ಇಂದು ಭಾರತ ಟೆಸ್ಟ್ ತಂಡ ಆಯ್ಕೆ

ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನ ಭಾಗವಾಗಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಆಯ್ಕೆ ಗುರುವಾರ ನಡೆಯಲಿದೆ. ಎಂಎಸ್​ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ನವದೆಹಲಿಯಲ್ಲಿ ಸಭೆ ಸೇರಲಿದೆ.

ತಂಡದಲ್ಲಿ ಹೆಚ್ಚಿನ ಬದಲಾವಣೆ ಅನುಮಾನವಾಗದಿದ್ದರೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಚರ್ಚೆಗಳಾಗುವ ಸಾಧ್ಯತೆ ಹೆಚ್ಚಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಗೆದ್ದಿದ್ದರೂ, ಆರಂಭಿಕ ಜೋಡಿಯ ಬ್ಯಾಟಿಂಗ್ ಕಳವಳಕಾರಿಯಾಗಿತ್ತು. ಕೆಎಲ್ ರಾಹುಲ್ ರನ್ ಗಳಿಸಲು ಪರದಾಟ ನಡೆಸುತ್ತಿದ್ದರೆ, ಪೃಥ್ವಿ ಷಾ ನಿಷೇಧದ ಕಾರಣ ಅಲಭ್ಯರಾಗಿದ್ದಾರೆ. ಇದರಿಂದಾಗಿ ಮಯಾಂಕ್ ಅಗರ್ವಾಲ್ ಜತೆ ಟೆಸ್ಟ್ ತಂಡದ ಆರಂಭಿಕರಾಗಿ ಹೊಸಮುಖವನ್ನು ಹೆಸರಿಸುವುದನ್ನು ತಳ್ಳಿ ಹಾಕುವಂತಿಲ್ಲ. ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಇನ್ನೂ ಕೆಲ ಮಾಜಿ ಆಟಗಾರರು ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಗೆ ಬಡ್ತಿ ನೀಡಬೇಕು. ಈ ಪ್ರಯೋಗ ಫಲ ನೀಡಬಹುದು ಎಂದು ಹೇಳಿದ್ದಾರೆ. ಇತ್ತೀಚೆಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಕೂಡ, ರೋಹಿತ್​ರನ್ನು ಆರಂಭಿಕರಾಗಿ ಪರಿಗಣಿಸಿ ಆಯ್ಕೆ ಮಾಡುವ ಸೂಚನೆ ನೀಡಿದ್ದರು.

‘ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯವಾದ ಬಳಿಕ ಆಯ್ಕೆ ಸಮಿತಿಯ ಸಭೆ ನಡೆದಿಲ್ಲ. ರೋಹಿತ್​ರನ್ನು ಆರಂಭಿಕರಾಗಿ ಆಯ್ಕೆ ಮಾಡುವ ವಿಚಾರವನ್ನು ಖಂಡಿತಾ ಪರಿಗಣಿಸುತ್ತೇವೆ. ಸೂಕ್ತ ಚರ್ಚೆಯ ಬಳಿಕ ಈ ನಿರ್ಧಾರ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.

ಭಾರತಕ್ಕೆ 3ನೇ ಸ್ಥಾನಕ್ಕೇರುವ ಅವಕಾಶ

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ರ‍್ಯಾಂಕಿಂಗ್ ಪ್ರಗತಿ ಕಾಣುವ ಅವಕಾಶ ಆತಿಥೇಯ ಭಾರತ ತಂಡಕ್ಕಿದೆ. ಐಸಿಸಿ ಟಿ20 ರ್ಯಾಂಕಿಂಗ್​ನಲ್ಲಿ ಭಾರತ ತಂಡ ಸದ್ಯ ದಕ್ಷಿಣ ಆಫ್ರಿಕಾದ ಹಿಂದೆ 4ನೇ ಸ್ಥಾನದಲ್ಲಿದೆ. ಸೆ. 15ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಗೆದ್ದರೆ ಭಾರತಕ್ಕೆ 3ನೇ ಸ್ಥಾನಕ್ಕೇರುವ ಅವಕಾಶವಿದೆ. ಭಾರತ ಸದ್ಯ 261 ಅಂಕ ಮತ್ತು ದಕ್ಷಿಣ ಆಫ್ರಿಕಾ 262 ಅಂಕ ಹೊಂದಿದೆ. ಭಾರತ 2-1ಯಿಂದ ಗೆದ್ದರೆ 263 ಮತ್ತು 3-0ಯಿಂದ ಕ್ಲೀನ್​ಸ್ವೀಪ್ ಸಾಧಿಸಿದರೆ 265 ಅಂಕದೊಂದಿಗೆ 3ನೇ ಸ್ಥಾನಕ್ಕೇರಲಿದೆ. ಇದಕ್ಕೆ ಬದಲಾಗಿ ಭಾರತ 1-2ರಿಂದ ಸರಣಿ ಸೋತರೆ 260 ಮತ್ತು 0-3ರಿಂದ ಸೋತರೆ 257 ಅಂಕದೊಂದಿಗೆ 5ನೇ ಸ್ಥಾನಕ್ಕೆ ಕುಸಿಯಲಿದೆ. ದಕ್ಷಿಣ ಆಫ್ರಿಕಾ ಸರಣಿ ಗೆದ್ದರಷ್ಟೇ 3ನೇ ಸ್ಥಾನ ಉಳಿಸಿಕೊಳ್ಳಲಿದ್ದು, 3-0ಯಿಂದ ಗೆದ್ದರೆ 270 ಅಂಕದೊಂದಿಗೆ 2ನೇ ಸ್ಥಾನಕ್ಕೇರುವ ಅವಕಾಶವನ್ನೂ ಹೊಂದಿದೆ. ಇದಕ್ಕೆ ಬದಲಾಗಿ ವೈಟ್​ವಾಷ್ ಎದುರಿಸಿದರೆ 5ನೇ ಸ್ಥಾನಕ್ಕೆ ಕುಸಿಯಲಿದೆ. ಸದ್ಯ ಪಾಕಿಸ್ತಾನ 283 ಮತ್ತು ಇಂಗ್ಲೆಂಡ್ 266 ಅಂಕದೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಆಸ್ಟ್ರೇಲಿಯಾ 261 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.

ರಾಹುಲ್ ಬದಲು ಈಶ್ವರನ್?

ಕೆಟ್ಟ ಫಾರ್ಮ್‌​ನಲ್ಲಿರುವ ಕೆಎಲ್ ರಾಹುಲ್​ರನ್ನು ತಂಡದಿಂದ ಕೈಬಿಡುವ ನಿರ್ಧಾರ ಮಾಡಿದಲ್ಲಿ, ಮೀಸಲು ಆರಂಭಿಕ ಆಟಗಾರನಾಗಿ ಬಂಗಾಳದ ಅಭಿಮನ್ಯು ಈಶ್ವರನ್ ಆಯ್ಕೆಯಾಗುವ ವರದಿಗಳಿವೆ. ಅದರೊಂದಿಗೆ ಗುಜರಾತ್​ನ ಪ್ರಿಯಾಂಕ್ ಪಾಂಚಾಲ್ ಹಾಗೂ ಪಂಜಾಬ್​ನ ಶುಭಮಾನ್ ಗಿಲ್ ಕೂಡ ರೇಸ್​ನಲ್ಲಿದ್ದಾರೆ. ಟೀಮ್ ಮ್ಯಾನೇಜ್​ವೆುಂಟ್​ನ ಫೇವರಿಟ್ ಆಗಿರುವ ಕೆಎಲ್ ರಾಹುಲ್ ಈವರೆಗೂ ಆಡಿದ 30 ಟೆಸ್ಟ್ ಇನಿಂಗ್ಸ್​ಗಳಿಂದ ಕೇವಲ 664 ರನ್ ಬಾರಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧ ಅನೌಪಚಾರಿಕವಾಗಿದ್ದ ಓವಲ್ ಟೆಸ್ಟ್ ಪಂದ್ಯದಲ್ಲಿ 149 ರನ್ ಬಾರಿಸಿದ್ದೇ ಅವರ ಗರಿಷ್ಠ ಮೊತ್ತವಾಗಿದೆ.

Leave a Reply

Your email address will not be published. Required fields are marked *