7.5 ಲಕ್ಷ ಅತ್ಯಾಧುನಿಕ ಎಕೆ 203 ರೈಫಲ್​ ತಯಾರಿಕೆಗೆ ರಷ್ಯಾ ಕಂಪನಿಯೊಂದಿಗೆ ಭಾರತ ಸಹಿ

ನವದೆಹಲಿ: ಸೇನೆಯನ್ನು ಹಂತ ಹಂತವಾಗಿ ಆಧುನೀಕರಿಸಲು, ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲು ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಅದರ ಭಾಗವಾಗಿ ಈಗ ನಮ್ಮ ಸೈನಿಕರಿಗೆ ಅತ್ಯಾಧುನಿಕ ಎಕೆ 203 ರೈಫಲ್​ ಒದಗಿಸಲು ರಷ್ಯಾದ ಕಂಪನಿಯೊಂದಿಗೆ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಮೇಕ್​ ಇಂಡಿಯಾ ಭಾಗವಾಗಿ ಎಕೆ-47 ರೈಫಲ್​ ನಿರ್ಮಿಸುವ ರಷ್ಯಾದ ಕಲಾಶ್ನಿಕೋವ್​ ಕಂಪನಿ ಮತ್ತು ಆರ್ಡನನ್ಸ್​ ಫ್ಯಾಕ್ಟರಿ ಬೋರ್ಡ್​ (ಒಎಫ್​ಬಿ) ಜಂಟಿಯಾಗಿ ಅತ್ಯಾಧುನಿಕ 7 ಲಕ್ಷದ 50 ಸಾವಿರ ಎಕೆ 203 ರೈಫಲ್​ಗಳನ್ನು ಉತ್ತರ ಪ್ರದೇಶದ ಅಮೇಥಿಯಲ್ಲಿ ನಿರ್ಮಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಪ್ರಸ್ತುತ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಯೋಧರು ಸ್ವದೇಶಿ ನಿರ್ಮಿತ ಇನ್ಸಾಸ್​ ರೈಫಲ್​​ಗಳನ್ನು ಬಳಸುತ್ತಿದ್ದಾರೆ. ಅತ್ಯಾಧುನಿಕ ಎಕೆ 203 ರೈಫಲ್​ಗಳು ಇನ್ಸಾಸ್​ ರೈಫಲ್​ಗಳ ಸ್ಥಾನವನ್ನು ತುಂಬಲಿವೆ. ಮುಂದಿನ ಹಂತದಲ್ಲಿ ಪ್ಯಾರಾ ಮಿಲಿಟರಿ ಪಡೆಗಳ ಯೋಧರು ಮತ್ತು ಎಲ್ಲಾ ರಾಜ್ಯಗಳ ಪೊಲೀಸರಿಗೆ ಈ ರೈಫಲ್​ಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಫಲ್​ಗಳ ಜತೆಯಲ್ಲೇ 700 ಕೋಟಿ ರೂ. ವೆಚ್ಚದಲ್ಲಿ 72,400 ಅತ್ಯಾಧುನಿಕ ಅಸಾಲ್ಟ್​ (ಸಿಗ್​ ಸಾಯರ್​) ರೈಫಲ್​ ಅನ್ನು ತ್ವರಿತವಾಗಿ ಖರೀದಿಸಲು ರಕ್ಷಣಾ ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿದೆ. (ಏಜೆನ್ಸೀಸ್​)