ರೋಹಿತ್​​ ರೋರಿಂಗ್​​​​​​ ಸೆಂಚುರಿ; ಟೀಂ ಇಂಡಿಯಾಗೆ ವಿಕ್ಟರಿ : 3ನೇ ಪಂದ್ಯದಲ್ಲೂ ಫ್ಲಾಪ್​​ ಆದ ಡುಪ್ಲಿಸಿಸ್​​ ಪಡೆ

ಸೌಂಥಾಪ್ಟನ್​​: ಹಿಟ್​​​ಮ್ಯಾನ್​​ ರೋಹಿತ್​ ಶರ್ಮಾ ಅವರ ಸ್ಫೋಟಕ ಶತಕ ನೆರವಿನಿಂದ ಭಾರತ ತಂಡ 12ನೇ ವಿಶ್ವಕಪ್​​ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 6 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿತು.

ಇಲ್ಲಿನ ದಿ ರೋಸ್​​​ ಬೌಲ್​​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​​​​​ ಗೆದ್ದು ಬ್ಯಾಟಿಂಗ್​​ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್​​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 227 ರನ್​​​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 47.3 ಓವರ್​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 230 ರನ್​​ ನೊಂದಿಗೆ ಗೆಲುವಿನ ನಗೆ ಬೀರಿತು.

ಆರಂಭಿಕರಾಗಿ ಕ್ರೀಸ್​​ಗೆ ಆಗಮಿಸಿದ ಭಾರತ ಶಿಕರ್​​ ಧವನ್​​​​​​​ (8) ಶೀಘ್ರ ಔಟಾದರೆ, ನಾಯಕ ವಿರಾಟ್​​ ಕೊಹ್ಲಿ (18) ಮತ್ತು ಕೆ.ಎಲ್​​ ರಾಹುಲ್​​​ (26) ಎದುರಾಳಿ ಬೌಲರ್​​ಗಳ ದಾಳಿಗೆ ಸಿಲುಕಿ ಪೆವಿಲಿಯನ್​​ ದಾರಿ ಹಿಡಿದರು.

ಆರಂಭದಿಂದಲೂ ಕ್ರೀಸ್​ನಲ್ಲಿ ನೆಲೆನಿಂತ ರೋಹಿತ್​​ ಶರ್ಮಾ ಶತಕದಾಟವಾಡುವ ಮೂಲಕ ತಂಡ ಗೆಲುವಿನ ರೂವಾರಿಗಳಾದರು. ಅವರು ಎದುರಿಸಿದ 144 ಎಸೆತಗಳಲ್ಲಿ 2 ಸಿಕ್ಸರ್​​​ ಹಾಗೂ 13 ಬೌಂಡರಿಗಳೊಂದಿಗೆ 122 ರನ್​​​​ ಗಳಿಸುವ ಮೂಲಕ ಪ್ರಸಕ್ತ ಸಾಲಿನ ವಿಶ್ವಕಪ್​​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್​​ಮನ್​​​​​​ ಎಂಬ ಹೆಗ್ಗಳಿಕೆ ಪಾತ್ರರಾದರು. ತಮ್ಮ ಏಕದಿನ ವೃತ್ತಿ ಜೀವನದಲ್ಲಿ 23ನೇ ಶತಕ ಸಿಡಿಸಿ ಸಂಭ್ರಮಿಸಿದರು.

ಅವರಿಗೆ ಸಾಥ್​ ನೀಡಿದ ವಿಕೆಟ್​​ ಕೀಪರ್​ ಮಹೇಂದ್ರ ಸಿಂಗ್​​ ಧೋನಿ ಆಕರ್ಷಕ ಬ್ಯಾಟಿಂಗ್​​​​​​​​​ನೊಂದಿಗೆ 34 ರನ್​​ ಗಳಿಸಿ ಕ್ರಿಸ್​​ ಮೋರಿಸ್​ಗೆ ಕ್ಯಾಚ್​​ ನೀಡಿದರು. ಬಳಿಕ ಬಂದ ಹಾರ್ದಿಕ್​​ ಪಾಂಡ್ಯ 15 ರನ್​​ ಗಳಿಸಿದರು.
ಬೌಲಿಂಗ್​ನಲ್ಲಿ ದಕ್ಷಿಣ ಆಫ್ರಿಕಾ ಕಗಿಸೋ ರಬಾಡ ಎರಡು, ಕ್ರಿಸ್​​ ಮೋರಿಸ್​​​​ ಹಾಗೂ ಆ್ಯಡಿಲೆ ಪೆಹ್ಲುಕ್ವಾಯೊ ತಲಾ ಒಂದು ವಿಕೆಟ್​​ ಪಡೆದರು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ ಭಾರತ ಬೌಲರ್​ಗಳ ದಾಳಿಗೆ ಸಿಲುಕಿತು. ಹಶೀಮ್​​ ಅಮ್ಲಾ(6), ಕ್ವಿಂಟನ್​​ ಡಿಕಾಕ್​​​ (10) ಬುಮ್ರಾ ಯಾರ್ಕರ್​​​​​​​​​​ ದಾಳಿಗೆ ಸಿಲುಕಿ ವಿಕೆಟ್​​ ಕಳೆದುಕೊಂಡರೆ, ನಾಯಕ ಫಾಫ್​​​ ಡುಪ್ಲಿಸಿಸ್​​​ (38), ರಸ್ಸೆ ವಾನ್​​​ ಡೆರ್​​​​​​​​​​​​​​​ ದುಸಾನ್​​​​​(22), ಡೇವಿಡ್​​ ಮಿಲ್ಲರ್​​​​​ (31) ಮತ್ತು ಆ್ಯಡಿಲೆ ಪೆಹ್ಲುಕ್ವಾಯೊ (34) ಅವರು ಚಾಹಲ್​​​ ಸ್ಪಿನ್​​ ಮೋಡಿಗೆ ವಿಕೆಟ್​​ ಒಪ್ಪಿಸಿ ಪೆವಿಲಿಯನ್​​​ ದಾರಿ ಹಿಡಿದರು.

ನಂತರ ಬಂದ ಕ್ರಿಸ್​​ ಮೋರಿಸ್​​​​​​​​​​(42) ಹಾಗೂ ಕಗಿಸೊ ರಬಾಡ (31) ಉತ್ತಮ ಆಟದೊಂದಿಗೆ 50 ರನ್​​ಗಳ ಜತೆಯಾಟವಾಡಿದರು. ಮೊರಿಸ್​​ ಹಾಗೂ ಇಮ್ರಾನ್​​ ತಾಹೀರ್​​ ಅವರ ವಿಕೆಟ್​​ನ್ನು ಆಲ್ ರೌಂಡರ್​​ ಭುವೇಶ್ವರ್​​​​ ಕಬಳಿಸಿ ಪಾರಮ್ಯ ಮೆರೆದರು.

ದಕ್ಷಿಣ ಆಫ್ರಿಕಾ ಟೂರ್ನಿಯ ಮೂರು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಲ್ಲಿ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಮುಂದಿನ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ದ.ಆಫ್ರಿಕಾ ಟೂರ್ನಿಯಲ್ಲಿ ಉಳಿಯಲು ಸಾಧ್ಯವಾಗುತ್ತದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *