ಕಾಂಗರೂ ಬೇಟೆಗೆ ಸಜ್ಜಾದ ಭಾರತ ತಂಡ

ಬ್ರಿಸ್ಬೇನ್: ಚೆಂಡು ವಿರೂಪ ಪ್ರಕರಣದಲ್ಲಿ ದೊಡ್ಡ ಮಟ್ಟದ ಘಾಸಿ ಎದುರಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ, ವಿಶ್ವ ಕ್ರಿಕೆಟ್​ನಲ್ಲಿ ಮಾನ ಹರಾಜು ಹಾಕಿದ ಪ್ರಕರಣದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿದೆ. ಇದರ ನಡುವೆಯೇ ವಿಶ್ವದ ಅಗ್ರ ತಂಡ ಭಾರತವನ್ನು ತವರಿನಲ್ಲಿ ಎದುರಿಸುವ ದೊಡ್ಡ ಸವಾಲು ಎದುರಾಗಿದೆ. ಕಾಂಗರೂಗಳನ್ನು ತವರು ನೆಲದಲ್ಲಿಯೇ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಮಣಿಸುವ ಅಪರೂಪದ ಅವಕಾಶವನ್ನು ಹೊಂದಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಮೂರು ತಿಂಗಳ ಆಸ್ಟ್ರೇಲಿಯಾ ಪ್ರವಾಸವನ್ನು ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭಿಸಲಿದೆ. ಉಭಯ ದೇಶಗಳ ನಡುವಿನ ಮೊದಲ ಟಿ20 ಪಂದ್ಯ ಬ್ರಿಸ್ಬೇನ್​ನ ಐತಿಹಾಸಿಕ ಗಾಬಾ ಮೈದಾನದಲ್ಲಿ ಬುಧವಾರ ನಡೆಯಲಿದೆ. ಟಿ20 ಮಾದರಿಯಲ್ಲಿ ತಂಡದ ಪ್ರಮುಖ ಕೊಂಡಿಯಾಗಿರುವ ಹಾರ್ದಿಕ್ ಪಾಂಡ್ಯರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಲಿದ್ದರೆ, ಆತಿಥೇಯ ಆಸ್ಟ್ರೇಲಿಯಾ ಕೂಡ ಅನುಭವಿ ಆಟಗಾರರಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್​ವುಡ್, ಪ್ಯಾಟ್ ಕಮ್ಮಿನ್ಸ್ ಹಾಗೂ ನಥಾನ್ ಲ್ಯಾನ್​ಗೆ ವಿಶ್ರಾಂತಿ ನೀಡಿದೆ. ಹಾಲಿ ವರ್ಷ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿರುವ ಆಟಗಾರರಾದ ಶಿಖರ್ ಧವನ್ (2ನೇ ಸ್ಥಾನ) ಹಾಗೂ ರೋಹಿತ್ ಶರ್ಮ (4ನೇ ಸ್ಥಾನ) ಮತ್ತೊಮ್ಮೆ ಆಸೀಸ್​ಗೆ ಸವಾಲಾಗಲಿದ್ದಾರೆ. ಕಳೆದ 15 ಇನಿಂಗ್ಸ್​ಗಳಲ್ಲಿ 5 ಅರ್ಧಶತಕವನ್ನು ಧವನ್ ದಾಖಲಿಸಿದ್ದರೆ, ರೋಹಿತ್ ಶರ್ಮ 16 ಇನಿಂಗ್ಸ್​ಗಳಿಂದ 3 ಫಿಫ್ಟಿ ಪ್ಲಸ್ ಮೊತ್ತ ದಾಖಲಿಸಿದ್ದಾರೆ. ಇದರಲ್ಲಿ 2 ಶತಕಗಳಾಗಿರುವುದು ವಿಶೇಷ. ಇನ್ನು ಬೌಲಿಂಗ್​ನಲ್ಲಿ ಭಾರತದ ಯಶಸ್ವಿ ಬೌಲರ್​ಗಳಾಗಿರುವವರು ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್. ಇನ್ನು ಆಸ್ಟ್ರೇಲಿಯಾದ ಬ್ಯಾಟಿಂಗ್ ನಾಯಕ ಆರನ್ ಫಿಂಚ್, ಡಾರ್ಸಿ ಶಾರ್ಟ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್​ರನ್ನು ಅವಲಂಬಿಸಿದೆ. -ಏಜೆನ್ಸೀಸ್

ವ್ಯತಿರಿಕ್ತ ಟಿ20 ಫಾರ್ಮ್​

ಭಾರತ ತಂಡ ಕಳೆದ 12 ಟಿ20 ಪಂದ್ಯಗಳ ಪೈಕಿ 11ರಲ್ಲಿ ಗೆದ್ದಿದೆ. ವಿದೇಶದಲ್ಲಿ ಆಡಿದ 9 ಪಂದ್ಯಗಳ ಪೈಕಿ 8ರಲ್ಲಿ ಜಯ ಸಾಧಿಸಿದೆ. ಏಕೈಕ ಸೋಲು ಇಂಗ್ಲೆಂಡ್ ವಿರುದ್ಧ ಕಾರ್ಡಿಫ್​ನಲ್ಲಿ ಬಂದಿತ್ತು. ಆದರೆ, ಭಾರತ ಆ ಸರಣಿಯಲ್ಲಿ 2-1ರಿಂದ ಜಯಿಸಿತ್ತು. ವಿಶ್ವ ರ್ಯಾಂಕಿಂಗ್​ನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿದ್ದರೂ ಆಸ್ಟ್ರೇಲಿಯಾ ಕಳೆದ ನಾಲ್ಕು ಟಿ20 ಪಂದ್ಯಗಳಲ್ಲಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಶನಿವಾರ ನಡೆದ ಮಳೆಬಾಧಿತ ‘ಟಿ10’ ಪಂದ್ಯದಲ್ಲಿ ಆಸೀಸ್ ಸೋಲು ಕಂಡಿದೆ. ಅದಕ್ಕೂ ಮುನ್ನ ವಿಶ್ವ ನಂ.1 ಪಾಕಿಸ್ತಾನ ವಿರುದ್ಧ ಯುಎಇಯಲ್ಲಿ ವೈಟ್​ವಾಷ್ ಅವಮಾನ ಎದುರಿಸಿತ್ತು. ಟಿ20 ರ್ಯಾಂಕಿಂಗ್​ನಲ್ಲಿ 3ನೇ ಸ್ಥಾನದಲ್ಲಿದೆ.

ಸ್ಮಿತ್, ವಾರ್ನರ್ ನಿಷೇಧ ತೆರವಿಲ್ಲ

ಚೆಂಡು ವಿರೂಪ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್​ನಿಂದ ನಿಷೇಧಕ್ಕೆ ಒಳಪಟ್ಟಿರುವ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾನ್​ಕ್ರಾಫ್ಟ್ ಮೇಲಿನ ಶಿಕ್ಷೆಯನ್ನು ತೆರವು ಮಾಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಇದರಿಂದಾಗಿ ಮುಂಬರುವ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ತಂಡಕ್ಕೆ ಮರಳುವ ಈ ಆಟಗಾರರ ಆಸೆ ಭಗ್ನಗೊಂಡಿದೆ. ಆಸ್ಟ್ರೇಲಿಯಾ ತಂಡದ ಇತ್ತೀಚಿನ ಕೆಟ್ಟ ನಿರ್ವಹಣೆಯ ಬೆನ್ನಲ್ಲಿಯೇ ಈ ಆಟಗಾರರ ಮೇಲಿನ ನಿಷೇಧ ಶಿಕ್ಷೆಯನ್ನು ತೆರವು ಮಾಡಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆ ಮನವಿ ಮಾಡಿತ್ತು. ಸ್ಮಿತ್ ಹಾಗೂ ವಾರ್ನರ್ 1 ವರ್ಷದ ನಿಷೇಧ ಶಿಕ್ಷೆಯ 8ನೇ ತಿಂಗಳಿನಲ್ಲಿದ್ದರೆ, 9 ತಿಂಗಳ ನಿಷೇಧ ಶಿಕ್ಷೆ ಪಡೆದಿದ್ದ ಬ್ಯಾನ್​ಕ್ರಾಫ್ಟ್ ಡಿಸೆಂಬರ್ ಬಳಿಕ ಆಯ್ಕೆಗೆ ಲಭ್ಯವಾಗಲಿದ್ದಾರೆ.

ಟೀಮ್ ನ್ಯೂಸ್

ಭಾರತ: ಪಂದ್ಯಕ್ಕೂ ಮುನ್ನದಿನವೇ ಭಾರತ ತಂಡ 12 ಆಟಗಾರರ ಬಳಗವನ್ನು ಪ್ರಕಟ ಮಾಡಿದೆ. ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ವಾಷಿಂಗ್ಟನ್ ಸುಂದರ್ ಹಾಗೂ ಉಮೇಶ್ ಯಾದವ್ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಟಿ20 ತಂಡವನ್ನು ಮತ್ತೆ ಮುನ್ನಡೆಸಲು ವಿರಾಟ್ ಕೊಹ್ಲಿ ಸಿದ್ಧವಾಗಿದ್ದು, 3 ಸ್ಪಿನ್ ಬೌಲಿಂಗ್ ಅವಕಾಶಗಳನ್ನು ಭಾರತ ಹೊಂದಿದೆ. ಕೃನಾಲ್ ಪಾಂಡ್ಯ ಆಲ್ರೌಂಡರ್ ಕೋಟಾದೊಂದಿಗೆ ಸ್ಥಾನ ಪಡೆಯಲಿರುವ ಕಾರಣ, ಕುಲದೀಪ್ ಹಾಗೂ ಯಜುವೇಂದ್ರ ಚಾಹಲ್ ನಡುವೆ ಇನ್ನೊಂದು ಸ್ಥಾನಕ್ಕಾಗಿ ಫೈಟ್ ಇದೆ. ಬುಮ್ರಾ, ಭುವನೇಶ್ವರ್ ಹಾಗೂ ಖಲೀಲ್ ಅಹ್ಮದ್ ವೇಗದ ಬೌಲಿಂಗ್ ವಿಭಾಗದಲ್ಲಿ ಉಳಿದುಕೊಳ್ಳಲಿದ್ದಾರೆ.

ಸಂಭಾವ್ಯ ತಂಡ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ರಿಷಭ್ ಪಂತ್ (ವಿ.ಕೀ), ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಭುವನೇಶ್ವರ್, ಕುಲದೀಪ್ ಯಾದವ್/ಯಜುವೇಂದ್ರ ಚಾಹಲ್, ಜಸ್​ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್.

ಆಸ್ಟ್ರೇಲಿಯಾ: ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಗೋಲ್ಡ್​ಕೋಸ್ಟ್​ನಲ್ಲಿ ನಡೆದ ಮೊಟ್ಟಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪೂರ್ಣ ಪ್ರಮಾಣದ ವೇಗದ ಬೌಲಿಂಗ್ ವಿಭಾಗಕ್ಕೆ ಮೊರೆ ಹೋಗಿತ್ತು. ಅದೇ ಮಾದರಿಯನ್ನು ಅಸೀಸ್ ಉಳಿಸಿಕೊಳ್ಳಲಿದ್ದು, ಲೆಗ್​ಸ್ಪಿನ್ನರ್ ಆಡಂ ಜಂಪಾ ಹೊರಗುಳಿಯವ ಸಾಧ್ಯತೆ ಹೆಚ್ಚಿದೆ.

ಸಂಭಾವ್ಯ ತಂಡ: ಆರನ್ ಫಿಂಚ್ (ನಾಯಕ), ಡಾರ್ಸಿ ಶಾರ್ಟ್, ಕ್ರಿಸ್ ಲ್ಯಾನ್, ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋಯಿನಿಸ್, ಬೆನ್ ಮೆಕ್​ಡೊಮಾರ್ಟ್, ಅಲೆಕ್ಸ್ ಕ್ಯಾರಿ (ವಿ.ಕೀ), ನಥಾನ್ ಕೌಲ್ಟರ್ ನಿಲ್, ಆಂಡ್ರ್ಯೂ ಟೈ, ಜಾಸನ್ ಬೆಹ್ರನ್​ಡ್ರೋಫ್, ಬಿಲ್ಲಿ ಸ್ಟಾನ್​ಲೇಕ್.

ಪಿಚ್ ರಿಪೋರ್ಟ್

ಸಾಂಪ್ರದಾಯಿಕವಾಗಿರುವ ಹೆಚ್ಚಿನ ಬೌನ್ಸ್ ಹಾಗೂ ದೊಡ್ಡ ಬೌಂಡರಿಗಳು ಗಾಬಾ ಮೈದಾನದ ಆಕರ್ಷಣೆ. ಈ ಕಾರಣದಿಂದಾಗಿ ಎರಡೂ ತಂಡಗಳು ವೇಗದ ಬೌಲಿಂಗ್ ಆಯ್ಕೆಗಳನ್ನೇ ಹೆಚ್ಚಾಗಿ ಬಳಸಿಕೊಳ್ಳಲಿವೆ. ಮಳೆಯ ಆತಂಕವಿಲ್ಲ.