25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಮೇ 25ರಿಂದ 28ರವರೆಗೆ ಭಾರತ -ಶ್ರೀಲಂಕಾ ಎ ತಂಡಗಳ ಮಧ್ಯೆ 4 ದಿನಗಳ ಟೆಸ್ಟ್ ಪಂದ್ಯ ನಡೆಯಲಿದೆ. ಆಟಗಾರರಿಗೆ ಉತ್ತಮ ಸೌಕರ್ಯ ಒದಗಿಸಲು ಸಿದ್ಧರಾಗಿದ್ದೇವೆ ಎಂದು ಕೆಎಸ್‌ಸಿಎ ಧಾರವಾಡ ವಲಯದ ಸದಸ್ಯ ಅವಿನಾಶ ಪೋತದಾರ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ತಂಡಗಳ ಆಟಗಾರರು ಈಗಾಗಲೇ ಬೆಳಗಾವಿಗೆ ಬಂದಿಳಿದಿದ್ದಾರೆ. ಎರಡು ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ. ಆಟಗಾರರಿಗೆ ಉತ್ತಮ ದರ್ಜೆಯ ವಸತಿ ಮತ್ತು ಊಟದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಮೈದಾನ ಪ್ರವೇಶಕ್ಕೆ ಎರಡು ದ್ವಾರ ನಿರ್ಮಿಸಲಾಗಿದೆ. ಒಂದರಲ್ಲಿ ಆಟಗಾರರು, ಗಣ್ಯರು, ಅಧಿಕಾರಿಗಳು ಹಾಗೂ ಮತ್ತೊಂದರಲ್ಲಿ ಸಾರ್ವಜನಿಕರು ಪ್ರವೇಶಿಸಬಹುದು. ಕ್ರಿಕೆಟ್ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ ಖಾಸಗಿ ಕ್ಯಾಂಟೀನ್ ತೆರೆಯಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಈಗಾಗಲೇ 3 ರಣಜಿ ಪಂದ್ಯಗಳು ನಡೆದಿವೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪೂರಕವಾಗಿ ಮೈದಾನ ಅಭಿವೃದ್ಧಿ ಹೊಂದುತ್ತಿದೆ. 4 ತಿಂಗಳೊಳಗಾಗಿ ಫ್ಲಡ್ ಲೈಟ್ಸ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಕೆಎಸ್‌ಸಿದ ಧಾರವಾಡ ವಿಭಾಗದ ಸಂಯೋಜಕ ಬಾಬಾ ಬೂಸದ್, ವಿಮಾನ ನಿಲ್ದಾಣ ಇರುವ ಕಾರಣ ಬೆಳಗಾವಿಗೆ ಬರಲು ಆಟಗಾರರಿಗೆ ಅನುಕೂಲವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿ ವೇಳೆ ಬಿಸಿಸಿಐ ಭದ್ರತಾ ಕಾರ್ಯ ನಿರ್ವಹಿಸಲಿದೆ ಎಂದರು.

ಬಿಸಿಸಿಐನ ಅಧಿಕಾರಿ ಖಾಜಾ ಮುಬಸಿರುದ್ದೀನ್ ರಾಹಿಲ್ ಮಾತನಾಡಿ, 2018ರಲ್ಲಿ ಮುಂಬೈ-ಕರ್ನಾಟಕ ತಂಡಗಳ ಮಧ್ಯೆ ನಡೆದ ರಣಜಿ ಪಂದ್ಯದ ವೇಳೆ ಕಳಪೆ ಬಾಲ್ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಾರಿ ಉತ್ತಮ ದರ್ಜೆಯ ಬಾಲ್ ಬಳಕೆ ಮಾಡಲಾಗುತ್ತಿದೆ. ಮೈದಾನವೂ ಉತ್ತಮವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ಬೆಳಗಾವಿ ಮೈದಾನದ ವ್ಯವಸ್ಥಾಪಕ ದೀಪಕ ಪವಾರ್ ಇತರರಿದ್ದರು.

ಮೂರು ಏಕದಿನ ಪಂದ್ಯ

ಜೂ.6, 8 ಮತ್ತು 10ರಂದು ಭಾರತ -ಶ್ರೀಲಂಕಾ ಎ ತಂಡಗಳ ಮಧ್ಯೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಆಗ, ಮಳೆ ಸುರಿಯುವ ಸಾಧ್ಯತೆ ಹೆಚ್ಚಿದ್ದು, ಪಂದ್ಯಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಅವಿನಾಶ ಪೋತದಾರ ಹೇಳಿದರು.

Leave a Reply

Your email address will not be published. Required fields are marked *