೋಟಿ ಮಂದಿಗೆ ಆರೋಗ್ಯ ಭದ್ರತೆ ನೀಡಿದೆ. ಆರೋಗ್ಯದ ಬಗ್ಗೆ ಚಿಂತೆ ಮಾಡದಂತೆ ಮಾಡಿದೆ ಎಂದು ಸದಾನಂದ ಗೌಡ ಹೇಳಿದರು.

ನೋಟು ಅಮಾನ್ಯ, ಜಿಎಸ್‌ಟಿಯಿಂದ ಲಾಭ: ಜಿಎಸ್‌ಟಿ ಜಾರಿ, ಅಪನಗದೀಕರಣ ಆಗುವುದಕ್ಕೂ ಮೊದಲು ಬಂಡವಾಳಶಾಹಿಗಳು ತೆರಿಗೆ ಪಾವತಿ ಮತ್ತು ವ್ಯವಹಾರದಲ್ಲಿ ನಿಷ್ಠೆ ತೋರಿಸುತ್ತಿದ್ದರೆ ತೊಂದರೆಗೆ ಸಿಲುಕಿಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ. ಈ ಎರಡು ಯೋಜನೆಗಳ ಜಾರಿ ಬಳಿಕ ದೇಶದ ಆರ್ಥಿಕ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಿದೆ ಎಂದು ತಜ್ಞ ಅಶುತೋಷ್ ಮುಗ್ಲಿಕರ್ ಅಭಿಪ್ರಾಯಪಟ್ಟರು. ನೋಟು ಅಮಾನ್ಯ, ಜಿಎಸ್‌ಟಿ ಬಗ್ಗೆ ಉಪನ್ಯಾಸ ನೀಡಿದ ಅವರು, ಪ್ರಧಾನಿ ಮೋದಿ ನೋಟು ಅಮಾನ್ಯ ಘೋಷಿಸುವುದಕ್ಕೂ ಮೊದಲು ಪಾಕಿಸ್ತಾನಿ ಉಗ್ರಗಾಮಿಗಳು ನಕಲಿ ನೋಟುಗಳನ್ನು ಮುದ್ರಿಸಿ ದೇಶದ ಆರ್ಥಿಕ ಕ್ಷೇತ್ರಕ್ಕೆ ಹೊಡೆತ ನೀಡುತ್ತಿದ್ದರು. ಹೊಸ ನೋಟುಗಳ ಚಲಾವಣೆ ಬಳಿಕ ಇವುಗಳಿಗೆ ಅವಕಾಶ ಇಲ್ಲ. ನಕ್ಸಲರಿಗೆ ರವಾನೆಯಾಗುವ ಹಣ ಕಡಿಮೆಯಾಗಿದೆ. ಅಪನಗದೀಕರಣ ಘೋಷಣೆಯಾಗುತ್ತಿದ್ದಂತೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುವ ಉದ್ಯಮಿಗಳ ಸಂಖ್ಯೆ ದುಪ್ಪಟ್ಟಾಯಿತು. ಅದಕ್ಕೂ ಮೊದಲು ಈ ಹಣ ಎಲ್ಲಿತ್ತು? ತೆರಿಗೆ ವಂಚನೆ ಮಾಡುತ್ತಿದ್ದರು ಎನ್ನುವುದಕ್ಕೆ ಈ ಸಾಕ್ಷಿಗಳೇ ಸಾಕು ಎಂದರು.