ಗಡಿಯಲ್ಲಿ ಕದನ ಕಾರ್ಮೋಡ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ಸಂಘಟನೆ ಜೈಷ್ ಎ ಮೊಹಮದ್​ನ ಪ್ರಮುಖ ಮೂರು ತರಬೇತಿ ಕೇಂದ್ರಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಕೂಡ ಪ್ರತೀಕಾರ ಕ್ರಮಕ್ಕೆ ಮುಂದಾಗಿದ್ದು ಗಡಿಯಲ್ಲಿ ಯುದ್ಧಸದೃಶ ವಾತಾವರಣ ನಿರ್ಮಾಣವಾಗಿದೆ.

ಬುಧವಾರ ಬೆಳಗ್ಗೆ ಕಾಶ್ಮೀರದ ರಾಜೌರಿ ಹಾಗೂ ಪೂಂಛ್ ಪ್ರದೇಶದಲ್ಲಿ ಪಾಕಿಸ್ತಾನದ ಮೂರು ಎಫ್-16 ಯುದ್ಧ ವಿಮಾನಗಳು ವಾಯುಗಡಿ ಉಲ್ಲಘಿಸಿ, ಭಾರತದೊಳಕ್ಕೆ ನುಸುಳಲು ಯತ್ನಿಸಿದವು. ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವುದು ಇವುಗಳ ಗುರಿಯಾಗಿತ್ತು. ಭಾರತೀಯ ವಾಯುಪಡೆಯ ಸುಖೋಯ್ ಹಾಗೂ ಮಿಗ್ -21 ವಿಮಾನಗಳು ಕಾರ್ಯಾಚರಣೆ ಆರಂಭಿಸಿ, ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು. ಕಾರ್ಯಾಚರಣೆ ವೇಳೆ ನೌಶೇರಾದ ಲಾಮ್ ವ್ಯಾಲಿ ಬಳಿ ಪಾಕಿಸ್ತಾನದ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಲಾಗಿದೆ.

ಪಾಕ್ ವಶದಲ್ಲಿ ಭಾರತದ ಪೈಲಟ್: ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಯತ್ನದಲ್ಲಿ ಭಾರತದ ಮಿಗ್-21 ವಿಮಾನವೊಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನ ಹೊಂದಿದೆ. ಇದರ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್​ರನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಕುರಿತು ವೀಡಿಯೊ ಸಾಕ್ಷ್ಯವನ್ನೂ ಬಿಡುಗಡೆ ಮಾಡಿದೆ. ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ಮಾಡುತ್ತಿರುವ ವೀಡಿಯೊ ಬೆಳಕಿಗೆ ಬಂದಿದೆ. ಕಾರ್ಯಾಚರಣೆ ವೇಳೆ ಭಾರತೀಯ ಪೈಲಟ್ ಕಾಣೆಯಾಗಿದ್ದಾಗಿ ಕೇಂದ್ರ ಸರ್ಕಾರ ಕೂಡ ದೃಢಪಡಿಸಿದೆ.

ಪಾಕ್​ಗೆ ಸಾಕ್ಷ್ಯ ನೀಡಿದ ಭಾರತ

ಪುಲ್ವಾಮಾ ದಾಳಿಯ ಹಿಂದೆ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಕೈವಾಡ ಇರುವ ಕುರಿತು ಪಾಕಿಸ್ತಾನಕ್ಕೆ ಭಾರತ ಸಾಕ್ಷ್ಯ ನೀಡಿದೆ. ಪಾಕಿಸ್ತಾನದಲ್ಲಿರುವ ಉಗ್ರ ನೆಲೆಯಲ್ಲಿ ದಾಳಿಗೆ ಯೋಜನೆ ರೂಪಿಸಲಾಗಿತ್ತು ಎಂಬ ಬಗ್ಗೆ ನಿಖರ ಮಾಹಿತಿ ನೀಡಲಾಗಿದೆ. ಪುಲ್ವಾಮಾ ದಾಳಿಯಲ್ಲಿ ಪಾಕ್ ಉಗ್ರ ಸಂಘಟನೆಗಳ ಕೈವಾಡ ಕುರಿತು ಸಾಕ್ಷ್ಯ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭರವಸೆ ನೀಡಿದ್ದರು.

ಏರ್​ಪೋರ್ಟ್ ಬಂದ್

ಯುದ್ಧ ಯುದ್ಧ ಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇಸ್ಲ್ಲಾಮಾಬಾದ್, ಕರಾಚಿ, ಲಾಹೋರ್ ಸಹಿತ ಪ್ರಮುಖ ನಿಲ್ದಾಣಗಳಲ್ಲಿ ಭದ್ರತಾ ದೃಷ್ಟಿಯಿಂದ ವಿಮಾನ ಹಾರಾಟವನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿದ್ದಾಗಿ ಪಾಕ್ ಸರ್ಕಾರ ತಿಳಿಸಿದೆ.

ಇಡೀದಿನ ನಡೆದಿದ್ದೇನು?

# ಬೆಳಗ್ಗೆ ಭಾರತದ ವಾಯುಗಡಿ ಪ್ರವೇಶಿಸಿದ ಪಾಕ್ ಯುದ್ಧ ವಿಮಾನಗಳು, ಪಾಕ್​ನ ಒಂದು ವಿಮಾನ ಹೊಡೆದುರುಳಿಸಿದ ಭಾರತದ ವಾಯುಪಡೆ

# ಕಾರ್ಯಾಚರಣೆ ವೇಳೆ ಭಾರತದ ಮಿಗ್-21 ವಿಮಾನ ಪಿಒಕೆಯಲ್ಲಿ ಪತನ. ಪೈಲಟ್​ನನ್ನು ಬಂಧಿಸಿದ ಪಾಕ್, ವಿಜ್ಞಾನ ಭವನದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ, ನಿವಾಸಕ್ಕೆ ವಾಪಸ್

# ಗೃಹ, ವಿದೇಶಾಂಗ, ರಕ್ಷಣಾ ಸಚಿವರೊಂದಿಗೆ ಮಹತ್ವದ ಸಭೆ, ದೇಶಾದ್ಯಂತ ಹೈ ಅಲರ್ಟ್

# ಗಡಿ ಸಮೀಪ ಇರುವ ಭಾರತದ 9 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತ. ಕೆಲ ಗಂಟೆ ಬಳಿಕ ಮತ್ತೆ ಆರಂಭ

# ಪಾಕ್ ಯುದ್ಧ ಬಯಸುವುದಿಲ್ಲ. ಮಾತು ಕತೆ ಅಗತ್ಯ ಎಂದು ಪಾಕ್ ಪ್ರಧಾನಿ ಹೇಳಿಕೆ

ಜೇಟ್ಲಿ ಹೇಳಿಕೆ ಸಂಚಲನ

ಭಾರತ – ಪಾಕ್ ನಡುವಿನ ತಿಕ್ಕಾಟ ತಾರಕಕ್ಕೇರಿರುವ ಬೆನ್ನಲ್ಲೇ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಅಬೋಟಾಬಾದ್​ನಲ್ಲಿ ಕಾರ್ಯಾಚರಣೆ ನಡೆಸಿ ಅಮೆರಿಕದ ಕಮಾಂಡೋ ಪಡೆ ಉಗ್ರ ಲಾಡೆನ್​ನನ್ನು ಹತ್ಯೆ ಮಾಡಿತ್ತು. ಇದು ಭಾರತಕ್ಕೂ ಸಾಧ್ಯ ಎಂದು ಜೇಟ್ಲಿ ಹೇಳಿದ್ದಾರೆ. ಜೈಷ್ ಎ ಮೊಹಮದ್ ಉಗ್ರ ಮಸೂದ್ ಅಜರ್ ಹಾಗೂ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ವಿರುದ್ಧ ಕಾರ್ಯಾಚರಣೆ ನಡೆಸುವ ಕುರಿತು ಅವರು ಪರೋಕ್ಷ ಸುಳಿವು ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪಾಕ್​ಗೆ ಮತ್ತೆ ಅಮೆರಿಕ ಚಾಟಿ

ತನ್ನ ನೆಲದಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಬಾರದು ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಪಾಕ್​ನ ಆಪ್ತ ರಾಷ್ಟ್ರ ಚೀನಾ ಕೂಡ ಇದಕ್ಕೆ ದನಿಗೂಡಿಸಿದ್ದು, ಉಗ್ರರಿಗೆ ಸಹಕಾರ ನೀಡದಂತೆ ಆಗ್ರಹಿಸಿದೆ.

ಬಿಡುಗಡೆಗೆ ಭಾರತ ತಾಕೀತು

ವಿಂಗ್ ಕಮಾಂಡರ್ ಅಭಿನಂದನ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನ ಜಿನೀವಾ ಒಪ್ಪಂದವನ್ನು ಉಲ್ಲಂಘಿಸಿದೆ. ಅಭಿನಂದನ್​ಗೆ ಯಾವುದೇ ಹಾನಿ ಮಾಡದೇ ನಿಯಮ ಪ್ರಕಾರ ಭಾರತಕ್ಕೆ ಒಪ್ಪಿಸುವಂತೆ ವಿದೇಶಾಂಗ ಸಚಿವಾಲಯ ಪಾಕ್ ಸರ್ಕಾರಕ್ಕೆ ತಾಕೀತು ಮಾಡಿದೆ.

ಅಭಿನಂದನ್ ವಾಪಸ್ ಹೇಗೆ?

ಜಿನೀವಾ ಒಪ್ಪಂದದ ಪ್ರಕಾರ ಪಾಕಿಸ್ತಾನ ಸರ್ಕಾರ ಭಾರತೀಯ ರಾಯಭಾರ ಕಚೇರಿಗೆ ವಿಂಗ್ ಕಮಾಂಡರ್ ಅವರನ್ನು ಒಪ್ಪಿಸಬೇಕು. ಪಾಕಿಸ್ತಾನ ಬಿಡುಗಡೆಗೆ ವಿಳಂಬ ಮಾಡಿದರೆ ವಿಶ್ವಸಂಸ್ಥೆಗೆ ದೂರು ಸಾಧ್ಯತೆ ಸೇನಾ ಕಾರ್ಯಾಚರಣೆಯಲ್ಲಿ ವಶಕ್ಕೆ ದೊರೆತ ಸಿಬ್ಬಂದಿಗೆ ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವಂತಿಲ್ಲ ಈ ಹಿಂದೆ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ನಚಿಕೇತ್ ಎನ್ನುವ ಪೈಲಟ್​ನ್ನು ಸಂಧಾನದ ಮೂಲಕ ವಾಪಸ್ ಕರೆಯಿಸಿಕೊಳ್ಳಲಾಗಿತ್ತು.