ವಿಶ್ವಕಪ್​ನಲ್ಲಿ ಪಾಕ್​ಗೆ ಮತ್ತೆ ಮುಖಭಂಗ: ಸೋಶಿಯಲ್​ ಮೀಡಿಯಾದಲ್ಲಿ ಭಾರತೀಯರ ಟ್ರೋಲ್​ ಪ್ರತೀಕಾರ ಹೀಗಿದೆ…

ನವದೆಹಲಿ: ವಿಶ್ವಕಪ್​ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಟೀ ಇಂಡಿಯಾ ವಿರುದ್ಧ ಇದುವರೆಗೂ ಒಂದು ಪಂದ್ಯವನ್ನು ಗೆಲ್ಲದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತೆ ಭಾರಿ ಮುಖಭಂಗವನ್ನು ಅನುಭವಿಸಿದೆ. ಈ ಬಾರಿ ಗೆಲ್ಲುವ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದ ಪಾಕ್​ ಸೋತು ಸುಣ್ಣವಾಗಿದ್ದು, ತನ್ನ ದೇಶದ ಪ್ರಜೆಗಳಿಗೆ ಮುಖ ತೋರಿಸಲಾಗದಂತಹ ಸ್ಥಿತಿ ಎದುರಾಗಿದೆ. ಪಂದ್ಯಕ್ಕೂ ಮುನ್ನ ಜಾಹೀರಾತೊಂದನ್ನು ತಯಾರಿಸಿ ಭಾರತಕ್ಕೆ ಅಪಮಾನ ಮಾಡಿದ್ದ ಪಾಕ್​ಗೆ ಸರಿಯಾದ ಉತ್ತರವನ್ನು ಟೀಂ ಇಂಡಿಯಾ ಆಟಗಾರರು ನೀಡಿದ್ದರೆ, ಇತ್ತ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡುವ ಮೂಲಕ ಪಾಕ್​ ತಂಡವನ್ನು ಹಾಗೂ ದೇಶವನ್ನು ಸಿಕ್ಕಾಪಟ್ಟೆ ಕಾಲೆಳೆಯುತ್ತಿದ್ದಾರೆ.

ಹೌದು, ನಿನ್ನೆ(ಭಾನುವಾರ) ಮ್ಯಾಂಚೆಸ್ಟರ್​ನ ಓಲ್ಡ್​ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಇಡೀ ವಿಶ್ವವೇ ಎದುರು ನೋಡುತ್ತಿದ್ದ ಹೈವೋಲ್ಟೇಜ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ತನ್ನ ವಿರಾಟ ರೂಪವನ್ನು ತೋರಿಸಿ, ಪಾಕ್​ನ ಸರ್ಫರಾಜ್​ ಅಹಮ್ಮದ್​ ಪಡೆಯನ್ನು ಹೀನಾಯವಾಗಿ ಸೋಲಿಸಿತು. ಇದು ಅಸಂಖ್ಯಾತ ಅಭಿಮಾನಿಗಳ ಪಾಲಿನ ಸಂತಸಕ್ಕೆ ಕಾರಣವಾಗಿತ್ತು. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ, ಪಾಕ್​ ಜತೆ ಪಂದ್ಯವನ್ನು ಆಡಬಾರದು ಎಂದು ಸಾಕಷ್ಟು ಮಾತುಗಳು ಕೇಳಿಬಂದಿದ್ದವು. ಆದರೆ, ಪಂದ್ಯ ಆಡದಿದ್ದರೆ, ಪಾಕ್​ಗೆ ಲಾಭ ಎಂದು ಮನಗಂಡು ಅನಿವಾರ್ಯವಾಗಿಯೇ ಪಾಕ್​ ವಿರುದ್ಧ ಆಡಬೇಕಾಯಿತು.

ಈ ಹಿಂದಿನ ಪಂದ್ಯಗಳಿಗೆ ಹೋಲಿಸಿದರೆ, ಈ ಬಾರಿಯ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ಒತ್ತಡ ಜಾಸ್ತಿ ಇತ್ತು. ಚಾಂಪಿಯನ್ಸ್​ ಟ್ರೋಫಿಯಲ್ಲಿ ಪಾಕ್​ ವಿರುದ್ಧ ಸೋತು ಭಾರತೀಯ ಕೆಂಗಣ್ಣಿಗೆ ಗುರಿಯಾಗಿದ್ದ ವಿರಾಟ್​ ಪಡೆ ಗೆಲ್ಲಲ್ಲೇ ಬೇಕಾಗಿತ್ತು. ಪಂದ್ಯಕ್ಕೂ ಮುನ್ನ ಪಾಕ್​ ತನ್ನ ಜಾಹೀರಾತಿನಲ್ಲಿ ತನ್ನ ಸೇನೆಯಿಂದ ಸೆರೆಹಿಡಿಲ್ಪಟ್ಟಿದ್ದ ಭಾರತೀಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ತದ್ರೂಪಿಯನ್ನು ಜಾಹೀತಾರಿನಲ್ಲಿ ಬಳಸಿಕೊಂಡು ಭಾರತೀಯರನ್ನು ಲೇವಡಿ ಮಾಡುವ ಮೂಲಕ ಸೇನೆಯನ್ನು ಅವಮಾನಿಸಿತ್ತು. ಈ ಎಲ್ಲ ಅಪಮಾನಕ್ಕೂ ಟೀಂ ಇಂಡಿಯಾ ಉತ್ತರ ನೀಡಲೇಬೇಕಾಗಿತ್ತು. ತಮ್ಮ ಜವಾಬ್ದಾರಿಯನ್ನು ಅರಿತು ಕ್ರೀಡಾಂಗಣಕ್ಕೆ ಇಳಿದ ವಿರಾಟ್​ ಪಡೆ ಪ್ರತಿ ಹಂತದಲ್ಲೂ ಪಾಕ್​ ವಿರುದ್ಧ ಹುಲಿಗಳಂತೆ ಘರ್ಜಿಸಿ ಅವರನ್ನು ಹಿಮ್ಮೆಟ್ಟಿಸಿತು. ಅಂತಿಮವಾಗಿ ವಿಜಯದ ಪತಾಕೆ ಹಾರಿಸಿದ ಟೀಂ ಇಂಡಿಯಾ ಅಸಂಖ್ಯಾತ ಭಾರತೀಯರ ಆಸೆಯನ್ನು ಪೂರೈಸಿ, ಅವರ ಬೇಡಿಕೆಯನ್ನು ಈಡೇರಿಸಿದರು.

ಮೊದಲೇ ಪಾಕ್​ ಸೋಲವನ್ನು ಕಾಯ್ದು ಕುಳಿತಿದ್ದ ಭಾರತೀಯರು ತಮ್ಮ ಮೇಲಿನ ಅವಮಾನಕ್ಕೆ ಸರಿಯಾದ ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಸಾಮಾಜಿಕ ಜಾಲತಾಣಕ್ಕೆ ಇಳಿದಿದ್ದಾರೆ. ಪಾಕ್​ ಮುಟ್ಟಿ ನೋಡಿಕೊಳ್ಳುವಂತೆ ಈ ಹಿಂದಿನ ಹಲವು ಘಟನೆಗೆ ತಳುಕು ಹಾಕಿ ಜಾಲತಾಣದಲ್ಲಿ ಟ್ರೋಲ್​ ಮಾಡುವ ಮೂಲಕ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಕೆಲವರು ರೋಹಿತ್​ ಪಾಕ್​ ಕಣ್ಣಿಗೆ ಅಭಿನಂದನ್​ ವರ್ಧಮಾನ್​ರಂತೆ ಕಂಡಿದ್ದಾರೆ ಎಂದು ಕಾಲೆಳೆದರೆ, ಮತ್ತೆ ಕೆಲವರು ನಾವು ವಿಶ್ವಕಪ್​ಗೆ ಪಾಕ್​ ತಂಡವನ್ನು ಕಳುಹಿಸಿಯೇ ಇಲ್ಲ(ಬಾಲಾಕೋಟ್​ ದಾಳಿಯ ವೇಳೆ ಯಾವುದೇ ಉಗ್ರರು ಸತ್ತಿಲ್ಲ ಎಂದು ಪಾಕ್​ ಹೇಳಿತ್ತು) ಎಂದು ವ್ಯಂಗ್ಯವಾಡಿದ್ದಾರೆ. ಹೀಗೆ ತಮಗೆ ಮನಬಂದತೆ ಪಾಕಿಸ್ತಾನವನ್ನು ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುತ್ತಿದ್ದಾರೆ. ಅವುಗಳ ಒಂದು ಝಲಕ್​​ ಇಲ್ಲಿದೆ…

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಸರ್ಫ್ರಾಜ್ ಅಹ್ಮದ್ ಮಳೆ ಭೀತಿಯ ಹಿನ್ನೆಲೆಯಲ್ಲಿ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದರು. ರೋಹಿತ್ ಶರ್ಮ(140 ರನ್, 113 ಎಸೆತ, 14 ಬೌಂಡರಿ, 3 ಸಿಕ್ಸರ್) ಏಕದಿನ ಕ್ರಿಕೆಟ್​ನಲ್ಲಿ ಬಾರಿಸಿದ 24ನೇ ಶತಕ, ವಿರಾಟ್ ಕೊಹ್ಲಿ (77 ರನ್, 65 ಎಸೆತ, 7 ಬೌಂಡರಿ) ಮತ್ತು ಕೆಎಲ್ ರಾಹುಲ್(57 ರನ್, 78ಎಸೆತ, 3 ಬೌಂಡರಿ, 2 ಸಿಕ್ಸರ್) ಬಾರಿಸಿದ ಅಮೂಲ್ಯ ಅರ್ಧಶತಕದ ನೆರವಿನಿಂದ ಭಾರತ 5 ವಿಕೆಟ್​ಗೆ 336ರನ್ ಪೇರಿಸಿತು. ರೋಹಿತ್-ರಾಹುಲ್ ಮೊದಲ ವಿಕೆಟ್​ಗೆ 136 ರನ್​ಗಳ ಭರ್ಜರಿ ಜತೆಯಾಟವಾಡುವ ಮೂಲಕ ಪಾಕ್​ಯೊಜನೆಯನ್ನೇ ಬುಡಮೇಲು ಮಾಡಿದರು. ಪ್ರತಿಯಾಗಿ ಪಾಕಿಸ್ತಾನ ತಂಡ, ಆರಂಭಿಕ ಫಖರ್ ಜಮಾನ್ (62 ರನ್, 75 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಬಾಬರ್ ಅಜಮ್ (48) ಪ್ರತಿರೋಧದ ಬಳಿಕ ದಿಢೀರ್ ಕುಸಿತ ಕಂಡಿತು. ಪಾಕ್ 35 ಓವರ್​ಗಳಲ್ಲಿ 6 ವಿಕೆಟ್​ಗೆ 166 ರನ್ ಗಳಿಸಿದಾಗ ಮಳೆ ಅಡಚಣೆಯಿಂದ ಪಂದ್ಯ ನಿಂತಿತು. ಬಳಿಕ ಡಿಎಲ್​ಎಸ್ ನಿಯಮದನ್ವಯ 40 ಓವರ್​ಗಳಲ್ಲಿ 302 ರನ್ ಗಳಿಸುವ ಪರಿಷ್ಕೃತ ಗುರಿ ಪಡೆದ ಪಾಕ್, ಉಳಿದ 30 ಎಸೆತಗಳಲ್ಲಿ 136 ರನ್ ಗಳಿಸಬೇಕಿತ್ತು. ಈ ಕಠಿಣ ಸವಾಲಿಗೆ ಪ್ರತಿಯಾಗಿ 6 ವಿಕೆಟ್​ಗೆ 212 ರನ್ ಗಳಿಸಲಷ್ಟೇ ಶಕ್ತವಾಯಿತು.

Leave a Reply

Your email address will not be published. Required fields are marked *