ಉಗ್ರರ ವಿರುದ್ಧದ ಹೋರಾಟಕ್ಕೆ ಸೌದಿ ಅರೇಬಿಯಾ ನೆರವು

ನವದೆಹಲಿ: ಉಗ್ರರಿಗೆ ನೆರವು ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಒತ್ತಡ ತರಲು ಎಲ್ಲ ವಿಧದ ನೆರವು ನೀಡಲು ಸೌದಿ ಅರೇಬಿಯಾ ಸಮ್ಮತಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಭಾರತದ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಪ್ರಧಾನಿ ಮೋದಿ ಅವರೊಂದಿಗೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಸೌದಿ ಅರೇಬಿಯಾದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಸಂಬಂಧ ಮಾತುಕತೆ ನಡೆಸಲಾಯಿತು. ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಂಬಂಧ ಸಾಕಷ್ಟು ಗಟ್ಟಿಗೊಂಡಿದೆ. ಭಾರತದ ಮೂಲಸೌಕರ್ಯ ವಲಯದಲ್ಲಿ ಸೌದಿ ಅರೇಬಿಯಾ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೊಹಮ್ಮದ್​ ಬಿನ್​ ಸಲ್ಮಾನ್​ ಉಗ್ರವಾದ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ನಾನು ಸಿದ್ಧರಿದ್ದೇವೆ. ನಾವು ಗುಪ್ತಚರ ಮಾಹಿತಿ ವಿನಿಯಮ ಸೇರಿದಂತೆ ಎಲ್ಲ ವಿಧದಲ್ಲಿ ಭಾರತಕ್ಕೆ ನೆರವು ನೀಡಲು ಸಿದ್ಧರಿದ್ದೇವೆ. ಮುಂದಿನ ಪೀಳಿಗೆಗೆ ಭವ್ಯ ಭವಿಷ್ಯವನ್ನು ಬಿಟ್ಟುಹೋಗಲು ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. (ಏಜೆನ್ಸೀಸ್​)