ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಷ್ ಎ ಮೊಹಮದ್ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್ ನಿರ್ಮಿತ ಶಕ್ತಿಶಾಲಿ ಸ್ಪೈಸ್ 2000 ಬಾಂಬ್ ಬಳಸಲಾಗಿತ್ತು. ಈ ಶಕ್ತಿಶಾಲಿ ಬಂಬ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ವಾಯುಪಡೆಗೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಇಸ್ರೇಲ್ನಿಂದ 100 ಸ್ಪೈಸ್ ಬಾಂಬ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಿದ್ದು, ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಈಗ ಖರೀದಿಸುತ್ತಿರುವ ಬಾಂಬ್ಗಳು ಬಾಲಾಕೋಟ್ ದಾಳಿಯಲ್ಲಿ ಬಳಿಸಿದ್ದ ಸ್ಪೈಸ್ 2000 ಬಾಂಬ್ನ ಸುಧಾರಿತ ಮಾದರಿಯಾಗಿದೆ. ಇದಕ್ಕೆ ಮಾರ್ಕ್ 84 ಸಿಡಿತಲೆಯನ್ನು ಅಳವಡಿಸಲಾಗಿದೆ. ಶತ್ರುಗಳ ಕಟ್ಟಡ, ಬಂಕರ್ಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡಲು ಇದು ಸಮರ್ಥವಾಗಿದೆ.
ಸ್ಪೈಸ್ 2000 ಬಾಂಬ್ಗಳು 900 ಕೆ.ಜಿ. ಸ್ಟೀಲ್ ಕವಚದೊಳಗೆ 80 ಕೆ.ಜಿ. ಸ್ಫೋಟಕವನ್ನು ಹೊಂದಿರುತ್ತವೆ. ಇದು ಕಟ್ಟಡದ ಛಾವಣಿಯನ್ನು ಬೇಧಿಸಿಕೊಂಡು ಒಳಹೊಕ್ಕು ಸ್ಫೋಟಗೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಬಾಂಬ್ಗಳು 60 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
ಬಾಲಾಕೋಟ್ನಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಜೈಷ್ ಕ್ಯಾಂಪ್ ಮೇಲೆ ಇದೇ ಬಾಂಬ್ನಿಂದ ದಾಳಿ ನಡೆಸಿದ್ದವು. ಈ ಬಾಂಬ್ಗಳು ಕಟ್ಟಡದ ಒಳಗೆ ಸ್ಫೋಟಗೊಂಡಿದ್ದವು. ಭಾರತೀಯ ವಾಯುಪಡೆಯ ದಾಳಿಯಲ್ಲಿ ಅಂದಾಜು 200ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದರು. (ಏಜೆನ್ಸೀಸ್)