More

    ಲಾಕ್​ಡೌನ್​ ಅವಧಿಯಲ್ಲಿ 100 ಟನ್​ ಔಷಧ ರವಾನೆ, 452 ಕೋಟಿ ರೂ. ಪೇಮೆಂಟ್​ ಮಾಡಿದ್ದು ಯಾರು ಗೊತ್ತಾ…?

    ನವದೆಹಲಿ: ಕೋವಿಡ್​ 19 ಲಾಕ್​ಡೌನ್​ ಅವಧಿಯಲ್ಲಿ ಎಲ್ಲವೂ ಸ್ತಬ್ಧವಾಗಿದ್ದರೂ, ವೈದ್ಯರು ಮತ್ತು ನರ್ಸ್​ಗಳು ಸೇರಿ ವೈದ್ಯಕೀಯ ಸೇವೆ ಒದಗಿಸುವವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಹೆಗಲಿಗೆ ಹೆಗಲು ಕೊಟ್ಟು ಪೊಲೀಸರು ದುಡಿಯುತ್ತಿದ್ದಾರೆ.

    ಇವರೆಲ್ಲರ ನಡುವೆಯೂ ಸರ್ಕಾರದ ಒಂದು ಇಲಾಖೆ ಯಾವುದೇ ಪ್ರಚಾರ ಬಯಸದೆ ಮೌನವಾಗಿ ತನ್ನ ಕೆಲಸವನ್ನು ಮಾಡುತ್ತಿದೆ.
    ದೇಶಾದ್ಯಂತ 100 ಟನ್​ ಔಷಧವನ್ನು ಸಾಗಿಸಿದೆ. ಅಗತ್ಯ ಇರುವವರಿಗೆ 452 ಕೋಟಿ ರೂ. ಹಣವನ್ನೂ ತಲುಪಿಸಿದೆ. ಆ ಇಲಾಖೆ ಯಾವುದು ಗೊತ್ತಾ? ಅದುವೇ ಅಂಚೆ ಇಲಾಖೆ!

    ಹೌದು, ಆಧುನಿಕ ಸಂವಹನ ಕ್ರಮಗಳ ಬಳಕೆ ಹೆಚ್ಚಾದ ನಂತರದಲ್ಲಿ ಅದರಲ್ಲೂ ವಿಶೇಷವಾಗಿ ಕೊರಿಯರ್​, ಸ್ಮಾರ್ಟ್​ಫೋನ್​ಗಳ ಯುಗ ಆರಂಭವಾದ ಬಳಿಕ ಅಂಚೆ ಸೇವೆಯನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಆದರೆ ಕೋವಿಡ್​ 19 ಲಾಕ್​ಡೌನ್​ನಂಥ ಸಂದರ್ಭದಲ್ಲಿ ತುರ್ತಾಗಿ ಔಷಧಗಳ ರವಾನೆ ಮತ್ತು ಅಗತ್ಯವಿದ್ದವರಿಗೆ ಹಣ ತಲುಪಿಸುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಅಂಚೆ ಇಲಾಖೆ ಸಿಬ್ಬಂದಿಯದ್ದಾಗಿದೆ.

    ಅಂಚೆ ಇಲಾಖೆಯು ಅಗತ್ಯಸೇವೆಗಳ ನಿರ್ವಹಣಾ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಇಲಾಖೆ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ಒಂದು ಮೂಲದ ಪ್ರಕಾರ 100 ಟನ್​ ತೂಕದ ಔಷಧ ಮತ್ತು ವೈದ್ಯಕೀಯ ಉಪಕರಣಗಳನ್ನು ತಲುಪಿಸಿದ್ದಾರೆ. ಅಂಚೆ ಉಳಿತಾಯ ಬ್ಯಾಂಕ್​ ಖಾತೆಗಳಲ್ಲಿ ಒಟ್ಟು 33 ಸಾವಿರ ಕೋಟಿ ರೂ. ವಹಿವಾಟು ನಡೆಸಲು ಸಹಕರಿಸಿದ್ದಾರೆ. ಆಧಾರ್​ಕಾರ್ಡ್​ ಆಧಾರಿತವಾದ 452 ಕೋಟಿ ರೂ. ನಗದನ್ನು ಪಾವತಿಸಿದ್ದಾರೆ.

    ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಪೋಸ್ಟ್​ ಡೈರೆಕ್ಟರ್​ ಜನರಲ್​ ಅರುಂಧತಿ ಘೋಷ್​, ಆಧಾರ್​ಕಾರ್ಡ್​ ಆಧಾರಿತವಾದ ಪಾವತಿಗಳನ್ನು ಮಾಡಿರುವುದು ಅಂಚೆ ಇಲಾಖೆಯ ಬಹುದೊಡ್ಡ ಸಾಧನೆಯಾಗಿದೆ. ಈ ಯೋಜನೆಯಡಿ, ಯಾವುದೇ ಬ್ಯಾಂಕ್​ ಖಾತೆಯಿಂದ ಆಧಾರ್​ಕಾರ್ಡ್​ ಮೂಲಕ ಹಣ ಹಿಂಪಡೆವ ಗ್ರಾಹಕರಿಗೆ ಬಯೋಮೆಟ್ರಿಕ್​ ಕ್ಲಿಯೆರೆನ್ಸ್​ ಆಗುತ್ತಲೇ ಇಲಾಖೆ ಸಿಬ್ಬಂದಿ ತ್ವರಿತವಾಗಿ ಹಣವನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಂದಾಜು 23 ಲಕ್ಷ ಜನರು ಈ ಸೇವೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

    ಈ ಸೇವೆ ಬಳಸಿಕೊಳ್ಳುವುದು ಹೇಗೆ? ಗ್ರಾಹಕರು ಮೊದಲಿಗೆ ಇಂಡಿಯಾ ಪೋಸ್ಟ್​ ಪೇಮೆಂಟ್​ ಬ್ಯಾಂಕ್​ ಆ್ಯಪ್​ ಅನ್ನು ಡೌನ್​ಲೋಡ್​​ ಮಾಡಿಕೊಳ್ಳಬೇಕು. ಇದರ ಮೂಲಕ ಆಧಾರ್​ಕಾರ್ಡ್​​ ವಿವರಗಳನ್ನು ದಾಖಲಿಸಿ, ತಮ್ಮ ತಮ್ಮ ಬ್ಯಾಂಕ್​ ಖಾತೆಗಳಿಂದ ಒಮ್ಮೆಗೆ ಗರಿಷ್ಠ 10 ಸಾವಿರ ರೂ.ವರೆಗೆ ಹಿಂಪಡೆಯಬಹುದಾಗಿದೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ತಮ್ಮ ಖಾತೆಯಿರುವ ಬ್ಯಾಂಕ್​ಗಳಿಗೆ ಹೋಗಲು ಗ್ರಾಹಕರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಈ ಸೇವೆಯನ್ನು ಒದಗಿಸಲು ನಿರ್ಧರಿಸಿತು ಎಂದು ಅರುಂಧತಿ ಘೋಷ್​ ತಿಳಿಸಿದ್ದಾರೆ.
    ಈ ಸೇವೆಯನ್ನು ಬಳಸಿಕೊಂಡು ವಿದ್ಯುತ್​ ಬಿಲ್​ ಮತ್ತು ಮೊಬೈಲ್​ ಪೋಸ್ಟ್​ ಪೇಡ್​ ಶುಲ್ಕಗಳನ್ನೂ ಪಾವತಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

    ತನ್ನೂರಿಗೆ ತೆರಳಲು ಅತನಿಗೆ ಇದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ, ಇದಕ್ಕಾಗಿ ವೆಚ್ಚವಾಗಿದ್ದೆಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts