ಡ್ರ್ಯಾಗನ್ ತಡೆಗೆ ತಂತ್ರ

ನವದೆಹಲಿ: ಕೇವಲ ನ್ಯಾಟೊ ಒಕ್ಕೂಟದ ರಾಷ್ಟ್ರಗಳಿಗೆ ಸೀಮಿತವಾಗಿದ್ದ ಕಾರ್ಯತಂತ್ರ ವ್ಯಾಪಾರ ಅಧಿಕಾರ -1(ಎಸ್​ಟಿಎ-1) ಮಾನ್ಯತೆಯನ್ನು ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಭಾವ ತಗ್ಗಿಸುವ ಉದ್ದೇಶದಿಂದ ಅಮೆರಿಕ ಭಾರತಕ್ಕೆ ನೀಡಿದೆ. ಇದರಿಂದಾಗಿ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅಮೆರಿಕ ನಿರ್ವಿುತ ಅತ್ಯಾಧುನಿಕ ಉತ್ಪನ್ನಗಳನ್ನು ಭಾರತ ಹೊಂದಬಹುದಾಗಿದೆ. ಅಮೆರಿಕ ಸರ್ಕಾರದಿಂದ ಶುಕ್ರವಾರ ಎಸ್​ಟಿಎ-1 ಮಾನ್ಯತೆ ಬಗೆಗಿನ ಅಧಿಕೃತ ಆದೇಶ ಹೊರಡಿಸಲಾಗಿದೆ.

ದಕ್ಷಿಣ ಚೀನಾ ಸಮುದ್ರ ಹಾಗೂ ಡೋಕ್ಲಾಂ ಬಿಕ್ಕಟ್ಟಿನಲ್ಲಿ ಅಧಿಪತ್ಯ, ತನ್ನ ಮಧ್ಯಸ್ಥಿಕೆಯಲ್ಲಿ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವೆ ಭಿನ್ನಮತ ಶಮನಗೊಳಿಸಿದ ಚೀನಾ ಪ್ರಭಾವಶಾಲಿಯಾಗುತ್ತಿರುವುದು ಅಮೆರಿಕದ ನಿದ್ದೆಗೆಡಿಸಿದೆ. ರಷ್ಯಾ ಬೆಂಬಲ ಹೆಚ್ಚಿದರೆ ಭವಿಷ್ಯದಲ್ಲಿ ಏಷ್ಯಾದಲ್ಲಿ ಅಧಿಪತ್ಯ ಸಾಧಿಸಿ, ಬಳಿಕ ತನಗೆ ಸೆಡ್ಡು ಹೊಡೆಯಲು ಚೀನಾ ಎದುರು ನಿಲ್ಲುತ್ತದೆ ಎಂದು ಅಮೆರಿಕ ಚೆನ್ನಾಗಿ ಅರಿತಿದೆ. ಹಾಗಾಗಿ ಭಾರತಕ್ಕೆ ಎಸ್​ಟಿಎ-1 ಮಾನ್ಯತೆ ನೀಡುವ ಮೂಲಕ ಏಷ್ಯಾದಲ್ಲಿಯೇ ಚೀನಾ ಪ್ರಭಾವವನ್ನು ಚಿವುಟಿ ಹಾಕಲು ಅಮೆರಿಕ ಹೆಣೆದಿರುವ ತಂತ್ರವಿದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮೂರನೇ ರಾಷ್ಟ್ರ ಭಾರತ : ಜಪಾನ್, ದಕ್ಷಿಣ ಕೊರಿಯಾ ಬಳಿಕ ಎಸ್​ಟಿಎ-1 ಮಾನ್ಯತೆ ಪಡೆದ ಏಷ್ಯಾದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ. ಹಾಂಕಾಂಗ್, ಮಾಲ್ಟಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ತೈವಾನ್, ಇಸ್ರೇಲ್ ಪ್ರಸ್ತುತ ಎಸ್​ಟಿಎ-2 ಮಾನ್ಯತೆ ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಭಾರತಕ್ಕೆ ಮಾತ್ರ ಎಸ್​ಟಿಎ-1ಗೆ ಬಡ್ತಿ ಸಿಕ್ಕಿದೆ.

ಎನ್​ಎಸ್​ಜಿ ಸದಸ್ಯತ್ವ ಇನ್ನೂ ಹತ್ತಿರ?

ಪರಮಾಣು ಪೂರೈಕೆದಾರರ ಸಮೂಹ (ಎನ್​ಎಸ್​ಜಿ) ಸದಸ್ಯತ್ವಕ್ಕಾಗಿ ಎದುರು ನೋಡುತ್ತಿರುವ ಬೆನ್ನಲ್ಲೇ ಎಸ್​ಟಿಎ-1 ಮಾನ್ಯತೆ ಭಾರತದ ಪಾಲಾಗಿದೆ. ಚೀನಾ ಹೇರುತ್ತಿರುವ ತಾಂತ್ರಿಕ ಅಡೆತಡೆಗಳ ಕಾರಣದಿಂದಾಗಿ ವಿಳಂಬವಾಗುತ್ತಿರುವ ಎನ್​ಎಸ್​ಜಿ ಸದಸ್ಯತ್ವ ಶೀಘ್ರವೇ ಭಾರತಕ್ಕೆ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ. ವಿಶ್ವದಲ್ಲಿ ಭಾರತದ ಹೊರತಾಗಿ 36 ರಾಷ್ಟ್ರಗಳು ಎಸ್​ಟಿಎ-1 ಮಾನ್ಯತೆ ಹೊಂದಿವೆ. ಭಾರತದ ಜತೆಗೆ ಸ್ನೇಹದ ಬಯಕೆ ಮತ್ತು ಅಮೆರಿಕದ ಒತ್ತಡದಿಂದ ಎನ್​ಎಸ್​ಜಿ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಚೀನಾ ಮೇಲೆ ಒತ್ತಡ ಹೇರಬಹುದು. ಆಗ ಅನಿವಾರ್ಯವಾಗಿ ಚೀನಾ , ತನ್ನ ಪಾಕ್ ಪರವಾದ ನಿಲುವು ಬದಿಗೊತ್ತಿ ಭಾರತದ ಎನ್​ಎಸ್​ಜಿ ಸದಸ್ಯತ್ವ ಕನಸಿಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ ಎನ್ನಲಾಗುತ್ತಿದೆ.


ಟ್ರೇಡ್​ವಾರ್​ಗೆ ಅಲ್ಪವಿರಾಮ

ನವದೆಹಲಿ: ಅಮೆರಿಕದ 29 ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆಯನ್ನು ಆ.4ರ ಬದಲು ಸೆ.18ರಿಂದ ಅನ್ವಯಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ.

ಅಮೆರಿಕ ಹಾಗೂ ಭಾರತದ ವಿದೇಶಾಂಗ ಇಲಾಖೆ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದು, ವಾಣಿಜ್ಯ ಸಮರಕ್ಕೆ ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ ತೆರಿಗೆ ಹೆಚ್ಚಳದ ಪ್ರಸ್ತಾಪವನ್ನು 45 ದಿನಗಳವರೆಗೆ ಮುಂದೂಡಿದೆ. ಜೂನ್​ನಲ್ಲಿ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಆಗಸ್ಟ್ 4ರಿಂದ 29 ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ಅನುಷ್ಠಾನಗೊಳ್ಳಬೇಕಿತ್ತು.

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಅಲ್ಯುಮಿನಿಯಂ ಹಾಗೂ ಉಕ್ಕಿನ ಮೇಲೆ ಹೆಚ್ಚುವರಿ ಶೇ.25ರ ತೆರಿಗೆಯನ್ನು ಅಮೆರಿಕ ಹಾಕಿತ್ತು. ಇದರಿಂದ ವಾರ್ಷಿಕವಾಗಿ ಭಾರತದ ಮೇಲೆ 1651 ಕೋಟಿ ಆರ್ಥಿಕ ಹೊರೆ ಬೀಳುತ್ತಿತ್ತು. ಇದಕ್ಕೆ ಪ್ರತಿಯಾಗಿ 29 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿ ಭಾರತವು ಅಮೆರಿಕಕ್ಕೆ ಎದಿರೇಟು ನೀಡಿತ್ತು. ಇದರ ಅನ್ವಯ ಅಕ್ರೋಡ್, ಕಡಲೆ, ಚನಾ, ಮಸೂರ್ ಸೇರಿ 28 ಉತ್ಪನ್ನಗಳ ಮೇಲೆ ಶೇ.30ರಿಂದ 120ರವರೆಗೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಪಿಟಿಐ