ಗಗನಯಾನ ಯೋಜನೆಗೆ ರಷ್ಯಾದ ನೆರವು ಕೋರಿದ ಭಾರತ

ನವದೆಹಲಿ: 2022 ಕ್ಕೂ ಮುನ್ನ ಬಾಹ್ಯಾಕಾಶಕ್ಕೆ ಗಗನಯಾತ್ರಿಯನ್ನು ಕಳುಹಿಸಬೇಕು ಎಂಬ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ನೆರವು ನೀಡುವಂತೆ ರಷ್ಯಾಗೆ ಭಾರತ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾನವಸಹಿತ ಗಗನಯಾನ ಯೋಜನೆಗೆ ಸಕಲ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಗಗನ ಯಾತ್ರಿಗಳಿಗೆ ತರಬೇತಿ ನೀಡುವುದು, ಗಗನ ಯಾತ್ರಿಗಳನ್ನು ಹೊತ್ತೊಯ್ಯುವ ಕೋಶವನ್ನು ಅಭಿವೃದ್ಧಿ ಪಡಿಸುವುದು ಮತ್ತು ಗಗನಯಾತ್ರಿಗಳು ಅಂತರಿಕ್ಷದಲ್ಲಿ ಬದುಕುಳಿಯಲು ಅವಶ್ಯವಿರುವ ಸಾಧನಗಳನ್ನು ಅಭಿವೃದ್ಧಿಪಡಿಸಲು ನೆರವು ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ ಎನ್ನಲಾಗಿದೆ.

ಕಳೆದ ನಾಲ್ಕು ದಶಕಗಳಿಂದಲೂ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ರಷ್ಯಾ ನೆರವು ನೀಡುತ್ತ ಬಂದಿದೆ. ಚಂದ್ರಯಾನ ಮತ್ತು ಮಂಗಳಯಾನ ಯೋಜನೆಯಲ್ಲೂ ಇಸ್ರೋಗೆ ರಷ್ಯಾ ನೆರವು ನೀಡಿದೆ. ಜತೆಗೆ ಭಾರತದ ಆರ್ಯಭಟ ಮತ್ತು ಭಾಸ್ಕರ ಉಪಗ್ರಹಗಳನ್ನು ರಷ್ಯಾ ಉಡಾವಣೆ ಮಾಡಿತ್ತು. ಜತೆಗೆ 2004ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಮಿರ್​ ಪುಟಿನ್​ ಭಾರತಕ್ಕೆ ಆಗಮಿಸಿದ್ದಾಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್​ 25ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಭಾರತ ಸ್ವತಂತ್ರಗೊಂಡು 75 ವರ್ಷ ಪೂರ್ಣಗೊಳ್ಳುವ ಮುನ್ನ ಅಂದರೆ 2022ರ ಒಳಗಾಗಿ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನನೌಕೆ ಕಳಿಸುವಂತಾಗಬೇಕು. ರಾಷ್ಟ್ರಧ್ವಜ ಹಿಡಿದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಬೇಕು ಎಂಬುದು ನಮ್ಮ ಕನಸಾಗಿದೆ ಎಂದಿದ್ದರು. (ಏಜೆನ್ಸೀಸ್​)

2022ಕ್ಕೆ ಮುನ್ನ ಮಾನವಸಹಿತ ಅಂತರಿಕ್ಷಯಾನ