ಪಾಕ್​ನಿಂದ ಎಫ್​-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಹೊಡೆದುರುಳಿಸಿದ ಅಮೆರಿಕ ನಿರ್ಮಿತ ಎಫ್​-16 ಯುದ್ಧವಿಮಾನವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಂಡಿತ್ತು. ಭಾರತೀಯ ಸೇನಾಪಡೆಯ ಬ್ರಿಗೇಡ್​ ಮತ್ತು ಬೆಟಾಲಿಯನ್​ ಮೇಲೆ ದಾಳಿ ಮಾಡಲು ಪಾಕ್​ ವಾಯುಪಡೆ ಯೋಧರು ಯತ್ನಿಸಿದ್ದರು ಎಂದು ಭಾರತ ಅಮೆರಿಕಕ್ಕೆ ದೂರು ನೀಡಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದ ಉದ್ದೇಶಕ್ಕಾಗಿ ಅಮೆರಿಕದಿಂದ ಪಾಕಿಸ್ತಾನ 2008ರಲ್ಲಿ ಎಫ್​-16 ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಆದರೆ, ಈ ವಿಮಾನಗಳನ್ನು ಪಾಕಿಸ್ತಾನ ತನ್ನ ಮೇಲೆ ದಾಳಿ ಮಾಡಲು ಬಳಸಬಹುದು ಎಂದು ಭಾರತ ಆತಂಕ ವ್ಯಕ್ತೊಪಡಿಸಿತ್ತು. ಅಲ್ಲದೆ, ಈ ವಿಮಾನಗಳನ್ನು ಪಾಕ್​ಗೆ ಮಾರಾಟ ಮಾಡದಂತೆ ಅಮೆರಿಕಕ್ಕೆ ಭಾರತ ಆಗ್ರಹಿಸಿತ್ತು. ಆದರೂ ಅಮೆರಿಕ ಇದನ್ನು ನಿರ್ಲಕ್ಷಿಸಿ ಎಫ್​-16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿತ್ತು.

ಕೆಲ ದಿನಗಳ ಹಿಂದೆ ಭಾರತದೊಂದಿಗೆ ನಡೆದಿದ್ದ ವೈಮಾನಿಕ ಪೈಪೋಟಿಯಲ್ಲಿ ಪಾಕಿಸ್ತಾನ ಎಫ್​-16 ಯುದ್ಧ ವಿಮಾನಗಳನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿತ್ತು. ಮಿಗ್​-21 ವಿಮಾನದ ಮೂಲಕ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಆ ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಪಾಕಿಸ್ತಾನ ಈ ವಿಷಯವನ್ನು ಅಲ್ಲಗಳೆದಿತ್ತು.

ಕೊನೆಗೆ ಭಾರತದ ಗಡಿಯೊಳಗೆ ಬಿದ್ದಿದ್ದ ಎಫ್​-16 ಯುದ್ಧ ವಿಮಾನದ ಅವಶೇಷವನ್ನು ಭಾರತೀಯ ವಾಯುಪಡೆ ಅಧಿಕಾರಿಗಳು ಪ್ರದರ್ಶಿಸಿದ್ದರು. ಅಲ್ಲದೆ, ಪಾಕ್​ ವಾಯುಪಡೆಯ ವಿಮಾನಗಳು ರಾಜೌರಿಯಲ್ಲಿ ಭಾರತದ ವಾಯುಗಡಿ ಪ್ರವೇಶಿಸಿದ್ದವು. ಅವುಗಳನ್ನು ಹಿಮ್ಮೆಟ್ಟಿಸಲು ಮಿಗ್​-21 ಬೈಸನ್​, ಎಸ್​ಯು-20 ಎಂಕೆಐ ಮತ್ತು ಮಿರಾಜ್​ ವಿಮಾನಗಳನ್ನು ಕಳುಹಿಸಲಾಗಿತ್ತು. ಮಿಗ್​-21 ಬೈಸನ್​ ವಿಮಾನದಲ್ಲಿದ್ದ ಅಭಿನಂದನ್​ ಎಫ್​-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು ಎಂದು ಭಾರತ ಹೇಳಿದೆ. (ಏಜೆನ್ಸೀಸ್​)