ಸಾಯಿಲೀಲೆಯ ಅಮೃತಬಿಂದುಗಳು

ಭಾರತವು ಸಾಧುಸಂತರು, ಮಹಾಪುರುಷರ ನೆಲೆವೀಡು. ಸಹಸ್ರಾರು ಮಹಾಪುರುಷರು ತಮ್ಮದೇ ಸಾಧನೆ-ಬೋಧನೆಗಳಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅಂತಹ ಪುಣ್ಯಪುರುಷರಲ್ಲಿ ಅಗ್ರಗಣ್ಯರು ಶ್ರೀ ಶಿರಡಿ ಸಾಯಿಬಾಬಾ. ಇಪ್ಪತ್ತನೇ ಶತಮಾನದ ಈ ಮಹಾನ್ ಸಂತ ಶಿರಡಿಯಲ್ಲಿ ನೆಲೆಸಿ, ಎಲ್ಲ ಸಮುದಾಯಗಳಲ್ಲಿ ಏಕತೆ, ಸೌಹಾರ್ದತೆ ಮೂಡಿಸಲು ಶ್ರಮಿಸಿದರು. ದೇವರಿದ್ದಾನೆ ಎಂದು ಜನತೆಗೆ ಮನವರಿಕೆ ಮಾಡಿಕೊಡಲು ಅನೇಕ ಪವಾಡಗಳನ್ನು ಮಾಡಿದರು. ಅವರ ಜೀವನ, ಬೋಧನೆಗಳು ಇಂದಿಗೂ ಪ್ರಸ್ತುತ.

ರ್ಮಕ್ಕೆ ಅಧೀನವಾಗಿಯೇ ಇರುವುದು ಕಾರ್ಯಸಿದ್ಧಿ. ಪ್ರಯತ್ನಾನಂತರ ಕಾರ್ಯಸಿದ್ಧಿಯಾಗದಿದ್ದರೂ ಪೂರ್ಣಪ್ರಮಾಣದ ಪ್ರಯತ್ನದಿಂದ ಕಾರ್ಯಸಿದ್ಧಿಯಾಗುವುದೆಂಬ ಭಾವನೆಯನ್ನು ಮನದಲ್ಲಿರಿಸಿಕೊಂಡಿರಬೇಕು. ಒಳ್ಳೆಯ ಪ್ರಯತ್ನದಿಂದ ಮಾನವನು ಪೌರುಷವುಳ್ಳವನಾಗಿ ಮೆರೆಯುತ್ತಾನೆ; ಫಲವಿಲ್ಲವೆಂಬ ಭಾವದಲ್ಲಿ ಯತ್ನವನ್ನೇ ಮಾಡದಿರುವವರು ಸೋಲಿನ ಸರಣಿಯಲ್ಲಿ ಸೊರಗುತ್ತಾರೆ.

ಧೂಪ್​ಖೇಡಾ ಗ್ರಾಮದ ಪಟೇಲನಾದ ಚಾಂದ್​ಪಾಟೀಲ್ ಕಳೆದುಹೋದ ತನ್ನ ಕುದುರೆಯನ್ನು ಹುಡುಕುವುದರಲ್ಲಿ ಮನುಷ್ಯಪ್ರಯತ್ನವನ್ನೆಲ್ಲ ಮಾಡಿ ದಾರಿಕಾಣದೆ ‘ಏಲಗಂಗಾ’ ನದಿದಂಡೆಯ ಮೇಲೆ ಕುಳಿತು ದುಃಖಭಾರದಲ್ಲಿ ಅಶ್ರುಧಾರೆ ಹರಿಸಿ, ನಂಬಿದ ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನಿಸುತ್ತಿದ್ದನು. ಆಗ ಯಾರೋ ತನ್ನ ಹೆಸರನ್ನು ಕೂಗಿ ಕರೆಯುತ್ತಿರುವಂತೆ ಭಾಸವಾಗಿ ನದಿದಂಡೆಯ ಬೆಟ್ಟದ ಮೇಲಿನ ಕಲ್ಲುಬಂಡೆಗಳ ದಾಟಿ ಅಲ್ಲಿದ್ದ ದಿವ್ಯಪುರುಷನ ಕಂಡು ಮಾತು ಹೊರಡದೆ ನಿಂತನು. ಆಗ ಫಕೀರನು ‘ಯಾಕೆ ಚಾಂದ್​ಪಾಟೀಲ್, ಸೋಜಿಗವ ಕಂಡಂತೆ ನಿಂತಿರುವೆ?’ ಎಂದನು. ದೇವವಾಣಿಯ ಮಾಧುರ್ಯ ತುಂಬಿದ ಫಕೀರನ ಮಾತಿಗೆ ಇನ್ನಷ್ಟು ಚಕಿತನಾದ ಚಾಂದ್, ‘ತಮಗೆ ನನ್ನ ಹೆಸರು ಹೇಗೆ ಗೊತ್ತು?’ ಎಂಬುದಾಗಿ ಕುತೂಹಲದಲ್ಲಿ ಕೇಳಿದಾಗ ಆ ಮಹಾತ್ಮನು ಮಂದಹಾಸ ಬೀರಿದನು. ‘ಇಲ್ಲಿನ ಚರಾಚರಗಳೆಲ್ಲವುಗಳ ಬಗ್ಗೆ ಅರಿವಿರುವ ನನಗೆ ನಿನ್ನ ಹೆಸರು ತಿಳಿಯದಿರುವುದೇ ಪಾಟೀಲ್? ನಿನ್ನ ನೆಚ್ಚಿನ ಕುದುರೆ ಕಳೆದುಕೊಂಡು ರೋದಿಸುತ್ತಿರುವೆಯಲ್ಲವೇ? ಅದರ ಅಗಲಿಕೆಯ ನೋವನ್ನು ಸಹಿಸದಾಗದೆ ನಿನ್ನ ದೈನಂದಿನ ವ್ಯವಹಾರವನ್ನೂ ಮರೆತು ಬಿಜಿಲಿಯ ಜೀನು ಹೆಗಲಿನಲ್ಲಿ ಹೊತ್ತು ಅದನ್ನು ಹುಡುಕುತ್ತ ಊರುಕೇರಿ ಕಾಡುಮೇಡು ಅಲೆಯುತ್ತಿರುವೆಯಲ್ಲವೇ? ಪ್ರಾಪಂಚಿಕ ವಿಷಯವಾಸನೆಯಲ್ಲಿ ತನ್ನನ್ನು ತಾನು ಕಳೆದುಕೊಂಡು; ಅದರ ಹುಡುಕಾಟದಲ್ಲಿ ಬದುಕೆಂಬ ಭ್ರಮೆಯೊಳಗೆ ಜೀವಿಸುವವನು ಮನುಷ್ಯಮಾತ್ರನಲ್ಲವೇ?’ ಎಂದು ಮತ್ತೆ ಆ ಫಕೀರನು ನಕ್ಕನು.

ಇದೇನು ತಾನು ಕಾಣುತ್ತಿರುವುದು ಸ್ವಪ್ನವಲ್ಲವಷ್ಟೇ! ನಿಜಸಂಗತಿಯ ನೋಡಿದಂತೆಯೇ ಹೇಳುತ್ತಿರುವರು. ಇವರು ನಿಜಕ್ಕೂ ಮನುಷ್ಯರಲ್ಲ, ದೇವಮಾನವರೇ ಇರಬೇಕೆಂದುಕೊಂಡನು. ಕಾಣದೆಯೂ ಕಂಡಂತೆ ಎಲ್ಲವನ್ನೂ ಹೇಳಿದ ಫಕೀರನ ಮಾತಿಗೆ ಅಹುದು ಅಹುದೆಂದು ಶರಣುಹೋದ ಪಾಟೀಲನು ಭಕ್ತಿಗೌರವದಲ್ಲಿ ಅವರ ಪಾದ ಮುಟ್ಟಿ ನಮಸ್ಕರಿಸಿ ಕೈಯನ್ನು ಕಣ್ಣಿಗೊತ್ತಿಕೊಂಡನು. ಆಗ ಆ ಮಹಾತ್ಮನು, ‘ಮೂರು ತಿಂಗಳಿನಿಂದ ಬಿಜಲಿಗಾಗಿ ಹಂಬಲಿಸಿ ದುಃಖಿಸಿರುವೆ. ಬಿಜಿಲಿಯೂ ನಿನ್ನ ಅಗಲಿಕೆಯನ್ನು ಸಹಿಸದೆ – ಎಂದು ಒಡೆಯನ ನೆರಳು ಸೇರುವೆನೋ ಎಂದು ಕಾದಿದೆ. ನಿನ್ನ ಬಿಜಲಿ ಇಲ್ಲೇ ನಿನ್ನ ಬಳಿಯಲ್ಲೇ ಇದೆ. ಕರೆಯದೆ ಕುದುರೆಯಾದರೂ ಹೇಗೆ ಬರಲು ಸಾಧ್ಯ?’ ಎಂದ ಫಕೀರನು ನದಿಯ ತಪ್ಪಲಿನತ್ತ ಮುಖಮಾಡಿ, ‘ಬಿಜಿಲಿ.. ಬಿಜಿಲಿ.. ಬಿಜಿಲಿ.. ಬಾರಪ್ಪ, ನಿನ್ನ ಯಜಮಾನ ಕಾಯುತ್ತಿದ್ದಾನೆ’ ಎಂದು ಗಟ್ಟಿಯಾಗಿ ಕೂಗಿದನು. ಮುಂದಿನ ಕ್ಷಣದಲ್ಲೇ ತಪ್ಪಲುಪ್ರದೇಶದಿಂದ ಮಿಂಚಿನ ವೇಗದಲ್ಲಿ ಬಿಜಿಲಿ ಮಹಾತ್ಮನೆಡೆಗೆ ಓಡಿ ಬರುತ್ತಿರುವುದನ್ನು ಕಂಡ ಚಾಂದ್​ಪಾಟೀಲ್ ತನ್ನ ಕಣ್ಣನ್ನೇ ನಂಬದಾದನು. ಓಡಿಬಂದು ಫಕೀರನನ್ನು ಒಮ್ಮೆ ಸುತ್ತುಹಾಕಿದ ಕುದುರೆಯಾದರೋ ತನ್ನೊಡೆಯನ ಬಳಿ ಬಂದು ಕಾಲುಗಳನ್ನು ಮೇಲೆತ್ತಿ ಕೆನೆಯುತ್ತ ತನ್ನ ಸಂತಸ ವ್ಯಕ್ತಪಡಿಸಿ ಆ ಮಹಾತ್ಮನ ಎದುರು ನಿಂತಿತು. ನೋಡಲು ಫಕೀರನಂತಿರುವ ಇವರು ನಿಜಕ್ಕೂ ಅವಲಿಯನೇ ಇರಬೇಕೆಂದು ಭಕ್ತಿಭಾವ ಪರವಶನಾದ ಚಾಂದ್​ಪಾಟೀಲ್, ‘ನಿಮ್ಮಿಂದಾಗಿ ಬಿಜಿಲಿ ಪುನಃ ನನಗೆ ಸಿಕ್ಕಿತು, ನೀವು ಅಸಾಮಾನ್ಯರು’ ಎಂದು ಅವರ ಚರಣಾರವಿಂದಕ್ಕೆ ಮತ್ತೊಮ್ಮೆ ನಮಿಸಿದನು.

***

ಇಹವು ಸುಖದುಃಖದ ಸಮೀಕರಣ

ಸುಖದುಃಖ ಒಂದೇ ನಾಣ್ಯದ ಎರಡು ಮುಖಗಳು. ಸುಖದ ಬಯಕೆಗಳ ಹಿಂದೆ ದುಃಖವೂ ಹರಿದುಬರುತ್ತದೆ. ಜಗತ್ತಿನಲ್ಲಿ ಕಷ್ಟಕಾರ್ಪಣ್ಯಗಳಿಂದ ಪೂರ್ಣಪ್ರಮಾಣದಲ್ಲಿ ನಿವೃತ್ತಿ ಹೊಂದಿದವರಿಲ್ಲ. ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ; ಕಷ್ಟ-ನೋವು ಸಾಮಾನ್ಯವಾಗಿ ಅಳಿಸದೆ ಇರದು. ಮನಬಿಚ್ಚಿ ಅಳುವುದು ಒಂದು ಯೋಗ!

ಯೋಗಿಗಳು, ಸಂತರು, ಸನ್ಯಾಸಿಗಳು, ಸತ್ಪುರುಷರು, ಸದ್ಗುರುಗಳು ಕಷ್ಟಸುಖ ವಿಭಜಿಸದೆ ಒಂದಾಗಿ ಇರಿಸುತ್ತಾರೆ, ಆಗ ದುಃಖವಿಲ್ಲ, ಸುಖವಿಲ್ಲ, ಸಮಸ್ಯೆಗೆ ಸ್ಪಂದಿಸುವ ಅಗತ್ಯವೂ ಇಲ್ಲ. ದುಃಖವನ್ನು ಯೋಗ ಎಂದುಕೊಂಡರೆ ಅದರಲ್ಲಿ ಸುಖವನ್ನು ಕಾಣಲು ಸಾಧ್ಯ. ತಿನ್ನುತ್ತಲೇ ಇದ್ದರೆ ಬೇವು ಬೆಲ್ಲವಾಗುವುದು, ಕುಣಿಯುತ್ತಲಿದ್ದರೆ ತಾಳಕ್ಕೆ ತಕ್ಕ ಹೆಜ್ಜೆಯಾಗುವುದು. ಸಂತೋಷಕ್ಕೆ ಬೆಲೆ ಬರಬೇಕಾದರೆ ದುಃಖವಿರಬೇಕು. ಹಗಲಿನ ಮಹತ್ತು ಅರಿವಾಗಲು ಕತ್ತಲಾಗಬೇಕು. ದುಃಖವನ್ನು ಬಯಸುವುದು ಬೇಡ, ಬಂದಾಗ ಯೋಗವೆಂದು ಭಾವಿಸಿ ಅನುಭವಿಸಬೇಕು. ಆಗ ದುಃಖದ ತೆಕ್ಕೆಯಲ್ಲಿ ಸುಖದ ಆವಿಷ್ಕಾರ ಉಂಟಾಗುವುದು. ಈ ಸತ್ಯವನ್ನು ಸಂಕಷ್ಟದಲಿ ಇರುವವರಿಗೆ ಸಾಯಿನಾಥರು ಚನ್ನಾಗಿ ಮನದಟ್ಟು ಮಾಡುತ್ತಿದ್ದರು. ಇದಕ್ಕೆ ದೃಷ್ಟಾಂತವಾಗಿರುವುದೇ ಮುಂದಿನ ವೃತ್ತಾಂತ.

ಮುಂಬಯಿಯ ಹರಿಶ್ಚಂದ್ರ ಪಿತಳೆಯವರು ತಮ್ಮ ಮಗನ ಕಾರಣದಿಂದ ಬಹಳ ದುಃಖಿಯಾಗಿದ್ದರು. ಆತನು ಅಪಸ್ಮಾರ ರೋಗಪೀಡಿತನಾಗಿ ಎಲ್ಲೆಂದರಲ್ಲಿ ಮೂರ್ಛಿತನಾಗಿ ಬಿದ್ದುಬಿಡುತ್ತಿದ್ದನು. ಆರಂಭದಲ್ಲಿ ಕಾಯಿಲೆ ಸರಿಹೋಗುವುದೆಂದು ವೈದ್ಯರು ಏನೆಲ್ಲ ಔಷಧ ನೀಡಿದರೂ ಮೇಲಾಗಲಿಲ್ಲ; ವಿದೇಶಿ ವೈದ್ಯರಿಂದಲೂ ರೋಗ ಗುಣ ಕಾಣಲಿಲ್ಲ. ದೂರದೂರದ ನಗರಗಳಿಗೆ ಚಿಕಿತ್ಸೆಗೆ ಹೋಗಿ ಬಂದರೂ ಫಲ ನೀಡಲಿಲ್ಲ. ದಿನೇದಿನೆ ಮಗನು ಹಿಂಸೆ ಅನುಭವಿಸುವುದನ್ನು ನೋಡಲಾರದೆ ಬದುಕು ಕಣ್ಣೀರಾಗಿತ್ತು. ಆಗರ್ಭ ಶ್ರೀಮಂತನಾದ ಪಿತಳೆ ಮಗನ ಕಾಯಿಲೆ ಗುಣಪಡಿಸಲು ಅದೆಷ್ಟು ಹಣವಾದರೂ ಖರ್ಚುಮಾಡಲೂ ಸಿದ್ದನಿದ್ದ. ವೈದ್ಯರೇ ಕೈಚೆಲ್ಲಿದ ಮೇಲೆ ಅವನಾದರೂ ಏನು ಮಾಡಿಯಾನು? ಸಾವಿನ ಮನೆ ಬಾಗಿಲು ತಟ್ಟುತ್ತಿರುವ ಮಗನನ್ನು ನೋಡಿ ಸುಮ್ಮನೆ ಕುಳಿತಿರಲಾಗದೆ ಬೇರೆ ದಾರಿಯೇನೆಂಬ ಚಿಂತೆಯಲ್ಲಿದ್ದನು. ಎಲ್ಲ ಇದ್ದೂ ಏನೂ ಮಾಡಲಾಗದ ಸ್ಥಿತಿ ಪಿತಳೆಯದು.

ನಿರಾಶ್ರಿತರಾದ ಭಕ್ತರನ್ನು ಸಾಯಿಸದ್ಗುರುವು ತಮ್ಮಲ್ಲಿಗೆ ಕರೆಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ದೃಷ್ಟಾಂತ. ಆ ಹೊತ್ತಿಗಾಗಲೇ ದಾಸಗಣುವಿನ ಹರಿಕಥೆ-ಕೀರ್ತನೆಗಳಿಂದ ಸಾಯಿಬಾಬಾರ ಕೀರ್ತಿ ದೇಶದೆಲ್ಲೆಡೆ ವ್ಯಾಪಿಸಿತ್ತು; ಅವರ ಮಹಿಮೆಯನ್ನು ಹಾಡಿ ಕೊಂಡಾಡುವರು ಸಾಕಷ್ಟು ಜನರಿದ್ದರು. ಸದ್ಗುರುವಿನ ದರ್ಶನ, ಹಸ್ತಸ್ಪರ್ಶಮಾತ್ರದಿಂದಲೂ ಹಾಗೂ ಅವರು ನೀಡುವ ವಿಭೂತಿಯಿಂದಲೂ ಸರ್ವರೋಗಗಳು ಗುಣವಾಗುವುದೆಂಬ ಮಾತು ಜನಜನಿತವಾಗಿತ್ತು. ಇದು ಹರಿಶ್ಚಂದ್ರ ಪಿತಳೆಯವರ ಕಿವಿಗೂ ಬಿದ್ದಿತ್ತು. ಆದರೆ ಅವನಿಗೆ ದೇವರು, ದೇವರ ಪೂಜೆ, ಗುರುಬಾಬಾಗಳ ದರ್ಶನ, ಹರಕೆ, ಕಾಣಿಕೆ ಇವುಗಳ ಮೇಲೆ ಅಷ್ಟಾಗಿ ನಂಬಿಕೆ ಇರಲಿಲ್ಲ. ಅವನು ಮಾಡುತ್ತಿದ್ದ ವ್ಯವಹಾರವೂ ಅದಕ್ಕೆ ಪೂರಕವಾಗಿಯೇ ಇತ್ತು. ಆತನ ತಂದೆ-ತಾಯಿ ದೈವಭಕ್ತರಾದರೂ ಮಗನಲ್ಲಿ ಅದೊಂದು ಸಂಸ್ಕಾರ ಹರಿದುಬಂದಿರಲಿಲ್ಲ. ಕೆಲವು ಭಕ್ತಬಂಧುಗಳು, ‘ನಿಮ್ಮ ಮಗನನ್ನು ಕರೆದುಕೊಂಡು ಬಾಬಾರಲ್ಲಿಗೆ ಹೋಗಿ’ ಎಂದು ಹೇಳಿದರಾದರೂ ಆತ ಮೊದಮೊದಲು ಅವರ ಮಾತು ಕೇಳಲಿಲ್ಲ. ಮುಂದೆ ಮಗನ ಕಾಯಿಲೆ ಉಲ್ಬಣಗೊಳ್ಳತ್ತಿರುವಂತೆ ಬೇರೆ ದಾರಿಗಾಣದಾಯಿತು; ‘ಮನುಜಪ್ರಯತ್ನವನ್ನೆಲ್ಲ ಮಾಡಿ ಆಗಿದೆ, ಇನ್ನು ಉಳಿದಿರುವುದು ದೈವವೊಂದೇ’ ಎನಿಸಿತು.

ಇಂತಹ ಒಂದು ಭಾವ ಅವರಲ್ಲಿ ಮೂಡಿದ್ದೂ ಪೂರ್ವಪುಣ್ಯದಿಂದಲಿ ಎನ್ನುವುದು ಸರಿ. ರೋಗಗ್ರಸ್ತ ಮಗನೊಂದಿಗೆ ಕುಟುಂಬಸಮೇತ ಶಿರಡಿಗೆ ಬಂದನು. ಬರುವಾಗ ಬರಿಗೈಯಲ್ಲಿ ಬರಲಿಲ್ಲ. ತನ್ನ ಶ್ರೀಮಂತಿಕೆ ತಕ್ಕಂತೆ ಬಾಬಾರಿಗೆಂದು ಹಣ್ಣು ಉಡುಗೊರೆಯನ್ನು ತಂದಿದ್ದನು. ಅವೆಲ್ಲವನ್ನೂ ಬಾಬಾರಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಪಿತಳೆಯ ಕುಮಾರನು ಸಾಯಿನಾಥರನ್ನು ನೋಡುತ್ತಿರುವಂತೆ ಸ್ಮೃತಿ ತಪ್ಪಿ ಬಿದ್ದನು; ಬಾಯಿಯಿಂದ ಬಿಳಿನೊರೆ ಉಕ್ಕಿತು. ಅವನ ತಾಯಿ, ‘ಮಗನೇ’ ಎಂದು ಚೀತ್ಕರಿಸಿದಳು. ಉಸಿರಾಟ ನಿಲ್ಲುತ್ತಿರುವಂತೆ ಕೈಕಾಲು ಒದರುತ್ತಿದ್ದ ಮಗನನ್ನು ನೋಡಿ ತಂದೆ ದಿಕ್ಕು ತೋಚದಂತಾದನು. ಬಹಳ ಸಮಯದವರೆಗೂ ಅದೇ ಸ್ಥಿತಿ! ಮಗ ಆಗಾಗ ಎಚ್ಚರ ತಪ್ಪುತ್ತಿದ್ದನಾದರೂ ಈ ಪ್ರಮಾಣದ ಹಿಂಸೆ ಎಂದೂ ಅನುಭವಿಸಿರಲಿಲ್ಲ. ‘ಸಾಯಿನಾಥರ ಸನ್ನಧಿಯಲ್ಲಿ ರೋಗ ಗುಣವಾಗುವುದೆಂದು ಬಂದರೆ ಉಲ್ಬಣವಾಯಿತಲ್ಲ, ನೆರಳಿಗಾಗಿ ಮರದ ಆಶ್ರಯಕ್ಕೆ ಬಂದರೆ ಮರವೇ ಶಿರದ ಮೇಲೆ ಉರುಳಿತೇ? ಹುಲಿಯಿಂದ ತಪ್ಪಿಸಿಕೊಂಡ ಹಸು ಕಟುಕನ ಕೈಗೆ ಸಿಕ್ಕಿದಂತಾಯಿತೇ? ಧರೆಗೆ ಬೀಳುವುದನ್ನು ತಪ್ಪಿಸಲು ಹೋಗಿ ಕೆರೆಗೆ ಕೆಡವಿದೆನೇ?’ ಎಂಬೆಲ್ಲ ಸಂಕಟದಲ್ಲಿ ಆ ದಂಪತಿ ಗೋಳಾಡಿದರು. ಇದನ್ನು ಶಾಂತಚಿತ್ತದಿಂದ ಗಮನಿಸಿದ ಸಾಯಿಬಾಬಾ, ‘ಏಕೆ ಇಷ್ಟು ಸಂಕಟಪಡುವಿರಿ? ದುಃಖದ ಹಿಂದೆ ಸುಖವೂ ಅನುಸರಿಸಿ ಬರುತ್ತದೆ. ಧೈರ್ಯ ತಂದುಕೊಳ್ಳಿ, ಪತಿ-ಪತ್ನಿ ಇಬ್ಬರೂ ಮಗನನ್ನು ಹಿಡಿದುಕೊಳ್ಳಿ, ಜ್ಞಾನ ಬರುವುದು. ನಂತರ ನೀವು ಉಳಿದುಕೊಂಡ ವಸತಿಗೃಹಕ್ಕೆ ಕರೆದುಕೊಂಡು ಹೋಗಿ. ಕಷ್ಟಕ್ಕೆ ಹೆದರಿದರೆ ಇಷ್ಟಾರ್ಥ ನೆರವೇರದು. ಸ್ವಲ್ಪ ಹೊತ್ತಿಗೆ ಸರಿಹೋಗುವನು’ ಎಂದು ಹೇಳಿ ಅವರ ಮುಂದಿನ ಮಾತಿಗೆ ಅವಕಾಶಕೊಡದಂತೆ ಎದ್ದುಹೋದರು.

ಬಾಬಾರ ಮಾತಿನಂತೆ ಕುಮಾರ ಎಚ್ಚರಗೊಂಡನು, ಆ ಕುಟುಂಬದ ಆನಂದಕ್ಕೆ ಪಾರವಿಲ್ಲ. ನಂತರ ಮಗನೊಂದಿಗೆ ವಸತಿಗೃಹಕ್ಕೆ ಬಂದರು. ಆ ಒಂದು ದಿನದಲ್ಲಿ ಕುಮಾರ ಸುಧಾರಿಸಿಕೊಂಡನು. ಸದ್ಗುರುವಿನ ದರ್ಶನ ಆಶೀರ್ವಾದಮಾತ್ರದಿಂದಲೆ ಮಗನಿಗೆ ಗುಣವಾಯಿತು. ಅವರಲ್ಲಿದ್ದ ಸಂಶಯ ದೂರವಾಗಿ ಸಾಯಿನಾಥರ ಮೇಲಿನ ಭಕ್ತಿ, ನಂಬಿಕೆ ದ್ವಿಗುಣಗೊಂಡಿತು. ಮರುದಿನ ದಂಪತಿಯಿಬ್ಬರೂ ಮಸೀದಿಗೆ ತೆರಳಿ ಸಾಯಿನಾಥರಿಗೆ ಸಾಷ್ಟಾಂಗವೆರಗಿ ಅವರ ಸೇವೆಯಲ್ಲಿ ತೊಡಗಿದರು. ಆಗ ಬಾಬಾ, ‘ನಿಮ್ಮ ಸಂಕಲ್ಪ ತೀರಿತು ತಾನೆ? ವಿಕಲ್ಪದ ತರಂಗಗಳು ಹಾರಿಹೋದವಷ್ಟೆ! ಈಗ ನಂಬಿಕೆ ಬಂದಿತೇ? ಸಹನೆ ಮತ್ತು ವಿಶ್ವಾಸದಲ್ಲಿರುವವರನ್ನು ಪರಮಾತ್ಮ ರಕ್ಷಿಸದೆ ಇರನು’ ಎಂದರು.

(ಇತ್ತೀಚೆಗೆ ಬೆಂಗಳೂರಿನ ಶ್ರೀ ಸಾಯಿ ದರ್ಶನಂ ಟ್ರಸ್ಟ್ ಪ್ರಕಟಿಸಿರುವ ‘ಶ್ರೀ ಸಾಯಿ ಲೀಲಾಮೃತ’ ಗ್ರಂಥದಿಂದ ಆಯ್ದ ಭಾಗವಿದು)

Leave a Reply

Your email address will not be published. Required fields are marked *