ಕ್ರಿಕೆಟ್​ ವಿಶ್ವಕಪ್​ನಲ್ಲಿ ಪಾಕ್​ ಜತೆ ಭಾರತ ಆಡಬಾರದು: ಬಿಸಿಸಿಐಗೆ ಸಿಸಿಐ ಕಾರ್ಯದರ್ಶಿ ಮನವಿ

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಆಡಬಾರದು ಎಂದು ಭಾರತದ ಕ್ರಿಕೆಟ್​ ಕ್ಲಬ್​ನ (CCI) ಕಾರ್ಯದರ್ಶಿ ಸುರೇಶ್​ ಬಾಫ್ನಾ ಬಿಸಿಸಿಐಗೆ ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಯೋಧರ ಮೇಲಿನ ಉಗ್ರರ ದಾಳಿಯ ಕುರಿತು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ​ ಇದು ಅವರ ವೈಫಲ್ಯವನ್ನು ತೋರಿಸುತ್ತಿದೆ ಎಂದರು.

ನಮ್ಮ ಸೇನೆ ಹಾಗೂ ಸಿಆರ್​ಪಿಎಫ್​ ಸಿಬ್ಬಂದಿಯನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಉಗ್ರರ ಚಟುವಟಿಕೆಯನ್ನು ಖಂಡಿಸುತ್ತೇವೆ. ಸಿಸಿಐ ಒಂದು ಕ್ರೀಡಾ ಸಂಸ್ಥೆಯಾಗಿದ್ದರೂ ದೇಶದ ವಿಷಯದಲ್ಲಿ ರಾಷ್ಟ್ರದ ಪ್ರತಿಷ್ಠೆ, ಗೌರವಕ್ಕೆ ಮೊದಲ ಆದ್ಯತೆಯಾಗಿರುತ್ತದೆ. ಹೀಗಾಗಿ ಪಾಕ್​ ಜತೆ ಭಾರತ ವಿಶ್ವಕಪ್​ನಲ್ಲಿ ಕಣಕ್ಕಿಳಿಯಬಾರದು ಎಂದರು.

ಪಾಕ್​ ಪ್ರಧಾನಿ ಇಮ್ರಾನ್​​ ಖಾನ್ ಘಟನೆ ಕುರಿತು​ ಪ್ರತಿಕ್ರಿಯಿಸಬೇಕು. ಯೋಧರ ಮೇಲಿನ ಉಗ್ರರ ದಾಳಿಯಲ್ಲಿ ತನ್ನ ಪಾತ್ರ ಇಲ್ಲವೆಂದು ಪಾಕ್​ ನಂಬಿಕೆಯಾಗಿದ್ದರೆ, ಇಮ್ರಾನ್​ ಈ ಬಗ್ಗೆ ಮುಕ್ತವಾಗಿ ಮಾತಾಡಬೇಕು. ಜನರಿಗೆ ಸತ್ಯ ತಿಳಿಯಬೇಕಿದೆ ಎಂದು ಹೇಳಿದರು.

ಇಮ್ರಾನ್​ ಖಾನ್​ ಫೋಟೋ ಮುಚ್ಚಿದ ಸಿಸಿಐ
ಮುಂಬೈನ ಬ್ರೆಬೌರ್ನ್​ ಕ್ರೀಡಾಂಗಣದ ಸಿಸಿಐನ ಮುಖ್ಯ ಕಚೇರಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಪ್ರಧಾನಿಯಾಗಿರುವ ಇಮ್ರಾನ್​ ಖಾನ್​ ಅವರ ಭಾವಚಿತ್ರವನ್ನು ಮುಚ್ಚಲಾಗಿದೆ. ತನ್ಮೂಲಕ ಅದು ಪುಲ್ವಾಮ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್​ ಬಾಫ್ನಾ, ಪುಲ್ವಾಮ ದಾಳಿ ನಡೆದ ಮರುದಿನ ಸಿಸಿಐನ ಪದಾಧಿಕಾರಿಗಳು ಸಭೆ ಸೇರಿ ಇಮ್ರಾನ್​ ಭಾವಚಿತ್ರ ಮುಚ್ಚುವ ತೀರ್ಮಾನ ತೆಗೆದುಕೊಂಡರು. ಅಲ್ಲದೆ, ಅದನ್ನು ತೆಗೆಸಿ ಹಾಕುವಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಅದನ್ನು ತೆಗೆದುಹಾಕುವ ಕುರಿತು ಚಿಂತನೆ ನಡೆದಿದೆ ಎಂದರು.

2019ನೇ ವಿಶ್ವಕಪ್​ ಟೂರ್ನಿ ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಮೇ 30 ರಿಂದ ಜುಲೈ 14ರ ವರೆಗೆ ನಡೆಯಲಿದ್ದು, ವೇಳಾಪಟ್ಟಿ ಪ್ರಕಾರ ಜೂನ್​ 16 ರಂದು ಇಂಗ್ಲೆಂಡ್​ನ ಓಲ್ಡ್​ ಟ್ರಾಫೋರ್ಡ್​ನಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕ್​ನನ್ನ ಎದುರಿಸಲಿದೆ. ಆದರೆ, ಉಗ್ರರ ದಾಳಿಯಲ್ಲಿ ಪಾಕ್​ ಕೈವಾಡ ಇರುವುದರಿಂದ ಪಾಕ್​ ಜತೆ ಪಂದ್ಯವನ್ನು ಆಡಬಾರದೆಂಬುದು ಹಲವರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)