ಭಾರತದ ನದಿಗಳನ್ನು ಪಾಕ್​ಗೆ ಹರಿಸದಿರಲು ನಿತಿನ್​ ಗಡ್ಕರಿ ನಿರ್ಧಾರ: ಪುಲ್ವಾಮಾ ದಾಳಿಗೆ ಮತ್ತೊಂದು ತಿರುಗೇಟು

ನವದೆಹಲಿ: ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿಯಾದಾಗಿನಿಂದ ಭಾರತ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡುತ್ತಿದ್ದು, ಇದೀಗ ಕೇಂದ್ರ ಸಚಿವ ನಿತಿನ್​ ಗಡ್ಕರಿ ಮತ್ತೊಂದು ಹೊಸ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ನೀರು ಬಿಡುವ ಸಂಬಂಧ ಸಿಂಧು ನದಿ ಒಪ್ಪಂದ ಮರುಪರಿಶೀಲನೆ ನಡೆಸಲಾಗುವುದು. ಅಗತ್ಯ ಬಿದ್ದರೆ ಅದನ್ನು ತಡೆಹಿಡಿಯಲಾಗುವುದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಿತಿನ್​ ಗಡ್ಕರಿ, ಪಾಕಿಸ್ತಾನಕ್ಕೆ ಭಾರತದ ಮೂರು ನದಿಗಳ ನೀರುಹರಿಯುತ್ತಿದೆ. ಅವು ನಮ್ಮ ದೇಶದ ನದಿಗಳು. ಈಗ ನಾವು ಆ ನದಿಗಳ ನೀರು ಯಮುನಾ ನದಿ ಕಡೆಗೆ ಹರಿಯವಂತೆ ಯೋಜನೆ ರೂಪಿಸುತ್ತಿದ್ದೇವೆ. ಇದರಿಂದಾಗಿ ಯಮುನೆಯಲ್ಲಿ ಸಾಕಷ್ಟು ನೀರು ಸದಾ ಇರುತ್ತದೆ ಎಂದು ತಿಳಿಸಿದರು.

1960ರ ಸಿಂಧು ನದಿ ನೀರು ಹಂಚಿಕೆ ಒಪ್ಪಂದದ ಅನ್ವಯ ಇಂಡಸ್​, ಛೇನಾಬ್ ಮತ್ತು ಝೇಲಂ ನದಿಗಳ ಮೇಲೆ ಪಾಕಿಸ್ತಾನದ ಹಕ್ಕಿದೆ. ಹಾಗೇ ರಾವಿ, ಸಟ್ಲೇಜ್​, ಬಿಯಾಸ್​ ನದಿಗಳ ಮೇಲೆ ಭಾರತದ ಹಕ್ಕು ಇದೆ. ಉಗ್ರ ದಾಳಿಯಿಂದ ಬೇಸತ್ತಿರುವ ಭಾರತ ಈಗ ಈ ಒಪ್ಪಂದ ಮರುಪರಿಶೀಲನೆಗೆ ಮುಂದಾಗಿದ್ದು, ಭಾರತದ ಪಾಲಿನ ನದಿಗಳ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕುರಿತು ಚಿಂತಿಸಲಾಗುತ್ತಿದೆ. 2016ರಲ್ಲಿ ಉರಿಯಲ್ಲಿ ದಾಳಿಯಾದಾಗಲೇ ಸರ್ಕಾರ ಪಾಕಿಸ್ತಾನಕ್ಕೆ ನೀರು ಹರಿಸದೆ ಇರಲು ನಿರ್ಧಾರ ಮಾಡಿತ್ತು.

ಉಗ್ರದಾಳಿಯ ಬಗ್ಗೆ ಈ ಮೊದಲು ಮಾತನಾಡಿದ್ದ ನಿತಿನ್​ ಗಡ್ಕರಿ, ನಮ್ಮ ಯೋಧರ ಸಾವಿನಿಂದ ತುಂಬ ದುಃಖವಾಗಿದೆ. ಹುತಾತ್ಮರ ತ್ಯಾಗವನ್ನು ನಾವು ಮರೆಯುವುದಿಲ್ಲ ಎಂದು ಹೇಳಿದ್ದರು.