2021ರೊಳಗೆ ಮೂವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ; ಚಂದ್ರಯಾನ-2ಕ್ಕೆ ಇಸ್ರೊ ಸಿದ್ಧತೆ

ಬೆಂಗಳೂರು: ಎರಡು ಮಾನವರಹಿತ ಗಗನಯಾನ ಯೋಜನೆಗೆ 2020ರ ಡಿಸೆಂಬರ್, 2021ರ ಜುಲೈನಲ್ಲಿ ಚಾಲನೆ ನೀಡಲಾಗುತ್ತದೆ. 2021ರ ಡಿಸೆಂಬರ್​ನಲ್ಲಿ ಮಾನವಸಹಿತ ಗಗನಯಾನ ಯೋಜನೆಗೆ ಪ್ರಧಾನಿ ಮೋದಿ ಅವರು ಗಣರಾಜ್ಯೋತ್ಸವದಂದು ಚಾಲನೆ ನೀಡಲಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ)ಯ ಅಧ್ಯಕ್ಷ ಕೆ ಸಿವನ್‌ ತಿಳಿಸಿದ್ದಾರೆ.

ಬೆಂಗಳೂರಿನ ಇಸ್ರೊ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇಸ್ರೋಗೆ ಗಗನಯಾನ ಯೋಜನೆ ಮುಖ್ಯ ತಿರುವು ಕೊಡಲಿದೆ. ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇದಕ್ಕಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸಲಾಗಿದೆ. ಇವರು ಏಳು ದಿನ ಬಾಹ್ಯಾಕಾಶದಲ್ಲಿ ಅಧ್ಯಯನ, ಸಂಶೋಧನೆ ನಡೆಸುತ್ತಾರೆ. ಗಗನಯಾತ್ರಿಗಳಿಗೆ ವಾಸ್ತವ್ಯ, ಮೂಲಸೌಕರ್ಯ ವ್ಯವಸ್ಥೆ ಮಾಡಲಾಗುತ್ತದೆ. ಗಗನಯಾತ್ರಿಗಳ ಸುರಕ್ಷತೆ ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಚಂದ್ರಯಾನ-2

ಚಂದ್ರಯಾನ- 2 ಉಪಗ್ರಹ ಉಡಾವಣೆಯನ್ನು ಇದೇ ವರ್ಷದ ಏಪ್ರಿಲ್ ಮಧ್ಯದಲ್ಲಿ ಉಡಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಗಗನಯಾನ ಯೋಜನೆಗೆ ಕೇಂದ್ರದಿಂದ 30 ಸಾವಿರ ಕೋಟಿ ರೂ. ಅನುದಾನ ದೊರಕಿದೆ. ಪಿಎಸ್‌ಎಲ್‌ವಿ ರಾಕೆಟ್ ಗಳನ್ನು ಸಿದ್ಧಪಡಿಸಲು 10 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಗಗನಯಾನ ಯೋಜನೆಯ ಚಾಲನೆಗೆ 10 ಸಾವಿರ ಕೋಟಿ ರೂ., ಉಪಗ್ರಹಗಳ ನಿರ್ವಹಣೆಗೆ 10 ಸಾವಿರ ಕೋಟಿ ರೂ ವೆಚ್ಚವಾಗಲಿದೆ. ಇದರಿಂದಾಗಿ 20 ಸಾವಿರ ಉದ್ಯೋಗಗಳ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

3 ತಿಂಗಳಲ್ಲಿ ಇಸ್ರೊ ಟಿ.ವಿ.

ಇಸ್ರೊ ಟಿ.ವಿ. ಇನ್ನು ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಬಗ್ಗೆ ಮಾಹಿತಿ ನೀಡುವ ವಾಹಿನಿಯಾಗಲಿದೆ. ಈಗಾಗಲೇ ಅಂತಿಮ ಹಂತದ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಿವನ್​ ತಿಳಿಸಿದರು.

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಜಿಸ್ಯಾಟ್ -20 ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದ್ದೇವೆ. ಇದರಿಂದ 100 ಜಿಬಿಪಿಎಸ್ ಇಂಟರ್‌ನೆಟ್‌ ಸ್ಪೀಡ್ ಲಭ್ಯವಾಗಲಿದೆ. 2019ರಲ್ಲಿ 32 ಪ್ರಮುಖ ಯೋಜನೆಗಳನ್ನು ಕಾರ್ಯಗತ ಮಾಡುತ್ತೇವೆ. ಈ ವರ್ಷ ಮರುಬಳಕೆಯ ರಾಕೆಟ್ ಪರೀಕ್ಷಾರ್ಥ ಉಡಾವಣೆ ಮಾಡಲಿದ್ದೇವೆ ಎಂದರು.

ಮೀನುಗಾರರ ಪತ್ತೆಗೆ ಸರ್ಕಾರದಿಂದ ಪತ್ರ ಬಂದಿಲ್ಲ

ಮಲ್ಪೆ ಸಮುದ್ರದಲ್ಲಿ 7 ಜನ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಮೀನುಗಾರರ ಪತ್ತೆಗೆ ಸರ್ಕಾರದಿಂದ ನೆರವು ಕೇಳುವ ಪತ್ರದ ಬಗ್ಗೆ ಮಾಹಿತಿ ಇಲ್ಲ. ಸರಕಾರ ನೆರವು ಕೇಳಿದರೆ ನೆರವು ಕೊಡಲು ನಾವು ಸಿದ್ಧ. ನ್ಯಾವಿಗೇಷನ್ ಮತ್ತು ಅಲರ್ಟ್ ಎಂಬ ಎರಡು ವ್ಯವಸ್ಥೆಗಳು ನಮ್ಮಲ್ಲಿವೆ. ಈ ವ್ಯವಸ್ಥೆಗಳ ಮೂಲಕ ಮೀನುಗಾರರ ಪತ್ತೆ ಸುಲಭವಾಗುತ್ತದೆ. ಸರ್ಕಾರ ಪತ್ರ ಬರೆದ ಬಳಿಕ ಕಾರ್ಯಾಚರಣೆ ಕೈಗೊಳ್ಳುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್)