ಪಾಕ್​ಗೆ ಭಾರತ ಚಾಟಿ: ಜಿನೀವಾದಲ್ಲಿ ವಿಶ್ವಸಂಸ್ಥೆಯ ಯುಎನ್​ಎಚ್​ಆರ್​ಸಿ 42ನೇ ಸಮಾವೇಶ

ಜಿನೀವಾ: ಕಾಶ್ಮೀರ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (ಯುಎನ್​ಎಚ್​ಆರ್​ಸಿ) 42ನೇ ಸಮಾವೇಶದಲ್ಲಿ ಮಂಗಳವಾರ ಮುಖಾಮುಖಿಯಾಗಿವೆ. ವಿಶ್ವದ ಅನೇಕ ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಮುಖಭಂಗವಾಗಿದ್ದರೂ ಪಾಕ್ ಮತ್ತೆ ಭಾರತದ ವಿರುದ್ಧ ದೂರಿನ ಸುರಿಮಳೆಗರಿದಿದೆ. ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಭಾರತ, ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಸಾಂವಿಧಾನಿಕವಾಗಿ ತೆಗೆದುಕೊಂಡ ನಿರ್ಧಾರ. ಪಾಕ್ ಸುಖಾಸುಮ್ಮನೆ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿದೆ ಎಂದಿದೆ.

ಸ್ವಿಜರ್ಲೆಂಡ್​ನ ಜಿನೀವಾದಲ್ಲಿ ನಡೆಯುತ್ತಿರುವ ಯುಎನ್​ಎಚ್​ಆರ್​ಸಿ ಸಮಾವೇಶದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪೂರ್ವ) ವಿಜಯಾ ಠಾಕೂರ್ ಸಿಂಗ್, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಮಾಡಿದ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. ಜಮ್ಮು-ಕಾಶ್ಮೀರದ ಬಗ್ಗೆ ಸುಳ್ಳು ವಿವರಣೆಗಳು ಉಗ್ರಗಾಮಿಗಳ ಸ್ವರ್ಗವಾದ ಪಾಕ್​ನಿಂದ ಬಂದಿದೆ ಎಂಬುದು ಜಗತ್ತಿಗೇ ತಿಳಿದಿದೆ ಎಂದರು.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ರದ್ದತಿಯ ನಿರ್ಧಾರ ಸಂಪೂರ್ಣ ಆಂತರಿಕ ವಿಷಯ. ಇದರಲ್ಲಿ ಯಾರ ಮಧ್ಯಪ್ರವೇಶಕ್ಕೂ ಅವಕಾಶವಿಲ್ಲ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಕಾರಣದಿಂದ ಕೆಲ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದೀಗ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಭಾರತ ಸರ್ಕಾರ ಈ ರಾಜ್ಯದ ಅಮೂಲಾಗ್ರ ಬೆಳವಣಿಗೆಗೆ ಬದ್ಧವಾಗಿದ್ದು, ಇದಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿಕ್ಷಣ, ಮಾಹಿತಿ ಮತ್ತು ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು. ಜಗತ್ತು ಅದರಲ್ಲೂ ಭಾರತ ಉಗ್ರಕೃತ್ಯಗಳಿಂದ ತತ್ತರಿಸಿ ಹೋಗಿದ್ದು, ಇದೀಗ ಅದನ್ನು ಎದುರಿಸಿ ನಿಲ್ಲುವ ಸಮಯ ಬಂದಿದೆ. ಜನರ ಹಕ್ಕುಗಳಿಗೆ ಧಕ್ಕೆ ತರುವ ಉಗ್ರ ಸಂಘ ಟನೆಗಳನ್ನು ಬೇರು ಸಹಿತ ಹಾಕುವುದು ಭಾರತದ ಗುರಿಯಾಗಿದೆ ಎಂದರು.

ಎನ್​ಆರ್​ಸಿ ಬಗ್ಗೆಯೂ ಪ್ರಸ್ತಾಪ: ಅಸ್ಸಾಂನ ಎನ್​ಆರ್​ಸಿ ಪ್ರಕ್ರಿಯೆ ಶಾಸನಬದ್ಧ, ಪಾರದರ್ಶಕ, ತಾರತಮ್ಯ ರಹಿತವಾದ ಕಾನೂನು ಕ್ರಮವಾಗಿದೆ. ಭಾರತದ ಸವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲೇ ಈ ಪ್ರಕ್ರಿಯೆ ನಡೆದಿದ್ದು, ಇದರ ಜಾರಿ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಕಾನೂನಿನಲ್ಲಿ ಇದನ್ನು ಪ್ರಶ್ನಿಸುವ ಅವಕಾಶವಿರಲಿದೆ ಎಂದು ವಿಜಯಾ ಸ್ಪಷ್ಟಪಡಿಸಿದರು.

ಪಿಒಕೆಯಲ್ಲಿ ಸಿಪಿಇಸಿಗೆ ಕೈಬಿಡಿ ಎಂದ ಭಾರತ: ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯನ್ನು ನಿಲ್ಲಿಸಬೇಕೆಂದು ಭಾರತ ಮತ್ತೆ ಆಗ್ರಹಿಸಿದೆ. ಸಿಪಿಇಸಿ ಸಂಬಂಧ ಚೀನಾ- ಪಾಕ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಜಮ್ಮು-ಕಾಶ್ಮೀರ ಭಾಗವನ್ನು ಉಲ್ಲೇಖಿಸಲಾಗಿದೆ. ಆರ್ಥಿಕ ಕಾರಿಡಾರ್ ಜಮ್ಮು- ಕಾಶ್ಮೀರದ ಮೂಲಕ ಹಾದು ಹೋಗುತ್ತದೆ. ಈ ಭಾಗದಲ್ಲಿ ಯಾವುದೇ ಯೋಜನೆ ನಡೆಸುವುದಕ್ಕೆ ಭಾರತದ ವಿರೋಧವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಹೇಳಿದ್ದಾರೆ.

ಪಾಕ್ ವಿರುದ್ಧ ಪ್ರತಿಭಟನೆ…

ಜಿನೀವಾದ ಯುಎನ್​ಎಚ್​ಆರ್​ಸಿ ಕೇಂದ್ರ ಕಚೇರಿ ಎದುರು ಪಾಕ್ ವಿರುದ್ಧ ವಿಶ್ವ ಸಿಂಧಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಹಿಂಸಾತ್ಮಕ ಕೃತ್ಯಗಳು, ಕಳೆದ 10 ವರ್ಷಗಳಿಂದ ಇಲ್ಲಿನ ಜನರು ರಹಸ್ಯವಾಗಿ ಕಣ್ಮರೆಯಾಗುತ್ತಿರುವ ಬಗ್ಗೆ ಪ್ರತಿಭಟನೆ ನಡೆಸುತ್ತಿದೆ.

ಜಮ್ಮು ಜೈಲೆಂದ ಖುರೇಷಿ!

ಯುಎನ್​ಎಚ್​ಆರ್​ಸಿಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ, ಜಮ್ಮು- ಕಾಶ್ಮೀರ ವಿಶ್ವದ ಬಹುದೊಡ್ಡ ಜೈಲಾಗಿ ಬದಲಾಗಿದ್ದು. ಇಲ್ಲಿ ಜನರಿಗೆ ದಿನಬಳಕೆ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೂ ಸ್ವಾತಂತ್ರ್ಯವಿಲ್ಲ ಎಂದು ಆರೋಪಿಸಿದರು. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ, ರಾಜ್ಯದಲ್ಲಿ ವಿಧಿಸಿರುವ ನಿರ್ಬಂಧ ಮತ್ತು ರಾಜಕೀಯ ನಾಯಕರನ್ನು ಬಂಧಿಸಲಾಗಿದೆ. ಕಾಶ್ಮೀರಿಗಳ ಹಕ್ಕಿಗೆ ಧಕ್ಕೆ ತರುವ ಭಾರತದ ಈ ಕ್ರಮದಿಂದ ಹಿಂಸಾಚಾರ ನಡೆದು ಭಾರಿ ಪ್ರಮಾಣದ ನರಮೇಧವೇ ನಡೆದಿರುವ ಶಂಕೆಯಿದೆ. ಸರ್ಕಾರದ ಕಾರಣದಿಂದ ನಾಗರಿಕತೆ ಸಮಾಧಿ ಸ್ಥಿತಿ ತಲುಪಿದ್ದು, ಭಾರತ ಕಾಶ್ಮೀರದಲ್ಲಿ ನಡೆಸುತ್ತಿರುವ ಹಿಂಸೆಯನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದರು. ಈ ವಿಚಾರದಲ್ಲಿ ಯುಎನ್​ಎಚ್​ಆರ್​ಸಿ ಬಾಗಿಲು ತಟ್ಟುತ್ತಿದ್ದೇವೆೆ, ಅಲ್ಲಿನ ಜನರ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ನ್ಯಾಯ ಮತ್ತು ಗೌರವ ಒದಗಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು. ಜತೆಗೆ ಯುಎನ್​ಎಚ್​ಆರ್​ಸಿ ಮತ್ತು ಪಾಕಿಸ್ತಾನ ಜಂಟಿಯಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಶ್ಮೀರ ಭಾರತದ ಭಾಗವೆಂದು ಒಪ್ಪಿಕೊಂಡ ಪಾಕ್

ಯುಎನ್​ಎಚ್​ಆರ್​ಸಿಯಲ್ಲಿ ಭಾಷಣ ಆರಂಭಿಸಿದ ಪಾಕ್ ವಿದೇಶಾಂಗ ಸಚಿವ ಖುರೇಷಿ ಜಮ್ಮು- ಕಾಶ್ಮೀರವನ್ನು ಭಾರತದ ರಾಜ್ಯವೆಂದು ಉಲ್ಲೇಖಿಸಿದರು. ಇದು ಟ್ವಿಟ್ಟರ್​ನಲ್ಲಿ ಟ್ರೋಲ್ ಆಗುತ್ತಿದ್ದು, ಕಡೆಗೂ ಜಮ್ಮು-ಕಾಶ್ಮೀರ ಭಾರತದ ರಾಜ್ಯವೆಂದು ಪಾಕ್ ಒಪ್ಪಿಕೊಂಡಿತು ಎಂದು ಟ್ವೀಟಿಗರು ಕಾಲೆಳೆದಿದ್ದಾರೆ.

ಪಾಕ್ ದೂರಿನಲ್ಲಿ್ಲ ರಾಹುಲ್ ಹೇಳಿಕೆ!

ಪಾಕಿಸ್ತಾನ ಯುಎನ್​ಎಚ್​ಆರ್​ಸಿಗೆ ಕಾಶ್ಮೀರದ ಪರಿಸ್ಥಿತಿ ಕುರಿತು 115 ಪುಟಗಳ ದೂರನ್ನು ಸಲ್ಲಿಸಿದೆ ಎನ್ನಲಾಗಿದೆ. ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *