ಟೆಸ್ಟ್​ಗೆ ಮುನ್ನ ತ್ರಿದಿನ ಅಭ್ಯಾಸ

ಚೆಮ್ಸ್​ಫೋರ್ಡ್: ಐದು ಪಂದ್ಯಗಳ ಸವಾಲಿನ ಟೆಸ್ಟ್ ಸರಣಿಯ ಮುಂದಿರುವ ಭಾರತ ತಂಡ, ಬುಧವಾರ ಎಸೆಕ್ಸ್ ತಂಡವನ್ನು ಎದುರಿಸುವ ಮೂಲಕ ಸಾಂಪ್ರದಾಯಿಕ ಮಾದರಿಯ ಕ್ರಿಕೆಟ್​ಗೆ ಸಿದ್ಧತೆ ಆರಂಭಿಸಲಿದೆ. ಈ ಮೊದಲು ಎಸೆಕ್ಸ್ ತಂಡದ ವಿರುದ್ಧ ಚತುರ್ದಿನ ಪಂದ್ಯವಾಡುವುದಾಗಿ ನಿಶ್ಚಯವಾಗಿದ್ದರೂ, ಪಿಚ್ ಸಿದ್ಧತೆಯ ಬಗ್ಗೆ ಟೀಮ್ ಮ್ಯಾನೇಜ್​ವೆುಂಟ್​ಗೆ ತೃಪ್ತಿಯಾಗದ ಕಾರಣ ಅಭ್ಯಾಸ ಪಂದ್ಯವನ್ನು ಮೂರು ದಿನಕ್ಕೆ ಇಳಿಸಲಾಗಿದೆ.

ಶನಿವಾರ ಮುಕ್ತಾಯವಾಗಬೇಕಿದ್ದ ಅಭ್ಯಾಸ ಪಂದ್ಯವೀಗ, ಟೀಮ್ ಮ್ಯಾನೇಜ್​ವೆುಂಟ್​ನ ಅತೃಪ್ತಿಯ ಕಾರಣ ಶುಕ್ರವಾರ ಮುಕ್ತಾಯಗೊಳ್ಳಲಿದೆ. ಇದರಿಂದಾಗಿ, ಬರ್ವಿುಗ್​ಹ್ಯಾಂನ ಎಜ್​ಬಾಸ್ಟನ್​ನಲ್ಲಿ ಆಗಸ್ಟ್ 1ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ನಡೆಸಲು ತಂಡಕ್ಕೆ ಹೆಚ್ಚುವರಿ 1 ದಿನ ಸಿಗಲಿದೆ.

ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯ ಭಾರತ ತಂಡಕ್ಕೆ ತನ್ನ ಬಲ, ದೌರ್ಬಲ್ಯದ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ ಇಲ್ಲಿನ ವಾತಾವರಣದ ಪರಿಚಯವನ್ನೂ ನೀಡಲಿದೆ. ಬ್ಯಾಟಿಂಗ್ ವಿಭಾಗ ಹೆಚ್ಚೂ ಕಡಿಮೆ ಖಚಿತವಾಗಿದೆ. ಟೆಸ್ಟ್ ಸ್ಪೆಷಲಿಸ್ಟ್​ಗಳಾದ ಮುರಳಿ ವಿಜಯ್, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ, ಸಮತೋಲದ ವೇಗದ ಬೌಲಿಂಗ್ ವಿಭಾಗವನ್ನು ಹೊಂದಾಣಿಕೆ ಮಾಡುವುದು ಟೀಮ್ ಮ್ಯಾನೇಜ್​ವೆುಂಟ್ ಹಾಗೂ ಕೊಹ್ಲಿ ಪಾಲಿಗೆ ಸವಾಲಾಗಿರಲಿದೆ.

ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅನುಭವಿಗಳಾದ ಮೊಹಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ವೇಗದ ಬೌಲಿಂಗ್ ವಿಭಾಗವನ್ನು ಹಂಚಿಕೊಳ್ಳಲಿದ್ದಾರೆ. ಬರ್ವಿುಂಗ್​ಹ್ಯಾಂನಲ್ಲಿ ಇವರಲ್ಲಿ ಯಾರಿಗೆ ಸ್ಥಾನ ನೀಡಬಹುದು ಎನ್ನುವುದನ್ನು ಈ ಅಭ್ಯಾಸ ಪಂದ್ಯ ನಿರ್ಧರಿಸಲಿದೆ. -ಏಜೆನ್ಸೀಸ್

ಪಿಚ್ ಹಾಗೂ ಔಟ್​ಫೀಲ್ಡ್ ಬಗ್ಗೆ ಟೀಮ್ ಅಪಸ್ವರ

ಅಭ್ಯಾಸ ಪಂದ್ಯಕ್ಕಾಗಿ ಇಂಗ್ಲೆಂಡ್ ಹಾಗೂ ವೆಲ್ಸ್ ಕ್ರಿಕೆಟ್ ಮಂಡಳಿ ಸಿದ್ಧಪಡಿಸಿರುವ ಪಿಚ್ ಹಾಗೂ ಔಟ್​ಫೀಲ್ಡ್ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ, ಎಸೆಕ್ಸ್ ವಿರುದ್ಧ ನಾಲ್ಕು ದಿನಗಳ ಬದಲಾಗಿ ತ್ರಿದಿನ ಪಂದ್ಯವನ್ನು ಆಡಲಿದೆ. ಆ ಮೂಲಕ ಎಜ್​ಬಾಸ್ಟನ್ ಟೆಸ್ಟ್​ಗೆ ಹೆಚ್ಚುವರಿಯಾಗಿ ಒಂದು ದಿನ ನೆಟ್ ್ಸ ನಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿದೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲೂ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವಾಡದೆ ಟೆಸ್ಟ್ ಸರಣಿ ಆಡಲು ನಿರ್ಧರಿಸಿತ್ತು. ನೆಟ್ಸ್ ನಲ್ಲಿಯೇ ಹೆಚ್ಚಿನ ಅಭ್ಯಾಸ ನಡೆಸಿದ ಭಾರತ ತಂಡ ಮೊದಲ ಎರಡು ಟೆಸ್ಟ್ ಪಂದ್ಯ ಸೋತು, ಜೊಹಾನ್ಸ್ ಬರ್ಗ್​ನಲ್ಲಿ ನಡೆದ ಅಂತಿಮ ಟೆಸ್ಟ್​ನಲ್ಲಿ ಜಯ ಕಂಡಿತ್ತು. ಮಂಗಳವಾರ ಮಧ್ಯಾಹ್ನದ ಅಭ್ಯಾಸ ಅವಧಿಯ ಬಳಿಕ ಟೀಮ್ ಮ್ಯಾನೇಜ್​ವೆುಂಟ್ ಈ ನಿರ್ಧಾರ ಮಾಡಿದೆ. ಆದರೆ, ಬಿಸಿಸಿಐನಿಂದ ಇನ್ನೂ ಅಧಿಕೃತವಾಗಿ ಪ್ರಕಟಣೆ ಬಂದಿಲ್ಲ. ಪಂದ್ಯಕ್ಕಾಗಿ ಸಂಪೂರ್ಣ ಹಸಿರು ಪಿಚ್ ಸಿದ್ಧ ಮಾಡಲಾಗಿದ್ದರೆ, ಔಟ್​ಫೀಲ್ಡ್ ಕೂಡ ಸುರಕ್ಷಿತವಾಗಿಲ್ಲ. ಇದರಿಂದ ಗಾಯಗಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಮೈದಾನದ ಸಿಬ್ಬಂದಿ ಜತೆ ಸಹಾಯಕ ಕೋಚ್ ಸಂಜಯ್ ಬಂಗಾರ್ ಹಾಗೂ ಬೌಲಿಂಗ್ ಕೋಚ್ ಭರತ್ ಅರುಣ್ ಕೂಡ ಚರ್ಚೆ ನಡೆಸಿದ್ದಾರೆ. ಅದಲ್ಲದೆ, ಪಂದ್ಯಕ್ಕೆ ಪ್ರಥಮ ದರ್ಜೆ ಮಾನ್ಯತೆ ಇಲ್ಲದಿರುವ ಕಾರಣ, ಟೆಸ್ಟ್ ತಂಡದ 18 ಸದಸ್ಯರೂ ಕಣಕ್ಕಿಳಿಯಲಿದ್ದಾರೆ. ‘ಭಾರತ ತಂಡದ ಎಲ್ಲ ಮನವಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಅಲ್ಲದೆ, ನಾಲ್ಕನೇ ದಿನದಾಟದ ಹೆಚ್ಚಿನ ಟಿಕೆಟ್​ಗಳನ್ನು ಈಗಾಗಲೇ ಮಾರಾಟ ಮಾಡಿದ್ದೇವೆ’ ಎಂದು ಕೌಂಟಿ ಕ್ರಿಕೆಟ್ ಮೈದಾನದ ಸಿಬ್ಬಂದಿ ಪಂದ್ಯವನ್ನು ತ್ರಿದಿನಕ್ಕೆ ತಗ್ಗಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ಕುಲದೀಪ್ ಯಾದವ್​ಗೆ ರಿಯಲ್ ಟೆಸ್ಟ್

ಸ್ಪಿನ್ ಬೌಲಿಂಗ್ ವಿಭಾಗದ ಉಸ್ತುವಾರಿಯನ್ನು ಅನುಭವಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ದೀರ್ಘ ಸಮಯದಿಂದ ನೋಡಿಕೊಳ್ಳುತ್ತಿದ್ದಾರೆ. ಇವರಿಬ್ಬರಲ್ಲಿ ಯಾರಾದರೂ ಒಬ್ಬರಿಗೆ ವಿಶ್ರಾಂತಿ ನೀಡಿ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್​ಗೆ ಸ್ಥಾನ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇತ್ತೀಚೆಗೆ ಮುಗಿದ ಸೀಮಿತ ಓವರ್​ಗಳ ಕ್ರಿಕೆಟ್ ಸರಣಿಯಲ್ಲಿ ಕುಲದೀಪ್ ಎಲ್ಲರ ಹುಬ್ಬೇರಿಸಿದ್ದರು. ಆದರೆ, ಟೆಸ್ಟ್ ಕ್ರಿಕೆಟ್ ಇವುಗಳಿಗಿಂತ ಭಿನ್ನವಾಗಿರುವ ಕಾರಣ, ಕುಲದೀಪ್​ಗೆ ಆಡುವ ಚಾನ್ಸ್ ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ. ಯುವ ವಿಕೆಟ್ಕೀಪರ್ ರಿಷಭ್ ಪಂತ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ, ಅನುಭವಿ ದಿನೇಶ್ ಕಾರ್ತಿಕ್ ತಂಡದಲ್ಲಿರುವ ಕಾರಣ ಕೊಹ್ಲಿ, ಅವರ ಮೇಲೆಯೇ ನಂಬಿಕೆ ಇಡಲಿದ್ದಾರೆ. ಒಟ್ಟಾರೆ, ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗೆ ವಿಶ್ವಾಸ ವೃದ್ಧಿಸಿಕೊಳ್ಳುವುದು ತಂಡದ ಗುರಿಯಾಗಿದೆ.

ಸರಣಿ ಸೋತರೂ ಅಗ್ರಸ್ಥಾನ ಭದ್ರ

ದುಬೈ: ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 5-0ಯಿಂದ ಸೋತರೂ ಅಗ್ರಸ್ಥಾನದಲ್ಲಿಯೇ ಮುಂದುವರಿಯಲಿದೆ. 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 0-2ರಿಂದ ಸೋತಿರುವ ಕಾರಣ 1 ಅಂಕ ಕಳೆದುಕೊಂಡಿದೆ. ಇದರಿಂದಾಗಿ ಟೆಸ್ಟ್ ಸರಣಿಯ ಫಲಿತಾಂಶ ಭಾರತದ ಅಗ್ರಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.