ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ

ನವದೆಹಲಿ: ಬಾಲಾಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಂ) ನಿಯೋಜಿಸಲು ಮುಂದಾಗಿದೆ. ಇದರಿಂದ ಪಾಕಿಸ್ತಾನದ ನಡೆಗೆ ಶೀಘ್ರವಾಗಿ ಪ್ರತಿಕ್ರಿಯೆ ನೀಡಲು ಭಾರತಕ್ಕೆ ಸಾಧ್ಯವಾಗಲಿದೆ.

ಅತ್ತ ಪಾಕಿಸ್ತಾನ ಕೂಡ ಗಡಿ ಭಾಗದಲ್ಲಿ ಯುದ್ಧ ಟ್ಯಾಂಕ್​ಗಳ ನಿಯೋಜನೆಯಲ್ಲಿ ತೊಡಗಿದೆ. ಸೈನಿಕರ ನಿಯೋಜನೆ ಕಡಿತಗೊಳಿಸುತ್ತಿರುವುದಾಗಿ ಹೇಳಿರುವ ಪಾಕ್ ಸೇನೆ ಅದರ ಬದಲು 300 ಯುದ್ಧ ಟ್ಯಾಂಕ್​ಗಳನ್ನು ನಿಯೋಜಿಸಿದೆ. ಹೀಗಾಗಿ ಭಾರತ ಸೇನೆಯೂ ಎಲ್ಲ ರೀತಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿರುವ ಅಗತ್ಯವಿದ್ದು, ಈಗಾಗಲೇ ಸೇನೆಯ ಕೆಲ ಯೂನಿಟ್​ಗಳನ್ನು ಗಡಿಯಲ್ಲಿ ನಿಯೋಜಿಸಲಾಗಿದೆ. ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆಯಿಂದ ಹೆಚ್ಚಿನ ಬಲ ಬರಲಿದೆ. ಪಾಕಿಸ್ತಾನ ವೈಮಾನಿಕ ದಾಳಿ ನಡೆಸಲು ಮುಂದಾದರೆ ಇದನ್ನು ತಡೆಯಲು ಸಾಧ್ಯವಾಗಲಿದೆ.

ರಕ್ಷಣಾ ಯೂನಿಟ್​ನಲ್ಲಿ ಏನಿರಲಿದೆ?: ವಾಯು ರಕ್ಷಣಾ ಘಟಕದಲ್ಲಿ ಸ್ವದೇಶಿ ನಿರ್ವಿುತ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, ರಷ್ಯಾದ ಕ್ವಾಡ್ರಾಟ್ ಶಸ್ತ್ರಾಸ್ತ್ರ ಇರಲಿವೆ. ಇದರಲ್ಲಿ ನೂತನ ಎಂಆರ್-ಸ್ಯಾಮ್ ವಾಯು ರಕ್ಷಣಾ ವ್ಯವಸ್ಥೆಯೂ ಒಳಗೊಂಡಿರುವ ನಿರೀಕ್ಷೆಯಿದೆ.

ಗಡಿಯೊಳಕ್ಕೆ ದಾಳಿ ಅಸಾಧ್ಯ

ಭಾರತದ ವಾಯುಪಡೆ ಬಾಲಾಕೋಟ್​ನಲ್ಲಿ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಪ್ರತಿದಾಳಿಗೆ ಯತ್ನಿಸಿತ್ತು. ಭಾರತದ ಯುದ್ಧವಿಮಾನಗಳು ದಾಳಿ ತಡೆದಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಭಾರತದ ಗಡಿಯೊಳಕ್ಕೆ ಬಂದು ದಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಗಡಿಯಲ್ಲಿ ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆಯಿಂದ ಶೀಘ್ರವಾಗಿ ಪ್ರತಿದಾಳಿ ನಡೆಸಲು ಸಾಧ್ಯವಿದೆ. ಇದರಿಂದ ಪಾಕ್ ವಿಮಾನಗಳು ಗಡಿಯಿಂದ ಕೆಲ ಕಿಲೋಮೀಟರ್​ಗಳಷ್ಟೇ ಒಳಬರಲು ಸಾಧ್ಯ. ಹೀಗಾಗಿ ತೀವ್ರ ಪ್ರಮಾಣದ ಹಾನಿ ತಡೆಯಲು ಸಾಧ್ಯವಾಗಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸೇನೆಗೆ ಕಳಪೆ ಭದ್ರತಾ ಸಾಮಗ್ರಿ?

ಸೇನೆಗೆ ಪೂರೈಕೆಯಾಗುತ್ತಿರುವ ಕಳಪೆ ಮದ್ದು ಗುಂಡುಗಳ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಅವಘಡಗಳ ಪ್ರಮಾಣ ಹೆಚ್ಚಾಗಿದೆ ಎಂದು ಸೇನೆ ಆರೋಪಿಸಿದೆ. ಸರ್ಕಾರಿ ಸ್ವಾಮ್ಯದ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್​ಬಿ)ಯಿಂದ ಯುದ್ಧ ಟ್ಯಾಂಕ್, ಫಿರಂಗಿ, ವಾಯು ರಕ್ಷಣಾ ವ್ಯವಸ್ಥೆ ಮತ್ತಿತರ ಗನ್​ಗಳಿಗೆ ಪೂರೈಸಲಾಗಿರುವ ಮದ್ದುಗುಂಡುಗಳು ಕಳಪೆಯಾಗಿದ್ದು, ಇದರಿಂದ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸೇನೆ ರಕ್ಷಣಾ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಮದ್ದುಗುಂಡುಗಳ ಕಾರಣದಿಂದ ಆಗುವ ಅವಘಡದಿಂದ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಶಸ್ತ್ರಾಸ್ತ್ರಗಳಿಗೂ ಭಾರಿ ಪ್ರಮಾಣದ ಹಾನಿಯಾಗುತ್ತಿದೆ. ಇದರಿಂದ ಒಎಫ್​ಬಿಯಿಂದ ತಯಾರಾಗಿರುವ ಎಲ್ಲ ಮಾದರಿಯ ಮದ್ದುಗುಂಡುಗಳ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ ಎಂದು ಸೇನೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ಒಎಫ್​ಬಿ ದೇಶಾದ್ಯಂತ 41 ಫ್ಯಾಕ್ಟರಿಗಳನ್ನು ಹೊಂದಿದ್ದು, ವಾರ್ಷಿಕ 19 ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತದೆ. ಇದರ ಮದ್ದುಗುಂಡುಗಳ ಗುಣಮಟ್ಟ ಕಳಪೆಯಾಗಿದೆ ಎನ್ನುವುದು ಆತಂಕಕಾರಿ ವಿಚಾರವಾಗಿದ್ದು ರಕ್ಷಣಾ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಸೇನೆ ಸಲ್ಲಿಸಿರುವ ವರದಿಯಲ್ಲಿ 150ಎಂಎಂ ಇಂಡಿಯನ್ ಫೀಲ್ಡ್ ಗನ್, 105 ಎಂಎಂ ಲೈಟ್ ಫೀಲ್ಡ್ ಗನ್, 130 ಎಂಎಂ ಎಂಎಚ್1 ಮೀಡಿಯಂ ಗನ್, 40ಎಂಎಂ ಎಲ್-70 ಏರ್ ಡಿಫೆನ್ಸ್ ಗನ್, ಟಿ-72, ಟಿ-90 ಗನ್​ಗಳು, ಅರ್ಜುನ್ ಪ್ರಮುಖ ಯುದ್ಧ ಟ್ಯಾಂಕ್​ನ ಮದ್ದುಗುಂಡುಗಳು, 155ಎಂಎಂ ಬೋಫೋರ್ಸ್ ಗನ್​ಗಳಲ್ಲಿಯೂ ಕಳಪೆ ಮದ್ದುಗುಂಡಿನ ಕಾರಣದಿಂದ ಅವಘಡಗಳಾಗಿವೆ.

ಒಎಫ್​ಬಿ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯಿಸಿರುವ ಒಎಫ್​ಬಿ, ತಮ್ಮಿಂದ ಪೂರೈಕೆಯಾಗುವ ಮದ್ದುಗುಂಡುಗಳು ಕಳಪೆ ಗುಣಮಟ್ಟದ್ದಾಗಿರಲು ಸಾಧ್ಯವಿಲ್ಲ ಎಂದಿದೆ. ಇದನ್ನು ಗುಣಮಟ್ಟ ಪರಿಶೀಲನಾ ಸಂಸ್ಥೆಯಿಂದ ಪರಿಶೀಲಿಸಲಾಗುತ್ತದೆ. ಗುಣಮಟ್ಟ ಖಾತರಿ ನಿರ್ದೇಶನಾಲಯದಿಂದಲೂ ಪರಿಶೀಲಿಸಲಾಗುತ್ತದೆ. ಎಲ್ಲ ರೀತಿಯ ಪರೀಕ್ಷೆ ಗಳಿಗೊಳಪಟ್ಟ ಬಳಿಕವೇ ಸೇನೆಗೆ ಪೂರೈಸು ವುದರಿಂದ ಕಳಪೆ ಗುಣಮಟ್ಟದ್ದಾಗಿರಲು ಸಾಧ್ಯವಿಲ್ಲ. ಆದರೆ ಸೇನೆಗೆ ಭಾರಿ ಪ್ರಮಾಣದ ಮದ್ದುಗುಂಡುಗಳ ಸಂಗ್ರಹವಿರುವುದರಿಂದ ಅಲ್ಲಿ ಕೆಲ ಅಪಘಾತಗಳು ನಡೆಯುವ ಸಾಧ್ಯತೆಯಿದೆ ಎಂದಿದೆ.