ಸೇಡು ತೀರಿಸಿಕೊಳ್ಳುವ ಗುರಿಯಲ್ಲಿ ಭಾರತ

blank

ಮುಂಬೈ: ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಕಳೆದ ವರ್ಷ ಎದುರಾದ ಆಘಾತಕಾರಿ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಉದ್ದೇಶದೊಂದಿಗೆ ಟೀಮ್ ಇಂಡಿಯಾ, ಮಂಗಳವಾರ ನಡೆಯ ಲಿರುವ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಮುಖಾಮುಖಿಗೆ ವಾಂಖೆಡೆ ಸ್ಟೇಡಿಯಂ ಆತಿಥ್ಯ ವಹಿಸಿದ್ದು, ವಿಶ್ವದ ಅಗ್ರ 2 ತಂಡಗಳ ಮುಖಾಮುಖಿಯಾಗಿರುವ ಕಾರಣ ಪಂದ್ಯ ಫುಲ್​ಹೌಸ್ ಆಗುವ ನಿರೀಕ್ಷೆ ಇದೆ.

ಕಳೆದ ವರ್ಷ ವಿಶ್ವಕಪ್ ಪೂರ್ವಭಾವಿಯಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎದುರಾಗಿದ್ದವು. ಮೊದಲ ಎರಡು ಏಕದಿನ ಪಂದ್ಯ ಗೆದ್ದಿದ್ದ ಭಾರತವನ್ನು ನಂತರದ ಮೂರೂ ಪಂದ್ಯಗಳಲ್ಲಿ ಮಣಿಸುವ ಮೂಲಕ ಆಸೀಸ್ ಆಘಾತ ನೀಡಿತ್ತು. ಎರಡೂ ತಂಡಗಳು ಹಿಂದಿನ ಸರಣಿಯ ಫಲಿತಾಂಶವನ್ನೇ ತಲೆಯಲ್ಲಿ ಇಟ್ಟುಕೊಂಡು ಮೈದಾನಕ್ಕೆ ಇಳಿಯಲಿವೆ. ಕಳೆದ ವರ್ಷ ಸ್ಮಿತ್, ವಾರ್ನರ್ ಹಾಗೂ ಹೊಸ ಬ್ಯಾಟ್ಸ್​ಮನ್ ಮಾರ್ನಸ್ ಲಬುಶೇನ್​ರಂಥ ತಾರೆಗಳು ಇಲ್ಲದೇ ಇದ್ದರೂ ಸರಣಿ ಗೆದ್ದಿದ್ದ ಆಸೀಸ್ ಈ ಬಾರಿ ಇವರ ಆಗಮನದಿಂದ ಮತ್ತಷ್ಟು ಬಲಿಷ್ಠವಾಗಿದೆ. ಇದು ತಂಡದ ಆತ್ಮವಿಶ್ವಾಸಕ್ಕೂ ಕಾರಣವಾಗಿದೆ. ಅಲ್ಲದೆ, ಇತ್ತೀಚೆಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಇವರು ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ. ಇನ್ನೊಂದೆಡೆ ಭಾರತ ತಂಡವೂ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ತವರಿನ ಸೀಮಿತ ಓವರ್​ಗಳ ಕ್ರಿಕೆಟ್ ಸರಣಿಯಲ್ಲಿ ಉತ್ತಮ ಆಟವಾಡಿದೆ. ಸ್ಪೋಟಕ ಆರಂಭಿಕ ರೋಹಿತ್ ಶರ್ಮ ಹಾಗೂ ವೇಗಿ ಮೊಹಮದ್ ಶಮಿ ಮರಳಿರುವುದು ತಂಡಕ್ಕೆ ಮತ್ತಷ್ಟು ವಿಶ್ವಾಸ ತುಂಬಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಆಸೀಸ್​ಅನ್ನು ಬಗ್ಗುಬಡಿ ಯುವ ಅಸ್ತ್ರ ಭಾರತ ತಂಡದಲ್ಲಿದೆ. ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಸೋಲು ಕಂಡ ಬಳಿಕ ಆಸೀಸ್ ಮೊದಲ ಬಾರಿಗೆ ಏಕದಿನ ಸರಣಿ ಆಡಲು ಇಳಿಯುತ್ತಿದೆ.

ಒಟ್ಟಾರೆ ತಂಡದ ಮೂಲ ಉದ್ದೇಶ ಮುಂದಿನ ಮೂರೂವರೆ ವರ್ಷಗಳಲ್ಲಿ ಭಾರತದ ನೆಲದಲ್ಲಿಯೇ ನಡೆಯಲಿರುವ ವಿಶ್ವಕಪ್​ಗೆ ಎಲ್ಲಾ ರೀತಿಯ ಸಿದ್ಧತೆ ನಡೆಸುವುದು. ಏಕದಿನ ಮಾದರಿಯಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳುವ ಆಸ್ಟ್ರೇಲಿಯಾದ ಅಭಿಯಾನ ಕಳೆದ ವರ್ಷ ಆರಂಭವಾಗಿತ್ತು. ಭಾರತ ವಿರುದ್ಧ ಸರಣಿ ಗೆಲುವಿನ ಬಳಿಕ ಅಭೂತಪೂರ್ವ ಪ್ರಗತಿ ಸಾಧಿಸಿದ್ದ ಆಸೀಸ್, ವಿಶ್ವಕಪ್ ಹಂತದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನ್ನುವಷ್ಟರ ಮಟ್ಟಿಗೆ ಬೆಳೆದಿತ್ತು.

ಪಿಚ್ ರಿಪೋರ್ಟ್

ಸೋಮವಾರ ಬೆಳಗ್ಗೆ ಮುಂಬೈನಲ್ಲಿ ಮೋಡ ಕವಿದ ವಾತಾವರಣವಿತ್ತು. ಹಾಗಿದ್ದರೂ ಮೈದಾನದ ಸಿಬ್ಬಂದಿ ಪಿಚ್​ಗೆ ನೀರು ಸಿಂಪಡಣೆ ಮಾಡಿದ್ದರು. ಸಣ್ಣ ಮಟ್ಟದ ಹುಲ್ಲನ್ನು ಪಿಚ್​ನ ಮೇಲೆ ಬಿಡಲಾಗಿದ್ದು, ಸಂಜೆಯ ವೇಳೆ ಇಬ್ಬನಿ ಪ್ರಮುಖ ಪಾತ್ರ ವಹಿಸಲಿದೆ. ಇಬ್ಬನಿಯ ಕಾರಣದಿಂದಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಿದೆ. ದೊಡ್ಡ ಮೊತ್ತದ ಪಂದ್ಯವನ್ನು ನಿರೀಕ್ಷೆ ಮಾಡಬಹುದು. ವಿಂಡೀಸ್ ವಿರುದ್ಧ ಕಳೆದ ತಿಂಗಳು ಇಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ 240 ರನ್ ಸಿಡಿಸಿತ್ತು.

ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವದ ಎರಡು ಪ್ರಬಲ ಕ್ರಿಕೆಟ್ ರಾಷ್ಟ್ರಗಳು. ಎರಡೂ ತಂಡಗಳ ಸಂಯೋಜನೆಯೂ ಬಹಳ ಉತ್ತಮವಾಗಿದೆ. ಕಳೆದ ಸರಣಿಯ ಫಲಿತಾಂಶ ಇಲ್ಲಿ ಪ್ರಸ್ತುತವೋ ಇಲ್ಲವೋ ಎನ್ನುವ ನಿರ್ಧಾರ ಪ್ರೇಕ್ಷಕರಿಗೆ ಬಿಟ್ಟಿದ್ದು. ಆದರೆ, ಒಂದು ತಂಡವಾಗಿ ನಾವು ಆಸ್ಟ್ರೇಲಿಯಾ ವಿರುದ್ಧ ಆಡುವುದನ್ನು ಇಷ್ಟ ಪಡುತ್ತೇವೆ. ನಮ್ಮ ನೆಲದಲ್ಲಿ ಶ್ರೇಷ್ಠ ತಂಡವನ್ನು ಎದುರಿಸುವ ಸವಾಲಿಗೆ ಸಿದ್ಧರಾಗಿದ್ದೇವೆ.

| ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ನಾಯಕ

ಜಸ್​ಪ್ರೀತ್ ಬುಮ್ರಾ ಬಗ್ಗೆ ನಾವು ಅತಿಯಾಗಿ ಚಿಂತಿಸುತ್ತಿಲ್ಲ. ಅವರ ಬೌಲಿಂಗ್​ಅನ್ನು ನಮ್ಮ ಹೆಚ್ಚಿನ ಬ್ಯಾಟ್ಸ್​ಮನ್​ಗಳು ಎದುರಿಸಿದರೆ, ಅವರ ಎಸೆತಗಳನ್ನು ಉತ್ತಮವಾಗಿ ಆಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಆ ಕಾರಣದಿಂದಾಗಿ ಅವರ ಬಗ್ಗೆ ನಮಗೆ ಭಯವಿಲ್ಲ. ಅವರು ಅತ್ಯುತ್ತಮ ಬೌಲರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರತಿ ಎಸೆತವನ್ನೂ ಬಹಳ ಯೋಚನೆ ಮಾಡಿ ಎಸೆಯುತ್ತಾರೆ.

| ಆರನ್ ಫಿಂಚ್. ಆಸ್ಟ್ರೇಲಿಯಾ ನಾಯಕ

ಭಾರತ: ರೋಹಿತ್ ಶರ್ಮ, ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್​ರನ್ನು ಪಂದ್ಯದಲ್ಲಿ ಆಡಿಸುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ರವೀಂದ್ರ ಜಡೇಜಾರನ್ನು ಐದನೇ ಬೌಲರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದ್ದು, ಕೇದಾರ್ ಜಾಧವ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ರಿಷಭ್ ಪಂತ್​ರನ್ನು ತಂಡದಿಂದ ಹೊರಗಿಟ್ಟು, ಕೆಎಲ್ ರಾಹುಲ್​ಗೆ ವಿಕೆಟ್ ಕೀಪಿಂಗ್ ಗ್ಲೌಸ್ ನೀಡುವ ಸಾಧ್ಯತೆಯೂ ಇದೆ. ಇಲ್ಲದೆ, ಇದ್ದಲ್ಲಿ ಕೇದಾರ್ ಜಾಧವ್ ಬದಲಿಗೆ ರಿಷಭ್ ಪಂತ್ ತಂಡದಲ್ಲಿ ಸ್ಥಾನ ಪಡೆಯಬಹುದು. ಜಸ್​ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿರುವುದರಿಂದ ಮೊಹಮದ್ ಶಮಿ ಹಾಗೂ ನವದೀಪ್ ಸೈನಿಯಲ್ಲಿ ಒಬ್ಬರು ಸ್ಥಾನ ತೆರವು ಮಾಡಬೇಕಾಗಬಹುದು. ಶಾರ್ದೂಲ್ ಠಾಕೂರ್ ಬ್ಯಾಟಿಂಗ್​ನಲ್ಲಿ ಕೆಲ ರನ್​ಗಳನ್ನೂ ಬಾರಿಸುವ ಕಾರಣ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು.

ಸಂಭಾವ್ಯ ತಂಡ: ಶಿಖರ್ ಧವನ್, ರೋಹಿತ್ ಶರ್ಮ, ಕೆಎಲ್ ರಾಹುಲ್ (ವಿ.ಕೀ), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್, ಶಮಿ/ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಸ್ಟೀವನ್ ಸ್ಮಿತ್ 3ನೇ ಕ್ರಮಾಂಕದ ಬ್ಯಾಟಿಂಗ್​ಗೆ ಮರಳಿರುವ ಕಾರಣ, 4ನೇ ಕ್ರಮಾಂಕದಲ್ಲಿ ಮಾರ್ನಸ್ ಲಬುಶೇನ್​ಗೆ ಅವಕಾಶ ಸಿಗುವ ಮೂಲಕ ಪದಾರ್ಪಣೆ ಮಾಡಬಹುದು. ಐವರು ಬೌಲರ್​ಗಳ ಆಯ್ಕೆಯೊಂದಿಗೆ ಕೆಳ ಕ್ರಮಾಂಕದ ಬ್ಯಾಟಿಂಗ್​ಅನ್ನು ಆಸ್ಟ್ರೇಲಿಯಾ ಎಷ್ಟರ ಮಟ್ಟಿಗೆ ಬಲಪಡಿಸುತ್ತದೆ ಎನ್ನುವುದು ಕುತೂಹಲದ ಅಂಶವಾಗಿದೆ. ಬ್ಯಾಟಿಂಗ್​ನಲ್ಲೂ ಸಹಾಯವಾಗುವ ಬೌಲರ್ ಬೇಕು ಎಂದಲ್ಲಿ 7ನೇ ಕ್ರಮಾಂಕದಲ್ಲಿ ಆಶ್ಟನ್ ಅಗರ್ ಆಡುವ ಸಾಧ್ಯತೆ ಇದೆ.

ಸಂಭಾವ್ಯ ತಂಡ: ವಾರ್ನರ್, ಆರನ್ ಫಿಂಚ್ (ನಾಯಕ), ಸ್ಟೀವನ್ ಸ್ಮಿತ್, ಲಬುಶೇನ್, ಪೀಟರ್ ಹ್ಯಾಂಡ್ಸ್​ಕೊಂಬ್, ಅಲೆಕ್ಸ್ ಕ್ಯಾರಿ (ವಿ.ಕೀ), ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್​ವುಡ್, ಆಡಂ ಜಂಪಾ.

ಸಚಿನ್ ಶತಕದ ದಾಖಲೆ ಸನಿಹ ಕೊಹ್ಲಿ

ವಿರಾಟ್ ಕೊಹ್ಲಿ ಇನ್ನೊಂದು ಶತಕ ಬಾರಿಸಿದರೆ, ಭಾರತದ ನೆಲದಲ್ಲಿ ಗರಿಷ್ಠ ಏಕದಿನ ಶತಕ ಬಾರಿಸಿದ ಸಚಿನ್ ತೆಂಡುಲ್ಕರ್​ರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ (49) ಬಾರಿಸಿದ ಆಟಗಾರ ಎನಿಸಿಕೊಂಡಿರುವ ಸಚಿನ್, ಅದರಲ್ಲಿ 20 ಶತಕವನ್ನು ಭಾರತದಲ್ಲಿ ಬಾರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಏಕದಿನಲ್ಲಿ ಈವರೆಗೆ 43 ಶತಕ ಸಿಡಿಸಿದ್ದು, ಅದರಲ್ಲಿ 19 ಶತಕಗಳು ಭಾರತದಲ್ಲಿ ದಾಖಲಾಗಿವೆ.

Share This Article

ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​..2025ಕ್ಕೆ ಬರ್ತಿದೆ ಹೊಸ ಶೂ.. ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ…! | The Zero, Shoes Trends |

ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ ಹಾಗು ಲಕ್ಷೂರಿ ಬ್ರ್ಯಾಂಡ್​ಗಳಲ್ಲಿ ಸಿಗುವಂತಹ ವಿಚಿತ್ರ ಬಟ್ಟೆ, ಶೂ ಹೀಗೆ ಸಾಕಷ್ಟು…

Monday Puja Tips: ಸೋಮವಾರದಂದು ಈ ಕಾರ್ಯಗಳನ್ನು ಮಾಡಿ ನೋಡಿ.. ಶಿವನ ಕೃಪೆಗೆ ಪಾತ್ರರಾಗುತ್ತೀರ…

Monday Puja Tips: ಸೋಮವಾರ ಹಿಂದೂ ಧರ್ಮದಲ್ಲಿ ಶಿವನಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು…

ನೀವು ಅಡುಗೆಗೆ ಪಾಮ್​ ಆಯಿಲ್​ ಬಳಸುತ್ತಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು! Palm Oil

Palm Oil : ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಎಣ್ಣೆಗಳನ್ನು ಬಳಸಲಾಗುತ್ತದೆ. ಕಡಲೆ ಎಣ್ಣೆ, ಸೂರ್ಯಕಾಂತಿ…