ನವದೆಹಲಿ: ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ತಂದೆ ಕಿರಣ್ ಪಾಲ್ ಸಿಂಗ್ ಮೀರಠ್‌ನ ನಿವಾಸದಲ್ಲಿ ಗುರುವಾರ ನಿಧನ ಹೊಂದಿದರು. 63 ವರ್ಷದ ಅವರು ಕಳೆದ 8 ತಿಂಗಳಿನಿಂದ ಪಿತ್ತಜನಕಾಂಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮೃತರು ಪತ್ನಿ ಇಂದ್ರೇಶ್ ದೇವಿ, ಪುತ್ರ ಭುವನೇಶ್ವರ್ ಮತ್ತು ಪುತ್ರಿ ರೇಖಾ ಅವರನ್ನು ಅಗಲಿದ್ದಾರೆ.
ಕಳೆದ ವರ್ಷ ಭುವನೇಶ್ವರ್ ಯುಎಇಯಲ್ಲಿ ಸನ್‌ರೈಸರ್ಸ್ ಪರ ಐಪಿಎಲ್‌ನಲ್ಲಿ ಆಡುತ್ತಿದ್ದ ವೇಳೆ ತಂದೆಗೆ ಕ್ಯಾನ್ಸರ್ ದೃಢಪಟ್ಟಿತ್ತು ಎನ್ನಲಾಗಿದೆ. ಬಳಿಕ ಬ್ರಿಟನ್‌ನಲ್ಲಿ ಚಿಕಿತ್ಸೆ ನೀಡಿದ್ದರೂ ಲಕಾರಿಯಾಗಿರಲಿಲ್ಲ. ಕಿರಣ್ ಪಾಲ್ ಉತ್ತರ ಪ್ರದೇಶದ ಮಾಜಿ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಆಗಿದ್ದರು.
ಇದನ್ನೂ ಓದಿ: ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಕರೊನಾ ಪಾಸಿಟಿವ್
ಕಿರಣ್ ಪಾಲ್‌ಗೆ ಮೀರಠ್ ಆಸ್ಪತ್ರೆಯಲ್ಲಿ ಕಿಮೋಥೆರಪಿ ನೀಡಲಾಗಿತ್ತು. 2 ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರನ್ನು ಮಂಗಳವಾರವಷ್ಟೇ ಬಿಡುಗಡೆಗೊಳಿಸಲಾಗಿತ್ತು. ಇದಾದ 2 ದಿನಗಳಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭುವನೇಶ್ವರ್ ಕುಮಾರ್ ಭಾರತ ಪರ ಇದುವರೆಗೆ 21 ಟೆಸ್ಟ್, 117 ಏಕದಿನ ಮತ್ತು 48 ಟಿ20 ಪಂದ್ಯ ಆಡಿದ್ದಾರೆ. ಆದರೆ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಅವರು ಆಯ್ಕೆಯಾಗಿಲ್ಲ. ಇನ್ನು ಜುಲೈನಲ್ಲಿ ಭಾರತದ 2ನೇ ಸ್ತರದ ತಂಡದೊಂದಿಗೆ ಅವರು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ನಿರೀಕ್ಷೆ ಇದೆ.