ರಾಜ್ಕೋಟ್: ವಿಶಾಖಪಟ್ಟಣ ಟೆಸ್ಟ್ ಪಂದ್ಯದ ಬಳಿಕ 9 ದಿನಗಳ ಬಿಡುವಿನಲ್ಲಿದ್ದ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳು ಗುರುವಾರದಿಂದ ಮತ್ತೆ “ಸ್ಪಿನ್ಬಾಲ್-ಬಾಜ್ಬಾಲ್’ ಕಾದಾಟ ಮುಂದುವರಿಸಲಿವೆ. ನಿರಂಜನ್ ಷಾ ಸ್ಟೇಡಿಯಂ ಎಂದು ಮರುನಾಮಕರಣಗೊಂಡಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಸರಣಿಯ 3ನೇ ಪಂದ್ಯ ನಡೆಯಲಿದ್ದು, ಸದ್ಯ 1-1 ಸಮಬಲದಲ್ಲಿರುವ ಸರಣಿಯಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳಿಂದ ಮತ್ತೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ.
ಮೊದಲ ಟೆಸ್ಟ್ನಲ್ಲಿ ಆಂಗ್ಲರ ಬಾಜ್ಬಾಲ್ ಆಕ್ರಮಣದ ಎದುರು ಗಲಿಬಿಲಿಗೊಂಡಿದ್ದ ಭಾರತ ತಂಡ 2ನೇ ಟೆಸ್ಟ್ನಲ್ಲಿ “ಜೈಸ್ಬಾಲ್’ ಮತ್ತು “ಬೂಮ್ಬಾಲ್’ ಮೂಲಕ ದಿಟ್ಟ ತಿರುಗೇಟು ನೀಡಿತ್ತು. ಇದೀಗ 3ನೇ ಟೆಸ್ಟ್ನಲ್ಲೂ ಅದೇ ಲಯವನ್ನು ಮುಂದುವರಿಸುವ ಮೂಲಕ ಸರಣಿಯಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸುವತ್ತ ರೋಹಿತ್ ಶರ್ಮ ಪಡೆ ದೃಷ್ಟಿ ನೆಟ್ಟಿದೆ.
ಯುವ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (321 ರನ್) ಮತ್ತು ಜಸ್ಪ್ರೀತ್ ಬುಮ್ರಾ (15 ವಿಕೆಟ್) ಸರಣಿಯಲ್ಲಿ ಭಾರತ ಪುಟಿದೆದ್ದು ಬರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ ಭಾರತ ತಂಡದ ಮಧ್ಯಮ ಕ್ರಮಾಂಕದ ರನ್ಬರ ಇನ್ನೂ ತಲೆನೋವಾಗಿಯೇ ಇದೆ. ವಿರಾಟ್ ಕೊಹ್ಲಿ ಸಂಪೂರ್ಣ ಸರಣಿಯಿಂದಲೇ ಹೊರಗುಳಿದಿರುವ ನಡುವೆ ಕನ್ನಡಿಗ ಕೆಎಲ್ ರಾಹುಲ್ 3ನೇ ಟೆಸ್ಟ್ಗೂ ಅಲಭ್ಯರಾಗಿದ್ದಾರೆ. ಇದರ ನಡುವೆ ನಾಯಕ ರೋಹಿತ್ ಶರ್ಮ ಅವರಿಂದಲೂ ದೊಡ್ಡ ಇನಿಂಗ್ಸ್ ಬಾರದಿರುವುದು ಹಿನ್ನಡೆ ತಂದಿದೆ.
ಭಾರತಕ್ಕೆ ಮಧ್ಯಮ ಕ್ರಮಾಂಕದ ತಲೆನೋವು
ಸರಣಿಯಲ್ಲಿ ಭಾರತಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯ ದೊಡ್ಡ ತಲೆನೋವಾಗಿದೆ. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಅವರಂಥ ಅನುಭವಿಗಳನ್ನು ಕಡೆಗಣಿಸಿ ಭವಿಷ್ಯದತ್ತ ನೆಟ್ಟಿಸಿರುವ ಟೀಮ್ ಇಂಡಿಯಾ ಸರಣಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ. ಕಳೆದ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದ ರಜತ್ ಪಾಟೀದಾರ್ ನಿರೀಕ್ಷಿತ ನಿರ್ವಹಣೆ ತೋರದಿದ್ದರೂ, ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಕೆಟ್ಟಹೊಡೆತಗಳಿಗೆ ವಿಕೆಟ್ ಒಪ್ಪಿಸುತ್ತಿದ್ದ ಶ್ರೇಯಸ್ ಅಯ್ಯರ್ ಹೊರಬಿದ್ದಿರುವುದರಿಂದ ಮತ್ತೋರ್ವ ಮುಂಬೈ ಬ್ಯಾಟರ್ ಸ್ರಾರ್ಜ್ ಖಾನ್ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ರನ್ಮಳೆ ಹರಿಸಿರುವ 26 ವರ್ಷದ ಸ್ರಾರ್ಜ್, ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಟೀಮ್ ನ್ಯೂಸ್:
ಭಾರತ: ಕೊಹ್ಲಿ ಅಲಭ್ಯತೆ, ಶ್ರೇಯಸ್ ಕೊಕ್ ಮತ್ತು ರಾಹುಲ್ ಗಾಯದ ನಡುವೆ ಆಲ್ರೌಂಡರ್ ರವೀಂದ್ರ ಜಡೇಜಾ ಫಿಟ್ ಆಗಿ ತವರಿನ ಟೆಸ್ಟ್ನಲ್ಲೇ ಮರಳುತ್ತಿರುವುದು ಭಾರತಕ್ಕೆ ತುಸು ಸಮಧಾನಕರ. ರಾಜ್ಕೋಟ್ನಲ್ಲಿ ಜಡೇಜಾ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಶ್ರೇಯಸ್ ಸ್ಥಾನದಲ್ಲಿ ಸ್ರಾರ್ಜ್ ಖಾನ್ ಮತ್ತು ಕೆಎಸ್ ಭರತ್ ಸ್ಥಾನದಲ್ಲಿ ಧ್ರುವ ಜುರೆಲ್ ಪದಾರ್ಪಣೆ ಮಾಡುವ ನಿರೀೆ ಇದೆ. 3ನೇ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್&ಕುಲದೀಪ್ ಯಾದವ್ ನಡುವಿನ ಆಯ್ಕೆ ಇನ್ನೂ ಸ್ಪಷ್ಟವಾಗಿಲ್ಲ.
ಇಂಗ್ಲೆಂಡ್: ರಾಜ್ಕೋಟ್ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಸತತ 3ನೇ ಬಾರಿಯೂ ಇಂಗ್ಲೆಂಡ್, ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಆಫ್ ಸ್ಪಿನ್ನರ್ ಶೋಯಿಬ್ ಬಶೀರ್ ಬದಲಿಗೆ ವೇಗಿ ಮಾರ್ಕ್ ವುಡ್ ಸ್ಥಾನ ಪಡೆದಿದ್ದು, ಇಂಗ್ಲೆಂಡ್ ತಂಡ ತ್ರಿವಳಿ ಸ್ಪಿನ್ನರ್ಸ್ಗೆ ಬದಲಾಗಿ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲಿದೆ. ಜತೆಗೆ ಸರಣಿಯಲ್ಲಿ ಮೊದಲ ಬಾರಿ ಇಬ್ಬರು ವೇಗಿಗಳನ್ನು ಆಡಿಸಲಿದೆ. ಲೆಗ್ ಸ್ಪಿನ್ನರ್ ರೆಹನ್ ಅಹ್ಮದ್ ವೀಸಾ ಸಮಸ್ಯೆ ಬಗೆಹರಿದಿರುವುದರಿಂದ ಪಂದ್ಯ ಆಡಲು ಯಾವುದೇ ಅಡಚಣೆ ಇಲ್ಲದಂತಾಗಿದೆ.
*ಆರಂಭ: ಬೆಳಗ್ಗೆ 9.30
*ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
ಪಿಚ್ ರಿಪೋರ್ಟ್
ರಾಜ್ಕೋಟ್ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಈ ಸಲವೂ ಅದೇ ರೀತಿ ವರ್ತಿಸುವ ನಿರೀಕ್ಷೆ ಇದೆ. ಜತೆಗೆ ವೇಗದ ಬೌಲರ್ಗಳಿಗೆ ಅದರಲ್ಲೂ ಪ್ರಮುಖವಾಗಿ ರಿವರ್ಸ್ ಸ್ವಿಂಗ್ಗೆ ನೆರವಾಗುವ ನಿರೀಕ್ಷೆ ಇದೆ. ಹೀಗಾಗಿಯೇ ಇಂಗ್ಲೆಂಡ್ ಈ ಬಾರಿ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ. 2016ರಲ್ಲಿ ಉಭಯ ತಂಡಗಳ ನಡುವೆ ಇಲ್ಲಿ ನಡೆದ ಕೊನೇ ಟೆಸ್ಟ್ ಸುಮಾರು 1,500 ರನ್ಪ್ರವಾಹ ಕಂಡು ಡ್ರಾಗೊಂಡಿತ್ತು.