ನವದೆಹಲಿ: ಸರ್ಕಾರದ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಆಸ್ಟ್ರಿಯಾದ ಭಾರತೀಯ ರಾಯಭಾರಿ ರೇಣು ಪಾಲ್ರನನ್ನು ವಿದೇಶಾಂಗ ಸಚಿವಾಲಯ ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ. ರೇಣು ಪಾಲ್ ಆಸ್ಟ್ರಿಯಾದಲ್ಲಿ 15 ಲಕ್ಷ ರೂಪಾಯಿ ಬಾಡಿಗೆಯ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದ್ದು, ಅನಗತ್ಯವಾಗಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಈ ಹಿಂದೆ ಕೇಂದ್ರ ವಿಚಕ್ಷಕ ಆಯೋಗ (ಸಿವಿಸಿ) ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಿತ್ತು. ತನಿಖೆ ವೇಳೆ ಅವರು ಸರ್ಕಾರಿ ಹಣ ದುರುಪಯೋಗ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ವಿದೇಶಾಂಗ ಸಚಿವಾಲಯ ಕಳೆದ ಡಿ.9 ರಂದು ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಜತೆಗೆ ಅವರ ಆಡಳಿತ ಮತ್ತು ಆರ್ಥಿಕ ಅಧಿಕಾರಗಳ ಬಳಕೆ ಮೇಲೂ ನಿರ್ಬಂಧ ವಿಧಿಸಲಾಗಿದೆ. ರೇಣು ಪಾಲ್ 1988ರ ಬ್ಯಾಚ್ನ ವಿದೇಶಿ ಸೇವಾ ಅಧಿಕಾರಿಯಾಗಿದ್ದು, ಮುಂದಿನ ತಿಂಗಳು ಆಸ್ಟ್ರಿಯಾದಲ್ಲಿ ಅವರ ಅಧಿಕಾರ ಅವಧಿ ಮುಕ್ತಾಯಗೊಳ್ಳುವುದಿತ್ತು. ಸದ್ಯ ಅವರ ಮೇಲಿನ ಎಲ್ಲ ಆರೋಪಗಳನ್ನು ಸಿವಿಸಿ ಮತ್ತು ವಿದೇಶಾಂಗ ಸಚಿವಾಲಯ ತನಿಖೆ ನಡೆಸುತ್ತಿದೆ. ರೇಣು ಪಾಲ್ ಸಚಿವಾಲಯದ ಅನುಮತಿಯಿಲ್ಲದೆ ಬಾಡಿಗೆ ಮನೆಯಲ್ಲಿದ್ದು ಅಕ್ರಮವಾಗಿ ಹಣ ಗಳಿಸಿದ್ದಾರೆ ಎನ್ನಲಾಗಿದೆ.